ದೂರದ ಸ್ವರ್ಗ ಬುವಿಗಿಳಿದು ಆಗಿದೆ ಕರುನಾಡು
ಲೋಕದ ಕಣ್ಮನ ಸೆಳೆಯುತಿಹ ಸುಂದರ ಸಿರಿನಾಡು ||ಪ||
ಸುಂದರ ಸಿರಿನಾಡು ನಮ್ಮ ಕಲಿಗನ್ನಡನಾಡು
ಶ್ರೀಗಂಧದ ಬೀಡು ಸರ್ವ ಚೇತನಮಯ ನಾಡು ||ಅ.ಪ||
ಕವಿ ಕೋಗಿಲೆಗಳು ಹಾಡಿರುವ ಸ್ಫೂರ್ತಿಯ ನೆಲೆವೀಡು
ನಾಟ್ಯ ಸರಸ್ವತಿ ನರ್ತಿಸಿಹ ನವರಂಗದ ಬೀಡು
ಕಲಿ ಗಂಡೆದೆಗಳು ಮೆರೆದಿರುವ ಸಿಡಿಲಿನ ಮರಿನಾಡು
ಇತಿಹಾಸದ ಪುಟ ಪುಟದಲ್ಲು ಬೆಳಗಿಹ ಕರುನಾಡು
ಕೃಷ್ಣ ಶರಾವತಿ ಕಾವೇರಿ ಹರಿದಿಹ ಹೊಳೆನಾಡು
ಮಲೆನಾಡಿನ ಗಿರಿಶೃಂಗಗಳು ಕಂಗೊಳಿಸಿಹ ಬೀಡು
ಪಡುವಣ ಕಡಲಲಿ ಬಿಂಬಿಸುವ ಕರಾವಳಿಯ ನೋಡು
ರತಿ ರೂಪಸಿಯರ ನಾಚಿಸುವ ಸುಂದರ ಕರುನಾಡು
ಮುಗಿಲನು ಮುಟ್ಟಿ ನಿಂತಿರುವ ಗೊಮ್ಮಟನ ನಾಡು
ವಿಶ್ವಖ್ಯಾತಿ ಕುಶಲಕಲಾ ಗುಮ್ಮಟಗಳ ಬೀಡು
ಮಾನವೀಯ ದನಿಗಳಿಗೆ ಜನ್ಮವಿತ್ತ ನಾಡು
ವಿಶ್ವಮಾನವತೆ ಸಾರುತಿಹ ಹೆಮ್ಮೆಯ ಕರುನಾಡು
*****