ಒಬ್ಬ ರಾಜನನ್ನು ಆರಿಸಿಕೊಳ್ಳಬೇಕೆಂದು ಹಕ್ಕಿಗಳೆಲ್ಲವೂ ಸಭೆ ಸೇರಿದವು. ಗೂಬೆಯು ಅವರಿವರಿಗೆ ಲಂಚಕೂಟ್ಟು, “ನನ್ನನ್ನು ದೊರೆಯನ್ನು ಮಾಡಿರಿ” ಎಂದು ಹೇಳಿಕೊಂಡಿತು. ಲಂಚವನ್ನು ತೆಗಿದುಕೊಂಡಿದ್ದ ಹಕ್ಕಿಗಳೆಲ್ಲವೂ ನಮಗೆ “ಗೂಬೆಯೇ ಆರಸಾಗಬೇಕು” ಎಂದವು.
ಇದೆಲ್ಲಾ ನಡೆಯುವವರೆಗೂ ಕಾಗೆಯು ಒಂದು ಮೂಲೆಯಲ್ಲಿ ಕುಳಿತಿತ್ತು. “ಕೊಳಕನಾದ ಗೂಬೆಯು ದೊರೆಯಾಗುವುದೆಂದರೇನು?” ಎಂದು ಎಲ್ಲರಿಗೂ ಅಸಹ್ಯವಾಗಿತ್ತು. ಆದರೂ ಮಾತನಾಡದೆ ಎಲ್ಲರೂ ಸುಮ್ಮನಿದ್ದರು. ಆಗ ಕಾಗೆಯು ಎದ್ದು ನಿಂತುಕೊಂಡು “ಸ್ವಾಮಿ! ಕೊಂಚ ತಡೆಯಿರಿ. ಗೂಬೆಯನ್ನು ಎಲ್ಲರೂ ಕೊಂಚ ಕಣ್ಣಿಟ್ಟು ನೋಡಿರಿ. ಜಗತ್ತಿನಲ್ಲಿ ಇಂತಹ ಕೊಳಕು ಹಕ್ಕಿಯು ಇನ್ನು ಉಂಟೆ? ಮುಖವನ್ನು ತೊಳೆದು ಎಷ್ಟು ದಿವಸವಾಯಿತೋ? ಮೈಯ್ಯನ್ನು ತೊಳೆವುದಂತೂ ಉಂಟೋ ಇಲ್ಲವೇ ಇಲ್ಲವೋ? ಆ ಕಣ್ಣುಗಳನ್ನು ನೋಡಿ. ಜಿಬರು ಗುಡ್ಡೆ ಗುಡ್ಡೆಯಾಗಿದೆ. ಮೂಗು ನೋಡಿ. ಸಿಂಬಳವು ಹರಿಯುತ್ತಿದೆ. ಇಂತಹ ಶೊಬಚನನ್ನು ಅರಸಾಗಿ ಮಾಡಿಕೊಂಡರೆ ಎಲ್ಲರೂ ನಗುವರು. ಅತ್ತ ನೋಡಿ. ಶುಚಿವಂತನಾದ ಗರುಡನು ಕುಳಿತಿರುವನು. ಯಾವಾಗ ನೋಡಿದರೂ ಮಡಿಯಾಗಿಯೇ ಇರುವನು. ಆತನನ್ನು ನೋಡಿದರೆ ಎಷ್ಟು ಸಂತೋಷವಾಗುವುದು! ಆತನ ಶುಚಿಯನ್ನು ನೋಡಿಯೇ ಭಗವಂತನಾದ ವಿಷ್ಣುವೂ ಆತನನ್ನು ಮೆಚ್ಚಿಕೊಂಡಿರುವನು. ಆತನನ್ನೇ ದೊರೆಯನ್ನು ಮಾಡಬೇಕು. ಈ ಕೊಳಕನನ್ನು ಹೊರಕ್ಕೆ ನೂಕಬೇಕು” ಎಂದಿತು. ಉಳಿದ ಹಕ್ಕಿಗಳು “ಹೌದು. ಗೂಬೆಯನ್ನು ನೂಕಿ. ಗರುಡನಿಗೇ ಪಟ್ಟಿಕಟ್ಟರಿ” ಎಂದವು. ಎಲ್ಲರೂ ಸೇರಿ ಹಾಗೆಯೇ ಮಾಡಿದರು. ಅರಸುತನವು ಗೂಬೆಗೆ ತಪ್ಪಿ ಗರುಡನಿಗೇ ಆಯಿತು.
“ತನ್ನ ಕೊಳಕುತನದಿಂದ ದೊರೆತನವನ್ನು ತಪ್ಪಿಸಿಕೂಂಡನು” ಎಂದು ಎಲ್ಲರೂ ಹಾಸ್ಯ ಮಾಡುವರು ಎಂದೋ ಏನೋ, ಗೂಬೆಯು ಈಗಲೂ ಹಗಲಿನಲ್ಲಿ ಹೊರಗೆ ಬರುವುದಿಲ್ಲ.
*****