ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ನೋಡುತ್ತಿದ್ದ. ಹಲವು ದಿನದೊಳಗೆ ಕಂಬಳಿ ಹುಳು ಚಿಟ್ಟೆಯಾಯಿತು. ಕಪ್ಪು ಕಂಬಳಿಯ ಬಿಟ್ಟು ರಂಗುರಂಗಿನ ರೆಕ್ಕೆ ಹೊದ್ದಿತು. ಪಟಪಟ ರೆಕ್ಕೆ ಬಡಿಯಿತು. ತನ್ನ ರೆಕ್ಕೆ ಸಾಗರ ಭೂಮಿ ಮುಟ್ಟಿದೆ ಎಂದು ಸಂತಸ ಪಟ್ಟಿತು. ತಾನಿರುವಲ್ಲಿಗೆ ಸೂರ್‍ಯ, ಚಂದ್ರ, ಗಾಳಿ, ಆಗಸ ಎಲ್ಲವೂ ಬರುತ್ತಿದೆ, ಎಂಬ ಭ್ರಮೆಯಲ್ಲಿತ್ತು. ಗಾಜಿನ ಮನೆಯ ಬಂಧನದ ಅರಿವು ಅದಕ್ಕೆ ಇರಲಿಲ್ಲ.
ಗಾಜಿನ ಬಾಟಲಿನಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ನೋಡಿ ತೋಟದ ಮಾಲಿ ಅದರ ಬಾಯಿಗೆ ಬಿರಟೆ ಇಟ್ಟ. ಚಿಟ್ಟೆ ಚೀರಿತು.
“ಇದೇನು ನಾ ಕಂಡ ಆಗಸ, ಭೂಮಿ, ಸೂರ್‍ಯ ಚಂದ್ರರೆ ನನ್ನ ಉಸುರು ಕಟ್ಟಿಸುತ್ತಿದ್ದಾರೆ” ಎಂದುಕೊಂಡಿತು. ಉಸುರು ಕಟ್ಟಿ ಸಾಯುವಾಗ ಮಾಲಿ ಮಾತು ಕೇಳಿಸಿತು.
“ಗಾಜಿನ ಅರಮನೆ ಹೇಗಿದೆ?” ಎಂದು. ಆಗ ಚಿಟ್ಟೆಗೆ ಜ್ಞಾನೋದಯವಾಯಿತು.
*****