(ಶೋಕಗೀತ)
೧
ಶಕ್ತಿದೈವತದ ಬಲಗೈಯ ಕರವಾಲವೇ,
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ,
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ,
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ!
ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ-
ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ?
೨
ಓ, ಮೃತ್ಯು ದೇವತೆಯೆ ನಿರ್ದಯೇ, ನಿನ್ನನೂ
ದೇವಿಯರ ಶ್ರೇಣಿಯಲ್ಲಿ ಸೇರಿಸಿದನಾವನು ?
ನಿನಗೆ ಕಣ್ಣಿವೆಯೇನು ? ನಿನಗೆ ಕರುಳಿದೆಯೇನು ?
ಕನಸೊಳಾದರು ಲೋಕಹಿತವ ಬಗೆದಿಹೆಯೇನು ?
ಲೋಕಹಿತಕಿರದವಳು ನೀನೆಂತು ದೇವತೆಯು ?
ಲೌಕಿಕರ ದುಃಖದಲಿ ನೂಕುವುದೆ ಸತ್ಕೃತಿಯು ?
೩
ಓ! ಮೃತ್ಯುರಾಣೇಽಽ! ಬಾ, ನೋಡು ಬಾರಿಲ್ಲಿ,
ನೀನಿಂದು ಗೆಯ್ದ ತಾಂಡವದ ಪರಿಣಾಮವನು !
ಎಂಥ ಜೀವದ ಹೂವ ತುಳಿ-ತುಳಿದು ಬಳಲಿಸಿದೆ?
ಆ ಹೂವ ಬಯಸುವರ ಎದೆಯೆದೆಯನಳಲಿಸಿದೆ!
ನಾಡಿನಲಿ ಹರಿಯುತಿದೆ ಕಂಬನಿಯ ಹೊನಲು
ಚಳಿಗಾಳಿಯೂ ಚೆಲ್ಲುತಿದೆ ಬಿಸಿಯ ಸುಯಿಲು!
೪
ಉಕ್ಕಿನೆದೆಯವನೆಂದು ಹೆಸರಾಂತ ಧೀರಾ !
ಉಕ್ಕಿನೆದೆಯನ್ನು ಕಾಯಲಿಕೆಂದು ಮೈಯನೂ
ಉಕ್ಕಿನದೆ ಪಡೆದುಕೊಂಡಿರ್ದ್ದೆಯೆಂದಿರ್ದ್ದೆವೈ !
ನಿನ್ನ ಉಕ್ಕಿನ ಜೀವ ಭಾರತದ ರಕ್ಷಣೆಗೆ
ಬನ್ನವಿಲ್ಲದ ಕವಚವೆಂದು ಬಗೆದಿರ್ದ್ದೆವೈ !
ಬಂಧು, ವಲ್ಲಭರಾಜ, ನಿನ್ನ ಮರಣವಿದು-
ನಮ್ಮ ನಂಬುಗೆಗೆಂಥ ಹಾರೆಯಿಕ್ಕಿದುದು !
೫
ನಿರ್ಜೀವದಲ್ಲಿ ಜೀವವನೂದಿದವ ನೀನು,
ಬೆಂಡುಗಳಲೂ ಬಲದ ಸಾರವರೆದವನು ;
ಬಯಲಲ್ಲಿ ಧೈರ್ಯಮೇರುವ ಮೆರಸಿದವ ನೀನು
ಭಯವನ್ನು ಶೌರ್ಯದಲಿ ಮಾರ್ಪಡಿಸಿದವನು!
ಓ, ಅಣ್ಣ ವಲ್ಲಭಾ, ನೀನು ಸಾಹಸಮಲ್ಲ,
ನಿನಗೆ ಸಾವೇ ? ಸುಳ್ಳು ಸುಳ್ಳು! ಹುಸಿಮಾತೆಲ್ಲ!
೬
ಅಯ್ಯೋ, ಏನಿದು ಭ್ರಮೆಯು! ದುಃಖದುನ್ಮಾದ!
ಭಾರತದಿ ತುಂಬಿರುವ ಈ ಆರ್ತನಾದ….
ಕಿವಿಗೆ ಕೇಳುತಲಿಹುದು, ಮನಕೆ ಕಾಣುತಲಿಹುದು,
ಸುಳ್ಳು ಎಂತಾಗುವುದು ವಲ್ಲಭನ ಮರಣವದು !
ನಿಜವೆ, ಅಂತಾದೊಡಾ ಧೀರನಾ ಸಾವು ?
ಅಯ್ಯೊ, ನಾಡಿನ ಜನಕೆ ಮಾಯದಾ ನೋವು!
೭
ಅಕ್ಕಟಾ!
ಭಾರತದ ಕಾಪಿಂಗೆ ಕೋಟೆಯಿನ್ನಾರು ?
ಹಗೆಯ ಗುಂಡಿಗೆಯೊಡೆವ ಗುಡುಗು ಇನ್ನಾರು ?
ಕಂಗೆಟ್ಟ ಜನಕುಲಕೆ ಕಣ್ಣು ಇನ್ನಾರು ?
ಸಿಡಿಲುನುಡಿಯಿಂದ ಭಯವನು ಜಡಿವರಾರು ?
ಯಾರಿಹರು ? ಯಾರಿಹರು ? ಯಾರು, ಇನ್ನಾರು ?
ಈ ಕೇಳ್ಕೆಗುತ್ತರವ ಕೊಡುವರಾರಿಹರು ?
೮
ಶಕ್ತಿದೈವತದ ಬಲಗೈಯ ಕರವಾಲವೆ ?
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೆ?
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ!
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ?
ಭಾಯಿ, ವಲ್ಲಭಭಾಯಿ, ಭಾರತದ ಕಣ್ಮಣಿ,
ನಿನ್ನನೂ ಕಬಳಿಸಿದಳೇ ಮೃತ್ಯರಾಣಿ ?
*****