ಹಣೆಯಲ್ಲಿ ಕುಂಕುಮದ ಬೊಟ್ಟು, ಮೈಯ್ಯಲ್ಲಿ ಬಹು
ಬೆಲೆಬಾಳ್ವ ಕೇಸರಿಯ ಬಟ್ಟೆ, ಕೈಯಲ್ಲಿ ಮನ-
ದನ್ನ ಗೆನೆ ಹಿಡಿದ ಹೂಮಾಲೆ, ಮುಡಿಯಲ್ಲಿ ಬನ-
ಮಲ್ಲಿಗೆಯ ಹೆಣಿಕೆ, ಮನದಲ್ಲೆಣಿಕೆ ಈ ನೋವು
ಈಗ ಕಳೆಯುವುದೆಂದು ಬಂದಳಾ ಮಾಸತಿಯು
ಬಾಳುವೆಯ ಬನ್ನವನು ನುಂಗಿರುವ ಯಾತ್ರಿಕನ
ಮೈಮರೆತ ನೋಟವೆನೆ ಕಣ್ದೆರಯಲಾ ಗಗನ-
ದಲಿ ಕಂಡಿತಾಕ್ಷಣವೆ ಚಂದ್ರರೂಪಿಣಿಯುತಿಯು
ಚಿತೆಯ ಸೇರಿದಳಾಕೆ ತಮ್ಮ ಸುಡುತಿಹ ಜ್ವಾಲೆ-
ಯಿಂದ ತವಕದಲೆದ್ದು ಅವಳನಾವರಿಸಿದುವು.
ಸತಿಯ ಪ್ರಾಣಗಳೊಡನೆ ತನನವೆಂದಿತು ದೇಹ.
ಇದು ನಿಮಗೆ ಮನನವಿರಲೆಂದಳು ಬಾಲೆ
ಧಿಗ್ಗನೆದ್ದಿತು ಕಿಚ್ಚು. ಒಂದು ಕ್ಷಣ ಸಂದೇಹ,-
ಹಗಲೊ ದಿಗಿಲೋ ಎಂದು. ಮುಂದೆ ಕಗ್ಗತ್ತಲೆಯು.
*****