Home / ಕವನ / ಕವಿತೆ / ತಂಗದಿರ!

ತಂಗದಿರ!

ವಾರ್ಧಿಕ

ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ
ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ!
ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ?
ಗುರಿಯೇನು ಗುರುತಿಲ್ಲವೇ?
ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ
ಮೊಗವು ವಿಕಸಿತವಾಗಿ ತೋರುವುದು. ಶಶಿ! ನಿನ್ನ
ಸೊಗಸುಗಾರ್ತಿಯ ಮಡದಿ ರೋಹಿಣಿಯ ಬಳಿಗೆಂದು
ವಿಹರಿಸಲು ಪೋಪೆಯೇನು?


ಅನುದಿನವು ವಿಧು! ನೀನು ಮೂಡುತಿಹೆ-ಮುಳುಗುತಿಹೆ,
ಮನಸಿನೊಳಗಿದಕಾಗಿ ಬೇಸರಿಸಿ, ಬಿದಿಯೊಡನೆ
ಅನುನಯದಿ ಮಾಸಕೊ೦ದಾವರ್ತಿ ದಿನವೊಂದ
‘ರಜೆ’ ಯೆಂದು ಪಡೆದೆಯೇನು?
ಇನನೊಂದು ವಿಧಿಯಿಂದ ಇನಿತೊಂದು ತಪ್ಪದೇ
ದಿನ ದಿನಂ ಮೂಡುವಂ-ಬಾಡುವಂ; ಶಶಿ! ನೀನು
ಹುಣ್ಣಿಮೆಯ ಬಿಟ್ಟುಳಿದ ರಜನಿಯಲಿ ಅನಿತಿನಿತು
ಬೆಳಗಿ ಮರೆಯಾಗುವೇಕೆ?


ನೀನೋಷಧೀಶನಾಗಿರುವೆಯಾದುದರಿಂದ,
ಸಾನುರಾಗದಿ ತರು-ಲತಾಳಿ ಸಸ್ಯಗಳೆಲ್ಲ
ಆನನವನೊಲೆಯುತ್ತಲಿರುತಿಹವು ನಿನ್ನಮೃತ
ಕಿರಣ ಶೀತ ಸ್ಪರ್ಶದಿಂ.
ಕಾನನದಿ ಮಲ್ಲಿಗೆಯು ಮೊದಲಾದ ಕುಸುಮಗಳು
ಸಾನಂದದಿ೦ದ ನಗು ನಗುತ ನೀರಾಜನವ-
ನಾನುವಂತೆಸೆಯುತಿವೆ; ಶಶಿ! ನಿನಗೆ, ನೀನೆಸಗಿ
ದುಪಕಾರದರಿವಿಗಾಗಿ.


ಎತ್ತಲೂ ತಿರೆಯನ್ನು ತೀವಿ ಜೊನ್ನದ ಸರಿಯು
ಸುತ್ತಲಿಡಿದತಿ ಶೋಭೆಯಾಂತೆಸೆವ ಬಿಳಿ ಮೊಸರ
ಮೊತ್ತ ಚೆಲ್ಲಿದ ತೆರದಿ ಬಿತ್ತರವನಾಂತಿಹುದು.
ಆದರೂ ತಂಗದಿರನೇ!
ಕತ್ತಲೆಯ ಕಾಲವಾದುದರಿಂದ ಮರಗಳಡಿ-
ಯತ್ತ ಬಿದ್ದೊರಗಿಹುದು ನೆರಳ ಕಾಳಿಮೆಯದನು
ಕಿತ್ತಳಿಸಿ ಬಿಸುಡಲಾರದೆ, ನಾಚಿ, ಮೊಗದಲ್ಲಿ
ಮಾಲಿನ್ಯವನ್ನಾಂತೆಯೆ?


ತೊಳತೊಳಗಿ, ಬೆಳಬೆಳಗಿ, ಕಳೆವೆತ್ತು ಪೊಳೆಯುತಿಹೆ!
ಕಿಲಕಿಲನೆ ನಗುನಗುತ ಹಾಸ್ಯರೋಚಿಯನೆಲ್ಲ
ಬಳಿಗಳಿಗು ಪಸರಿಸುತ್ತ, ಸಂತೋಷ ಸಾಗರದೊ-
ಳೋಲಾಡಿ ತೇಲಾಡುತ.
ಒಲಿಯುತ್ತ, ನಲಿಯುತ್ತ, ಮುಗಿಲುಗಳ ಮರೆಯಲ್ಲಿ
ನೆಲಸುತ್ತ, ಹೊರಬರುತ, `ಕಣ್ಣ ಮುಚ್ಚಾಲೆ’ ಯಲಿ
ಲಲಿತ ಲೀಲೆಯನಾಂತು, ಬಾಲಕೇಳಿಯ ನಟಿಸಿ,
ಮೆರೆವೆಯೇಂ ತಂಗದಿರನೇ?
*****
೧೯೩೭

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...