ಆಟವಾಡಿ ಸಾಕಾಯ್ತೆ?
ಸರಿ
ಸರಿಸಿ ಬಿಡು ಪಕ್ಕಕ್ಕೆ
ಹರಿದವು ಮುರಿದವು
ಬಣ್ಣ ಮಾಸಿದವು
ನುಡಿದ ನನ್ನಿಯ ಮಾತು
ಕುಣಿದು ಹಾಡಿದ ಹಾಡು
ಹಂಚಿಕೊಂಡ ಹಾಲುಗೆನ್ನೆಯನುಭವ
ಕಟ್ಟಿಕೊಂಡ ಹಸಿ ಕನಸು
ಇರಲಿ ಮಾಸದಂತೆ
ಎಂದಾದರೊಮ್ಮೆ ಎತ್ತಿಕೊಂಡಾಗ
ಮಗುವಿನಂತೆ
ಮೆತ್ತಿಕೊಳ್ಳಲಿ ನೆನಪಿನ ಹುಡಿ
ಗಂಧದಂತೆ
ಹಠಮಾಡಿ
ಬೇಡಿ ತಂದಿದ್ದ
ದೂರದೂರಿನ ಜಾತ್ರೆಯ
ಬಣ್ಣದ ಬೊಂಬೆಗಳು
ಕೃಷ್ಣನ ಪಿಳ್ಳಂಗೋವಿ
ಶಿವನ ಬುಡುಬುಡುಕೆ
ನನ್ನಪ್ಪ ಓಡಿಸಿದ ಬಂಡಿ
ನಿನ್ನವ್ವನ ಅಡುಗೆ ಸಾಮಾನು
ಒಂದು ಮುರಿದರೆ ಮತ್ತೊಂದು
ಒಂದು ಕಳೆದರೆ ಇನ್ನೊಂದು
ಕಣ್ಣಿಗೆ ಕಂಡದ್ದು
ಮನಸಿಗೆ ಬಂದದ್ದು
ಎಲ್ಲಿದ್ದರೂ ಹೇಗಿದ್ದರೂ
ಬಿಡದೇ ತಂದದ್ದು
ಬಿದ್ದಿರಲಿ ಬಿಡು
ಮೂಲೆ ಹಿಡಿದ ಮುದುಕನಂತೆ
ನಿನ್ನ ಮಗನೋ ಮಗಳೋ
ನಾಳೆ
ಕಳೆದು ಹೋದಾಗ
ಶಾಲೆಯಲಿ
ಮುಳುಗಿ ಹೋದಾಗ
ಕಂಪ್ಯೂಟರಿನಲಿ
ಯಾರೂ ಸಿಗದಿರುವಾಗ
ಆಡಲು ಓಣಿಯಲಿ
ಕೊಡಲು ಬಂದೀತು ಧೂಳು ಕೊಡವಿ
ನೆನಪುಗಳ ಮೈದಡವಿ
ಮಗು
ಬಿಟ್ಟ ಕಣ್ಣು ಬಿಟ್ಟಂತೆ
ನೋಡಿ ನಕ್ಕೀತು ನಿನ್ನಂತೆ
ಇಡು
ಪಕ್ಕಕ್ಕೆ ಸರಿಸಿ
ಮುಗಿಯಲಾರದ ಆಟಕ್ಕೆ
ನಾಳೆಗೂ ಇರಿಸಿ
*****