ಮುಂಗಾರು ನನ್ನ ಮುಂದಾರೆಂಬ ಬಿಂಕದಲಿ
ಮುಂದಲೆಯ ಕೇಶರಾಶಿಯನೆತ್ತಿ ಕಣ್ಕಿಸಿದು,
ಎಬ್ಬಿಸಿದ ಕೆಂಧೂಳಿ ಕಾರ್‍ಮುಗಿಲ ಮುಟ್ಟಲದು
ರಕ್ಕಸಿಯ ರಕ್ಕಸದಿ ನಿಂತಿದೆ ದಿಗಂತದಲಿ
ಮುಂಗಾರ ಸಿಂಗಾರವಿದು ನಿರಾತಂಕದಲಿ
ಮುಚ್ಚಿಹುದು ಹಗಲ ಬಂಗಾರವನು ಬೆಚ್ಚಿಹುದು
ಮುಂಗಾರ ಸಿಡಿಲು-ಮಿಂಚನು ಮೊದಲುಸಲ ಕಂಡು
ಮಗುವೊಂದು ನಿದ್ದೆ ತೊಲಗಿರೆ ಮಾತೆಯಂಕದಲಿ
ಮರುಕ್ಷಣವೆ ನಗುತಿಹುದು ಓ! ಎಲ್ಲ ಬಯಲಾಗಿ
ಕೊನರಿತ್ತು ರವಿಯ ನಗೆ. ಪ್ರೀತಳು ಧರಾಂಗನೆಯು.
ಅಲ್ಲಲ್ಲಿ ನಿಂತ ಕಿರಿಗೊಳದಿ, ನವ ಮಾಸಗಳು
ಮಾಸಿರುವ ಮೈಯ್ಯ ತೊಳೆವವು ಹಕ್ಕಿ, ನೆರೆಯಾಗಿ
ತಂಪು-ಬರುತಿದೆ ಕಂಪು: ಶಾಂತ ಮೌನದ ಮುಗುಳು
ಬಿಚ್ಚಿಹುದು ಮುಂಗಾರು ಇಂಥ ಸೊಬಗಿನ ನನೆಯು!
*****