ಚಿನ್ನೂ,
ನನ್ನ ಬದುಕಿನಲ್ಲಿ ಎಲ್ಲಾ ಬಂದ ಘಟನೆಗಳು. ನಾನು ನೆನಸಿಕೊಂಡ ಹಾಗಾಗುತ್ತಿರಲಿಲ್ಲ. ಎಲ್ಲವೂ ‘ಆಕಸ್ಮಿಕಗಳು’ ಎಂಬಂತೆ ಬರುತ್ತಿದ್ದವು. ಆಘಾತ, ಅಪಘಾತಗಳನ್ನೇ ತರುತ್ತಿದ್ದವು. ಹೀಗಾಗಿ ನಾನು ಕನಸು ಕಾಣುವುದನ್ನೂ, ‘ಹೀಗೆ ಆಗಬೇಕೆಂದು ಯೋಚಿಸುವುದನ್ನು ಬಿಟ್ಟುಬಿಟ್ಟಿದ್ದೆ. ಬದುಕು ಎಲ್ಲಿಗೆ, ಯಾವಾಗ ಹೇಗೆ ನನ್ನನ್ನು ಸೆಳೆದುಕೊಂಡು ಹೋಗುವುದೋ ಅಲ್ಲಿಗೆ ನಾನು ಹೋಗಲೇ ಬೇಕಾಗಿತ್ತು. ಅನ್ಯ ಮಾರ್ಗವೇ ಇರುತ್ತಿರಲಿಲ್ಲ. ಏನೇ ಬರಲಿ ಎದೆಯೊಡ್ಡಿ ನಿಂತು ಸ್ವೀಕರಿಸುವುದನ್ನು ಕಲಿಯಬೇಕಿತ್ತು. ಕಲಿಯತೊಡಗಿದ್ದೆ. ಹೇಗೂ ನನಗೆ ಭಂಡ ಧೈರ್ಯವಿತ್ತಲ್ಲ? ಈ ಬಾರಿಯೂ ನನಗೆ ಅವಮಾನವಾಗಿತ್ತು. ಅದೂ ನನ್ನ ವೃತ್ತಿಯಲ್ಲಿದ್ದಾಗ! ಅಲ್ಲಿಯೂ ನಾನು ಯೋಗ್ಯಳಲ್ಲವೆಂದು ಸಾಬೀತುಪಡಿಸಿ, ಅವಧಿ ಮುಗಿಯುವ ಮೊದಲೇ ಇದ್ದ ಜಾಗದಿಂದ ಬೇರೆ ಊರಿಗೆ ವರ್ಗಾವಣೆ ಮಾಡಲಾಗಿತ್ತು. ಅದಕ್ಕೆ ಸೂಕ್ತ ಕಾರಣಗಳೇ ಇರಲಿಲ್ಲ. ಆದರೂ ಎಲ್ಲಾ ಸ್ಥಳಗಳಲ್ಲಿಯೂ ಅಸೂಯೆ ತುಂಬಿದವರಿದ್ದರು. ನಾನವರಿಗೆ ಎಲ್ಲದಕ್ಕೂ ‘ಹೂಂ’ಗುಡಬೇಕಾಗಿತ್ತು. ನನಗೆಂದೂ ‘Ego’ ಕಾಡಿರಲಿಲ್ಲ. ಆದರೆ ಅತ್ಯಂತ ಸ್ವಾಭಿಮಾನಿಯಾಗಿದ್ದೆ. `Unconditional’ ಆಗಿದ್ದೆ. ನನ್ನ ಮೇಲೆ ನನಗೆ ವಿಶ್ವಾಸವಿತ್ತು. ‘ಜೀವುಜೂರ್’ ಎನ್ನುತ್ತಾ ಬದುಕಲು ನನ್ನ ಕೈಯಲ್ಲಾಗೋದಿಲ್ಲವೆಂಬುದನ್ನು ಅಹಂಕಾರವೆಂದುಕೊಂಡರೆ ನಾನು ತಾನೇ ಏನು ಮಾಡಬೇಕಿತ್ತು?
ನಾನಂದುಕೊಂಡ ಹಾಗೆ ಎಂದೂ ‘ಆಗುವುದಿಲ್ಲವೆಂದಿದ್ದೆನಲ್ಲವಾ? ನರ್ಸಿಂಗ್ ಹೋಂಮ್ ಆರಂಭ ಮಾಡುವ ಬಗ್ಗೆ ಸಾಧ್ಯವಿಲ್ಲವೆಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿತ್ತು. 10 ಹಾಸಿಗೆಯುಳ್ಳ ಪುಟ್ಟ ‘ನರ್ಸಿಂಗ್ ಹೋಮ್’ ಎರಡು ತಿಂಗಳೊಳಗೆ ಆರಂಭವಾಗಿಯೇ ಬಿಟ್ಟಿತ್ತು! ಖಾಸಗಿ ನರ್ಸಿಂಗ್ ಹೋಮ್‌ಗೆ ಆರಂಭದ ದಿನಗಳಲ್ಲಿ ರೋಗಿಗಳು ಹೆಚ್ಚು ಬರುವುದಿಲ್ಲವೆಂದುಕೊಂಡಿದ್ದೆ. ಆದರೆ ನನ್ನ ಅನಿಸಿಕೆ ಅಲ್ಲಿಯೂ ಸೋಲನ್ನು ಕಂಡುಕೊಂಡಿತ್ತು. ಸರ್ಕಾರಿ ಆಸ್ಪತ್ರೆಗಿಂತ ನನ್ನ ನರ್ಸಿಂಗ್ ಹೋಮ್‌ಗೆ ರೋಗಿಗಳು ಹೆಚ್ಚಾಗಿದ್ದರು ಕಣೆ.
ಆಹ್ವಾನ ಪತ್ರಿಕೆಯನ್ನು ಮರೆಯದೆ ಮೊದಲು ಕೊಟ್ಟಿದ್ದು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯವರಿಗೆ. ಎಲ್ಲರಿಗೂ ಒಂದು ವಿಧದಲ್ಲಿ ‘ಶಾಕ್…’ ಆಗಿತ್ತು. ನನ್ನನ್ನು ವರ್ಗಾವಣೆ ಮಾಡಿಸಿದ ಆ ಎಂ.ಎಲ್.ಎ. ಗೂ ಕೂಡ ಆಹ್ವಾನ ಪತ್ರಿಕೆ ನೀಡಿದ್ದೆ.
ಅದನ್ನು ನೋಡಿದ್ದ ಅವರು, “ಈ ಊರಲ್ಲಿ ನರ್ಸಿಂಗ್ ಹೋಂ ಇರಲಿಲ್ಲ ಬಿಡಿ ಒಳ್ಳೆಯದಾಯ್ತು. ಚೆನ್ನಾಗಿ ಸರ್ವಿಸ್ ಮಾಡಿ” ಎಂದಿದ್ದರು. ನಾನು ಸಹನೆ ಕಳೆದುಕೊಂಡುಬಿಟ್ಟಿದ್ದೆ.
“ನರ್ಸಿಂಗ್ ಹೋಂ ಮಾಡಿರೋದು Practice ಮಾಡೋಕೆ ಸರ್… ಸರ್ವಿಸ್ ಮಾಡೋಕೆ ಅಲ್ಲ…” ಎಂದಿದ್ದೆ ಅವರ ಮುಖ ನೋಡುತ್ತಾ ಅರ್ಥವಾಗದವರಂತೆ ನನ್ನ ಮುಖ ನೋಡಿದ್ದರು ಆತ.
“ಸರ್ವಿಸ್ ಮಾಡ್ತಾ ಇದ್ದದ್ದು ನಾನು ಮೊದಲಿದ್ದ ಸರ್ಕಾರಿ ಆಸ್ಪತ್ರೇಲಿ ಈಗ ಖಾಸಗಿ ಆಸ್ಪತ್ರೆ ಆಗಿರೋದ್ರಿಂದ ಸರ್ವಿಸ್ಟ್ ಜೊತೆ Practice ಕೂಡಾ ಮಾಡಬೇಕಾಗುತ್ತೆ. ಅಂದರೆ ಎಲ್ಲದಕ್ಕೂ ದುಡ್ಡು ತೆಗೆದುಕೊಳ್ಳಬೇಕಾಗುತ್ತೆ ಸರ್…” ಎಂದಿದ್ದೆ ವ್ಯಂಗ್ಯವಾಗಿ.
ಪಾಪದ ಮನುಷ್ಯ…! ನನ್ನ ವ್ಯಂಗ್ಯ ಅರ್ಥವಾಗಿರಲಿಲ್ಲಾಂತ ಕಾಣುತ್ತೆ. “ಏನೋ… ಒಂದು ಮಾಡಮ್ಮ. ಈ ಊರಿನ ಜನರಿಗೆ ಒಳ್ಳೆಯದಾದರಾಯ್ತು” ಎಂದು ಹೇಳಿದ್ದರು.
“ಈ ಊರಿನ ಜನರಿಗೆ ಒಳ್ಳೆಯದನ್ನು ಮಾಡ್ಬೇಕೂಂತಾನೇ ನೀವಿದ್ದೀರಲ್ಲ ಸರ್…” – ಮುಖಕ್ಕೆ ರಾಚುವಂತೆ ಹೇಳಿ ಬಂದಿದ್ದೆ. ಎಂಥಾದ್ದೋ ವಿಕೃತ ತೃಪ್ತಿಯಾಗಿತ್ತು ಆ ದಿನ ನನಗೆ. ನನ್ನ ಎದೆಯೊಳಗಿನ ಕಿಚ್ಚು ಹೆಚ್ಚಾಗಿದ್ದಿರಬೇಕು.
ಹತ್ತಿರದ ಹಳ್ಳಿಯೊಂದರಲ್ಲಿ ಖಾಸಗಿ ಕ್ಲಿನಿಕ್ ತೆರೆದಿದ್ದ ‘ಆ ವ್ಯಕ್ತಿಯ’ ಅಣ್ಣ ನನಗೆ ಸಹಾಯ ಮಾಡಲು ಮುಂದೆ ಬಂದಿದ್ದರು. ಇವರ ತಮ್ಮ ಮಾಡಿದ್ದ ಮೋಸ ಅವರಿಗೆ ತಿಳಿದಿರಲಿಲ್ಲ ಎಂದುಕೊಂಡಿದ್ದೆ. ಅವರೂ ಕೇಳಿರಲಿಲ್ಲ ನಾನೂ ಹೇಳಿರಲಿಲ್ಲ.
“ನೋಡಿ… ಮೇಡಂ, ಹಣ ಸಹಾಯ ನನಗೆ ಕಷ್ಟವಾಗುತ್ತದೆ. ನನ್ನ ಜೊತೆ ನನ್ನ ತಮ್ಮ ಬಂದಿದ್ದಾನಲ್ಲ? ಅವನನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ನರ್ಸಿಂಗ್ ಹೋಂ ಜವಾಬ್ದಾರಿ ಹೆಚ್ಚೇ ಇರುತ್ತದೆ ಅಲ್ವಾ? ಬೇಡವೆನ್ನಿಸಿದಾಗ ಕಳುಹಿಸಿಬಿಡಿ. ಹೇಗೂ ಅವನಿಗೂ ಉದ್ಯೋಗವಿಲ್ಲ. ಊರಲ್ಲಿ ತೋಟ ನೋಡಿಕೊಂಡಿರೋ ಬದಲು ನಿಮ್ಜೊತೆ ಇದ್ದರೆ ಒಳ್ಳೆಯದಾಗುತ್ತದೆ…” ಎಂದು ಸಲಹೆ ಕೊಟ್ಟಿದ್ದರು ಆ ಆಯುರ್ವೇದದ ಡಾಕ್ಟರ್.
ಹಾಗೆಯೇ ನಡೆದುಕೊಂಡಿದ್ದರೂ ಕೂಡಾ. ಅವರುಗಳ ಸಹಕಾರದಿಂದ ನನ್ನ ಮನೆಯವರನ್ನು ಸಹಾಯಕ್ಕೆ ಕರೆಯದೇ ಆಸ್ಪತ್ರೆ ಆರಂಭಿಸಿದ್ದೆ. ಶನಿವಾರದಂದು ಆತನ ತಮ್ಮ ತನ್ನ ಅಣ್ಣನ ಮನೆಗೆ ಹೋಗುತ್ತಿದ್ದ. ನನಗಿಂತಲೂ ಆರು ವರ್ಷಗಳಷ್ಟು ಚಿಕ್ಕವನಾಗಿದ್ದ. ಅವನು, ವಿನಯದಿಂದ ನನ್ನ ಜೊತೆಜೊತೆಯಾಗಿ ನರ್ಸಿಂಗ್ ಹೋಮ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಒಳ್ಳೆಯ ಯುವಕ. ಮೂರು ತಿಂಗಳಾಗುವಷ್ಟರಲ್ಲಿ ತೆಗೆದುಕೊಂಡಿದ್ದ ಸಾಲ ತೀರಿಸಿ ಸಮಾಧಾನದ ಉಸಿರುಬಿಟ್ಟೆ. ಉತ್ಪ್ರೇಕ್ಷೆಯ ಮಾತಲ್ಲ. ನಾನು ಕೇಳಿದಷ್ಟು ಹಣ ಕೊಡಲು ರೋಗಿಗಳು ಸಿದ್ಧರಿದ್ದರು. ಆದರೆ ನಾನು ಎಂದೂ ದುರಾಸೆಗೆ ಬೀಳಲಿಲ್ಲ. ಕೊಡಲಾಗದ ಬಡ ಮಹಿಳೆಯರಿದ್ದರೆ, ಆದರದಿಂದ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದೆ. ನನ್ನ ಸೋಲಿನ ನಿರೀಕ್ಷೆಯಿಟ್ಟುಕೊಂಡಿದ್ದ ಕೆಲವರಿಗೆ ಮುಖ ಕಪ್ಪಿಟ್ಟು ಹೋಗಿತ್ತು. ನನ್ನ ನರ್ಸಿಂಗ್ ಹೋಂನಲ್ಲಿ ಎಷ್ಟು ಸೌಲಭ್ಯಗಳಿದ್ದವೋ ಅಷ್ಟರಲ್ಲಿ ನಿಭಾಯಿಸಲು ಸಾಧ್ಯವಾಗುವಂತಹ ರೋಗಿಗಳನ್ನು ದಾಖಲೆ ಮಾಡಿ ಚಿಕಿತ್ಸೆ ನೀಡುತ್ತಿದ್ದೆ ಇಲ್ಲವಾದಲ್ಲಿ ಸಿಟಿಯ ದೊಡ್ಡಾಸ್ಪತ್ರೆಗೆ, ರೋಗಿಗಳನ್ನು ಕಳುಹಿಸಿಬಿಡುತ್ತಿದ್ದೆ. ನನ್ನ ಪರಿಮಿತಿ, ಇರುವ ಸೌಲಭ್ಯಗಳು, ಉಪಕರಣಗಳಿಂದ ತೀರಾ ಗಂಭೀರ ಪರಿಸ್ಥಿತಿಯಾದವರನ್ನು ನಾನೇ ಜೊತೆಯಲ್ಲಿಯೇ ಹೋಗಿ ಆಸ್ಪತ್ರೆಗೆ ತಲುಪಿಸಿ ಬರುತ್ತಿದ್ದೆ. ಎಷ್ಟು ಬೇಕೋ ಅಷ್ಟು ಸಿಬ್ಬಂದಿಗಳನ್ನಿಟ್ಟುಕೊಂಡಿದ್ದೆ. ಕೆಲಸಗಳ ಒತ್ತಡ ರೋಗಿಗಳು ಹೆಚ್ಚಾಗುತ್ತಿದ್ದಂತೆಯೇ ಹೆಚ್ಚಾಗತೊಡಗಿತ್ತು. ಸಮಯ ಸಿಗಬಹುದೆಂದುಕೊಂಡಿದ್ದೆ. ಆದರೆ ಇನ್ನೂ ಹೆಚ್ಚಿನ ಸಮಯವನ್ನು ನನ್ನ ನರ್ಸಿಂಗ್‌ಹೋಂ ಕೆಲಸಗಳಿಗೆ ಮೀಸಲಿಡಬೇಕಾಗಿತ್ತು. ಊಹಿಸಿದ್ದಕ್ಕಿಂತಲೂ ನನ್ನ ನರ್ಸಿಂಗ್ ಹೋಂ… ನನ್ನ ಕೆಲಸ ಸೇವೆಗಳು ಮೆಚ್ಚುಗೆಯಾಗತೊಡಗಿದ್ದವು.
ಒಂದು ವರ್ಷ ಕಳೆದದ್ದು ಗೊತ್ತಾಗಲೇ ಇಲ್ಲ. ಏನಾದರೂ ಆಕಸ್ಮಿಕಗಳು ಅವಘಡಗಳು ಬಾರದೆ ಇದ್ದರೆ ಹೇಗೆ? ಆಗಲೂ ನನ್ನನ್ನು ಕುಗ್ಗಿಸುವಂತೆ ಮಾಡಲು ವಿಧಾತ ಸಂಚು ಆರಂಭಿಸಿದ್ದ. ವರ್ಗಾವಣೆಯಾಗಿದ್ದ ಮತ್ತೊಂದು ಊರಿಗೆ “Duty Report” ಮಾಡಿಕೊಂಡು ಬಂದಿದ್ದೆ. ಅನುಮತಿಯನ್ನು ಪಡೆಯಲು ನರ್ಸಿಂಗ್ ನಡೆಯಲು ಮರೆತುಬಿಟ್ಟಿದ್ದೆ. ಇನ್ನು ವರ್ಷ ಸಮಯವಿರುತ್ತೆ ಎಂದು ಸಿ.ಎ. ಒಬ್ಬರು ಹೇಳಿದ ಮಾತಿಗೆ ಸುಮ್ಮನಾಗಿದ್ದೆ. ನನಗೊಂದು Notice ಬಂದಿತ್ತು. ಅನುಮತಿ ಪಡೆಯಲು ನೀನು ರಾಜಿನಾಮೆಯನ್ನು ನನ್ನ ಸರ್ಕಾರಿ ಕೆಲಸಕ್ಕೆ ನೀಡಬೇಕಾಗಿತ್ತು. ಸರ್ಕಾರಿ ಕೆಲಸ ಬಿಟ್ಟ ಮೇಲೆ ರಾಜೀನಾಮೆ ಪತ್ರವನ್ನು ಬರೆದುಕೊಟ್ಟು ಬಂದಿದ್ದೆ. ಆದರೆ ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. ನಾನಿದ್ದ ಸರ್ಕಾರಿ ಆಸ್ಪತ್ರೆಯ ಮೇಲಾಧಿಕಾರಿಗಳು. ನನಗೆ ಏನೂ ತೋಚದಂತಾಗಿತ್ತು. ಈ ಮಧ್ಯದಲ್ಲಿ ನನ್ನನ್ನು ಮಾತನಾಡಿಸಲು ಬಂದಿದ್ದ ನನ್ನ ಸ್ನೇಹಿತ ವೈದ್ಯರು. ‘ಸರ್ಕಾರಿ ಕೆಲಸಕ್ಕೆ ಬಂದು ಬಿಡಿ. ಇಷ್ಟು ಒತ್ತಡದ ಕೆಲಸಗಳು ಮುಂದೆ ನಿಮಗೆ ಕಷ್ಟವಾಗಬಹುದು’ ಎಂದು ಹೇಳಿದ್ದು ನೆನಪಾಗಿತ್ತು. ಸ್ನೇಹಿತರ ಸಲಹೆ ಕೇಳಿದ್ದರೂ ಒಂದು ಬಾರಿ ಅವ್ವನನ್ನು ಕೇಳಲೆ? ಹೇಗೂ ಅವ್ವನ ಹಠ ದೂರವಾಗಿರದಿದ್ದರೂ ಸಿಟ್ಟು ಸ್ವಲ್ಪ ಕಡಿಮೆಯಾಗಿತ್ತೆಂದೆನ್ನಿಸಿತ್ತು.
“ಸರ್ಕಾರಿ ಕೆಲ್ಸ ಸಾಯೋತನಕ. ಸಣ್ಣಪುಟ್ಟ ತಪ್ಪುಗಳಾದರೂ ನಡೆಯುತ್ತೆ. ನಿಂಗೆ ಅಷ್ಟು ತ್ರಾಸ ಕೊಡೋ ಆ ಊರಿನಲ್ಲಿ ನರ್ಸಿಂಗ್ ಹೋಮ್ ತೆರೆದಿದ್ದು ನನಗೆ ಸರಿಕಂಡಿರಲಿಲ್ಲ…” ಎಂದು ಅವ್ವ ತನ್ನ ಅಭಿಪ್ರಾಯ ತಿಳಿಸಿದ್ದಳು. ಅಷ್ಟೇ ಸಾಕಾಗಿತ್ತೂ ನನಗೆ, ಹಣ ತೆಗೆದುಕೊಳ್ಳುವಾಗ ಒಂದು ವಿಧದ ದಾಕ್ಷಿಣ್ಯಕ್ಕೊಳಗಾಗುತ್ತಿದ್ದೆ. ಅವರೆಷ್ಟು ಕೊಡುತ್ತಾರೋ ಅಷ್ಟನ್ನೇ ತೆಗೆದುಕೊಳ್ಳುತ್ತಿದ್ದೆ. ಅಷ್ಟು ಕೊಡಿ, ಇಷ್ಟು ಕೊಡಿ ಎಂದು ಹೇಳದೆ ಕೇಳದೇ ಇರುತ್ತಿದ್ದ ನನ್ನನ್ನು ಕಂಡು ಕಡಿಮೆ ಹಣಕೊಡಲು ಅವರುಗಳಿಗೆ ಮುಜುಗರವಾಗುತ್ತಿತ್ತು. ನಂಗೆಷ್ಟು ಬೇಕೋ ಔಷಧಿಗಳ ಖರ್ಚನ್ನು ತೆಗೆದುಕೊಂಡು ಉಳಿದದ್ದನ್ನು ಹಿಂದಿರುಗಿಸಿ ಬಿಡುತ್ತಿದ್ದೆ. ಹೀಗೇ ಸಾಗಿತ್ತು ನನ್ನ ನರ್ಸಿಂಗ್ ಹೋಂ ಕೆಲಸಗಳು. ನಷ್ಟವಂತೂ ಆಗುತ್ತಿರಲಿಲ್ಲ.
ಆ ‘ವ್ಯಕ್ತಿ’ಯ ಅಣ್ಣ ಆಯುರ್ವೇದ ಡಾಕ್ಟರನ್ನು ಕಂಡು ರಾಜೀನಾಮೆ ಒಪ್ಪಿಗೆಯಾಗಿಲ್ಲವೆಂಬುದನ್ನು ತಿಳಿಸಿ. ಅವರೂ ಅವ್ವ ಹೇಳಿದ್ದ ಮಾತನ್ನೇ ಹೇಳಿದ್ದರು.
“ಎಷ್ಟು ಹೊತ್ತಾದ್ರೂ ದುಡೀತಾನೇ ಇರ್ಬೇಕು. ರಜೆ-ಗಿಜೇಂತಾಂದ್ರೆ ಸಂಪಾದನೆಯಿರೋಲ್ಲ. ಹಾಗೇ ನೋಡಿದ್ರೆ ಸರ್ಕಾರಿ ಕೆಲಸಕ್ಕೇ ಸೇರಿಬಿಡಿ. ಹೆಂಗೂ ಸಿಕ್ಕಿದೆಯಲ್ಲ…” ಎಂದಿದ್ದರು.
ಅವರ ತಮ್ಮ ನನ್ನೊಂದಿಗಿದ್ದಿದ್ದು ತುಂಬಾ ಅನುಕೂಲವಾಗಿತ್ತು. ಕೆಲಸಗಳ ಭಾರ ಕಡಿಮೆಯಾಗಿತ್ತು. ವಯಸ್ಸು ಇರುವವರೆಗೂ ಹೀಗೆ ಹಗಲು-ರಾತ್ರಿ ದುಡಿಯಬಹುದು? ಆಮೇಲೆ?
ಒಂದು ರಾತ್ರಿ ಯೋಚಿಸುತ್ತಾ ಕುಳಿತಿದ್ದ ನನಗೆ, ನರ್ಸಿಂಗ್ ಹೋಮ್ ತೆರೆಯುವುದಕ್ಕೇ ಅನುಮತಿ, ಬಿಡುವಿಲ್ಲದೇ ದುಡಿಯುವುದು ನನಗೂ ಕಷ್ಟಕರವಾಗಬಹುದೆಂದೆನ್ನಿಸಿತ್ತು.
ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ನಿರ್ದೆಶನಾಲಯಕ್ಕೆ ನನ್ನ ಅಲೆದಾಟ ಆರಂಭವಾಗಿತ್ತು.
ಅಲ್ಲಿ ಎಲ್ಲವನ್ನೂ ತಿಳಿದವರೊಂದಿಗೆ ಚರ್ಚಿಸಿ ಮತ್ತೆ ಸರ್ಕಾರಿ ಕೆಲಸಕ್ಕೇ ಸೇರುವ ಇಚ್ಛೆಯನ್ನು ತಿಳಿಸಿದ್ದೆ. ರೋಗ ರುಜಿನಗಳಿಗೆಂದೇ ರಜೆಗಳು ಕಡ್ಡಾಯವಾಗಿರುತ್ತದೆ. ಇಷ್ಟು ದಿನಗಳ ನನ್ನ ಗೈರು ಹಾಜರಿಯನ್ನು ಪರಿಗಣಿಸಿ, ಇಲಾಖೆಯ ನಿಯಮಗಳನ್ನು ಅನುಸರಿಸಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಗೈರು ಹಾಜರಿಯ ದಿನಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಮುಂಬಡ್ತಿಯೂ ಇರೋದಿಲ್ಲವೆಂಬ ನಿಯಮ ತಿಳಿಸಿ ಕೆಲಸಕ್ಕೆ ಹಾಜರಾದ ನಂತರ ವಿಚಾರಣೆ ನಡೆಸಲಾಗುತ್ತದೆಂಬ ಒಪ್ಪಂದದ ಮೇರೆಗೆ ಸರ್ಕಾರಿ ಕೆಲಸಕ್ಕೆ ಸೇರಲು ಅನುಮತಿ ದೊರೆತಿತ್ತು. ಸ್ತ್ರೀರೋಗ ತಜ್ಞೆಯಾದದ್ದು ಉಪಯೋಗಕ್ಕೆ ಬಂದಿತ್ತು.
“ವಿದೇಶದಲ್ಲಿ ಎಷ್ಟೇ ವರ್ಷಗಳಿದ್ದು ಬಂದವರಿಗೆ ಮತ್ತೆ ಸರ್ಕಾರಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ನಿಮ್ಮದೇನೂ ಆತರಹದ್ದಲ್ಲ…” ಎಂದಿದ್ದರು.
ಇಷ್ಟೆಲ್ಲಾ ಆಗಲು ಆರೇಳು ತಿಂಗಳುಗಳೇ ಹಿಡಿದಿದ್ದವು. ಬೆಂಗಳೂರಿಗೆ ಅಲೆದಾಡಿ ದಣಿವಾಗಿ ಹೋಗಿತ್ತು. ಅಂತೂ ಸರ್ಕಾರಿ ಕೆಲಸ ಸಿಗುವುದೆಂದು ಖಚಿತವಾದ ನಂತರ ಮುಂದೇನು ಮಾಡಬೇಕೆಂಬುದರ ಬಗ್ಗೆ ಯೋಚಿಸ ತೊಡಗಿದ್ದೆ. ಉತ್ತಮವಾಗಿ ನಡೆಯುತ್ತಿದ್ದ ನರ್ಸಿಂಗ್ ಹೋಮ್‌ನ್ನು ತೆಗೆದುಕೊಳ್ಳಲು ವೈದ್ಯೆಯೊಬ್ಬರು ತಯಾರಾಗಿ ತಮ್ಮ ಇಂಗಿತ, ಕಾತುರವನ್ನೂ ವ್ಯಕ್ತಪಡಿಸಿದ್ದರು. ನಾನು ತುಂಬಾ ಭಾವುಕಳಾಗಿಬಿಟ್ಟಿದ್ದೆ. ಏನೇನೋ ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇನೆಯೇ ಎಂದು ಕುಳಿತು ಯೋಚಿಸುವಷ್ಟು ಸಮಯವಿರಲಿಲ್ಲ. ಸರ್ಕಾರಿ ಕೆಲಸದ ಭರವಸೆಯಿದ್ದುದರಿಂದ ಗಟ್ಟಿ ಮನಸ್ಸು ಮಾಡಿ ನನ್ನನ್ನು ಸಾಕಿ-ಸಲುಹಿದ ನನ್ನ ನರ್ಸಿಂಗ್ ಹೋಮ್ನನ್ನು ಬಿಟ್ಟು ಕೊಡಲೇಬೇಕಾಗಿತ್ತು!
ಬೆಂಗಳೂರಿನ ಹತ್ತಿರದ ದೇವನಹಳ್ಳಿಗೆ ನನ್ನ ಸರ್ಕಾರಿ ಕೆಲಸದ ಆಜ್ಞೆ ಬಂದಿತ್ತು. ಬೆಂಗಳೂರಿನಂತಹ ಮಹಾನಗರಕ್ಕೆ ಒಬ್ಬಳೇ ಹೋಗಿ ಎಲ್ಲಿರುವುದು? ಹೇಗಿರುವುದು? ಎಂಬ ಯೋಚನೆಯಿಂದ ತಲೆಕೆಟ್ಟುಹೋದಂತಾಗಿತ್ತು. ಆ ಸಮಸ್ಯೆಯೂ ನಿವಾರಣೆಯಾಗಿತ್ತು. ಆಯುರ್ವೇದದ ವೈದ್ಯರು, ತಮ್ಮನನ್ನು ನನ್ನೊಂದಿಗೆ ಕಳುಹಿಸಲು ತಯಾರಾಗಿದ್ದರು. ನಾನು ಬೆಂಗಳೂರಿನಲ್ಲಿ ನೆಲೆಸುವವರಿಗೆ ಸಹಾಯ ಮಾಡಲು ಅವನು ನನ್ನೊಂದಿಗೇ ಬೆಂಗಳೂರಿಗೆ ಬಂದಿದ್ದ. ನರ್ಸಿಂಗ್ ಹೋಮ್‌ನ್ನು ಬಿಟ್ಟು ಕೊಟ್ಟು ಬಂದಾಗ ದೊಡ್ಡ ಮೊತ್ತದ ಹಣ ನನ್ನ ಕೈಯ್ಯಲ್ಲಿತ್ತು. ನನ್ನ ಮನೆಯಿಂದ ನನ್ನೊಂದಿಗೆ ಬಂದಿರಲು ಯಾರೂ ಇರಲಿಲ್ಲ. ಬೆಂಗಳೂರಿನಲ್ಲಿ ಇಂದೂಧರ ಹೊನ್ನಾಪುರ ಅವರ ಸಂಪಾದಕತ್ವದಲ್ಲಿ ‘ಸುದ್ದಿ-ಸಂಗಾತಿ’ ಎಂಬ ವಾರ ಪತ್ರಿಕೆಯು ಪ್ರಕಟವಾಗುತ್ತಿತ್ತು. ಈಗಾಗಲೇ ‘ಮರೀಚಿಕೆ’ ಎಂಬ ಪುಟ್ಟ ಕಾದಂಬರಿಯನ್ನು ಪ್ರಕಟಿಸಿದ್ದರು. ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದೆ. ವಿಜಯನಗರದಲ್ಲೊಂದು ಬಾಡಿಗೆ ಮನೆಗೆ ಸೇರಿಕೊಂಡಿದ್ದೆವು. ಇನ್ನು ನನ್ನ ಕೈಗೆ ವರ್ಗಾವಣೆಯ ಪತ್ರ ಸಿಕ್ಕಿರಲಿಲ್ಲ. ಕಾಯಬೇಕಾಗಿತ್ತು. ಬೆಂಗಳೂರಿನಂತಹ ಮಹಾನಗರಕ್ಕೆ ಬಂದಿದ್ದೆ. ಉದ್ವೇಗ, ಆತಂಕ, ಅಭದ್ರತೆಯು ಹೆಚ್ಚಾಗಿತ್ತು ಅಂದರೆ ನಂಬುವುದಿಲ್ಲ. ಈ ಸಂದರ್ಭದಲ್ಲಿಯೇ ‘ಸುದ್ದಿ-ಸಂಗಾತಿ’ಯ ಕಛೇರಿಗೆ ಹೋಗಿದ್ದೆ. ವೈದ್ಯೆಯೆಂಬ ‘ಕವಚ’ ನನ್ನ ಉಪಯೋಗಕ್ಕೆ ಬಂದಿತ್ತು. ಅತ್ಯಂತ ಗೌರವ, ಸ್ನೇಹದಿಂದ ಆಹ್ವಾನಿಸಿದ್ದರು. ನನ್ನ ಪರಿಚಯ, ನನ್ನ ವಿಷಯ ತಿಳಿಸಿದ್ದೆ. ದೇವನಹಳ್ಳಿಗೆ ಹೋಗಬೇಕಾಗಿದ್ದುದನ್ನು ತಿಳಿಸಿದ್ದೆ. ಒಂದು ಕ್ಷಣ ಏನನ್ನೋ ಯೋಚಿಸಿದ್ದ ಸಂಪಾದಕ ಇಂದೂಧರ್ ಹೊನ್ನಾಪುರ ಅವರು.
“ಅಷ್ಟು ದೂರ ದಿನಾ ಓಡಾಡಬೇಕಾಗುತ್ತದೆ. ಬೆಂಗಳೂರಿಗೇ ಬದಲಾವಣೆ ಮಾಡಿಸಿಕೊಂಡರಾಯಿತು. ಹೇಗೂ ಸ್ತ್ರೀರೋಗ ತಜ್ಞರಿದ್ದೀರಿ…” ಎಂದು ಕೇಳಿದ್ದರು. ನಾನು ಸಂತೋಷದಿಂದ ಒಪ್ಪಿದ್ದೆ. ಅವರಿಗೆ ಅಂದಿನ ಆರೋಗ್ಯ ಮಂತ್ರಿಯವರ ಪರಿಚಯವಿದ್ದುದರಿಂದ ಆ ಕೆಲಸ ಸುಲಭವಾಗಿತ್ತೋ ಏನೋ ಅಂತೂ ನನಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ವರ್ಗಾವಣೆಯಾಗಿತ್ತು. ಆತಂಕ ನಿವಾರಣೆ ಯಾಗಿತ್ತು, ಸಮಾಧಾನವಾಗಿತ್ತು.
*****
ಮುಂದುವರೆಯುವುದು