ಸುತ್ತ ಹಬ್ಬುತಿದೆ ತುಳಸೀ ಪರಿಮಳ
ಸಣ್ಣಗೆ ಗೆಜ್ಜೆ ದನಿ,
ಕೋಗಿಲೆ ಉಲಿಯೋ ಕೊಳಲೊ ಕಾಣೆ
ಮೋಹಕ ಇನಿಯ ದನಿ.
ಹಗಲಿನ ಧಗೆಯಲಿ ನೀಲಿಯ ಮುಗಿಲು
ಇಣುಕಿ ಹಾಯುವಂತೆ
ಯಾರದೊ ನೆರಳೋ ಹೊಂಚಿ ಆಡುತಿದೆ
ಗುರುತೇ ಕೊಡದಂತೆ.
ಇಲ್ಲೇ ಗಿಡಮರ ಪೊದೆಗಳ ಮರೆಗೆ
ತಿಳಿಯದ ನಡೆಯಲ್ಲಿ
ಯಾರೋ ಸುಳಿವರು ಸದ್ದೇ ಮಾಡದು
ರಕ್ಷಿಸಿ ಮರೆಯಲ್ಲಿ.
ಪರಿಮಳ ಗೆಜ್ಜೆ ಕೋಗಿಲೆ ದನಿಯ
ಸುಳಿಸುವವರು ಯಾರು?
ಕಾಯುವ ಗೋಪಿಗೆ ಕಾಣದ ಕೃಷ್ಣ
ಕೊಡುವ ಸನ್ನೆ ನೂರು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.