Home / ಕವನ / ಕವಿತೆ / ಇಂದು ನಾನು ಧನ್ಯನು

ಇಂದು ನಾನು ಧನ್ಯನು


ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನ ಧರದಿ
ಚಿಗುರುತಿರಲು ನಗೆಯ ಕುಡಿ!

ಇಷ್ಟು ದಿನವು ನಿನ್ನ ತುಟಿಯ
ಬಿಗಿದಿದ್ದಿತು ದುಗುಡವು!
ಇಂದೇತಕೊ ಅದು ಸಡಿಲಿತು
ಚೆದರಿತೆಲ್ಲ ಮೋಡವು!

ನಮ್ಮ ನಗೆಯ ಮಿಲನವನ್ನೆ
ಮೈಯ ಬೇಟವೆನಲು ಜನರು
ನಿನ್ನ ನಗೆಯು ಬತ್ತಿತು!
“ಎದೆಯೊಳೊಲವು ತುಂಬಿದ್ದರು
ನಗಲಸಾಧ್ಯ” ಎಂಬ ಭಾವ
ನಿನ್ನ ಗಂಟಲೊತ್ತಿತು!

ನಮ್ಮ ನಡುವೆ ಈ ದುಗುಡವು
ಎಂಥ ಘೋರ ಕಂದರವನು
ಒಡ್ಡಿತು ನಾ ಬಲ್ಲೆನು!
ಇನ್ನು ನಿನ್ನ ನಗೆಯ ತೆಂಗ-
ಸಾರ ಕೈಯ್ಯ ಚಾಚಿ ಕರೆಯೆ
ಈ ಕೊನೆಯೊಳೆ ನಿಲ್ಲೆನು!

ನಿನಗೆ ನಗಲಸಾಧ್ಯವೆಂಬು-
ದನ್ನು ನಾನು ತಿಳಿದು ತಿಳಿದು
ನಿನ್ನ ನಗೆಗೆ ಕಾದೆನು!
ಸತ್ತೊಲವಿನ ಸಂಜೀವಿನಿ-
ಯಾದ ನಿನ್ನ ನಗೆಯ ಕಂಡು
ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನಧರದಿ
ಚಿಗುರುತಿರಲು ನಗೆಯ ಕುಡಿ!


ನಮ್ಮ ನಗೆಯ ಮಿಲನವನ್ನೆ
ಮೈಯ ಬೇಟವೆನಲು ಜನರು
ನಿನ್ನ ನಗೆಯು ಬತ್ತಿತು!
“ಎದೆಯೊಳೊಲವು ತುಂಬಿದ್ದರು
ನಗಲಸಾಧ್ಯ” ಎಂಬ ಭಾವ
ನಿನ್ನಗಂಟಲೊತ್ತಿತು!

ಓ ಓ ಓ ಈ ಜನರದೆಂಥ ಹುಂಬರು!
ಒಲವಿನುಗಮದಲ್ಲು ಇವರು
ಅಕ್ರಮ ರತಿ-ಕೇಳಿಯನ್ನು
ಅದರಿನೊಗೆವ ಭ್ರೂಣಹತ್ಯೆ-
ಎಲ್ಲವನೂ ಕಾಂಬರು!
ಓ ಓ ಓ ಈ ಜನರದೆಂಥ ಹುಂಬರು!

“ಮೈಯಿರುವುದು ನಾಮಕೊ
ನಾಮವಿಹುದು ಮೈಯ್ಯಿಗೊ”
ಎಂಬ ಶಂಕೆ ಬರುವ ತೆರದಿ
ನಾಮಂಗಳ ಬಳಿತವೇನು!

ಮಿಕ್ಕ ಕಾರ್ಯವಾವುದಕೂ
ಬಿಡುವೆ ಇಲ್ಲವೆಂಬ ತೆರದಿ
ಆಹ್ನಿಕಗಳ ಹೊಡೆತವೇನು!
ತೂತಾಗುವ ತೆರದಿ ಕಿವಿಯು
ಸೋತು ಹೋಗುವನಕ ಬಾಯಿ
ವೇದಂಗಳ ಘೋಷವೇನು?
ಮಡಿ-ಮೈಲಿಗೆ ವ್ಯಾಖ್ಯೆಯೇನು?
“ಏಕಾದಶಿಯುಪವಾಸವು
ಇಂದು ಸರಿಯೊ ನಾಳೆ ಸರಿಯೊ”
ಎಂಬ ‘ಗಹನ’ ವಿಷಯಗಳಲಿ
ತೋರುವ ಉತ್ಸಾಹವೇನು!

ತಿರೆಯ ಪಾಪಗಳನು ಮುಚ್ಚೆ
ಹಾಕುವ ತೆರೆಯೆಂತೆ ಇರುಳು
ಬರಲು ಕದ್ದು ಊರಿನಾಚೆ
ಹೊಲಗೇರಿಗೆ ತೆರಳ್ವುದೇನು!
ಅಲ್ಲಿ ಹೊಲತಿಯೊರ್ವಳೊಡನೆ
ಮಲಗಿ ಸುಖಿಪ ಮುದವದೇನು!

ದಿನವೆಲ್ಲವು ಭಗವಂತನ
ನಾಮಾಮೃತದೊಳಗೆ ಮಿಂದ
ಬಾಯಿ, ಅವಳ ಬಾಯ್ದಂಬುಲ-
ವನ್ನು ಮೆಲ್ಲುತಿರುವುದಯ್ಯೊ!
ದಿನವೆಲ್ಲವು ಯಾರ ನೆರಳು
ಸೋಕಿದರೂ ನದಿಯ ಸ್ನಾನ-
ವಾಗುತಿತ್ತೊ, ಅವಳೆದೆಗಳೆ
ಇವನ ಎದೆಯ ನಾಮಗಳನು
ಅಳಿಸುತಿಹವು! ತನ್ನ ಮಗುವೆ
ತನ್ನ ಮುಟ್ಟಗೊಡದ ಇವಗೆ
(ದಿಟವೆ ಇಂಥ ಪಾಪಿಗಳನು
ಮುಗ್ಧ ಹಸುಳೆ ಮುಟ್ಟಬಹುದೆ!)
ಅವಳ ಸನಿಹದಲ್ಲೆ ನಿದ್ದೆ!

ಎಂಥ ಪತನವಿದುವು ಗೆಳತಿ!
ಒಲವಿನ ವಿಮಲತೆಯನರಿವ-
ರೆಂತು ಈ ಮೂಢರು!
ಒಲಿದ ಎರಡು ಹೃದಯಗಳಲಿ
ಒಲಿದ ತಂದೆ ಮಕ್ಕಳಲ್ಲಿ
ಒಡಕನಯ್ಯೊ ತರುವರು!

ಓ ಓ ಓ ಈ ಜನರದೆಂಥ ಹುಂಬರು!
ಒಲಿವಿನುಗಮದಲ್ಲು ಇವರು ಏನೇನನೊ ಕಾಂಬರು!
* * *

ಅಂದೆನ್ನನು ನೀನು ಕರೆದೆ
ನಿನ್ನನೇನೊ ಕಾಡಿರೆ
ಬಿಸಿಯೆ ಕಂಬನಿಯಲಿ ನಿನ್ನ
ಕೆನ್ನೆ ಹೂವು ಬಾಡಿರೆ!

“ಓ! ಗೆಳೆಯನೆ! ಬರದಿರಿನ್ನು
ನನ್ನ ಮನೆಯ ಸನಿಹಕೆ!
ಬಂದಾಹುತಿಯಾಗದಿರು
ಜನರ ಮನದ ಶಂಕೆಗೆ!
ಬಂದು ನೆಯ್ಯ ಹೊಯ್ಯದಿರು
ಜನರ ಬಾಯ ಬೆಂಕಿಗೆ”-
ಈ ನುಡಿಗಳು ನಿನ್ನ ಹೃದಯ-
ದಾಳದಿಂದ ಬಂದುದಲ್ಲ!

(ನನ್ನ ಕಣ್ಣೆ ನುಡಿವುದೆಲ್ಲ!)
ಎಂಬುದ ನಾ ಬಲ್ಲೆನು!
ಆದರೇಕೊ ನನ್ನ ಎದೆಗೆ
ಬರೆಯನಿಟ್ಟ ತೆರದೊಳಾಯ್ತು
ನಿನ್ನ ಈ ನುಡಿಗಳು!

ನಿನ್ನ ಕಣ್ಣು ಸುರಿಸುತಿರುವ
ಕಂಬನಿಗಳ ತುಟಿಯೊಳೆ
ಹೀರಲೆಂದು ಬಗೆದೆನು!
ಬಾಡಿಹೋದ ಕೆನ್ನೆ ಹೂವ
ಮುತ್ತಮಾಲೆಯಿಂದ ಮತ್ತೆ
ಅರಳಿಸೆ ನಾ ಬಯಸಿದೆ!
ಆದರೆನ್ನನಾವುದೋ
ಶಕ್ತಿ ತಡೆದು ನಿಲಿಸಿತು!
ದುಃಖವಾರಿನಿಧಿಯ ಪಾಲ್ಗೆ
ನನ್ನನಕಟ ಸಲಿಸಿತು!

ಅಕಟ ಇನ್ನು ನಿನ್ನ ಮನೆಗೆ
ಬರದೊಲಾಯ್ತೆ ಗೆಳತಿಯೆ!
ಇನ್ನಿಲ್ಲವು ನಿನ್ನ ಕಣ್ಣ ನಿನ್ನ ನಗೆಯ ಆದರ!
ಇನ್ನು ನೀನು ಜಿಂಕೆಯಂತೆ
ಚಿಮ್ಮಿ ಬಂದು ಸನಿಹದಲ್ಲೆ
ಕುಳಿತು ಹರಟಲಾರೆಯಯ್ಯೊ!
ಇನ್ನು ನಿನ್ನ ಕೆಂದುಟಿಯನು
ಹುಸಿಯ ಮುನಿಸಿನಿಂದ ನೀನು
ತುಸು ಬಿರುಕಿಸಿ ನೋಡಲಾರೆ!

ಇನ್ನು ನಾನು ಬಂದೆನೆನುವ
ಸಡಗರದೊಳೆ ಓಡಾಡುತ
ನಲಿವ ಚೆಲುವ ಸವಿಯಲಾರೆ!

ಇನ್ನು ನಿನಗೆ ಬೇಕಾದುದ
ತಂದುಕೊಡುವ ಭಾಗ್ಯವೆಲ್ಲ
ಮಾಯವಾಯಿತಕಟ ನೀರೆ!

ಬೇಡ ಮುತ್ತು, ಬೇಡ ಬೇಟ,
ನಿನ್ನ ಮುಖವ ಕಾಂಬ ಸುಖವೆ
ನಿನ್ನ ಕಣ್ಣ ನಿನ್ನ ನಗೆಯ
ಬಲೆಗೆ ಸಿಲುಕಿ ಮೀನಿನಂತೆ
ಪರದಾಡುವ ಸುಖವದೊಂದೆ
ಸಾಕೆಂದಿರೆ ನಾನು ಗೆಳತಿ
ಜನರದನೂ ಸಹಿಸಲಿಲ್ಲ!

ಓ ಓ ಓ ಈ ಜನರದೆಂಥ ಹುಂಬರು!
ಒಲಿವಿನುಗಮದಲ್ಲು ಇವರು ಏನೇನನೊ ಕಾಂಬರು!


ಇದೆಲ್ಲ ಗೆಳತಿ ಹಳೆಯ ಕತೆಯು!
ದಿಟವು, ಬಲ್ಲೆ ವ್ಯಥೆಯ ಕಥೆಯು!
ಆದರೇಕೊ ನಿನ್ನ ಬಿಗಿದ
ಮೊಗವ ಕಂಡು ನನ್ನ ಮನವು
ಉರಿಯುತಿತ್ತು ಕೋಪದಿ!
ಇಂದದೆಲ್ಲ ಮಾಯವಾಯ್ತು
ನಿನ್ನ ನಗೆಯ ಸ್ಪರ್ಶದಿ!

ತನಗೆ ತಾನೆ ತಿಳಿಯದಂತೆ
ಮೋಡದ ಮರೆಯಿಂದಲಿಣುಕಿ
ನೋಡಿ ನಲಿನ ‘ಬೆಳ್ಳಿ’ಯಂತೆ
ದುಗುಡದ ತೆರೆಯನ್ನು ಕೊಂಚ
ಸರಿಸಿ, ಮುಗುಳುನಗೆಯು ಉಕ್ಕಿತು!
ಸತ್ತೊಲವಿನ ಸಂಜೀವಿನಿ-
ಯಾದ ಆ ನಗೆಯ ಕಂಡು
ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನಧರದಿ
ಚಿಗುರುತಿರಲು ನಗೆಯ ಕುಡಿ!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...