ಹೊಸನಡತೆ ನೀನಾದೆ, ನಾ ಬಡವನಾದೆ!
ಮೊನ್ನೆ, ಬಲುದಿನವಿಲ್ಲ, ನಿನ್ನೊಲುಮೆಯೆಲ್ಲ
ತುಂಬಿ ತುಳುಕಾಡುವುದು ಮಡುವಾಗಿ ಮೀರಿ,
ನಂಬಿ ನೆಮ್ಮದಿಯಾದ ನನ್ನೆದೆಯೊಳೂರಿ.
ಊರುವುದು ಬೇರೊಂದನೆಣಿಸದೆಯೆ ಮನದೆ,
ಬೀರಿದೆನು ಮಿಗಿಲಾಗಿ, ಸಾಕಿವನಿಗೆನದೆ.
ಏನು ಸುಖದಲಿ ಮುಳುಗಿ ಕಾಲವನು ಕಳೆದೆ!
ನಾನೆ ಧನ್ಯನು ಧನ್ಯರೊಳಗೆಂದು ತಿಳಿದೆ!
ಈಗ, ಮುಡಿಪೆನಗೆನಿಸಿ, ಜಲಜಲನೆ ಬೀಗಿ,
ಜೀವಕಳೆಯುಕ್ಕುತಿದ್ದಾ ಒಲುಮೆ ಹೋಗಿ,
ಏನಿಹುದು? ಬಾಯಿಬಿಟ್ಟಾಡುವೆನೆ? ಕೇಳು,
ಕುಡಿಯಬಾರದ ಬಾವಿ, ಕಸ ಕವಿದ ಹೂಳು!
ತುಂಬಿದೊಲುಮೆಯ ಬಾವಿ – ಆಳವಿರಬಹುದು.
ನಂಬುವೆನು – ಇರಬಹುದು – ಬತ್ತದಿರಬಹುದು.
ಸೆಲವೇನು? ಜಲವೆಲ್ಲ ಮುಚ್ಚುಮರೆಯಾಗಿ
ಮಲಗಿರಲು ಮೌನದಲಿ ನನಗುಲಿಯದಾಗಿ,
ಈ ಬಗೆಯ ಹೊಸನಡತೆ ನನ್ನೆದೆಯ ಕೊರೆಯೆ,
ನಾ ಬಡವನಾಗಿಂತು ಹದುಗಿಹೆನು, ದೊರೆಯೆ!
*****
WORDSWORTH : A Complaint















