ಆನಂದನಿಗಿಂದು ಆನಂದವಿಲ್ಲ. ಆತನ ಮೋರೆಯಲ್ಲಿ ನಿರಾಶೆಯು ರೂಪುಗೊಂಡು ನೆಲೆನಿಂತಂತಿದೆ. ತಾನಿದ್ದ ಹೋಟೆಲಿನ ಕೋಣೆಯೊಂದರಲ್ಲಿ ಮೊಣಕೈಗಳನ್ನು ಮೇಜಿಯ ಮೇಲೂರಿ ಚಿಂತೆಯ ಕಂತೆಯಂತಿದ್ದ ತನ್ನ ತಲೆಯನ್ನು ಅಂಗೈಗಳಿಂದಾಧರಿಸಿ ಮುರುಕು ಕುರ್ಚಿಯ ಮೇಲೆ ಕುಳಿತಿದ್ದಾನೆ ಆತ. ಅವನ ತಲೆಯೊಳಗೆ ಹಾಲಾಹಲದ ತೆರೆಗಳೇ ಏಳುತ್ತಲಿವೆ.
ಒಂದು ನೌಕರಿಯ ಪ್ರಾಪ್ತಿಗಾಗಿ ಆಫೀಸಿಂದ ಆಫೀಸಿಗೆ ಹತ್ತಿ ಇಳಿದು, ಇಳಿದು ಹತ್ತಿ, ದೊಡ್ಡವರ ಮನೆಬಾಗಿಲ ಮೆಟ್ಟಿಲಲ್ಲಿ ಕಾದು ನಿಂತು, ನಿಂತುಕಾದು, ಕೊನೆಗೆ ಹತಾಶನಾಗಿ ಹಿಂತಿರುಗುವುದು ಆನಂದನಿಗೊಂದು ಹೊಸ ಅನುಭವವಾಗಿದ್ದಿಲ್ಲ. ಅದಲ್ಲದೆ, ಪ್ರತಿದಿನವೂ ವಾರ್ತಾ ಪತ್ರಿಕೆಗಳ ‘ಬೇಕಾಗಿದೆ’ (Wanted Column) ಎಂಬ ರಿಖಾನೆಯನ್ನು ನೋಡಿ ಎಷ್ಟೋ ಅರ್ಜಿಗಳನ್ನು ಬರೆದು ಹಾಕಿದ್ದ-ರಂಗೂನೆಂದು ಬಿಡಲಿಲ್ಲ, ಆಫ್ರಿಕನೆಂದು ಬೆದರಲಿಲ್ಲ, ಮೆಸೊಪೊಟೇಮಿಯಾ ಎಂದು ಹಿಂಜರಿಯಲಿಲ್ಲ. ಸ್ಟಾಫ್ ಸಿಲೆಕ್ಶನ್ ಬೋರ್ಡಿನ ಮುಂದೆ ಒಂದು ಸಲ ಹಾಜರಾದುದೂ ಇತ್ತು. ಇವುಗಳಿಂದೆಲ್ಲ ಎಷ್ಟೊ ನೌಕರಿಯ ಪ್ರಾಪ್ತಿಯನ್ನು ಮನಸ್ಸಿನಲ್ಲೇ ಹೊಂದಿದ್ದ; ಕನಸಿನಲ್ಲೆಷ್ಟೋ ಹುದ್ದೆಗಳನ್ನು ನೋಡಿದ್ದ. ಹೀಗೆ ಆಶಾತಂತುವನ್ನು ಸಾಧ್ಯವಿದ್ದಷ್ಟು ಉದ್ದಕ್ಕೆ ಎಳೆದೆಳೆದು ಇಂದು ಅದು ತುಂಡಾಗಿತ್ತು; ತನಗೊಂದು ನೌಕರಿಯು ದೊರಕೀತೆಂಬ ಪ್ರಬಲವಾದ ಭರವಸೆಯುಳ್ಳವನಾಗಿದ್ದು ಕಳೆದ ಮೂರು ತಿಂಗಳುಗಳಿಂದ ಅದಾವ ಮಹನೀಯರೊಬ್ಬರ ಆಶ್ರಯವನ್ನು ಮಾಡುತ್ತಲಿದ್ದನೋ ಅವರಿಂದು (Very sorry, I can’t give you any job.) ‘‘ನಿಮಗೊಂದು ನೌಕರಿಯನ್ನು ಕೊಡಲಾಗುವುದಿಲ್ಲವೆನ್ನಲು ವಿಷಾದಿಸುತ್ತೇನೆ’ ಎಂದು ಬೆಣ್ಣೆಯಂತಹ ಮಾತುಗಳಿಂದ ತಮ್ಮ ಸೌಜನ್ಯ(Gentlemanliness)ವನ್ನು ವ್ಯಕ್ತಪಡಿಸಿದ್ದರು!
ಆದುದರಿಂದ ಆನಂದನ ಹೃದಯದಲ್ಲಿದ್ದ ಆ ಕೊನೆಯದೊಂದು ಆಶಾಕಿರಣವೂ ಇಂದು ಅದೃಶ್ಯವಾಗಿತ್ತು. ಆತನ ಮುಂದಿನ ಜೀವನದ ಹಾದಿಯಲ್ಲಿ ಕಗ್ಗತ್ತಲು ಕವಿದಿತ್ತು. ನಾಳಿನ ಗತಿಯೇನೆಂಬುದನ್ನು ಯೋಚಿಸಲೂ ಭಯವಾಗುತ್ತಿತ್ತು ಆತನಿಗೆ! ಆದರೆ ಹೀಗಾದೀತೆಂದು ಎರಡು ವರುಷಗಳ ಹಿಂದೆ ಅವನು ಕನಸಾಮನಸಾ ಎಣಿಸಿದ್ದನೇ? ಆಗಿನ ಆ ಸುಖಮಯವಾದ ಭಾವೀಜೀವನದ ಕಲ್ಪನೆಯೆಲ್ಲಿ! ರೆಕ್ಕೆಗೊಂಡು ಹಾರಿ ಹೋಯಿತೇ!
ಎರಡೇ ಎರಡು ವರುಷಗಳ ಹಿಂದೆ ಆನಂದನು ಬಿ. ಎ. ಪಾಸಾದಂದು ಅವನ ಹೆತ್ತವರಿಗಾದ ಆನಂದ! ತಾವು ಅರೆಹೊಟ್ಟೆ ಯುಂಡು ಅರೆ ಬಟ್ಟೆ ಉಟ್ಟಾದರೂ ತಮ್ಮ ಮಗನನ್ನು ಬಿ. ಎ. ಉತ್ತೀರ್ಣನಾಗುವಂತೆ ಮಾಡಿದುದರಿಂದ ಅಂದೇ ತಮ್ಮ ಮುರುಕು ಮನೆಯ ಹೊಸ್ತಿಲಿಂದ ದಾರಿದ್ರದೇವಿಯು ಕೆಳಗಿಳಿದು ಹೋದಳೆಂದೂ ಭಾಗ್ಯಲಕ್ಷ್ಮಿಯು ಮೆಟ್ಟಿಲು ಹತ್ತಿ ಬಂದಳೆಂದೂ ಅವರು ಹೊಂದಿದ ಸಂತೋಷವೇನು! ಆನಂದನೂ ಕಲ್ಪಿಸಿಕೊಂಡ ತನ್ನ ಭಾವೀ ಜೀವನದ ಆ ಆನಂದಮಯವಾದ ದೃಶ್ಯಗಳೇನು! ತನಗೆ ದೊರಕಬಹುದಾದ ದೊಡ್ಡ ದೊಡ್ಡ ಹುದ್ದೆಗಳು; ಅವುಗಳಿಂದ ಮೇಲು ಮೇಲಕ್ಕೆ ಪ್ರೊಮೋಶನ್; ಕೊನೆಕೊನೆಗೆ ಬರೇ ದಸ್ತತು ಹಾಕಿದುದಕ್ಕೆ ದೊಡ್ಡ ಸಂಬಳದ ಗಂಟು! ದೊಡ್ಡ ಬಂಗಲೆ! ಜವಾನರು! ಮೋಟಾರ್ ಕಾರ್! ಹೂಮಾಲೆಗಳು! ಮಾನಪತ್ರಗಳು!……. ಇವೆಲ್ಲ ಮರುಮರೀಚಿಕೆಗಳಾದುವೆ? ಶ್ರೀಮಂತಪುತ್ರಿಯೊಂದಿಗೆ ತನಗಾಗಬಹುದಾದ ಮದುವೆ ಆ ಮುಂಗುರುಳು ಮೋರೆಯ, ಮಿಂಚು ಬೀರುವ ತೇಲುಗಣ್ಣಿನ, ಕಿರುನಗುವಿನ ಹೊಳಪೇರಿದ ಗುಲಾಬಿ ಗೆನ್ನೆಯ ಎಳೆಗುವರಿಯು ವಜ್ರದ ಕಮಲಗಳ ಕಿವಿಯಿಂದ ಜಗ್ಗೆನಿಸುವ ಮೂಗು ಬೊಟ್ಟಿಂದ, ಮಿರುಗುಟ್ಟುವ ಮುಂಗೈ ಬಳೆಗಳ ಇಂಪಿನ ಧ್ವನಿಯಿಂದ, ಚಿನ್ನದ ಪಟ್ಟಿಯ ನಡುಗಟ್ಟಿಂದ, ಅಳುಕು ಬಳುಕುತ್ತ ಮೂರ್ತಿ ಮತ್ತಾದ ಪ್ರೇಮದಂತೆ ಸೌಂದರ್ಯದಾಗರದಂತೆ ಸುಖಸಾಮ್ರಾಜ್ಯದಂತೆ ತನ್ನ ಬಳಿಗೆ ತೇಲಿಬರುವ ಆ ಚೆಲುವಿನ ಮುದ್ದು ಮಡದಿ! ಈ ರೀತಿ ಆತನು ಅಂದು ಕನಸಿನಲ್ಲಿ ಏರಿದ್ದ ಆ ಆನಂದದ ಸುಖಶಿಖರವೆಲ್ಲಿ! ಇಂದಾತನು ಬಿದ್ದಿರುವ ಅಗಾಧ ದುಃಖದ ಕಂದರವೆಲ್ಲಿ!
ಆ ಎರಡೇ ವರುಷಗಳಲ್ಲಿ ಎಂತಹ ಪರಿವರ್ತನೆಗಳಾಗಿ ಹೋದುವು! ಹಳ್ಳಿಯ ಶಾಲೆಯ ಉಪಾಧ್ಯಾಯನಾಗಿದ್ದ ಆತನ ತಂದೆಯ ವೃದ್ಧಾಪ್ಯದ ದೆಸೆಯಿಂದ ಉದ್ಯೋಗನಿವೃತ್ತನಾದ ಆತನ ಪ್ರೋವಿಡೆಂಟ್ ಫಂಡಿನ ಚಿಕ್ಕ ಮೊತ್ತವು ತಂಗಿಯಂದಿರಿಬ್ಬರ ಮದುವೆಗಳಲ್ಲಿ ಕರಗಿ ನೀರಾಗಿಹೋಯಿತು. ದುರ್ದೈವವಶದಿಂದ ಹಿರಿಯಕ್ಕನೊಬ್ಬಳು ನಿರ್ಗತಿಕ ವಿಧವೆಯಾಗಿ ತನ್ನ ಮೂವರು ಹೆಮ್ಮಕ್ಕಳೊಡನೆ ಬಂದು ಸೇರಿದಳು, ಸಂಸಾರ ನಿರ್ವಾಹದ ಗುರುತರವಾದ ಭಾರವು ಆನಂದನ ತಲೆಯ ಮೇಲೇ ಇಳಿಯಿತು. ಒಂದು ನೌಕರಿಗಾಗಿ-ಬರೇ ೨೫ ರೂಪಾಯಿಯ ನೌಕರಿಗಾಗಿ- ಆನಂದನು ಭಗೀರಥ ಪ್ರಯತ್ನ ಮಾಡಿದ. ಆದರೆ ಆ ಯತ್ನಗಳಲ್ಲಿ ಸಹಾಯದ ಕೈನೀಡುವವರಿದ್ದಿಲ್ಲ. ಆಶೆಯಿಂದ ಮಾಡಿದ ಪ್ರಯತ್ನಗಳೆಲ್ಲ ನಿರಾಶೆಯಿಂದ ಕೊನೆ ಮುಟ್ಟಿದುವೆಂದರೆ ಆನಂದನ ತಲೆಯೊಳಗೆ ಹಾಲಾಹಲದ ಅಲೆಗಳೇಳುತ್ತಿದ್ದುದರಲ್ಲಿ ಆಶ್ಚರ್ಯವೇನು?
ಅವನು ಯೋಚಿಸುತ್ತ ಕುಳಿತ್ತಿದ್ದ: ನಾನು ಬಿ. ಎ.! ಎಷ್ಟೋ ಪ್ರಶಸ್ತಿ ಪತ್ರಿಕೆಗಳನ್ನೂ ಪಡೆದಿರುವೆನು. ನಾಲ್ಕನೆಯ ಫಾರ್ಮಿನಲ್ಲಿ ಪಾಸಾಗಲಾರದ ರಾಮರಾಯನು ಇನ್ಸೂರೆನ್ಸ್ ಏಜಂಟನಾಗಿ ಸ್ವಂತ ಕಾರಿನಲ್ಲಿ ಹಾರಾಡುತ್ತಿಲ್ಲವೇ? ಸ್ಕೂಲ್ ಫೈನಲಿನಲ್ಲಿ ಮೂರು ಸಲ ಲಾಗ ಹೊಡೆದ ಕೇಶವನು ಪ್ರಸಿದ್ದ ಹೊಮ್ಯೋಪೆಥಿಕ್ ಡಾಕ್ಟರನಾಗಿ ಹೇಗೆ ಮೆರೆಯುತ್ತಿದ್ದಾನೆ! ಎರಡನೇ ಫಾರ್ಮಿನಲ್ಲೇ ಶಾಲೆಗೆ ಶರಣು ಹೊಡೆದ ಕರುಣಾಕರನ ಸೋಡಾ ಫೇಕ್ಟರಿಯು ಎಷ್ಟೊಂದು ಲಾಭದಾಯಕವಾಗಿದೆ! ಅಷ್ಟೇಕೆ? ನಮ್ಮೂರಿನ ಹಸನಬ್ಬಾ ಬ್ಯಾರಿಯು ಬರೇ ಹತ್ತು ರೂಪಾಯಿಯ ಭಂಡವಾಳದಿಂದ ಹುರಿಯ ವ್ಯಾಪಾರವನ್ನು ತೊಡಗಿ ಈಗ ಬೊಂಬಾಯಿಗೆ ಹುರಿ ತುಂಬಿದ ಹಡಗು ಹಡಗುಗಳನ್ನೇ ಕಳುಹಿಸುತ್ತಿಲ್ಲವೆ? ಇವರಿಗಿರುವ ಸ್ಥಾನಮಾನ ಸುಖಸಂತೋಷಗಳು ನನ್ನ ಬಿ. ಎ.ಗೆ ಇವೆಯೇ? ಯಾವುದಕ್ಕೂ ಆಗದವನೆಂದು ಸಿದ್ಧಾಂತವಾಗಿ ಹೋಗಿದ್ದ ಆ ರಾಮು ಬಳ್ಳಾರಿ ಯಲ್ಲಿ ಕಾಫಿ ಹೋಟೆಲಿಟ್ಟು ಐದೇ ವರುಷದೊಳಗೆ ಐವತ್ತು ಸಾವಿರ ರೂಪಾಯಿಯ ಜಮೀನನ್ನು ಕೊಂಡುಕೊಳ್ಳಲಿಲ್ಲವೆ? ಅವರ ಮಾತೇಕೆ? ಬೀದಿಯಲ್ಲಿ ಬಂಡಿ ಹೊಡೆಯುವವನೂ ಕೂಲಿಯವನೂ ನನಗಿಂತ ಮಿಗಿಲಲ್ಲವೆ? ಅವರಿಗೆ ಸ್ವಾವಲಂಬನದ ಧೈರ್ಯವಿದೆ. ನನಗೆ? ಇಲ್ಲ, ಅದಿಲ್ಲ! ನಾನು ಉಸಿರಾಡುವ ಗುಮಾಸ್ತಗಿರಿಯ ಯಂತ್ರ ಮಾತ್ರ! ಅದೂ ಗ್ರಾಹಕರಿಲ್ಲದ ಯಂತ್ರ! ನನ್ನಿಂದೇನಾದರೂ ಆಗದೇ? ಆದೀತು! ನಾನು ಗ್ರಾಜುವೇಟನೆಂಬುದನ್ನು ಮರೆತುಬಿಟ್ಟರೆ! ಪ್ರಾಮಾಣಿಕತನದ ಯಾವ ವೃತ್ತಿ ಗಾಗಲೀ ಕೈನೀಡಲು ನನ್ನನ್ನು ತಡೆಗಟ್ಟುವುದು ಯಾವುದು? ಡಿಪ್ಲೊಮಾ ! ಹೌದು ಆ ಡಿಪ್ಲೋಮಾ! ಅದನ್ನು ಮರೆತು ಸಾಮಾನ್ಯ ಮಾನವನಂತೆ ಪ್ರಪಂಚದಲ್ಲಿಳಿಯಬೇಕು. ‘ಗ್ರಾಜುವೇಟ’ನೆಂಬ ಮಿಥ್ಯಾಭಿಮಾನವನ್ನು ಬಿಟ್ಟು ಬಿಡಬೇಕು, ಆಗ ನಾನೊಂದು ದಾರಿಯನ್ನು ಹಿಡಿಯಲೂ ಬಹುದು! ಹಿಡಿದು ಇತರರನ್ನು ಹಿಂದೆ ಹಾಕಲೂ ಬಹುದು! ವಿಜ್ಞಾನ ವಿಚಾರಗಳಿಂದ ನನ್ನ ಬುದ್ಧಿಯು ಮಸೆಯಲ್ಪಡಲಿಲ್ಲವೇ?
ಮರುದಿನ ಬೆಳಿಗ್ಗೆ ನೋಡಲು ಆನಂದನು ಆ ಹೋಟೆಲಲ್ಲಿದ್ದಿಲ್ಲ. ಎಲ್ಲಿಗೆ ಹೋದನೆಂದು ಯಾರಿಗೂ ಗೊತ್ತಿದ್ದಿಲ್ಲ. ಗುಮಾಸ್ತಗಿರಿಯ ಸಂತೆ ಯಲ್ಲಿ ಬಿ. ಎ. ಯ ಬೇಡಿಕೆಯು ಬಹಳ ತಗ್ಗಿದ್ದುದರಿಂದ ಒಂದು ಬಿ. ಎ. ಯು ಅಗೋಚರವಾದುದು ಯಾರ ಲಕ್ಷಕ್ಕೂ ಬೀಳಲಿಲ್ಲ. ಕಾಲವು ತನ್ನ ಸಹಜಗತಿಯಿಂದ ಮುಂದುವರಿಯಿತು.
* * * *
ರಾತ್ರಿ ಒಂಬತ್ತು ತಾಸಿನ ಹೊತ್ತು, ಬೊಂಬಾಯಿಯ ಮಲಬಾರ್ ಹಿಲ್ಸಿನಲ್ಲಿ ಚಿಕ್ಕ ಚೊಕ್ಕ ಬಂಗಲೆಯೊಂದು, ಅದರೆದುರು ಅಚ್ಚುಕಟ್ಟಾಗಿ ಬೆಳೆಯಿಸಿದ್ದ ಹೂದೋಟ, ನಡುವೆ ಅಮೃತಶಿಲೆಯ ಆಸನದ ಮೇಲೆ ದಂಪತಿಗಳಿಬ್ಬರು ಕುಳಿತಿದ್ದಾರೆ. ಆತನು ತನ್ನ ಹೂದೋಟವನ್ನು ಕಣ್ಣು ಬೀಸಿ ನೋಡಿದ. ಅಂದಿನ ಬೆಳ್ದಿಂಗಳಲ್ಲಿ ಅದು ನವಯೌವನವು ಮೂಡಿ ಬರುತ್ತಿದ್ದ ಮುಗ್ದೆಯಂತೆ ಮುದ್ದು ಮುದ್ದಾಗಿ ನಗುವಂತಿತ್ತು. ಆಕೆಯ ಮುಖವನ್ನು ನೋಡಿದ-ಅದು ಆ ಉದ್ಯಾನವನ್ನು ನಾಚಿಸುವಷ್ಟು ಮುದ್ದಿನ ಮುದ್ದಾಗಿ ತೋರಿತು. ‘ರಮಾ! ನನ್ನ ಈ ಸಂಪತ್ತು, ಈ ಸುಖ, ಇವುಗಳಿಗೆಲ್ಲ ಕಾರಣರಾರೆಂದು ಹೇಳಲಾರೆಯಾ?’ ಎಂದ ಆತ. ‘ಯಾರು ಕಾರಣರು, ನೀವೇ!’ ಎಂದು ಮೃದು ಮಧುರವಾಗಿ ನುಡಿದಳು ಆಕೆ. ‘ನಾನೆಲ್ಲ! ಇವೆಲ್ಲಕ್ಕೂ ಕಾರಣಳಾದವಳೊಬ್ಬಳಿರುವಳು! ಮೊನ್ನೆ ತಾನೆ ಈ ಊರಿಗೆ ಬಂದಿರುವಳು! ಅವಳೇ ನನ್ನ ಪ್ರಾಣದ ಪ್ರಾಣ…..’ ಮಾತು ಮುಗಿವುದರೊಳಗಾಗಿ ರಮೆಯು ‘ಹಾಗಾದರೆ ಇಲ್ಲೇಕಿರುವಿರಿ? ಅಲ್ಲಿಗೇ ದಯಮಾಡಿಸಬಹುದಲ್ಲ?’ ಎಂದು ತುಸು ಮುನಿಸಿನ ಕೋರೆ ನೋಟದಿಂದ ಆತನನ್ನು ಚುಚ್ಚುತ್ತ ದೂರ ಸರಿಯಲು ಯತ್ನಿಸಿದಳು. ‘ಅವಳ ಬಳಿಯಲ್ಲೇ ಇರುವೆನಲ್ಲ! ಮತ್ತೆಲ್ಲಿಗೆ ಹೋಗಲೇ? ಅವಳು ಇವಳೇ! ಇವಳೇ ನನ್ನ ಮೈ ಮೇಲೆ ಗೆರಟೆಯ ಚೂರನ್ನು ಒಗೆದ ನನ್ನ ಭಾಗದ ಭಾಗ್ಯದೇವತೆ! ನನಗೆ ಅಕ್ಷಯ ಪಾತ್ರೆಯನ್ನಿತ್ತ ದೇವಿ!’ ಎನ್ನುತ್ತ ಆಕೆಯ ಕೈಗಳನ್ನು ಹಿಡಿದಿರಲು, ‘ಇಸ್ಸೀಯಪ್ಪ! ಎಲ್ಲಿಯ ಗೆರಟೆ ಚೂರು! ಯಾರು ಒಗೆದುದು? ನಾನೇ? ಅದೂ ನಿಮ್ಮ ಮೇಲೆಯೇ? ಕುಚೋದ್ಯ ಮಾಡುವಿರಾ? ಈ ವಿನೋದವೆಲ್ಲ ನಿಮ್ಮ ಆ ಭಾಗ್ಯದ ದೇವತೆ ಆ ಪ್ರಾಣದ ಪ್ರಾಣ-ಅವಳ ಬಳಿಯಲ್ಲಾಗಲಿ!’ ಎನ್ನುತ್ತ ಕೈಯೆಳೆದುಕೊಳ್ಳಲು ಮನಸ್ಸಿಲ್ಲದ ಯತ್ನ ಮಾಡುತ್ತಿದ್ದಳು.
‘ಅವಳೇ ನೀನೆಂದೆನಲ್ಲ? ಹೇಗೆಂಬೆಯೊ? ಕೇಳು’ ಎಂದ ಆತ. ಆಕೆ ಕುತೂಹಲದಿಂದ ಕೇಳತೊಡಗಿದಳು. ‘ಐದು ವರ್ಷಗಳ ಹಿಂದೆ ನೀವೆಲ್ಲರು ನಿಮ್ಮ ತಂದೆಯವರೊಡನೆ ಸ್ಟೀಮರಿನಲ್ಲಿ ಬರುತ್ತಿದ್ದಿರಿ. ನೀವು ಮಂಗಳೂರಿಂದ ಇಲ್ಲಿಗೆ ಬರುತ್ತಿದ್ದುದು ದೀಪಾವಳಿ ಹಬ್ಬ ನೋಡುವುದಕ್ಕಾಗಿ; ನಾನೋ ಗ್ರಾಜುವೇಟನಾಗಿ ನಮ್ಮ ಮಂಗಳೂರಲ್ಲೇ ಶ್ರಮಜೀವನಕ್ಕೆ ಕೈಗೊಡಲು ನಾಚಿ ಪರಿಚಿತರಿಲ್ಲದ ಈ ಬೊಂಬಾಯಿಯಲ್ಲಿ ಅದನ್ನಾದರೂ ಅಳುಕದೆ ನಿರ್ವಹಿಸಿಯೇನೆಂಬ ಭರವಸೆಯಿಂದ ಅದೇ ಸ್ಟೀಮರು ಹತ್ತಿದ್ದೆ. ಆದರೆ ಸ್ಟೀಮರು ಮುಂದುವರಿದಂತೆ ನನ್ನ ಆ ಧೈರ್ಯವು ಹಿಂದೆ ಸರಿಯಿತು! ರೊಕ್ಕಪ್ಪನಿದ್ದರೆ ಚಿಕ್ಕಪ್ಪನಂತಿರುವ ನಗರದಲ್ಲಿ ಕಾಸಿಲ್ಲದ ನಾನು ಯಾರಲ್ಲಿಳಿಯುವುದು? ಏನಾದರೊಂದು ಉದ್ಯೋಗವನ್ನು ಹೇಗೆ ಪಡೆಯುವುದು? ಏನಾದರೂ ಮಾಡಿ ಕೈಯಲ್ಲೆರಡು ಕಾಸಾಗುವ ತನಕ ಮನೆಯವರ ಪಾಡೇನು? ಎಂಬ ಯೋಚನೆ ಹೊಳೆದೊಡನೆ ಬದುಕುವ ಎಲ್ಲ ನಿರ್ಧಾರವನ್ನು ಬಿಟ್ಟೆ. ಆತ್ಮಹತ್ಯೆಯ ಹಾದಿ ಹಿಡಿದೆ. ಅದಕ್ಕಾದರೂ ಸ್ಟೀಮರು ಹತ್ತಿದುದು ಅನುಕೂಲವೇ ಆಯಿತೆಂದುಕೊಂಡೆ. ಕತ್ತಲಾಗುವುದನ್ನು ಕಾಯುತ್ತಲಿದ್ದೆ. ಆಗ ಸಟಕ್ಕನೆ ಗೆರಟೆಯ ಚೂರೊಂದು ನನ್ನ ಮೈ ಮೇಲೆ ಬಿತ್ತು. ಅದು ಬಂದ ಕಡೆಗೆ ನೋಡಿದೆ-ನೀನಲ್ಲಿ ನಿಂತಿದ್ದೆ ನಿನ್ನ ತುಂಟ ತಮ್ಮನ ಕೈಹಿಡಿದು! ಯಾರೋ ತೆಂಗಿನ ಹೋಳನ್ನು ಜಜ್ಜಿ ತಿಂದು ಬಿಸುಟಿದ್ದ ಗೆರಟೆಯ ಚೂರಿಂದ ಆತ ನಿನ್ನ ಕೈಯನ್ನು ಕೀರಿದ್ದ. ನೋವಿನ ಭರದಿಂದ ನೀನದನ್ನು ಕಿತ್ತುಕೊಂಡು ಎತ್ತ ಕಡೆಯೆಂದು ನೋಡದೆ ಬಿಸುಟಿದ್ದೆ. ಆದರೆ ಅದು ನನಗೆ ತಾಗಿದುದಕ್ಕಾಗಿ ಸಂತಾಪ ಪಡುತ್ತ ನಿಂತಿದ್ದೆ! ನೆನಪಾಗುತ್ತದೆಯೇ ರಮಾ?’
‘ಏನೋ ಕನಸಿನಲ್ಲಿ ಕಂಡಿದ್ದಂತೆ ಆರೆಯರೆ ಕಣ್ಣೆದುರು ಬಂದಂತಾಗುತ್ತೆ ಆ ದೃಶ್ಯ! ಆದರೆ, ಆದರೆ…’
‘ಹೇಳುತ್ತೇನೆ, ನೀನು ಅತ್ತ ತಿರುಗಿದ ಮೇಲೆ ಆ ಚೂರನ್ನೇ ನೋಡುತ್ತ ಕುಳಿತೆ. ಆತ್ಮ ಹತ್ಯೆ ಮಾಡದಿದ್ದರೆ ಮುಂದೆ ದೊರಕುವುದು ಭಿಕ್ಷಾಪಾತ್ರೆಯೆಂಬ ಸಂಕೇತವನ್ನು ನನ್ನ ದುರ್ವಿಧಿಯು ಗೆರಟೆಯ ಮೂಲಕ ಕೊಟ್ಟಿತೇ? ಎಂದುಕೊಂಡೆ. ಹಾಗಿದ್ದರೆ ಚಿನ್ನದಂತಹ ಕನ್ನೆಯ ಕೈಯಿಂದೇಕೆ ಕೊಡಿಸಬೇಕೆಂದು ಶಂಕಿಸಿದೆ. ಅಂತೂ ಅದೇಕೋ ಅದರಲ್ಲೊಂದು ಆದರ ಹುಟ್ಟಿ ಅದನ್ನೇ ನೋಡುತ್ತಲಿದ್ದೆ. ತುಸು ಕೆತ್ತಿದರೆ ಅದೇನೋ ಒಂದು ಚೆನ್ನಾದ ಆಕೃತಿಯನ್ನು ಕೊಡುವಂತಿತ್ತು. ತಟ್ಟನೆ ಒಂದು ಯೋಚನೆ ಹೊಳೆಯಿತು. ಪ್ರಯೋಗಾರ್ಥವಾಗಿ ಚೂರಿಯನ್ನು ತೆಗೆದು ಆ ಚೂರಿನ ಕೊಂಕನ್ನು ಕೆತ್ತಿ ತೆಗೆದೆ; ಮೈಯನ್ನು ಕೆರೆದು ನುಣು ಪುಗೈದೆ. ನನ್ನ ಯೋಚನೆಯು ತಪ್ಪಲ್ಲವೆಂದು ಕಂಡಿತು ಮರುಕ್ಷಣದಲ್ಲಿ ಆತ್ಮಹತ್ಯೆಯ ಯೋಚನೆಯು ದೂರ ಹಾರಿಹೋಯಿತು, ಸ್ಟೀಮರಿನಿಂದ ಇಳಿದಾಗ ಅನಿರೀಕ್ಷಿತವಾಗಿ ನನ್ನ ಬಾಲ್ಯದ ಗೆಳೆಯನೊಬ್ಬ ಸಿಕ್ಕಿದ. ಒಂದೆರಡು ಕಡೆ ಟ್ಯೂಶನ್ (Tution) ದೊರಕಿಸಿಕೊಟ್ಟ. ಬಿಡುವಿನ ಸಮಯವನ್ನು ಅಂಗಿ ಗುಂಡಿಯ ಕಾರ್ಖಾನೆಯೊಂದರಲ್ಲಿ ಔದ್ಯೋಗಿಕ ವಿದ್ಯಾರ್ಥಿ(Apprentice)ಯಾಗಿ ಸೇರಿ ಕಳೆದು ನನ್ನ ಯೋಜನೆಗೆ ಬೇಕಾದ ಅನುಭವವನ್ನು ಹೊಂದಿದೆ. ತಕ್ಕ ಯಂತ್ರ ಸಲಕರಣೆಗಳ ನೋಟ ನೋಡಿಕೊಂಡೆ, ಆ ಮೇಲೆ ಪಾಲು ಭಂಡವಾಳವೆ ಈ ನನ್ನ ಕಾಮಗಾರಿಕೆಯನ್ನು ತೊಡಗಿದೆ. ಇದೀಗ ನನ್ನ ಈ ‘ಆನಂದಾ ಬಟನ್ ಫ್ಯಾಕ್ಟರಿ’ಯ ಕತೆ. ಈಗ ಹೇಳು ರಮಾ, ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಹೊತ್ತು ನೋಡುತ್ತಿದ್ದವನನ್ನು ತಿರುಗಿ ಜೀವನಕ್ಕೆ ಹಿಡಿಸಿದವಳು-ಆ ನನ್ನ ಭಾಗದ ಭಾಗ್ಯದೇವತೆ-ಯಾರೇ ರಮಾ?’
*****