ನಿದ್ದೆ ಬರುವುದುಂಟೆ ದಿಂಬಿಲ್ಲದೇ
ಮಲಗುವುದಕ್ಕಂತೂ ಇರಲೇ ಬೇಕು ದಿಂಬು
ತಲೆಗೆ ಆರಾಮು ಮನಕೆ ಹಿತ
ಹೆಂಡತಿ ಹಾಕಿದ ಹೂವೊಂದಿದ್ದರೆ
ಗಮ್ಮತ್ತೆ ಬೇರೆ
ಸುಖ ನಿದ್ರೆಯಲಿ
ಕನಸಿನ ಮೇಲೆ ಕನಸುಗಳು
ಶಯನೋತ್ಸವಕೆ ಬೇಕು ಮೋಹಕ ದಿಂಬು
ಅಂಚಿನಲಿ ನಯನ ಮನೋಹರ ಕುಚ್ಚುಗಳು
ಬಣ್ಣ ಬಣ್ಣದಾ ಚಿತ್ತಾರದ ಚಿತ್ತಾಕರ್ಷಕ ದಿಂಬು
ನೂರೆಂಟು ಕನಸುಗಳ ಹೊತ್ತು
ಮದುವೆಯಲಿ
ಬರುವುದು ಗಾದಿ ಜೊತೆಯಲಿ
ಮೆತ್ತನೆಯ ದಿಂಬು
ಎಲ್ಲೆಲ್ಲೂ ದಿಂಬೇ ದಿಂಬು
ಮದುವೆಯಾಗದ
ಕಾಲೇಜು ಕನ್ಯಾಮಣಿಗಳ
ರೂಮಿನಲು ಉಂಟುಂಟು ದಿಂಬು
ಒರಗಲು ಬಗೆ ಬಗೆ ದಿಂಬುಗಳು
ಗುಂಡನೆಯ ಜಾಮೂನಿನಾಕಾರದ
ಅರಳೆ ತುಂಬಿದ ಶ್ವೇತವಸ್ತ್ರದ
ರಾಜಕೀಯ ವೇದಿಕೆ ಏರಿದ
ಸಿಂಹಾಸನದಲಿ
ಅಕ್ಕ ಪಕ್ಕ ಉಂಟು ದಿಂಬು
ಗಾಳಿ ತುಂಬಿದ ರಬ್ಬರ್ ದಿಂಬು
ಬಸ್ಸು ಕಾರುಗಳಲಿ ಸೀಟಿಗೆ ದಿಂಬು
ಜಾತಿ ಧರ್‍ಮ ಬೇಧ ಭಾವವಿಲ್ಲದೇ
ಶುಭ್ರ ಮನಸಿನಲಿ
ಮಾಡುವುದು ವೆಲ್ಕಮ್ಮು
ಮಾನವನ ಹೊರತಾಗಿ
ಅವ ಪ್ರಾಣಿ ದಿಂಬಿಟ್ಟು ಮಲಗಿದ್ದುಂಟು?
ದಿಂಬು ರಹಿತ ನಿದ್ದೆ
ಅದೇ ಅದರ ಆರೋಗ್ಯದಾಗುಟ್ಟು
ದಿಂಬು ರಹಿತ ನಿದ್ದೆ ಮಾಡೆಂದು
ಮಾಡುವನು ಸಲಹೆ ನರತಜ್ಞ
ಇಲ್ಲದಿದ್ದರೆ ಬರುವುದುಂಟು
ಕುತ್ತಿಗೆಗೆ ಬೆಲ್ಟು
ವೃದ್ಧರಿಗೆ ಮಕ್ಕಳಿಗೆ ನೀಡುವುದು
ನಿಸ್ಪೃಹ ಸೇವೆ
ಇದರ ಪರೋಪಕಾರವ ಮರೆಯುವವರಾರು?
ಸೇವೆ ಮುಗಿದ ಬಳಿಕ
ಬೇಡ ಇದರ ಪಾಡು
ಬಗಿದ ಹಿರಣ್ಯಾಕ್ಷನ ಹೊಟ್ಟೆಯಂತೆ
ರೂಪತಾಳಿ ಸೇರಲು ತಿಪ್ಪೆ
ಏರುವುದು ಮುನಿಸಿಪ್ಯಾಲಿಟಿ ಲಾರಿ
ಸಿಗುವುದಾಗ ಮೋಕ್ಷ
*****