ಕೊನೆಯೇ ಇಲ್ಲದ ಕಾಳಗವಾಗಿದೆ ಕತ್ತಲೆ ಬೆಳಕಿನ ರೀತಿ
ನುಂಗುವ ರಾತ್ರಿಯ ಭಂಗಿಸಿ ದಿನವೂ ಬೆಳಗುತ್ತಲೆ ಇದೆ ಜ್ಯೋತಿ
ಹೆಪ್ಪುಗಟ್ಟಿರುವ ಕಪ್ಪು ಮೋಡಗಳ ಬೇದಿಸಿ ಹೊಳೆದಿವೆ ಚುಕ್ಕಿ
ಸತ್ತಲೋಕವನು ದನಿಯ ಬೆಳಕಿಂದ ಎಚ್ಚರಕೆತ್ತಿವೆ ಹಕ್ಕಿ.
ಕಾದಿದೆ ಮುಗಿಲಿನ ಹಂಡೆ, ಚೆಲ್ಲಲು ನೀರಿನ ಧಾರೆಯ ಕೆಳಗೆ
ಕಾದಿದೆ ಹೊಸ ಹೊಸ ಸೃಷ್ಟಿಗೆ ಬೀಜ, ಒಣಗಿದ ಹಣ್ಣಿನ ಒಳಗೆ
ತೇಯುತ್ತಿದೆ ತನ್ನೊಡಲನು ಮಾಗಿ, ಸುಗ್ಗಿಯ ಇಳಿಸಲು ಇಳೆಗೆ
ನೇಯುತ್ತಲೆ ಇದೆ ಜೀವದ ಜೇಡ ಎಳೆಗಳ ದಿಗಂತದೆಡೆಗೆ
ಬಗೆ ಬಗೆ ದೀಪಾವಳಿ ಬೆಳಗುತ್ತಿದೆ, ನೆಲದಲಿ ಬಾನಿನಲಿ
ಹರಿವ ನೀರಲಿ, ಸುರಿವ ಮಳೆಯಲಿ, ಹಗಲೂ ರಾತ್ರಿಯಲಿ
ಉಕ್ಕುವ ನಗೆಯಲಿ ಕತ್ತಲ ಬಸಿರನು ಸೀಳಿ ಏಳ್ವ ಸಸಿಯಲ್ಲಿ
ಮರಮರದಲ್ಲೂ ಸೊಕ್ಕಿ ಹೊಮ್ಮಿರುವ ಹಸಿರಿನ ತೆಕ್ಕೆಗಳಲ್ಲಿ
ತಮವೇ ಪ್ರಕೃತಿ, ಬೆಳಕೇ ವಿಕೃತಿ ಎನಿಸಿಯು ಒಳಗೊಳಗೇ
ಹಬ್ಬುವ ಬೆಳಕಿನ ಜಾಲದ ರೀತಿಗೆ ಅಬ್ಬಾ ಎನಿಸುವುದೆದೆಗೆ!
ಎಂದಿನಿಂದ ಇವು ಬಂದುವೊ, ಇರುವುವೊ ಎಂದಿನವರೆಗೂ!
ಸೆಣಸುವಾಗಲೇ ಚಿಗಿಯುವ ಪ್ರಾಣ ಕವಿಸುವುದದೆಗೆ ಬೆರಗು!
*****