Home / ಕವನ / ಕವಿತೆ / ಬಸವಣ್ಣ

ಬಸವಣ್ಣ

ಬಾಗೇವಾಡಿ ಬಸವ, ಬಹಳ ದೊಡ್ಡವನೆಂದು
ಬೆಳ್ಳಿಯ ಮಗಡ ಮಾಡ್ಸೆನೊ | ಬಸವಣ್ಣ
ಹೊನ್ನ ಹಣಿಕಟ್ಟ ಬಿಗಿಸೇನೊ ೧

ಚೆಂದುಳ್ಳ ಪಟ್ಟದಕಲ್ಲು, ಇಂಬುಳ್ಳ ಗುಡಿಯಾಗ
ಮಂದಾನ ಬಸವ ಮಲಗ್ಯಾನ | ಗುಡಿ ಮುಂದ
ಕಂದನ ಬೇಡವರು ಕಡೆಯಿಲ್ಲ ೨

ಕುಂಟೋಜಿ ಬಸವಣ್ಣ, ಬಂಟಾಗಿ ಕಾದಾಡಿ
ಕುಂಟಾದ ಕಾಲ ಮುರಕೊಂಡು | ಪರಿಸ್ಯಾಗ
ಮಂಟಪದ ಮುಂದ ಮಲಗ್ಯಾನ ೩

ಕೋಲೆನ್ನಿರೆ ಸೀಗೀಗೆ, ಕೋಲೆನ್ನಿರಿ ಗೌರೀಗೆ
ಕೋಲುಕಲ್ಯಾಣ ಬಸವಾಗ | ಬಲಗೊಂಡ್ರ
ಬಾರದ ಹಾಡು ಬರತಾವ ೪

ಭೂಮಿ ಹುಟ್ಟಿದ ಮೊದಲು, ಭೂಮಿ ಕಟ್ಟದ ಮೊದಲು
ಭೂಪ ಹುಟ್ಟೀದ ಬಸವಯ್ಯ| ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೫

ಕಟ್ಟಿಕಟ್ಟದ ಮೊದಲು, ಕಲ್ಯಾಣ್ಹುಟ್ಟದ ಮೊದಲು
ಬಲ್ಲಿದ್ಹುಟ್ಯಾನ ಬಸವಯ್ಯ | ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೬

ಹಾದಿಮಣ್ಣನು ತಂದು, ಗೀರ ಬಸವನ ಮಾಡಿ
ಹೋರೆನ್ನಬಹುದೆ ಬಸವಯ್ಯ, ನಿಂಪಾದ್ಕ
ನಾಣೇವನುಟ್ಟು ಶರಣಂದೆ ೭

ಕಟ್ಟಿ ಮಣ್ಣನು ತಂದು, ಕೆತ್ತಿ ಬಸವನ ಮಾಡಿ
ಎತ್ತೆನ್ನಬಹುದೆ ಬಸವಯ್ಯ | ನಿ೦ಪಾದ್ಕ
ಪಟ್ಟೊಳ್ಳಿ ಇಟ್ಟು ಶರಣಂದೆ ೮

ಆಗಾಸದಡಿವ್ಯಾಗ, ಧೂಪದ ಹೊಗೆಯೆದ್ದು
ಭೂಪ ಬಸವಯ್ನ ಶಿವಪೂಜೆ, ಆಗುವಾಗ
ಆಗಾಸ ಘಂಟೆ ಢಣಲೆಂದು ೯

ತುಂಬೀದ ಹೊಳಿಯಾಗ, ಕೊಂಬ ಕಾಣಿಸತಾವ
ಬಂಗಾರದಿನಿಯ ಬಸವಣ್ಣ | ಬರುವಾಗ
ತುಂಬೀದ ಗಂಗೆ ತುಳಿಕ್ಯಾಳ ೧೦

ಏರಬಾರದ ಗುಡ್ಡ, ಹ್ಯಾಂಗೇರಿದಿ ಬಸವಣ್ಣ
ಬೋರಂಗಿ ಪಕ್ಕ ಸರಜಂಗು | ಕಟಿಗೊಂಡು
ಏರಿ ಮೇದಾನೊ ಎಳೆ ಹುಲ್ಲೊ ೧೧

ಕಂಡಿರೆ ನಂಬಸವನ, ಪುಂಡತನ ಗೋಳೆಲ್ಲ
ಹೆಂಡಿಽಯ ಒಡೆದು ಬರತಾನ || ಬಸವಯ್ನ
ಕೋಡಿನ ಮ್ಯಾಲೆ ಕೈಲಾಸ ೧೨

ನೋಡಿರಿ ನಂಬಸವನ, ಕೀಡೋಳಿ ತನವಾನ
ಗೋಡಿಽಯ ಒಡೆದು ಬರತಾನ | ಬಸವಯ್ನ
ಇನಿಯ ಮ್ಯಾಲೈತಿ ಕೈಲಾಸ ೧೩

ಎರಗಿ ನೋಡುನು ಬಾರ, ಹಿರಿಯಗಸಿ ಬನವಾನ
ಸರಗೋಳ ಗಂಟಿ ಹುರಗೆಜ್ಜಿ| ನಂಬಸವ
ಚೆಲುವಾನ ನೋಡ ಮರತೇಕ ೧೪

ಹೊಕ್ಕು ನೋಡುನು ಬಾರ, ಚಿಕ್ಕಗಸಿ ಬಸವಾನ
ಒಕ್ಕಳ ಗಂಟೆ ಹುರಗೆಜ್ಜೆ | ನಂಬಸವ
ಸುತ್ತ ಮರತೇಕ ಬಲು ಚೆಲುವ ೧೫

ಎತ್ತ ಕಾಯುವಣ್ಣ, ನಮ್ಮೆತ್ತ ಕಂಡೇನೊ
ಮುತ್ತಿನ ಹಗ್ಗ ಮುಗುವಾಣ | ಹಾಕ್ಕೊಂಡು
ಹುತ್ತೀನ ಕೆಳಗ ಮಲಗ್ಯಾನೋ ೧೬

ಕಟ್ಟೀಯ ಹೊಲಗಳ, ಮೆಟ್ಟದಿರು ಬಸವಣ್ಣ
ಮಕ್ಕಳ೦ದಿಗರ ಬಡಬಗರ | ಹೊಲಗಽಳ
ಮೆಟ್ಟದಿರು ಚೆನ್ನ -ಬಸವಣ್ಣ ೧೭

ಕರಿಯ ಕೋಡಿನ ಬಸವ, ಕೆರೆಯಾಗ ಹ್ಯಾಂಗಿದ್ದೊ
ಕೆರಿ ಬತ್ತಿ ಕೆರಿಯ ಮಳಲೊತ್ತಿ | ಬಸವಾನ
ಕರದ ಬಾಡ್ಯಾವ ಬಿಸಲೀಗೆ ೧೮

ಕೆಂಪ ಕೋಡಿನ ಬಸವ, ತಂಪಿನಾಗ್ಹ್ಯಾಂಗಿದ್ಯೊ
ತಂಪೊತ್ತಿ ತಂವ ಮಳಲೊತ್ತಿ, ಬಸವಾನ
ಕೆಂಪು ಬಾಡ್ಯಾವ ಬಿಸಲೀಗೆ ೧೯

ಕೌಜಗನ ತತ್ತ್ಯಾಗ, ಹ್ಯಾಂಗಿದ್ದಿ ಬಸವಯ್ಯ
ಎಂದೆಂದಿಗಿ ಮಾಗಿ ಮಳೆಗಾಲ | ಮಂಜಿನಾಗ
ಹ್ಯಾಂಗಿದ್ದಿರಿ ಚೆನ್ನಬಸವಯ್ಯ ೨೦

ಹರಿವೂವ ಹಳದಾಗ, ಡುರಿಕೆಂತ ಬರವೂರ
ಚಿಟಿಗೊಳಗ ಬಾಲ ಮುಳಗದಲೆ | ಬರುವಂಥ
ಬಂಟ ಚೆಂಚಲಿ ಬಸವಯ್ಯ ೨೧

ತುಂಬೀದ ಹೊಳಿಯಾಗ, ಅಂಬಾಂತ ಬರವೂರ
ಹಿಂದೀನ ಬಾಲ ಮುಣಗದಲೆ | ಬರುವಂಥ
ಧೀರ ದೇಗಲೊಳ್ಳಿ ಬಸವಯ್ಯ ೨೨

ಕಡಲಿಕಾಳನು ತಿಂದ ಮಡುವಿನ ನೀರ ಕುಡಿದ
ಕಡೆಯ ಬಾಗಿಲಕ ಡರಕೀಯ | ಹೊಡಿವಂಥ
ವೀರ ಕಾದ್ರೊಳ್ಳಿ ಬಸವಯ್ಯ ೨೩

ಉದ್ದಿನ ಕಾಳ ತಿಂದು, ತೆಗ್ಗಿನ ನೀರ ಕುಡಿದು
ಹೆಬ್ಬಾಗಿಲದಾಗ ಡರಕೀಯ | ಹೊಡಿವಂಥ
ಚೆಲುವ ಹುಂಡೇದ ಬಸವಯ್ಯ ೨೪

ಕಡಲಿಕಾಳನಽಟು, ಕಟಿದಾರ ನಂಬಸವನ
ಕಡಲ ನಮ್ಮಲ್ಲಿ ಅವರೂಪ | ಬಸವಯ್ನ
ಕಟಿದಾರ ಕಲ್ಯಾಣ ಮಟದಾಗ ೨೫

ಉದ್ದಿಽನ ಕಾಳಽಟು, ತಿದ್ದ್ಯಾರ ಬಸವಯ್ನ
ಉದ್ದು ನಮ್ಮಲ್ಲಿ ಅಪರೂಪ, ಬಸವಯ್ನ
ತಿದ್ಯಾರುಳುವೀಯ ಗುಡಿಯಾಗ ೨೬
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...