ಯಾಕೆ ಹುಡುಕಬೇಕು ಹೇಳು ಗೆಳತಿ,
ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ
ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ,
ಚುಕ್ಕಿಯಾಗಿ ಬಾನಲ್ಲಿ ಲೀನವಾದವರ?
ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ
ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ
ಈ ಕಲಿಯುಗದಲಿ?
ಪತಿಯ ಶಾಪಕ್ಕೊಳಗಾಗಿ
ರಾಮನ ಕಾಲಸ್ಪರ್ಶಕೆ ಕಾದು ಕಲ್ಲಾಗಿ ಮಲಗುವ
ಅಹಲ್ಯೆಯರು ನಾವಲ್ಲ;
ಕೈ ಹಿಡಿದವ ಶಂಕಿಸಿದನೆಂದು
ಕಾಡಿಗೆ ಹೋಗುವ ಬೆಂಕಿಗೆ ಹಾರುವ
ಸೀತೆಯರು ನಾವಲ್ಲ;
ಪತಿಯೇ ಪರದೈವವೆಂದು ತನ್ನತನವ ಮರೆತು
ಅವನ ನೆರಳಾಗಿ ಬಾಳುವ
ಅಳಿದ ಮೇಲೆ ನಕ್ಷತ್ರವಾಗಿ ಬಾನಲ್ಲಿ ಮೆರೆಯುವ
ಋಷಿ ಪತ್ನಿಯರೂ ನಾವಲ್ಲ;
ಕುರುಡು ಪತಿಗೆ ಒಡನಾಡಿಯೆಂದು
ಕೃತಕ ಕುರುಡುತನಕ್ಕೊಳಗಾಗಿ ನೂರು ಮಕ್ಕಳ ಹಡೆದು
ಅವರ ದುರ್ಯೋಧನ ದುಶ್ಯಾಸನರಾಗ ಬಿಡುವ
ಗಾಂಧಾರಿಯರು ನಾವಲ್ಲ;
ಕೈಹಿಡಿದವನಿಂದ ಸಂತಾನವಿಲ್ಲವೆಂದು
ದೇವತೆಗಳ ಮೊರೆಹೋಗಿ ಪುತ್ರೋತ್ಸವ ನಡೆಸುವ
ಕುಂತಿ ಮಾದ್ರಿಯರೂ ನಾವಲ್ಲ;
ಹಂಚಿ ತಿನಬೇಕೆಂಬ ತಾಯಿಮಾತ ದಿಟ ಮಾಡ ಹೊರಟು
ಪಂಚ ಪಾಂಡವರ ಸತಿಯಾಗಿ
ಹೃದಯದೊಳಗಿನ ಪ್ರೇಮಗೀತೆಗೆ ತಿಲಾಂಜಲಿ ಇತ್ತ
ಪಾಂಚಾಲಿಯರೂ ನಾವಲ್ಲ.
ಅವರೆಲ್ಲ ವಾಲ್ಮೀಕಿ ಕುಮಾರವ್ಯಾಸರ
ಲೇಖನಿಯಿಂದ ಹುಟ್ಟಿ ಬಂದವರು, ಕಲ್ಪನೆಯ ಕೂಸುಗಳು
ಅಲ್ಲಲ್ಲಿ ಕಥೆಯಲ್ಲಿ ಸೇರಿ ಹೋದವರು!
ಮತ್ತೇಕೆ ಹುಡುಕಬೇಕು ಹೇಳು ಗೆಳತಿ
ನಮ್ಮಾದರ್ಶಗಳ ಅವರಲ್ಲಿ
ಅವರಾತ್ಮ ಅಂತರಾಳದಲಿ ಅಡಗಿದ್ದ
ಅಂತಃಶಕ್ತಿಯ ಮರೆತು ಕುಳಿತವರಲ್ಲಿ?
*****