ಈ ಜಗತ್ತಿನಲ್ಲಿ ಎಷ್ಟು ರೀತಿಯ ಜನರಿರುವರೋ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಒಬ್ಬೊಬ್ಬರದ್ದು ಒಂದೊಂದು ವಿಧ. ಒಬ್ಬೊಬ್ಬರಲ್ಲೂ ಹಲವು ವಿಧ. ಯಾರ ಅಳತೆಗೂ ಸಿಗದಷ್ಟು ವೈವಿಧ್ಯ.

ಎಷ್ಟೋ ಸಲ ಮದುವೆಯಾಗುವ ತನಕ ಕೈಹಿಡಿಯುವ ವಧು-ವರ ಇಬ್ಬರೂ ಪರ್‌ಫೆಕ್ಟ್ ಆಗಿದ್ದವರು ಆಮೇಲೆ ಒಬ್ಬರಿಗೊಬ್ಬರ ಗೃಹಿಕೆಗೆ ನಿಲುಕದವರಾಗುತ್ತಾರೆ. ಇದು ಜೀವನದ ವೈಚಿತ್ರ್ಯ. ಈ ವೈಚಿತ್ರ್ಯವನ್ನೇ ಬೆಳೆಸಿಕೊಂಡು, ಬದಲಾಯಿಸುವ ಈ ಪ್ರಯತ್ನವನ್ನೇ ಮಾಡದ ಮನುಷ್ಯರು ಹಲವಾರು ಸಮಸ್ಯೆಗಳ ಕಾರಣ ಕರ್ತರು.

ಮನುಷ್ಯನಲ್ಲಿರುವ ಬುದ್ಧಿವಂತಿಕೆ ಹೊಸ ಹೊಸ ಆವಿಷ್ಕಾರಗಳಿಗೆ ಮಾತ್ರ ಮೀಸಲು. ಜೀವನವನ್ನು ಸುಂದರಗೊಳಿಸುವ ಕಡೆಗೆ ಅವನು ಯಾವಾಗಲೂ ಅಜ್ಞಾನಿ. ಇನ್ನೊಬ್ಬರ ಭಾವನೆಗಳನ್ನು ಅರ್‍ಥಮಾಡಿಕೊಳ್ಳುವಾಗ ಸಮಯ ಮೀರಿ ಹಲವಾರು ಅನಾಹುತಗಳು ನಡೆದೇ ಹೋಗಿರುತ್ತವೆ.

ಸರಿಯಾಗಿ ಏಳು ವರುಷ ಹತ್ತು ತಿಂಗಳ ಮೇಲೆ ನ್ಯಾಯಾಧೀಶರು ಕೊನೆಯ ತೀರ್‍ಮಾನವನ್ನು ಓದಿದಾಗ ಕಿರಣ್ಮಯಿಯ ಕಣ್ಣಲ್ಲಿ ಕಣ್ಣೀರು ತುಂಬಿತ್ತು. ಅದನ್ನವಳು ಸಂತೋಷದ ಕಣ್ಣೀರೋ ದುಃಖದ ಕಣ್ಣೀರೋ ಎಂದು ವರ್‍ಗೀಕರಿಸಿ ಹೇಳಲಾರಳು. ಕೋರ್‍ಟಿನಲ್ಲಿ ಜಯ ಸಿಕ್ಕಿದರೂ ಜೀವನದಲ್ಲಿ ಅವಳದ್ದು ಸೋಲೋ ಗೆಲುವೋ ಎಂದು ಅವಳಿಗೆ ಅರ್‍ಥವಾಗಿರಲಿಲ್ಲ. ಅವಳಲ್ಲಿ ಜೀವಿಸುವ ಮನೋಸ್ಥೈರ್‍ಯ ಮಾತ್ರ ಜೀವಂತವಾಗಿ ಇತ್ತು.

ಅವಳು ಇಚ್ಛಿಸಿದಂತೆ ಜಗದೀಶನಿಗೆ ಶಿಕ್ಷೆಯಾಗಿತ್ತು. ಅವಳ ತಂದೆ ಕೊಟ್ಟಿದ್ದ ರೂ. ಆರು ಲಕ್ಷ ವರದಕ್ಷಿಣೆಯನ್ನೂ ಸೇರಿಸಿ ರೂ. ಹತ್ತು ಲಕ್ಷ ಪರಿಹಾರ ಧನ ಮತ್ತು ಅವನಿಗೆ ಮೂರು ವರುಷಗಳ ಕಠಿಣ ಸಜೆ, ಕೋರ್ಟಿನ ಖರ್ಚು ಕೂಡಾ ಅವನದ್ದೇ. ಎಷ್ಟೇ ಆದರೂ ಅವಳು ಕಳಕೊಂಡುದುದಕ್ಕೆ ಇದು ಸರಿಯಾದ ಪರಿಹಾರವಲ್ಲ.

ಪ್ರೀತಿ, ಪ್ರೇಮ, ನಂಬಿಕೆ, ಸಹಕಾರ, ಸಹಬಾಳ್ವೆ, ತ್ಯಾಗದ ಕಂಭಗಳಿರುವ ಸಂಸಾರ ಸೌಧವನ್ನು ಸುಂದರವಾಗಿ ಕಟ್ಟಲು ಅವಳು ಹವಣಿಸಿದ್ದಳು. ಆದರೆ ಅದು ಕಟ್ಟುವ ಹಂತದಲ್ಲೇ ಕುಸಿದು ಮುರುಕು ಮನೆಯಾಗಿ ಹೋಗಿತ್ತು. ಹಲವು ಕಂಭಗಳನ್ನು ಹಾಕಿ ಕಟ್ಟಿದ್ದ ಮಾರಬಹುದಾದ ಮನೆ ಜಗದೀಶನ ಹೆಸರಲ್ಲಿತ್ತು. ಅಲ್ಲಿ ಅವಳು ಬಯಸಿದ ಕಂಭಗಳಿರಲಿಲ್ಲ. ಹಾಗಾಗಿ ಅದು ಅವಳ ಮನೆಯಾಗಿ ಉಳಿಯಲಿಲ್ಲ. ಮುರುಕು ಮನೆ ಮುರಿದು ಬೀಳುವುದು ಸಹಜ.

ಕಿರಣ್ಮಯಿ ಜಗದೀಶನ ಮೇಲೆ ಹಾಕಿದ್ದು ವರದಕ್ಷಿಣೆ ಕಿರುಕುಳದ ಕೇಸು. ಜಗದೀಶ ಕೋರ್‍ಟಿನಲ್ಲಿ ಅಪೇಕ್ಷಿಸಿದ್ದು ವಿಚ್ಛೇದನ. ಜಗದೀಶ ಕೊಟ್ಟ ಕಾರಣ ಅವಳ ನಡತೆ ಸರಿ ಇರಲಿಲ್ಲ ಎನ್ನುವುದು. ಅವಳಿಗೆ ಹುಟ್ಟಿದ ಮಗು ಅವನದ್ದಲ್ಲ ಎನ್ನುವ ಮಿಥ್ಯಾರೋಪಣೆ.

ಮದುವೆಯಾದ ದಿನದಿಂದ ಕಿರಣ್ಮಯಿ ಅನುಭವಿಸಿದ್ದ ನೋವಿಗೆ, ಅಪಮಾನ, ಅವಮಾನಗಳಿಗೆ ಮಿತಿ ಇರಲಿಲ್ಲ. ತುಟಿ ಕಚ್ಚಿ ಎಲ್ಲವನ್ನೂ ಸಹಿಸಿದ್ದಳು. ಹತ್ತು ವರುಷದ ಕೆಳಗೆ ಜಗದೀಶ ಅವಳನ್ನು ತಾಯಿ ಮನೆಯಲ್ಲಿ ಬಿಟ್ಟು ಹೋದ ಮೇಲೆ ಅವಳಲ್ಲಿ ಸೇಡಿನ ಕಿಡಿ ಹತ್ತಿಕೊಂಡಿತ್ತು. ಹೆಂಡತಿಯನ್ನು ಆ ರೀತಿ ನಡೆಸಿಕೊಂಡರೆ ಯಾರಿಗೂ ಆಗುವುದೇ.

ಕೋರ್‍ಟಿನಲ್ಲಿ ಮೊದಲ ಬಾರಿಗೆ ಮಗುವನ್ನು ಹಾಜರು ಪಡಿಸಿದಾಗಲೇ ಜಗದೀಶನ ಸೋಲು ನಿರ್‍ಧಾರವಾಗಿತ್ತು. ಅವನ ತದ್ರೂಪಿನಂತಿರುವ ಮಗು ಅವನದೆಂದು ಪ್ರೂವ್ ಮಾಡಲು ಯಾವ ಪರೀಕ್ಷೆಯ ಅಗತ್ಯವೂ ಇರಲಿಲ್ಲ. ಆದರೂ ಡಿ.ಎನ್.ಎ ಟೆಸ್ಟ್ ಮಾಡಿದ್ದರು. ಅಲ್ಲೂ ಜಗದೀಶನೇ ತಂದೆಯೆಂದು ಸಾಬೀತಾಗಿತ್ತು. ಕೋರ್ಟಿನಲ್ಲಿಯೇ ಅವನು ತನ್ನದಲ್ಲವೆಂದು ತಿರಸ್ಕರಿಸಿದ್ದ ಮಗುವನ್ನು ಮೊದಲಬಾರಿ ನೋಡಿದ್ದು. ಮಗುವನ್ನು ನೋಡಿ ಅವನು ದಂಗಾಗಿದ್ದ. ಮೂರ್ಛೆ ಹೋಗುವಂತಾಗಿತ್ತು. ಅವನ ಬೆವರಿಳಿಯುವ ಮುಖನೋಡಿ ಕಿರಣ್ಮಯಿ ತಾನು ಅಲ್ಲಿವರೆಗೆ ಅನುಭವಿಸಿದ್ದ ನೋವನ್ನು ಮರೆತಿದ್ದಳು. ಜಗದೀಶನ ಲಾಯರು ಎಲ್ಲರೂ ಗಮನಿಸುವಷ್ಟು ಜೋರಾಗಿ ನಡುಗಿದ್ದರು. ಯಾವ ಸಾಕ್ಷಿಗಳೂ ನಿಲ್ಲದಷ್ಟು ಗಟ್ಟಿಯಾಗಿತ್ತು ಕಿರಣ್ಮಯಿಯ ಕೇಸು. ಇಲ್ಲಿ ಸುಳ್ಳು ಗೆಲ್ಲುವುದು ಸಾಧ್ಯವಿರಲೇ ಇಲ್ಲ.

ಕಿರಣ್ಮಯಿ ಮದುವೆಯಾಗಿ ಕೈಹಿಡಿದ ಗಂಡನನ್ನು ಅವಳಾಗಿಯೆ ಬಿಟ್ಟು ಹೋಗಿರಲಿಲ್ಲ. ಮುರಿಯುತ್ತಿದ್ದ ಸಂಬಂಧಕ್ಕೆ ಬೆಸುಗೆ ಹಾಕಲು ಪ್ರಯತ್ನಿಸಿದ್ದಳು. ಅವಳು ಅವನೊಡನೆ ತೆಗೆದ ಹನ್ನೊಂದು ತಿಂಗಳಲ್ಲಿ ಅನುಭವಿಸಿದ್ದ ನೋವಿಗೆ ಯಾವ ರೀತಿಯ ಪರಿಹಾರ ಧನವೂ ಸರಿಯಾದುದಲ್ಲ. ಅವಳ ಯೌವನ, ಜೀವನದ ಯಾವ ಸುಖವನ್ನೂ ಅನುಭವಿಸದೆಯೇ ಕಳೆದು ಹೋಗಿತ್ತು. ಗಂಡ ಎನ್ನುವ ಶಬ್ದ ಅರ್ಥ ಕಳಕೊಂಡಿತ್ತು. ಈ ತಲೆ ಬಿಸಿಗಳಲ್ಲಿ ಉದ್ಯೋಗದಲ್ಲೂ ಅವಳು ಹಿಂದೆ ಬಿದ್ದಿದ್ದಳು. ಆಯುಷ್ಯದ ಅತ್ಯಂತ ಫಲವತ್ತಾದ ಕಾಲವನ್ನು ಅವಳು ಏನೂ ಇಲ್ಲದೆ ಕಳೆದಿದ್ದಳು. ಪ್ರೀತಿ, ಪ್ರೇಮ, ನಂಬಿಕೆ, ಸಹಬಾಳ್ವೆ, ದಾಂಪತ್ಯ ಸುಖ ಎಲ್ಲವೂ ಅರ್ಥ ಹೀನವಾಗಿ ಅವಳ ಬಾಳ ಪುಟದಿಂದ ಮಾಯವಾಗಿತ್ತು. ಕಿರಣ್ಮಯಿ ಜಗದೀಶನ ಕೈ ಹಿಡಿದು ಪಡೆದದ್ದು ಅಷ್ಟೆ.

ಕಿರಣ್ಮಯಿ ತುಂಬ ಲವಲವಿಕೆಯ ಹುಡುಗಿ, ಪಾದರಸದಂತೆ ಎಲ್ಲರಿಗೂ ಹೊಂದಿಕೊಂಡು ಓಡಾಡಿಕೊಂಡಿದ್ದವಳು, ಉತ್ಸಾಹ ಅವಳ ನಡುಗೆಯಲ್ಲಿ ಲಾಸ್ಯವಾಡುತ್ತಿತ್ತು. ಹೆತ್ತವರಿಗೆ ಮುದ್ದಿನ ಮಗಳು, ಎಲ್ಲರಿಗೂ ಬೇಕಾದವಳು. ಮದುವೆಯಾಗಿ ಅವಳಷ್ಟು ನೋವು ಅನುಭವಿಸಿದವರು ಅವಳ ಗೆಳತಿಯರ ಬಳಗದಲ್ಲಾಗಲೀ ಅವಳ ಕುಟುಂಬದಲ್ಲಾಗಲೀ ಯಾರೂ ಇರಲಿಲ್ಲ. ಜೀವನ ದುಸ್ತರವಾಗುವುದು ಕೆಲವರಿಗೆ ಮಾತ್ರ. ಅದೂ ಏನೂ ತಪ್ಪು ಮಾಡದೆ ಶಿಕ್ಷೆ ಅನುಭವಿಸುವವರು ಸಾವಿರಕ್ಕೊಬ್ಬರು ಇರಬಹುದು. ಅವರಲ್ಲಿ ಒಬ್ಬಳಾದುದು ಕಿರಣ್ಮಯಿಯ ದುರಾದೃಷ್ಟ.

ಅವಳ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರೆಲ್ಲರೂ ತಮ್ಮದೇ ವಿದ್ಯಾಮಟ್ಟದಲ್ಲಿರುವ ಹುಡುಗರನ್ನು ಮದುವೆಯಾಗಿದ್ದರು. ಅಥವಾ ತಮ್ಮ ಕಾಲೇಜಿನ ಸಹಪಾಠಿಗಳನ್ನು ಆರಿಸಿಕೊಂಡಿದ್ದರು. ಕಿರಣ್ಮಯಿ ಹಾಗೇನೂ ಮಾಡಿರಲಿಲ್ಲ. ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದರೂ ಯಾರೊಡನೆಯೂ ಅವಳ ಪ್ರೀತಿಯ ನಂಟು ಬೆಸೆದಿರಲಿಲ್ಲ. ಹಾಗಾಗಿ ಹೆತ್ತವರು ಆರಿಸಿದ ಹುಡುಗನ ಕೈ ಹಿಡಿಯಲು ಮನಸಾರೆ ಒಪ್ಪಿದ್ದಳು.

ಕಿರಣ್ಮಯಿ ದುಡಿಯುತ್ತಿದ್ದರೂ ಹೆತ್ತವರಿಗೆ ಅವಳು ಮದುವೆಯಾಗುವುದು ಮುಖ್ಯವಾಗಿತ್ತು. ಅದರಿಂದ ಸುಖವೋ ಕಷ್ಟವೋ ಎಂದು ಅವಳೂ ಯೋಚಿಸಲು ಹೋಗಿರಲಿಲ್ಲ. ಯಾರಾದರೂ ಅಷ್ಟೇ. ಮದುವೆಯೆನ್ನುವ ಹೋಮ ಕುಂಡಕ್ಕೆ ಹಾರುವಾಗ ಹಿಂದೆ ಮುಂದೆ ನೋಡುವುದಿಲ್ಲ. ಹಾರಿ ಎಂದು ಒತ್ತಾಯಿಸುವವರೇ ಜಾಸ್ತಿ ಅಲ್ಲದೆ, ಅಲ್ಲಿಯ ಬೆಂಕಿ ಸುಡುವಷ್ಟು ತೀವ್ರವಾಗಿ ಯಾವ ಬೆಂಕಿಯೂ ಸುಡುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ಯಾರೂ ಕೊಡುವುದಿಲ್ಲ. ಹುಟ್ಟು ಸಾವಿನಂತೆ ಮದುವೆಯೂ ಒಂದು ಜೀವನದ ಅನಿವಾರ್‍ಯತೆ ಎಂದು ತಿಳಿದಿರುವವರೇ ಜಾಸ್ತಿ. ಮದುವೆಯಾಗಲು ಸಮ್ಮತಿಸಿದಾಗ ಅವಳ ಮನದಲ್ಲಿದ್ದುದು ಅದೇ. ಇದೊಂದು ಜೀವನದಲ್ಲಿ ಆಗಲೇ ಬೇಕಾದ ಸಂಗತಿ, ಹೆತ್ತವರು ತನ್ನ ಜೀವನ ಸಂಗಾತಿಯನ್ನು ಆರಿಸಿದ್ದಾರೆ. ಅದಕ್ಕೆ ತನ್ನ ಒಪ್ಪಿಗೆಯೂ ಇದೆ. ಮದುವೆಯಾದ ಮೇಲೆ ಹೊಂದಿಕೊಂಡು ಬಾಳಿದರಾಯಿತು ಎಂದು ಯೋಚಿಸಿದ್ದಳು. ಆದರೆ ಅವಳಿಗೆ ಹೊಂದಿಕೊಂಡು ಬಾಳುವ ಅವಕಾಶವೇ ಸಿಗಲಿಲ್ಲ. ಕಲಿಯುವಾಗ ತೋರಿದ್ದ ಆಯ್ಕೆಯ ಸ್ವಾತಂತ್ರ್ಯವನ್ನು ಇಲ್ಲಿ ತೋರಿಸಿದ್ದಿದ್ದರೆ ಅವಳು ಈ ರೀತಿಯಲ್ಲಿ ಜೀವನದೊಡನೆ ಸೇಡು ತೀರಿಸಿಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲವೇನೋ?

ಜಗದೀಶ ಮೊದಲ ಕೆಲವು ಭೇಟಿಯಲ್ಲಿ ತೋರಿಸಿದ್ದ ಒಳ್ಳೆಯ ಗುಣಗಳನ್ನು ಮೆಚ್ಚಿ ಕಿರಣ್ಮಯಿ ಮದುವೆಯಾಗಲೊಪ್ಪಿದ್ದಳು. ಅತಿ ಸುಂದರನಲ್ಲದಿದ್ದರೂ ಆಕರ್ಷಕ ನಿಲುವಿನವನು, ಈಗಾಗಲೇ ಮನೆ ಮಠ ಮಾಡಿಕೊಂಡಿದ್ದ ಬುದ್ಧಿವಂತ. ಲೆಕ್ಕಕ್ಕೆ ಪದವೀದರ, ಅವನು ಮಾಡಿಕೊಂಡಿದ್ದದ್ದು ಸ್ಕೂಟರ್ ಸ್ಪೇರ್ ಪಾರ್ಟ್ಸ್‌ನ ಹೋಲ್‌ಸೇಲ್‌ ಬಿಸಿನೆಸ್. ಒಳ್ಳೆಯ ಟರ್ನ್ ಓವರ್‌ನಲ್ಲಿ ಬಿಸಿನೆಸ್ ನಡೆಸುತ್ತಿದ್ದ. ನಿಗರ್ವಿ. ಇದು ಅವಳನ್ನು ಬಹಳವಾಗಿ ಆಕರ್ಷಿಸಿತ್ತು. ಆದರೆ ಆ ನಿಗರ್ವದ ಮುಖವಾಡದ ಹಿಂದೆ ಇದ್ದುದು ಹೆಣ್ಣನ್ನು ನಂಬಿಸಿ ಹಿಂಸಿಸುವ ಕೀಳುತನವೆಂದು ಅವಳಿಗೆ ಮೊದಲ ರಾತ್ರಿಯೇ ಅನುಭವವಾಗಿತ್ತು.

ಕಿರಣ್ಮಯಿ ಕಂಪ್ಯೂಟರ್ ಇಂಜಿನಿಯರ್, ಫ್ರೀಸೀಟು ಸಿಕ್ಕಿದ್ದರಿಂದ ಹೆತ್ತವರಿಗೆ ಭಾರವಾಗದೆ ಕೋರ್‍ಸು ಮುಗಿಸಿದಾಗ ಅವಳಿಗೆ ಕೈತುಂಬಾ ಸಂಬಳ ಬರುವ ಕೆಲಸ ಸಿಕ್ಕಿತ್ತು. ಮದುವೆಯಾಗದಿದ್ದರೂ ತಾನೇ ಜೀವನ ನಡೆಸುವ ಆರ್ಥಿಕ ತಾಕತ್ತು ಅವಳಲ್ಲಿತ್ತು. ಮದುವೆಯಲ್ಲಿ ಅವಳಿಗೆ ಬಹಳ ಆಸಕ್ತಿಯೇನೂ ಇರಲಿಲ್ಲ. ಹೆತ್ತವರ ಒತ್ತಾಯಕ್ಕೆ ಅವರು ಆರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿದ್ದಳು. ಕೆಲಸ ಮಾಡಲು ಅಡ್ಡಬಾರದ ಸಂಗಾತಿ ಅವಳಿಗೆ ಬೇಕಿತ್ತು. ಅದರಲ್ಲೂ ಅವಳು ಕೆಲಸದ ನಿಮಿತ್ತ ಊರೂರಿಗೆ ತಿರುಗಬೇಕಿತ್ತು. ಕೆಲವೊಮ್ಮೆ ಪ್ರಾಜೆಕ್ಟ್ ಮುಗಿಸುವಾಗ ತಡವಾಗಿ, ರಾತ್ರಿ ಮನೆಗೆ ಬರುವುದೂ ತಡವಾಗುವ ಸಂದರ್ಭಗಳಿದ್ದುವು. ನೋಡಲು ಬಂದ ಜಗದೀಶನೊಡನೆ ಅವಳು ಇದೆಲ್ಲವನ್ನೂ ಹೇಳಿದ್ದಳು. ಅತ್ತೆ, ಮಾವ ಇರುವ ಮನೆ. ತನ್ನ ಕೆಲಸದಿಂದ ಅವರ ಕಡೆಗೆ ಹೆಚ್ಚಿನ ಗಮನ ಕೊಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಹೇಳ ಬೇಕಾದುದನ್ನೆಲ್ಲ ಮೊದಲೇ ಹೇಳಿ ತನ್ನ ಭಾರ ಕಳಚಿಕೊಂಡಿದ್ದಳು. ಮುಂದೆ ತೊಂದರೆಯಾಗಬಾರದೆಂದು ಅವಳು ಈ ಮುಂಜಾಗರೂಕತೆ ತೆಗೆದುಕೊಂಡಿದ್ದಳು.

ಜಗದೀಶನಿಗೆ ಆಗ ಎಲ್ಲವೂ ಒಪ್ಪಿಗೆಯಾಗಿತ್ತು. ಸಾಧಾರಣ ಚೆಲುವಿನ ಹುಡುಗಿಯಾದರೂ ವಿದ್ಯಾವಂತೆ; ತಿಂಗಳು ತಿಂಗಳು ಕೈತುಂಬಾ ಸಂಬಳ ತರುವವಳು. ಅವಳ ಎಲ್ಲ ಶರತ್ತುಗಳೂ ಅವನಿಗೆ ಒಪ್ಪಿಗೆಯಾಗಿದ್ದುವು. ಎಲ್ಲರ ಮದುವೆಯಾಗುವ ಹಾಗೆ ಅವರ ಮದುವೆಯೂ ಆಗಿತ್ತು. ಅವಳ ತಂದೆ ಮದುವೆಗೆ, ಮದುವೆಯ ನಂತರದ ಸಂತೋಷ ಕೂಟಕ್ಕೆ ದಾರಾಳವಾಗಿಯೇ ಖರ್ಚು ಮಾಡಿದ್ದರು. ಅವಳು ಕಂಪ್ಯೂಟರ್ ಇಂಜಿನಿಯರ್ ಎಂದು ವರದಕ್ಷಿಣೆಯಲ್ಲಾಗಲೀ ಮದುವೆ ಖರ್ಚಿನಲ್ಲಾಗಲೀ ಯಾವುದೇ ರಿಯಾಯಿತಿ ಇರಲಿಲ್ಲ. ನಮ್ಮ ಹುಡುಗ ಮನೆ ಕಟ್ಟಿಸಲು ಲಕ್ಷಗಟ್ಟಳೆ ಸಾಲ ಮಾಡಿದ್ದಾನೆ. ಇನ್ನು ಆ ಮನೆ ಅವಳದ್ದೂ ಅಲ್ಲವೇ ಎಂದು ಆರು ಲಕ್ಷದಷ್ಟು ನಗದು ಹಣವನ್ನು ತೆಗೆದುಕೊಂಡಿದ್ದರು. ತಿಂಗಳು ತಿಂಗಳು ಅವಳು ತರುವ ಇಪ್ಪತ್ತು ಸಾವಿರದ ಲೆಕ್ಕವಿರಲಿಲ್ಲ. ಹುಡುಗಿಯರು ಎಷ್ಟೇ ಕಲಿಯಲಿ ಅವರ ವಿದ್ಯೆಗೆ ಬೆಲೆ ಇಲ್ಲ. ಅವಳು ಸಂಪಾದಿಸುವ ಹಣ ವರದಕ್ಷಿಣೆಯ ಲಕ್ಷದ ಲೆಕ್ಕದಲ್ಲಿಲ್ಲ. ಇದು ಬಹಳ ನೋವು ಕೊಡುವ ಅನಿಷ್ಟಪದ್ಧತಿ. ಅವಳು ಕೆಲಸ ಮಾಡಲು ಶುರುಮಾಡಿದಂದಿನಿಂದ ಉಳಿಸಿದ ಹಣ ಹೆತ್ತವರಿಗೆ ಸಿಗದೆ ವರದಕ್ಷಿಣೆಗಾಗಿ ಜಗದೀಶನ ಕೈ ಸೇರಿತ್ತು.

ಕಿರಣ್ಮಯಿಯ ಮದುವೆಯಾದಾಗ ಬೇಸರಗೊಂಡವರು ಅವಳ ಸಹಪಾಠಿಗಳು. ಕಿರಣ್ಮಯಿಯ ಬುದ್ಧಿಮತ್ತೆ ಸಾಮಾನ್ಯ ಮಟ್ಟಕ್ಕಿಂತ ಮೇಲಿತ್ತು. ಜಗದೀಶ್ ಮತ್ತು ಅವಳ ಮಧ್ಯೆ ಇರುವ ಭೌದ್ಧಿಕ ಅಸಮಾನತೆ ಮುಂದೆ ಏನಾದರೂ ತೊಂದರೆಗಳಿಗೆ ಕಾರಣವಾಗಬಹುದು ಎಂದವರು ಯೋಚಿಸಿದ್ದರು. ಅದಕ್ಕವಳು “ನೀವೆಲ್ಲ ಸಮಾನ ಭೌದ್ಧಿಕ ಮಟ್ಟದವರನ್ನು ಮದುವೆಯಾಗಿದ್ದೀರಿ. ನಿಮ್ಮ ಮನೆಗಳಲ್ಲಿ ಯಾವುದೇ ತೊಂದರೆಗಳಿಲ್ಲವೆ? ನೀವು ನಿಮ್ಮ ಗಂಡಂದಿರೊಡನೆ ಜಗಳವಾಡುವುದಿಲ್ಲವೇ? ನೀವು ನಿಮ್ಮ ಅತ್ತೆ ಮಾವಂದಿರೊಡನೆ ಹೊಂದಿಕೊಂಡು ಬಾಳುತ್ತಿದ್ದೀರಾ?” ಎಂದು ಅವರ ಬಾಯಿ ಮುಚ್ಚಿಸಿದ್ದಳು.

ಕಿರಣ್ಮಯಿ ತಮ್ಮ ವಿದ್ಯೆಯ ಅಸಮಾನತೆ ಮರೆತು ಸಂತಸದಲ್ಲಿಯೇ ಜಗದೀಶನ ಗೃಹಪ್ರವೇಶ ಮಾಡಿದ್ದಳು. ಅವಳು ವಿದ್ಯೆಗಿಂತ ಮುಖ್ಯವಾಗಿ ಹೃದಯವಂತಿಕೆಗೆ ಬೆಲೆಕೊಟ್ಟಿದ್ದಳು. ಜಗದೀಶನಲ್ಲಿ ಅವಳು ಬಯಸಿದ್ದು ಅದನ್ನೇ. ಆದರೆ ಅವನಲ್ಲಿ ಹೃದಯವಂತಿಕೆ ಇರಲೇ ಇಲ್ಲವೆಂದು ಅವಳಿಗೆ ತಿಳಿಯುವಾಗ ಕಾಲ ಮುಂದೆ ಹೊರಟುಹೋಗಿತ್ತು.

ಗಂಡನ ಮನೆಯಲ್ಲಿ ಅವಳಿಗೆ ಉತ್ತಮ ಸ್ವಾಗತವೇ ದೊರಕಿತ್ತು. ಅತ್ತೆ ಮಾವ ಪ್ರೀತಿಯಿಂದ ಮಾತಾಡಿಸಿದಾಗ ಪರವಾಗಿಲ್ಲ ಎಲ್ಲರೂ ಸರಿಯಾಗಿದ್ದಾರೆ. ತಾನು ಸ್ವಲ್ಪ ಹೊಂದಿಕೊಂಡರೆ ಆರಾಮವಾಗಿ ಜೀವನ ಸಾಗಿಸಬಹುದು ಎಂದು ಸಮಾಧಾನವಾಗಿತ್ತು.

ಆದರೆ ಗಂಡನ ಜತೆಗೆ ಕಳೆದ ಮೊದಲ ರಾತ್ರಿ ಅವಳ ಅನಿಸಿಕೆಗಳನ್ನೆಲ್ಲ ತಲೆ ಕೆಳಗಾಗಿಸಿ, ಅವಳ ಹೃದಯದೊಳಗಿದ್ದ ಪ್ರೀತಿಯ ಭಾವನೆಗಳನ್ನು ಅರಳಿಸುವುದರಲ್ಲಿ ವಿಫಲವಾಗಿತ್ತು. ಏನೋ ಒಂದು ಕೊರತೆ; ಏನೋ ಒಂದು ಅತೃಪ್ತಿ ತಮ್ಮಿಬ್ಬರ ನಡುವೆ ಇದೆಯೆಂದು ಅನಿಸಿದಾಗ ಕಿತ್ತು ಹಾಕಲಾಗದ ಈ ಬಂದನದೊಳಗೆ ತಾನು ಸೆರೆಯಾದೆನೆಂದು ಅವಳಿಗೆ ಅನಿಸಿತ್ತು. ಇದೇ ಏನು ಮದುವೆಯೆಂದರೆ? ಇಷ್ಟಕ್ಕೆ ಹೆತ್ತವರ ಕೈ ಖಾಲಿ ಮಾಡಿಸಿ, ಪ್ರಪಂಚವನ್ನೇ ಗೆದ್ದಂತಹ ಸಂಭ್ರಮದ ಸೋಗು ಹಾಕಿ, ಒಬ್ಬಳು ಹುಡುಗಿ ಒಂದು ಮನೆಯಿಂದ ಇನ್ನೊಂದು ಮನೆಗೆ ಸ್ಥಾನ ಪಲ್ಲಟ ಮಾಡುವುದು? ಅಲ್ಲಿ ತನ್ನತನವನ್ನೆಲ್ಲ ಕಳೆದುಕೊಳ್ಳುವುದು? ಸ್ವಾಭಿಮಾನವನ್ನು ಸುಟ್ಟು ಬಾಳುವುದು? ಈ ಎಲ್ಲ ಪ್ರಶ್ನೆಗಳು ಅವಳನ್ನು ಮುತ್ತಿ ಗೊಂದಲಗೊಳಿಸಿದ್ದುವು. ಮದುವೆ ಎನ್ನುವ ಬೆಂಕಿಗೆ ಕಾಲಿಟ್ಟ ಮೇಲೆ ಅಲ್ಲಿಂದ ಹೆಜ್ಜೆ ಹಿಂದಕ್ಕೆ ತೆಗೆಯುವುದು ಸುಲಭವಿರಲಿಲ್ಲ.

ಮದುವೆಗೆಂದು ಒಂದು ವಾರ ರಜೆ ಹಾಕಿದ್ದ ಕಿರಣ್ಮಯಿ ನಾಲ್ಕೇ ದಿನದಲ್ಲಿ ಆಫೀಸಿಗೆ ಹಾಜರಾದಾಗ ಅವಳ ನೀರಸ ಭಾವ ಹೊತ್ತ ಮುಖ ನೋಡಿದ ಅವಳ ಸಹೋದ್ಯೋಗಿಗಳಿಗೆ ಕಾರಣ ತಿಳಿಯುವ ಕುತೂಹಲ ಉಂಟಾಗಿದ್ದರೂ ಅವಳು ತನ್ನ ಗೆಳೆಯ ಗೆಳತಿಯರ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಟ್ಟು ತನ್ನ ಕೆಲಸದಲ್ಲಿ ತೊಡಗಿದ್ದಳು. ಮನಸ್ಸು ಮಾತ್ರ ತನಗಾಗುತ್ತಿರುವ ನೋವುಗಳಿಗೆ ಕಾರಣ ಹುಡುಕುತ್ತಿತ್ತು. ಮದುವೆಯಾದ ತನ್ನ ಗೆಳತಿಯರನ್ನು ಕೇಳಬೇಕೆಂದು ಅನಿಸುತ್ತಿದ್ದರೂ ಅವರಿಗೆ ಈ ರೀತಿಯ ಅನುಭವ ಆಗಿರದಿದ್ದರೆ ನಗುತ್ತಾರೇನೋ ಎಂದು ಬಾಯಿಗೆ ಬೀಗ ಜಡಿದಿದ್ದಳು. ಇದು ಪ್ರಾರಂಭದ ದಿನಗಳು, ಮುಂದೆ ಎಲ್ಲವೂ ಸರಿ ಹೋಗಬಹುದು. ಎಂದೂ ತೋರುತ್ತಿತ್ತು. ಜೀವನವೆಂದರೆ ಹೊಂದಾಣಿಕೆಗಳು, ಹುಟ್ಟಿನಿಂದ ಸಾಯುವವರೆಗೆ ಹೊಂದಾಣಿಕೆಗಳು. ಇಲ್ಲೂ ಅಷ್ಟೇ ಇರಬಹುದು. ಎಲ್ಲರೂ ಸುಮ್ಮನೇ ಸುಖದ ಸೋಗು ಹಾಕುವುದಿರಬೇಕು ಎಂದೂ ಯೋಚಿಸುತ್ತಿದ್ದಳು.

ಅವಳು ಎಷ್ಟೇ ಹೊಂದಾಣಿಕೆ ಮಾಡಲು ಪ್ರಯತ್ನಿಸಿದರೂ ಒಂದು ಕಡೆಯ ಹೊಂದಾಣಿಕೆಯಿಂದ ಏನೂ ಪ್ರಯೋಜನವಿಲ್ಲವೆಂದು ಅವಳಿಗೆ ತಿಳಿಯುವಾಗ ಅವಳ ಜೀವನದ ನೆಮ್ಮದಿಯೇ ಕೆಟ್ಟು ಹೋಗಿತ್ತು. ಪಾದರಸದಂತಿದ್ದ ಹುಡುಗಿ ಕಲ್ಲಿನಂತಾಗಿದ್ದಳು. ಜಗದೀಶನನ್ನು ನೋಡುವಾಗಲೆಲ್ಲ ತಾನು ಮದುವೆಯಾಗಲೊಪ್ಪಿದ ಮನುಷ್ಯ ಇವನೇನೋ ಎನ್ನುವ ಸಂಶಯ ಕಾಡಲು ಶುರುವಾಗಿತ್ತು. ಮದುವೆಯ ಮೊದಲು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ ಮನುಷ್ಯ ತನ್ನ ಪ್ರತಿಯೊಂದು ನಡವಳಿಕೆಯಲ್ಲೂ ತಪ್ಪು ಹುಡುಕಲಾರಂಭಿಸಿದಾಗ ಈ ಬಂದನಗಳನ್ನು ಕಳಚಿ ತಾಯಿ ಮನೆಗೆ ಓಡಿಹೋಗೋಣವೆಂದು ಹಲವು ಬಾರಿ ಯೋಚಿಸಿದ್ದಳು. ಆದರೆ ಇದರಿಂದ ತನ್ನ ಹೆತ್ತವರು ಬಹಳ ನೊಂದುಕೊಳ್ಳುತ್ತಾರೆನ್ನುವ ಭಯದಿಂದ ತನಗಾಗುತ್ತಿರುವ ಮಾನಸಿಕ ಹಿಂಸೆಗಳನ್ನು ಅವರಿಂದ ಮುಚ್ಚಿಟ್ಟಿದ್ದಳು. ಹೆಣ್ಣು ತನ್ನ ಹೆತ್ತವರಿಗೆ ನೋವು ಕೊಡಲಾರಳು.

ಮದುವೆಯಾಗಿ ನಾಲ್ಕನೇ ತಿಂಗಳಿಗೆ ಕಿರಣ್ಮಯಿ ಗರ್‍ಭಿಣಿಯಾಗಿದ್ದಳು. ಇದರಿಂದ ಅವಳ ತೊಂದರೆಗಳು ಜಾಸ್ತಿಯೇ ಆಗಿದ್ದುವು. ಅತ್ತೆ, ಮಾವ ಸೊಸೆ ಗರ್ಭಿಣಿಯಾದಾಗ ಸಂತಸಪಟ್ಟರೂ ಕೈಹಿಡಿದವ ಹುಚ್ಚರಂತಾಗಿದ್ದ. ಇದು ನನ್ನಿಂದಾಗಿ ಆದ ಮಗುವಲ್ಲ. ನಿನಗೆ ಬೇರೆ ಯಾರದ್ದೋ ಗೆಳೆತನವಿರಬೇಕೆಂದು ಹೆಂಡತಿಯನ್ನು ಚಿತ್ರ ಹಿಂಸೆಗೊಳಪಡಿಸಿದ್ದ. ಆಫೀಸಿನಲ್ಲಿ ಯಾರ ಜತೆಗೆ ಮಲಗಿದ್ದೀ ಎಂದು ರಾತ್ರಿಯೆಲ್ಲ ಗೋಳಾಡಿಸಲು ಶುರುಮಾಡಿದಾಗ ಕಿರಣ್ಮಯಿ ಕಂಗೆಟ್ಟಿದ್ದಳು. ದಿನಾ ರಾತ್ರಿ ತನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ ಗಂಡನೇ ಹೀಗಂದಾಗ ಅವಳ ಸಹನೆಯ ಕಟ್ಟೆಯೊಡೆದಿತ್ತು. ಇನ್ನು ಸಹಿಸುವುದೇ ಸಾಧ್ಯವಿಲ್ಲವೆಂದು ಅನಿಸಿದಾಗ, “ನಿಮಗೆ ನಿಮ್ಮ ಗಂಡಸುತನದ ಮೇಲೆ ನಂಬುಗೆ ಇಲ್ಲದಿದ್ದರೆ ನನ್ನನ್ನೇಕೆ ಗೋಳಾಡಿಸುತ್ತೀರಿ? ಯಾವ ಟೆಸ್ಟ್ ಬೇಕಾದರೂ ಮಾಡಿಸಿ. ಇದು ನಿಮ್ಮದೇ ಮಗು. ನನಗೆ ನಿಮ್ಮೊಡನೆ ಮಲಗಿದ್ದೇ ಸಾಕಾಗಿರುವಾಗ ಬೇರೆಯವರೊಡನೆ ಮಲಗುವ ಉತ್ಸಾಹವಿಲ್ಲ. ಮದುವೆಯಾದ ಹೆಂಡತಿಗೆ ಹೀಗೆ ಹೇಳಲು ನಿಮಗೆ ನಾಚಿಕೆಯಾಗಬೇಕು. ಇನ್ನು ಹೀಗೆ ಹೇಳಿದರೆ ನಾನು ಇಲ್ಲಿಂದ ಹೊರಟು ಹೋಗುತ್ತೇನೆ. ಈ ರೀತಿಯ ಮಾನಸಿಕ ಹಿಂಸೆ ಅನುಭವಿಸುತ್ತಾ ಕಟ್ಟಿಕೊಂಡ ಗಂಡನೆಂದು ನಿಮ್ಮ ಬಳಿ ಕೊಳೆಯುವ ಮನಸ್ಸು ನನಗಿಲ್ಲ” ಎಂದು ಹೇಳಿದ್ದಳು.

ಹೀಗೆ ಹೇಳಿದ ನಂತರ ಒಂದು ನಾಲ್ಕು ದಿನ ಅವನು ಸುಮ್ಮನಾಗಿದ್ದ. ಕಿರಣ್ಮಯಿಯೂ ತನ್ನಷ್ಟಕ್ಕೆ ತಾನಿದ್ದಳು. ಐದನೇ ದಿನ ಅವಳು ಆಫೀಸಿನಿಂದ ಬರುವಾಗ ಸ್ವಲ್ಪ ತಡವಾಗಿತ್ತು. ಅಂದು ಪುನಹ ಸುರುವಾಗಿತ್ತು ಅವನ ಗಲಾಟೆ. “ಯಾರಾರ ಮಗುವನ್ನು ನನ್ನದೆಂದು ಸಾಕಲು ನಾನು ತಯಾರಿಲ್ಲ. ನೀನಿಲ್ಲಿರಬೇಕಾದರೆ ಅಬಾರ್ಷನ್ ಮಾಡಿಸು. ನನಗೆ ಈ ಮಗು ಬೇಡವೇ ಬೇಡ.” ಇದನ್ನು ಕೇಳಿ ಕಿರಣ್ಮಯಿಗೆ ಇವನ ಹುಚ್ಚುತನಕ್ಕೆ ಮಿತಿಯಿಲ್ಲ ಎಂದು ದೃಢವಾಗಿತ್ತು. ಅವಳೂ ಸಿಟ್ಟಿನಿಂದ “ನಾನು ನಾಳೆಯಿಂದ ಇಲ್ಲಿಗೆ ಬರೋದಿಲ್ಲ. ನಿಮ್ಮ ಸಂಶಯದ ಭೂತದೊಂದಿಗೆ ನೀವೇ ಇರಿ” ಎಂದು ಕಡಾಕಡಿ ಹೇಳಿ ಮರುದಿನ ಸೀದಾ ತನ್ನ ಹೆತ್ತವರ ಮನೆಗೇ ಹೋಗಿದ್ದಳು.

ಮನೆಗೆ ಹೋದವಳೇ ತಾಯಿಯ ಮಡಿಲಲ್ಲಿ ಮುಖವಿಟ್ಟು ತನ್ನ ಮನದ ನೋವನ್ನೆಲ್ಲ ಹೊರ ಚೆಲ್ಲಿದ್ದಳು. ಗರ್ಭಿಣಿ ಮಗಳು ಪಟ್ಟ ತೊಂದರೆಗಳನ್ನು ಕೇಳಿದ ತಾಯಿಗೆ ಕರುಳು ಕಿತ್ತು ಬಂದ ಹಾಗಾಗಿತ್ತು. ಗುಬ್ಬಚ್ಚಿಯನ್ನು ಗಿಡುಗನ ಕೈಗೆ ಕೊಟ್ಟದ್ದು ತಾವೇ. ಈಗ ಬಿಡಿಸುವುದು ಹೇಗೆ?

ಒಂದು ವಾರ ಕಿರಣ್ಮಯಿ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಉಳಿದಿದ್ದಳು. ಅವಳಿಗೆ ನಿರಾಶೆಯಾಗಿತ್ತು. ಜೀವನದಲ್ಲಿ ಜಿಗುಪ್ಸೆ ಉಂಟಾಗಿತ್ತು. ಜಗದೀಶನ ಎಲ್ಲ ದೈಹಿಕ ಹಿಂಸೆಗಳನ್ನು ಅವಳು ತಡೆದುಕೊಂಡಿದ್ದಳು. ಆದರೆ ಯಾವಾಗ ಅವನು ತನ್ನ ನೈತಿಕತೆಯ ಬಗ್ಗೆ ಹೀನಾಯವಾಗಿ ಮಾತಾಡಿದನೋ, ತನ್ನ ಹೊಟ್ಟೆಯಲ್ಲಿರುವ ಮಗು ತನ್ನದಲ್ಲವೆಂದನೋ ಆಗ ಅವಳು ತಾನು ಇಂತಹ ಮನುಷ್ಯನೊಡನೆ ಬದುಕುವುದು ಸಾಧ್ಯವಿಲ್ಲವೆಂದು ನಿರ್ಧರಿಸಿಕೊಂಡಿದ್ದಳು. ಗಂಡನ ಮನೆಗೆ ಹೋಗುವ ಇಚ್ಛೆ ಇಲ್ಲದೆ ಅವಳು ತಾಯಿ ಮನೆಯಲ್ಲಿಯೇ ಇರುವ ನಿಶ್ಚಯ ತಾಳಿದ್ದಳು.

ಆದರೆ ಅವಳಲ್ಲಿಗೆ ಬಂದ ಎರಡುವಾರದ ನಂತರ ಒಂದು ದಿನ ಅವಳು ಆಫೀಸಿನಿಂದ ಬರುವಾಗ ಜಗದೀಶನ ಬೈಕ್‌ ಮನೆಯ ಮುಂದೆ ನಿಂತಿರುವುದನ್ನು ಕಂಡು, ಇನ್ನೇನಿದೆಯೋ ಎಂದು ಯೋಚಿಸುತ್ತಾ ಮನೆಯೊಳಗೆ ಬಂದರೆ ಅವನು ಏನೂ ಆಗದವನಂತೆ ತನ್ನ ತಂದೆ ತಾಯಿಯ ಜತೆಗೆ ನಗುತ್ತಾ ಮಾತಾಡುತ್ತಿದ್ದುದನ್ನು ಕಂಡು ಹೇಸಿ ಸೀದಾ ಒಳಗೆ ಸರಿದು ಹೋದಾಗ, ತಾಯಿ ಅವಳನ್ನು ಕರೆಯುತ್ತಾ, “ನೋಡಮ್ಮಾ, ನಿನ್ನ ಗಂಡ ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ” ಎಂದು ಸಂತೋಷದಿಂದ ನುಡಿದಾಗ ಅವಳಿಗೆ ಹೊಟ್ಟೆ ತೊಳಸಿದಂತಾಗಿ ವಾಂತಿ ಬರುವ ಹಾಗಾಗಿತ್ತು.

ಅವನ ಸಿಹಿಯಾದ ಮಾತಿಗೆ ಅಮ್ಮ ಮರುಳಾಗಿ ಮಗಳ ನೋವನ್ನು ಮರೆತು ಬಿಟ್ಟಿದ್ದಾರೆ. ಈಗ ಅವನ ಜತೆ ಹೋಗೆಂದರೆ ಏನು ಮಾಡಬೇಕು? ಅವನೊಡನೆ ಜೀವಿಸುವುದೇ ಕಷ್ಟವಾಗಿರುವಾಗ ಹೋಗುವುದು ಹೇಗೆ?

ಕಿರಣ್ಮಯಿ ಒಳಗೆ ಹೋಗಿ ಊಟದ ಮೇಜಿನ ಮೇಲೆ ತಲೆಯಿಟ್ಟು ಬಿಕ್ಕುವಾಗ ತಾಯಿ ಬಂದು ಅವಳ ತಲೆ ನೇವರಿಸುತ್ತಾ, “ಮಗೂ, ಎಲ್ಲರ ಮನೆಯ ದೋಸೆಯೂ ತೂತೇ. ಅವನಾಗಿ ಬಂದು ನಿನ್ನನ್ನು ಕರೆಯುತ್ತಿರುವಾಗ ಹೋಗದಿರುವ ತಪ್ಪು ನೀನು ಮಾಡಬೇಡ. ನಾಳೆ ನಿನ್ನ ಹೊಟ್ಟೆಯಲ್ಲಿರುವ ಮಗುವಿಗೆ ಹೆಸರಾದರೂ ಇರಬೇಕಲ್ಲ? ಇದೊಂದು ಬಾರಿ ಹೋಗು, ನಮಗಾಗಿಯಾದರೂ ಹೋಗು. ನೋಡೋಣ ಮುಂದೆ ಏನಾಗುವುದೆಂದು.”

“ಇಲ್ಲಮ್ಮ ನಾನಲ್ಲಿಗೆ ಹೋಗುವುದಿಲ್ಲ. ನನ್ನ ಮಗುವಿಗೆ ನಾನೇ ಹೆಸರು ಕೊಟ್ಟು ಸಾಕುತ್ತೇನೆ. ಅವನ ನೆರಳಿನಲ್ಲೂ ನನ್ನ ಮಗು ಬದುಕುವುದು ಬೇಡ”

“ಹಾಗೆಲ್ಲ ಹಟ ಮಾಡಬಾರದಮ್ಮ, ಏನೋ ಕೆಟ್ಟಗಳಿಗೆಯಲ್ಲಿ ಏನೋ ಅಂದು ಬಿಟ್ಟಾಂತ ಅದನ್ನೇ ತಲೆಯಲ್ಲಿ ಇಟ್ಟುಕೊಂಡರೆ ಸರಿಯಲ್ಲ. ಈಗ ಅವನಿಗೆ ನಿನ್ನ ಹತ್ತಿರ ಮಾತಾಡಬೇಕಂತೆ.”

ಅವನ ಮುಖ ನೋಡುವುದೂ ಅಸಹ್ಯವಾಗಿರುವಾಗ ಏನೆಂದು ಮಾತಾಡಲಿ ನೀವೇ ಹೇಳಿ”

ಕಿರಣ್, ಕೆಲವೊಮ್ಮೆ ನಾವು ನಮ್ಮ ಭಾವನೆಗಳನ್ನು, ಸ್ವಾಭಿಮಾನವನ್ನು ಬದಿಗೊತ್ತಿ ಜೀವನವನ್ನು ಸ್ವೀಕರಿಸಬೇಕಾಗುತ್ತದೆ. ಹಾಗೆ ಮಾಡಿರುವುದರಿಂದಲೇ ಹಲವಾರು ಸಂಸಾರಗಳು ಉಳಿದಿವೆ. ಹೊರಗಿನಿಂದ ಎಲ್ಲರ ಸಂಸಾರಗಳೂ ಚಂದ. ಒಳಗಿರುವ ನೋವುಗಳು ಅವರವರಿಗೇ ಗೊತ್ತು. ಮದುವೆ ಎನ್ನುವ ಸಂಸ್ಕಾರ ಉಳಿಯಬೇಕಾದರೆ ನಾವು ಹಲವು ರೀತಿಯ ಬೆಂಕಿಗೆ ಹಾರಬೇಕಾಗುತ್ತದೆ. ಸೀತೆ ಹಾರಿದ್ದೂ ಅದೇ ಬೆಂಕಿಗೆ, ಸಂಶಯದ ಭೂತ ಶ್ರೀ ರಾಮನನ್ನೇ ಕಾಡಿದೆ. ಮತ್ತೆ ಉಳಿದವರ ಗತಿಯೇನು?”

“ಹಾಗಂತ ಎಲ್ಲರೂ ಸೀತೆಯ ಹಾಗೆ ಕೈಹಿಡಿದವ ಹೇಳಿದ್ದಕ್ಕೆಲ್ಲ ತಲೆ ಬಾಗಬೇಕೆ? ಅದರಲ್ಲೂ ಈಗ ರಾಮನಂತವರು ಯಾರಿದ್ದಾರೆ? ನನಗಂತೂ ಸೀತೆಯಂತಹ ಮಾದರಿಗಳು ಬೇಕಿಲ್ಲ. ನಾನು ಯಾವುದೇ ತಪ್ಪು ಮಾಡಿದಿರುವಾಗ ಇಂತಹ ಕಿರುಕುಳಗಳನ್ನು ಅನುಭವಿಸಲು ತಯಾರಿಲ್ಲ”

“ಇಷ್ಟು ನಿಷ್ಟುರವಾಗಿದ್ದರೆ ಜೀವನ ನಡೆಯುವುದು ಹೇಗೆ ಮಗೂ? ಈ ಒಂದು ಸಲ ನಮಗಾಗಿ ಹೊಂದಿಕೊಳ್ಳಲು ಪ್ರಯತ್ನಿಸು. ಇನ್ನೊಮ್ಮೆ ಹೀಗಾದರೆ ನಿನಗೆ ಸರಿ ಕಂಡಂತೆ ಮಾಡು. ಇದು ತಾಯಿಯಾಗಿ ನನ್ನ ಬೇಡಿಕೆ.”

ಕಿರಣ್ಮಯಿ ತಲೆ ಕಡಿಯಲು ತೆಗೆದುಕೊಂಡು ಹೋಗುವ ಕುರಿಯಂತೆ ಅಸಹಾಯಕತೆಯಿಂದ ತಾಯಿಯ ಮುಖವನ್ನೇ ನೋಡಿದ್ದಳು. ತಾಯಿಗೂ ತನ್ನ ನೋವು ತಿಳಿಯದ ಮೇಲೆ ತಾನು ಯಾರ ಮೊರೆ ಹೋಗಲಿ? ಜಗದೀಶ ಗೋಮುಖ ವ್ಯಾಘ್ರನೆನ್ನುವುದರಲ್ಲಿ ಸಂಶಯವೇ ಇಲ್ಲ. ಆದದ್ದಾಗಲಿ ಸ್ವಲ್ಪ ಮುಳುಗಿದ ಮೇಲೆ ಚಳಿಯೇನು ಎಂದು ಎದ್ದು ಅವನಿದ್ದ ಕೋಣೆಗೆ ಹೋಗಿದ್ದಳು. ಜಗದೀಶ ಅವಳನ್ನು ಕಂಡವನೆ ಹಸಿದವನಂತೆ ಅಪ್ಪಿ ಹಿಡಿದು “ಸಾರಿ ಕಿರಣ್, ತಪ್ಪಾಯಿತು. ಇನ್ನು ಹಾಗಾಗೋದಿಲ್ಲ. ಬಾ ಮನೆಗೆ ಹೋಗೋಣ” ಎಂದು ಅವಳನ್ನು ಮುದ್ದಿಸಲು ನೋಡಿದಾಗ ಕೊಸರಿಕೊಂಡ ಕಿರಣ್ಮಯಿ “ದಯವಿಟ್ಟು ನನ್ನನ್ನು ನನ್ನಷ್ಟಕ್ಕೆ ಬಿಡಿ. ನಿಮ್ಮ ಚಿತ್ರ ಹಿಂಸೆಯನ್ನು ಸಹಿಸುವುದು ನನ್ನಿಂದಾಗೋದಿಲ್ಲ.”

“ಇಲ್ಲ, ಇನ್ನು ಹಾಗಾಗೋದಿಲ್ಲ ಬಾ ಮನೆಗೆ ಹೋಗೋಣ, ನೀನಿಲ್ಲದೆ ನನಗಿರಲು ಸಾಧ್ಯವಿಲ್ಲ. ಬೇಕಾದರೆ ನಿನ್ನ ಕಾಲು ಹಿಡಿದು ಕ್ಷಮೆ ಕೇಳುತ್ತೇನೆ. ನನ್ನದು ತಪ್ಪಾಯಿತು.

ಅವನು ಇಷ್ಟರವರೆಗೆ ಇಷ್ಟು ದೀನನಾಗಿ ತಪ್ಪೊಪ್ಪಿಕೊಂಡಿರಲಿಲ್ಲ. ತಾಯಿ ಹೇಳುವ ಹಾಗೆ ಅವನು ಸತ್ಯ ಹೇಳುತ್ತಿರಬಹುದೆನ್ನುವ ಸಂಶಯ ಮೂಡಿದಾಗ ನೋಡೋಣ ಒಂದು ಚಾನ್ಸ್ ಕೊಟ್ಟರೇನು? ಮದುವೆಯಾಗಿ ಈ ಬಂದನಕ್ಕೆ ಸಿಕ್ಕಿ ಕೊಂಡಾಗಿದೆ. ಇನ್ನು ಇದರಿಂದ ಬಿಡುಗಡೆ ಸುಲಭವಿಲ್ಲ. ಹೊಂದಿಕೊಂಡು ಹೋಗಲಾಗುವುದೋ ಎಂದು ನೋಡುವುದು ತನ್ನ ಕರ್ತವ್ಯ ಎಂದು ಅನಿಸಿತ್ತು. ಅಲ್ಲದೆ ತಾಯಿಗೆ ತಾನು ಅವನೊಟ್ಟಿಗೆ ಹೋಗಬೇಕೆಂದಿದೆ. ಒಮ್ಮೆ ನೋಡೋಣ. ಇಷ್ಟು ಕೇಳಬೇಕಾದರೆ ಅವನ ತಪ್ಪು ಅವನಿಗೆ ತಿಳಿದಿರಬಹುದು. ಜೀವನದಲ್ಲಿ ಕ್ಷಮೆಗೂ ಸ್ಥಾನವಿದೆಯಲ್ಲ? ಒಮ್ಮೆ ಅದನ್ನು ಉಪಯೋಗಿಸಿ ನೋಡುವುದು. ಈ ಯೋಚನೆ ಬರುತ್ತಲೇ ಕಿರಣ್ಮಯಿ ಜಗದೀಶನ ಕಡೆ ತಿರುಗಿ “ಇದೆಲ್ಲ ನಿಜಾನಾ?” “ಯಾವ ರೀತಿಯಲ್ಲಿ ಹೇಳಿದರೆ ನಂಬುತ್ತೀ?” ಅವನು ಸ್ವರದಲ್ಲಿ ಮೂಡಿಸಿದ್ದ ನಿಷ್ಟೆ ಅವಳನ್ನು ಕರಗಿಸಿತ್ತು. ಯಾವ ಹೆಣ್ಣಿಗಾದರೂ ಸಂಸಾರ ಮುರಿಯುವ ಇಚ್ಚೆ ಇರುವುದಿಲ್ಲ. ಆದಷ್ಟೂ ತೇಪೆ ಹಾಕಿ ಬದುಕುವ ಪ್ರಯತ್ನ ಮಾಡುತ್ತಾಳೆ.

ಕಿರಣ್ಮಯಿ ನಿರ್‍ಧಾರ ಬದಲಿಸಿದ್ದಳು. ಹೆಣ್ಣು ಮನಸ್ಸು ಎನ್ನುವುದೇ ಇದಕ್ಕೇನೋ? ಗಂಡು ಮಾಡುವ ತಪ್ಪುಗಳನ್ನೆಲ್ಲ ಒಡಲೊಳಗೆ ಹಾಕಿಕೊಂಡು ಉರಿದು ಹೋಗುವುದು.

ಕಿರಣ್ಮಯಿ ಹೊಸ ಆಸೆ ಹೊತ್ತು ಜಗದೀಶನೊಡನೆ ಮನೆಗೆ ಬಂದಾಗ ಅವಳಿಗೆ ಅತ್ತೆ ಮಾವನಿಂದ ಸಿಕ್ಕಿದ ಸ್ವಾಗತ ತಣ್ಣಗಿನದ್ದು. ಹೇಳದೆ ಕೇಳದೆ ಸೊಸೆ ಮನೆಬಿಟ್ಟು ಹೋದದ್ದು ಅವರಿಗೆ ತಪ್ಪೆಂದು ಕಂಡಿತ್ತು. ಅದು ತಪ್ಪಲ್ಲವೆಂದು ಅವರಿಗೆ ತಿಳಿಸಿಹೇಳುವುದು ಹೇಗೆಂದು ಗೊತ್ತಾಗದೆ ಅವಳೂ ತಣ್ಣಗಾಗಿಯೇ ಇದ್ದಳು. ತಪ್ಪು ಒಪ್ಪುಗಳ ಸ್ಪಷ್ಟಿಕರಣ ಕೊಡಲು ಅವಳು ತಯಾರಾಗಿಯೂ ಇರಲಿಲ್ಲ.

ಒಂದು ವಾರ ಜಗದೀಶ ಅವಳ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸಿದ್ದ. ತಾನು ಮಾಡಿದ್ದು ತಪ್ಪೆಂದು ಬಾರಿ ಬಾರಿ ಒಪ್ಪಿಕೊಂಡಾಗ ಕಿರಣ್ಮಯಿ ಅವನ ತಪ್ಪುಗಳನ್ನು ಮರೆತು ಅವನೊಡನೆ ಹೊಂದಿಬಾಳುವ ನಿರ್ಧಾರಕ್ಕೆ ಬಂದಿದ್ದಳು.

ಆದರೆ ನಾಯಿ ಬಾಲ ಡೊಂಕೇ ಎಂದು ಅವಳಿಗೆ ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಕೆಲಸದ ನಿಮಿತ್ತ ಹೈದರಾಬಾದಿಗೆ ಹೋಗಬೇಕಾಗಿ ಬಂದಾಗ ಅವಳನ್ನು ಹೋಗದಂತೆ ತಡೆಯಲು ಜಗದೀಶ ಬಹಳ ಪ್ರಯತ್ನಿಸಿದ್ದ. ಅವಳು ಅವನ ಮಾತಿಗೆ ಒಪ್ಪದೆ ಹೊರಟಾಗ ಸಿಟ್ಟಿನಿಂದ ಮುಖ ಊದಿಸಿಕೊಂಡಿದ್ದರೂ ಕಿರಣ್ಮಯಿ ಹೊರಟು ಹೋಗಿದ್ದಳು. ಅವಳಿಗೆ ದಾಂಪತ್ಯದಷ್ಟೇ ಕೆಲಸವೂ ಮುಖ್ಯವಾಗಿತ್ತು. ಮೊದಲೇ ಸೂಜಿ ಮೊನೆಯ ಮೇಲೆ ನಿಂತಿದ್ದ ದಾಂಪತ್ಯ ಅವರದ್ದು.

ಅವಳು ಹೈದರಾಬಾದಿನಿಂದ ವಾಪಾಸು ಬರುವಾಗ ಮನೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಜಗದೀಶನ ತಲೆಗೆ ಪುನಃ ಸಂಶಯದ ಭೂತ ಹೊಕ್ಕಿತ್ತು. ನೀನು ಇಲ್ಲಿರಬೇಕಾದರೆ ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ನನ್ನದಲ್ಲದ ಮಗುವನ್ನು ತೆಗೆಸಬೇಕೆಂದು ಪಟ್ಟು ಹಿಡಿದಾಗ ದಾಂಪತ್ಯದ ಉಳಿವಿಗಾಗಿ ಅವನ ಮಾತಿಗೆ ಒಪ್ಪುವುದಲ್ಲದೆ ಕಿರಣ್ಮಯಿಗೆ ಬೇರೆ ದಾರಿ ಇರಲಿಲ್ಲ. ಜಗದೀಶ ಅವಳನ್ನು ಒತ್ತಾಯಿಸಿ ನರ್ಸಿಂಗ್ ಹೋಮಿಗೆ ಕರೆದುಕೊಂಡು ಹೋಗಿ ಅವಳ ಒಡಲು ಬರಿದು ಮಾಡಿಸಿದ್ದ. ಕಿರಣ್ಮಯಿ ಬಲಿ ಪಶುವಿನಂತೆ ಅವನು ಹೇಳಿದ್ದಕ್ಕೆ ತಲೆಯಾಡಿಸಿದ್ದಳು. ತನ್ನ ಮನಸಾಕ್ಷಿಗೆ ವಿರುದ್ಧವಾಗಿ ತನ್ನ ಕರುಳಿನ ಕುಡಿಯನ್ನು ಕಿತ್ತೆಸೆಯಲು ಬಿಟ್ಟಿದ್ದಳು. ತಮ್ಮ ದಾಂಪತ್ಯಕ್ಕೆ ಉಳಿಯಲು ತಾನು ಕೊಡುವ ನರಬಲಿ ಇದೆಂದು ಅವಳಿಗೆ ಅನಿಸಿತ್ತು.

ಯಾವ ಯಾವ ರೀತಿಯಲ್ಲಿ ಹೆಣ್ಣು ಸುತ್ತಲಿನ ಒತ್ತಡಗಳಿಗೆ ಬಲಿಯಾಗಬೇಕೆನ್ನುವುದಕ್ಕೆ ಕಿರಣ್ಮಯಿ ಒಂದು ಉದಾಹರಣೆಯಾದಳು. ಹೆತ್ತವರಿಗೆ ಅವಳ ಮೇಲೆ ಅನುಕಂಪವಿದ್ದರೂ ಗಂಡನನ್ನು ಬಿಟ್ಟು ಅವಳು ತವರಿಗೆ ಬಂದಿರುವುದು ಅವರಿಗೆ ಒಪ್ಪಿಗೆ ಇರಲಿಲ್ಲ. ಕಿರಣ್ಮಯಿಗೆ ಆರ್ಥಿಕ ಸ್ವಾತಂತ್ರ್ಯವಿದ್ದರೂ, ತನ್ನತನವನ್ನು ಉಳಿಸಿಕೊಳ್ಳಬೇಕೆನ್ನುವ ತುಡಿತವಿದ್ದರೂ, ಎಲ್ಲರಿಂದ ಸಿಡಿದು ದೂರ ನಿಲ್ಲುವ ಧೈರ್ಯವಿರಲಿಲ್ಲ. ಪ್ರವಾಹದ ಎದುರು ಈಜುವ ಮನಃಸ್ಥೈರ್‍ಯವಿರಲಿಲ್ಲ. ಕೊನೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಹೆಣ್ಣು ಬಹಳಷ್ಟು ಸಹಿಸುತ್ತಾಳೆ. ಈ ಸಹನೆಯಲ್ಲಿ ಅವಳ ಮನಸ್ಸು ಪಕ್ವತೆಯನ್ನೂ, ಧೈರ್ಯವನ್ನೂ ಪಡೆದುಕೊಳ್ಳುತ್ತದೆ.

ಕಿರಣ್ಮಯಿಯ ಆಫೀಸಿನಲ್ಲಿ ಎಲ್ಲರಿಗೂ ಅವಳ ನೋವಿನ ಅರಿವಾಗಿತ್ತು. ಅವನನ್ನು ಬಿಟ್ಟುಬಿಡು ಎಂದು ಎಲ್ಲರೂ ಹೇಳುತ್ತಿದ್ದರೂ ಮದುವೆಯ ಬಂಧನವನ್ನು ಅಷ್ಟು ಸುಲಭದಲ್ಲಿ ಕಳಚಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಅರಿವು ಅವಳಿಗಿತ್ತು. ಅಬಾರ್ಶನ್ ಮಾಡಿಸಿದ ಮೇಲೆ ಮಾನಸಿಕ ಕಿರುಕುಳ ನಿಂತರೂ ದೈಹಿಕ ಕಿರುಕುಳ ನಿಂತಿರಲಿಲ್ಲ. ತನ್ನ ಗಂಡಸುತನವನ್ನು ಸಾದರ ಪಡಿಸುವಂತೆ ಅವನು ವರ್ತಿಸುತ್ತಿದ್ದ.

ಮೂರು ತಿಂಗಳಲ್ಲಿ ಕಿರಣ್ಮಯಿ ಇನ್ನೊಮ್ಮೆ ಗರ್ಭಧರಿಸಿದ್ದಳು. ಮನೆಯಲ್ಲಿ ಎಲ್ಲರಿಗೂ ಸಂಭ್ರಮ ಉಂಟಾದರೂ ಜಗದೀಶ ಅವಳ ಮುಖ ನೋಡಲು ಹೆದರುತ್ತಿರುವನೆಂದು ಅವಳಿಗೆ ಭಾಸವಾಗುತ್ತಿತ್ತು. ಇನ್ನೊಮ್ಮೆ ಎಲ್ಲಿ ಹಳೆ ಕಥೆ ಪ್ರಾರಂಭಿಸುವನೋ ಎನ್ನುವ ಹೆದರಿಕೆಯಲ್ಲಿ ಕಿರಣ್ಮಯಿ ಹೆದರಿದ ಗುಬ್ಬಚ್ಚಿಯಂತಾಗಿದ್ದಳು. ಈ ಬಾರಿ ಹಾಗೇನಾದರೂ ಮಾಡಿದರೆ ಯಾವ ಟೆಸ್ಟ್‌ಗಾದರೂ ಸಿದ್ಧಳಾಗಬೇಕೇ ವಿನಃ ಅಬಾರ್ಶನ್‌ಗೆ ಒಪ್ಪಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಳು.

ಜಗದೀಶ ಬಾಯಿಬಿಟ್ಟು ಕಳೆದ ಬಾರಿಯಂತೆ ಈಸಲ ಅವಳನ್ನು ಅಪಾದಿಸುತ್ತಿರಲಿಲ್ಲ. ರಾತ್ರಿ ಮಾತ್ರ ಅವಳಿಗೆ ಬೇಡವಾದರೂ ಅವಳ ದೇಹದ ಮೇಲೆ ತನ್ನ ಗಂಡಸುತನವನ್ನು ಪ್ರತಿಷ್ಠಾಪಿಸುತ್ತಿದ್ದ. ಕಿರಣ್ಮಯಿಗೆ ಬಹಳ ಹಿಂಸೆಯಾಗುತ್ತಿದ್ದರೂ ಸಹಿಸಿಕೊಳ್ಳುತ್ತಿದ್ದಳು ಅನಿವಾರ್ಯ ಎನ್ನುವಂತೆ. ಇದರಿಂದಾಗಿ ಗಂಡು ಹೆಣ್ಣಿನ ಸಂಬಂಧದಲ್ಲಿ ಅವಳಿಗೆ ಅಸಹ್ಯ ಉಂಟಾಗಿತ್ತು ರಾತ್ರಿ ಯಾಕಾದರೂ ಬರುತ್ತದೋ ಎಂದು ಭಯವಾಗಲು ಸುರುವಾಗಿತ್ತು.

ನಾಲ್ಕು ತಿಂಗಳು ತುಂಬ ಬೇಕಾದರೆ ಜಗದೀಶ ಹಳೆಯ ರಾಗವನ್ನೇ ಪ್ರಾರಂಭಿಸಿ ಇದನ್ನೂ ತೆಗೆಸಿಬಿಡು ಎಂದು ಹೇಳಿದಾಗ ಕಿರಣ್ಮಯಿ ತನ್ನೆಲ್ಲ ಸಹನೆಯನ್ನು ಕಳೆದುಕೊಂಡಿದ್ದಳು. ಎಲ್ಲದಕ್ಕೂ ಮಿತಿ ಇರುವಂತೆ ಸಹನೆಗೂ ಒಂದು ಮಿತಿ ಇದೆ. “ಏನು ಬೇಕಾದರೂ ಹೇಳಿ, ನಾನು ಈ ಸಲ ಡಾಕ್ಟರ ಹತ್ತಿರ ಬರುವುದಿಲ್ಲ. ನಿಮ್ಮನ್ನಾದರೂ ಬಿಡುತ್ತೇನೆ ಮಗುವನ್ನು ಸಾಯಿಸಲು ಬಿಡುವುದಿಲ್ಲ. ಡಿ.ಎನ್.ಎ ಟೆಸ್ಟ್ ಮಾಡಿಸಿ. ನಿಮ್ಮ ಸಂಶಯ ನಿವಾರಿಸಿಕೊಳ್ಳಿ, ನನ್ನನ್ನು ಚಿತ್ರಹಿಂಸೆಗೆ ಒಳಪಡಿಸಬೇಡಿ.”

“ಹಾಗಾದರೆ ಹೊರಡು ನಿನ್ನನ್ನು ನಿಮ್ಮ ಮನೆಯಲ್ಲಿ ಬಿಟ್ಟು ಬರುತ್ತೇನೆ. ನಿನ್ನ ಹೊಟ್ಟೆಯಲ್ಲಿ ನನ್ನ ಮಗು ಬೆಳೆಯುತ್ತಿಲ್ಲ. ನಿನ್ನ ಗೆಳೆಯನ ಮಗು ಬೆಳೆಯುತ್ತಿದೆ. ಅದಕ್ಕೆ ನಾನು ತಂದೆಯಾಗಲಾರೆ.”

“ಹೋಗುತ್ತೇನೆ. ಆದರೆ ಪುನಃ ನನ್ನನ್ನು ಕರೆಯಲು ಬಂದು ಯಾವುದೇ ನಾಟಕವಾಡಬೇಡಿ, ಈಗ ಹೋದರೆ ನಾನೆಂದೂ ನಿಮ್ಮ ಮನೆಗೆ ಕಾಲಿಡೋದಿಲ್ಲ. ನನಗೂ ಸಾಕಾಗಿದೆ. ಈ ಬಾರಿ ಹೋಗುವಾಗ ನಾನು ನಿಮ್ಮ ಹೆತ್ತವರ ಹತ್ತಿರ ನಿಮ್ಮ ಕಥೆ ಹೇಳಿಯೇ ಹೋಗುತ್ತೇನೆ.”

ಕಿರಣ್ಮಯಿಯ ಸ್ವರದಲ್ಲಿನ ದೃಢತೆ ಎರಡು ದಿನ ಅವನನ್ನು ಅವಳ ಸುದ್ದಿಗೆ ಹೋಗದಂತೆ ತಡೆದಿತ್ತು. ಏನೂ ಮಾತಾಡದೇ ಭಾನುವಾರ ಬರುತ್ತಲೇ ಅವಳನ್ನು ಹೊರಡಿಸಿ ತಾಯಿ ಮನೆಯಲ್ಲಿ ಬಿಟ್ಟು ಹೋಗಿದ್ದ. ಮತ್ತೆ ಆ ಕಡೆ ತಲೆ ಹಾಕಿರಲಿಲ್ಲ.

ಕಿರಣ್ಮಯಿಗೆ ಇದರಿಂದ ಬೇಸರವಾದರೂ, ತಾನು ಅಸಹಾಯಕಳು ಎಂದು ಭಾಸವಾಗಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯವಿದ್ದುದರಿಂದ ಅವಳು ಯಾವುದಕ್ಕೂ ಗಂಡನ ಮೇಲೆ ಹೊಂದಿಕೊಂಡಿರಲಿಲ್ಲ. ಬದಲಾಗಿ ತಾಯಿ ಮನೆಗೆ ಬಂದ ಮೇಲೆ ಸುಧಾರಿಸಿಕೊಂಡಿದ್ದಳು. ಮನಸ್ಸಿಗೆ ನೆಮ್ಮದಿ ಸಿಕ್ಕಿದ ಹಾಗಾಗಿತ್ತು. ರಾತ್ರಿಯ ಹೆದರಿಕೆ ಇರಲಿಲ್ಲ. ಯಾರು ಏನೇ ಹೇಳಿದ್ದರೂ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿಗೆ ಜನ್ಮವಿತ್ತು ಜಗದೀಶನ ಮೇಲೆ ಸೇಡು ತೀರಿಸಿಕೊಳ್ಳಬೇಕೆನ್ನುವ ಹಟ ಅವಳೊಳಗೆ ಬೆಳೆಯುತ್ತಿತ್ತು. ಈ ಬಾರಿ ಅವಳ ಹೆತ್ತವರೂ ಸುಮ್ಮನಾಗಿದ್ದರು. ಅವಳು ಅವಳ ಪ್ರಯತ್ನ ಮಾಡಿದ್ದಾಳೆ. ಅವಳನ್ನು ದೂರುವಂತಿಲ್ಲ.

ಒಂಭತ್ತು ತಿಂಗಳು ತುಂಬಬೇಕಾದರೆ ಕಿರಣ್ಮಯಿ ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಅವಳ ತಂದೆ ಅವಳ ಹತ್ತಿರ ಕೇಳದೆ ಜಗದೀಶನಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ ಜಗದೀಶ ಮಗುವನ್ನು ನೋಡಲು ಬಂದಿರಲಿಲ್ಲ. ಮಗು ಜಗದೀಶನ ತದ್ರೂಪವಾಗಿ ಬೆಳೆಯುತ್ತಿತ್ತು. ಕಿರಣ್ಮಯಿ ಜಗದೀಶನನ್ನು ಸಂಪೂರ್ಣ ಮರೆತು ತನ್ನ ಮಗು ಮತ್ತು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು.

ಹೀಗಿರುವಾಗ ಒಂದು ದಿನ. ಮಗುವಿಗೆ ಎರಡು ವರುಷ ಕಳೆದಿತ್ತು ಜಗದೀಶನ ತಂದೆ ಕಿರಣ್ಮಯಿಯ ತಂದೆಗೆ ಫೋನು ಮಾಡಿ, ಕಿರಣ್ಮಯಿ ವಾಪಸ್ಸು ಬರಲು ಇಷ್ಟ ಪಡದಿದ್ದರೆ ಡೈವೋರ್‍ಸ್ ಕೊಡಲಿ. ಮಗನಿಗೆ ಇನ್ನೊಂದು ಮದುವೆಯಾದರೂ ಮಾಡುತ್ತೇವೆ. ಅವನಿಗೆ ಅವಳ ನಡತೆಯ ಮೇಲೆ ಸಂಶಯ ಇರುವುದರಿಂದ ಅವರಿಬ್ಬರು ಒಟ್ಟಿಗೆ ಬಾಳುವುದು ಅಸಾಧ್ಯ. ಎಂದೆಲ್ಲ ಹೇಳಿದಾಗ ಕಿರಣ್ಮಯಿಯ ತಂದೆಗೂ ಸಿಟ್ಟು ಬಂದು. ‘ಇದ್ದ ಹೆಂಡತಿಯನ್ನೇ ಬಾಳಿಸಲಾಗದ, ಮಾನಸಿಕವಾಗಿ ನಪುಂಸಕನಾಗಿರುವ ನಿಮ್ಮ ಮಗನೊಟ್ಟಿಗೆ ಬಾಳುವ ಇಚ್ಚೆ ನನ್ನ ಮಗಳಿಗೂ ಇಲ್ಲ. ಅವಳ ಮಗನನ್ನು ನೀವು ನೋಡಿದರೆ ನಿಮಗೇ ತಿಳಿಯುವುದು ಅದು ಯಾರಿಗೆ ಹುಟ್ಟಿದ್ದ ಮಗುವೆಂದು. ಅನ್ಯಾಯವಾಗಿ ಒಂದು ಹೆಣ್ಣು ಮಗುವಿನ ನಡತೆಯ ಮೇಲೆ ಸಂಶಯ ಪಡುವುದು ಸರಿಯಲ್ಲ. ಅವನಿಗೆ ಡೈವೋರ್‍ಸ್ ಬೇಕಾದರೆ ಅವನೇ ಕೋರ್‍ಟಿಗೆ ಹೋಗಲಿ. ನಮ್ಮ ಅಡ್ಡಿ ಇಲ್ಲ’ ಎಂದು ಉತ್ತರಿಸಿದ್ದರು.

ಇದನ್ನು ಕೇಳಿದ ಕಿರಣ್ಮಯಿ “ಅಪ್ಪ, ಅವನು ಏನು ಕೋರ್ಟಿಗೆ ಹೋಗುವುದು? ನಾನೇ ಹೋಗುತ್ತೇನೆ. ಅವನ ಮೇಲೆ ವರದಕ್ಷಿಣೆ ಕಿರುಕುಳದ ಕೇಸ್ ಹಾಕುತ್ತೇನೆ. ಆರು ಲಕ್ಷ ನಗದು ಕೊಟ್ಟಿಲ್ಲವೇ? ಇನ್ನೂ ಬೇಕೆಂದು ಪೀಡಿಸಿ ತಂದೆ ಮನೆಗೆ ಕಳುಹಿಸಿದ್ದಾನೆಂದು ಕೇಸ್ ಹಾಕಿದರೆ ಬುದ್ಧಿ ಕಲಿಸುತ್ತಾರೆ. ಮಗ ಅವನದಲ್ಲವೆಂದು ಕೋರ್ಟಿನಲ್ಲಿ ಬೇಕಾದರೆ ಪ್ರೂವ್ ಮಾಡಲಿ, ನಾನು ಯಾವ ಟೆಸ್ಟ್‌ಗೂ ರೆಡಿ. ನ್ಯಾಯಾಧೀಶರೇ ಮಗುವನ್ನು ನೋಡಿ ಯಾರ ಮಗುವೆಂದು ತೀರ್‍ಮಾನಿಸಲಿ. ಇಷ್ಟು ಅನುಭವಿಸಿದ ಮೇಲೆ ನಾನು ಎಲ್ಲದಕ್ಕೂ ತಯಾರು.”

ಮಗಳ ಮನದ ನೋವಿನ ಅರಿವಿದ್ದ ತಂದೆ ಅವಳ ಮಾತಿಗೆ ಎದುರಾಡಲು ಪ್ರಯತ್ನಿಸಿರಲಿಲ್ಲ.

ಕಿರಣ್ಮಯಿ ಮತ್ತೆ ತಡಮಾಡಿರಲಿಲ್ಲ. ಒಬ್ಬ ಲಾಯರ್ ಹತ್ತಿರ ಹೋಗಿದ್ದಳು. ಲಾಯರ್ ಹೆಂಗಸಾದುದರಿಂದ ತಾನೇನಾದರೂ ಮಧ್ಯಸ್ಥಿಕೆ ವಹಿಸಿದರೆ ಅವನು ಸರಿಯಾಗಿ ನಿಮ್ಮನ್ನು ನೋಡಿಕೊಳ್ಳುವನೆಂದು ಒಪ್ಪಿದರೆ ನೀವು ಪುನಃ ಗಂಡನ ಮನೆಗೆ ಹೋಗಲು ತಯಾರಿದ್ದೀರಾ ಎಂದು ಕೇಳಿದಾಗ ಕಿರಣ್ಮಯಿ ಹೇಳಿದ ಉತ್ತರ ಯಾರ ಹೃದಯವನ್ನಾದರು ಕಲಕುವಂತಾದ್ದು.

“ಅವನಿಗೆ ತನ್ನ ಗಂಡಸುತನದ ಮೇಲೆ ಸಂಶಯ. ತನ್ನ ಮಗುವನ್ನೇ ತನ್ನದಲ್ಲ ಎನ್ನುವವನ ಜತೆಗೆ ಹೇಗೆ ಬದುಕಲಿ ಮೇಡಂ? ನಾನಂತೂ ಅವನ ಬಳಿಗೆ ಹೋಗೋದಿಲ್ಲ. ಈ ಮಗು ಅವನದ್ದೇ. ನೋಡಿದರೆ ತಿಳಿಯುತ್ತದೆ. ಬೇಕಾದರೆ ಡಿ.ಎನ್.ಎ ಟೆಸ್ಟ್ ಮಾಡಿಸಲಿ, ಏನಾದರೂ ಮಾಡಿಸಲಿ. ಮಗು ಅವನದ್ದೇ. ಆದರೆ ಅವನಿಗೆ ಬೇಗ ಡೈವೋರ್‍ಸ್ ಸಿಗಬಾರದು. ಕೇಸು ಎಷ್ಟು ವರ್ಷ ಬೇಕಾದರೂ ನಡೆಯಲಿ, ನನ್ನ ತಂದೆ ಕೊಟ್ಟ ಹಣ ನಮಗೆ ಹಿಂದೆ ಸಿಗಬೇಕು. ಅವನಿಗೆ ಶಿಕ್ಷೆಯಾಗಬೇಕು. ಎಲ್ಲಾದರೂ ಅವನಿಗೆ ಬೇಗ ಡೈವೋರ್‍ಸು ಸಿಕ್ಕಿಬಿಟ್ಟರೆ ಇನ್ನೊಂದು ಮದುವೆಯಾಗಿ ನನ್ನನ್ನು ಹೊಸಕಿದಂತೆ ಅವಳನ್ನೂ ಹೊಸಕಿ ಹಾಕುತ್ತಾನೆ. ಹಾಗಾಗಲು ನಾನು ಬಿಡುವುದಿಲ್ಲ. ನನ್ನ ಮರ್‍ಯಾದೆ ಹೋದರೂ ಚಿಂತಿಲ್ಲ ಅವನಿಗೆ ಬುದ್ಧಿ ಕಲಿಸದೆ ನಾನು ಬಿಡುವುದಿಲ್ಲ. ನನ್ನನ್ನು ಗೋಳಾಡಿಸಿದ ಹತ್ತು ಪಟ್ಟು ಅವನು ಮಾನಸಿಕ ಹಿಂಸೆ ಅನುಭವಿಸಬೇಕು. ಅವನಿಗೆ ತನ್ನ ಮೇಲೆ ನಂಬುಗೆ ಇಲ್ಲ. ಅವನು ಮನುಷ್ಯನಲ್ಲ ಪ್ರಾಣಿ, ಪ್ರಾಣಿ ಜತೆ ಮನುಷ್ಯರು ಬದುಕುವುದು ಸಾಧ್ಯವೇ ಮೇಡಂ?

ಕಿರಣ್ಮಯಿ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿಸಿದ್ದಳು. ಮದುವೆಗೆ ತನ್ನ ತಂದೆ ಮಾಡಿದ ಖರ್‍ಚು, ಕೊಟ್ಟ ನಗದನ್ನು ವಾಪಸ್ಸು ಕೇಳಿದ್ದಲ್ಲದೆ ತನಗೆ ಕೊಟ್ಟ ಮಾನಸಿಕ ಹಿಂಸೆಗೆ ೨೫ ಲಕ್ಷ ಪರಿಹಾರ ಧನ ಕೇಳಿದ್ದಳು. ಎಲ್ಲ ಕೇಸುಗಳಂತೆ ಕೋರ್‍ಟಿನಲ್ಲಿ ಈ ಕೇಸ್ ಕೂಡಾ ಏಳು ವರುಷ ನಡೆದಿತ್ತು. ಏಳು ವರ್ಷದ ಮೇಲೆ ಸಿಕ್ಕಿದ ತೀರ್‍ಮಾನ ಅವಳ ಅಪೇಕ್ಷೆಯಂತೆಯೇ ಇತ್ತು. ಜಗದೀಶನಿಗೆ ಸರಿಯಾದ ಶಿಕ್ಷೆಯಾಗಿತ್ತು. ಅವನಿಗೆ ಯಾರೂ ಇರಲಿಲ್ಲ. ಹೆತ್ತವರು ಸತ್ತು ಹೋಗಿದ್ದರು. ಅವನೀಗ ಒಬ್ಬಂಟಿ. ಕಿರಣ್ಮಯಿಗೆ ಮಗನಿದ್ದಾನೆ. ಜಗದೀಶನ ಮನೆಮಾರಿಯಾದರೂ ಅವಳಿಗೆ ಸಲ್ಲುವ ಹಣ ಸಲ್ಲುತ್ತದೆ. ಅವನೇನಾದರೂ ಅವಳಿಗೆ ಬೇಸರವಿಲ್ಲ. ಕಿರಣ್ಮಯಿಗೆ ಆರ್ಥಿಕ ಸ್ವಾತಂತ್ರ್ಯವಿದ್ದುದರಿಂದ ಅವಳು ಬದುಕಲು ಕಷ್ಟವಿಲ್ಲ. ಅದಿಲ್ಲದವರು ಏನು ಮಾಡಬೇಕು? ಇಂಥಾ ಗಂಡನನ್ನು ಕಟ್ಟಿಕೊಂಡು ಒದ್ದಾಡಬೇಕು. ಕಿರಣ್ಮಯಿಗೆ ಹಾಗಾಗಲಿಲ್ಲ. ಅವಳಿಗೆ ವಿದ್ಯೆ ಇತ್ತು. ಕೆಲಸವಿತ್ತು. ಅವಳು ಕಳೆದ ಹತ್ತು ವರುಷ ಅವಳಲ್ಲಿ ಸಾಕಷ್ಟು ಧೈರ್ಯ ತುಂಬಿಸಿತ್ತು.

ಯೋಚನೆಗಳನ್ನು ಕೆಡವಿ ಕಿರಣ್ಮಯಿ ಮಗನ ಕೈಹಿಡಿದು ಕೋರ್ಟಿನಿಂದ ಹೊರಗೆ ಬಂದಿದ್ದಳು. ಏನೋ ಒಂದು ತೃಪ್ತಿ ಮನಸ್ಸನ್ನು ತುಂಬಿಕೊಂಡಂತೆ ಭಾಸವಾಗಿತ್ತು. ಇದು ತನ್ನದೊಬ್ಬಳ ಜಯವಲ್ಲ. ತನ್ನಂತೆ ನೋವು ಅನುಭವಿಸುವವರೆಲ್ಲರ ಜಯ ಎಂದೆನಿಸಿತ್ತು.

ಮಗನನ್ನು ಹಿಡಿದುಕೊಂಡಿದ್ದ ಅವಳ ಹಿಡಿತ ಗಟ್ಟಿಯಾದಾಗ, ಮಗ “ಅಮ್ಮ ಕೈ ನೋಯುತ್ತೆ ಸ್ವಲ್ಪ ಮೆಲ್ಲ ಹಿಡಿಯಿರಿ.”

ಹೌದು ಗಟ್ಟಿಯಾಗಿ ಹಿಡಿದರೆ ನೋವು ಸಹಜ. ಯಾವುದೇ ಹಿಡಿತ ಹಿಂಸೆಯಾಗಬಾರದು. ಹಿಡಿದಿದ್ದರೂ ಹಿಡಿಯದಂತಿರಬೇಕು. ಆಗ ನಮಗೂ ಜೀವನ ಚಕ್ರದೊಡನೆ ಉರುಳುವುದು ಸುಲಭವಾಗುತ್ತದೆ. ಈ ಯೋಚನೆಯಿಂದ ಕಿರಣ್ಮಯಿ ಮಗನ ತಲೆ ನೇವರಿಸಿ ದೃಢವಾದ ಹೆಜ್ಜೆ ಮುಂದಿಟ್ಟಿದ್ದಳು.

ಅವಳ ಮುಂದೆ ಜೀವನ ಹಲವಾರು ಮಾರ್ಗಗಳನ್ನು ತೋರಿಸುತ್ತಾ ವಿಶಾಲವಾಗಿ ತೆರೆದುಕೊಂಡಿತ್ತು.
*****
(೧೯೯೮)