ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ
ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ
ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ
ಆದ ಸಂತೋಷ ಅಷ್ಟಿಷ್ಟಲ್ಲ
ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತೆ
ಕಿವಿಗಳು ಕೇಳಿಯೇ ಪಾವನವಾದವು
ಕಣ್ಣುಗಳು ನೋಡಿಯೇ ಬಿಡಲು ಹಟಕ್ಕೆ ಬಿದ್ದವು
ದೇಶಭಕ್ತರೆಲ್ಲ ಪೊರಕೆ ಹಿಡಿದರು
ಫಳಫಳ ಹೊಳೆವ ದೊಡ್ಡದೊಡ್ಡ ಗಾಜು ಕಿಟಕಿಗಳ
ಆಫೀಸುಗಳ ತಾರುತಂತಿ ತಗಡು ಬೋರ್‍ಡು
ನಟ್ ಬೋಲ್ಟ್‌ಗಳ ಸಾಪ್ಟವೇರ್ ಕಸವೆಲ್ಲ
ಅವರವರ ಗೇಟ್ ಮುಂದೆ ಬಿದ್ದಿವೆ-
ಸ್ವಚ್ಛ ಭಾರತದ ಪೊರಕೆಯವರನು ನೋಡಿ
ಧೂಳ ಜಾಡಿಸಿ ಕಾರಿನ ಕಿಟಕಿ ಏರಿಸುತ
ಹೊರಟೇಬಿಡುವರು ಆರೆಂಟು ಅಂಕಿಯ
ಹಣಪಡೆವ ಜಾಣರು ಮೋದಿಜಿ!
ಪುಣ್ಯಕ್ಷೇತ್ರಗಳ ಒಳಗೆ ಕಣ್ಬಿಟ್ಟ ದೇವನೆದುರು
ಧೂಪ ದೀಪ ಹೂಹಾರ ಹಣ್ಣು ಪ್ರಸಾದ
ಮನಸಿಗೆ ತೃಪ್ತಿ ದೇವರ ದರುಶನ ಪಡೆದ ಭಾಗ್ಯ
ಈಚೆಗೆ ಬಂದದ್ದೆ ಆಚೀಚೆ ಕಣ್ಣಾಡಿಸಿದ್ದೇ ಕ್ಷಣ
ಎಲ್ಲೆಲ್ಲೂ ಕೊಳೆತ ಎಲೆಹೂವು ಹಣ್ಣುಗಳ ಚಿಲ್ಲಾಪಿಲ್ಲಿ
ದನಗಳ ಸಗಣಿ ಗಂಜಲಿನ ಗಬ್ಬುವಾಸನೆ ಪಿಚಿಪಿಚಿ.
ಸ್ವಚ್ಛ ಭಾರತ ಹುರುಪಿನ ಪೊರಕೆಯವರು
ಮುಂದಾದರೆ ಅವರ ಜಾತಿಮತ ಬಣ್ಣ ಕೆದಕಿ
ನಾಲ್ಕೈದು ಬೈಗುಳ ಬಯ್ದು
ಮೂಗು ಮುಚ್ಚಿ ಕಾರೇರಿ ಹೋರಟೇಬಿಡುತ್ತಾರೆ ಮೋದಿಜಿ!!
ಶಾಲೆ ಕಾಲೇಜು ಆಫೀಸುಗಳೊಳಗೂ
ಅಧಿಕಾರಿಗಳೆಂಬುವವರ ಕತ್ತಲೆಕೋಣೆಗಳೊಳಗೂ
ಜೀವ ಉಳಿಸುವ ಜೀವಾಲಯದೊಳಗೂ
ಭ್ರಷ್ಟರಾಜಕೀಯ ಅತ್ಯಾಚಾರಗಳ ದುರಂತ ಸರಮಾಲೆ
ದೇಶದ ರೈಲು ಹಳಿತಪ್ಪಿ ಎಲ್ಲೆಲ್ಲೊ ಸುತ್ತುತ್ತಿದೆ
ಹಳಿಗುಂಟ ಹಾದಿಗುಂಟ ಕಸವೋ ಕಸ ಮೋದಿಜಿ!
ಎಲುಬಿಲ್ಲದ ನಾಲಿಗೆಗಳ ಶಬ್ದಮಾಲಿನ್ಯ ಭ್ರಷ್ಟರಮಾಲಿನ್ಯ
ಅತ್ಯಾಚಾರಮಾಲಿನ್ಯ ಜಾತಿಮಾಲಿನ್ಯ ಗೂಡಿಸಿ ಗುಂಡಿಗೆ ಹಾಕಲು
ನಿಮ್ಮ ಪೊರಕೆಗಳು ಬೇಕಾಗಿವೆ ಮೋದಿಜಿ.
ಎಲ್ಲೆಲ್ಲೂ ಎಲ್ಲದಕ್ಕೂ ಬರೀ ವಾದ ಪ್ರತಿವಾದ
ಶಾಂತಿ ನೆಮ್ಮದಿ ಹಾಳುಗೆಡವಿ
ತಾವೂ ಹಾಳಾಗುವ ದ್ವಂದಿಗಳ ಮುಖವಾಡ
ಕಳಚುವ ವಾಸ್ತವದ ಅರಿವು ಗ್ರಹಿಸುವ
ಶುದ್ಧ ಸ್ವಚ್ಛ ಕಳಕಳಿಯ ಬೀಜಗಳು ಬಿತ್ತುವ
ಪೊರಕೆಯಂಥ ಮಾದರಿಗಳು ಬೇಕಾಗಿವೆ ಮೋದಿಜಿ
ದೇಶವೆಂಬ ಮನಸು; ಮನಸೆಂಬ ದೇಶ
ನಮ್ಮೊಳಗೆ ಅನುಗಾಲವೂ ಉಳಿಯಲು
ಮಾದರಿಯ ಪೊರಕೆಗಳು ಬೇಕೆ ಬೇಕು ಮೋದಿಜಿ
ಮಾದರಿಯ ಪೊರಕೆಗಳು ಬೇಕೇ ಬೇಕು.
*****