ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ,
ತುಟಿ ಬಿಗಿಹಿಡಿದ ನನ್ನ ತಾಳ್ಮೆಯ ತಿರಸ್ಕರಿಸಿ
ಸಿಡಿಸದಿರು, ಇಲ್ಲವೇ ವ್ಯಥೆ ನನ್ನ ನಾಲಿಗೆಗೆ
ನುಡಿಯ ಕೊಡುವುದು; ಅವೋ ನಿನ್ನ ಕರುಣೆಯ ಬಯಸಿ
ನಾ ಪಡುವ ಯಾತನೆಯನೆಲ್ಲ ಹೊರಹಾಕುವುವು.
ನನ್ನ ಈ ತಿಳಿವಳಿಕೆ ಮಾತನ್ನಷ್ಟು ಕೇಳು,
ಪ್ರೀತಿಯಿರದಿದ್ದರೂ ಇದೆಯೆನ್ನು; ಸಾವು
ಹೊಸಿಲಲ್ಲೆ ಇದ್ದರೂ ಗುಣವಾಗುವುದು ತಾಳು
ಎನುವ ವೈದ್ಯನ ಹಾಗೆ, ನಿರಾಶೆಗೊಂಡರೆ ನಾನು
ಹುಚ್ಚನಾಗುವೆ, ಹುಚ್ಚ ನಿಂದಿಸುವ ನಿನ್ನನ್ನು,
ಲೋಕ ತಿರುಚುವುದು ಅಪಾರ್‍ಥಕ್ಕೆ ಮಾತನ್ನು,
ಹುಚ್ಚು ಕಿವಿ ನಂಬುವುವು ಹುಚ್ಚು ನಿಂದಕರನ್ನು.
ಚಾಡಿಮಾತಿಗೆ ನಿನ್ನ ಕಿವಿ ತೆರೆಯದೆಯೆ ಇರಲಿ,
ಎಲ್ಲೇ ಹೋಗಲಿ ಹೃದಯ, ಕಣ್ಣು ನೆಟ್ಟಗೆ ಇರಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 140
Be wise as thou art cruel, do not press