ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತಾನೆ ಗೆಲುವಿನ ನಗೆ ಬೀರಿತ್ತು. ಮುಂಗಾರಿನ ಮೋಡಗಳನ್ನು ಸರಿಸಿ ಸೂರ್ಯ ಇಣುಕಿದ್ದ. ಆಕಾರ ಭೂಮಿ ಉಲ್ಲಾಸದಿಂದ ಸಂಭ್ರಮಿಸುತ್ತಿದ್ದ ಸಮಯ. ಭೂಮಿ ಮಗ್ಗಲು ಬದಲಾಯಿಸಿದಂತೆ ಹಸಿರು ಹೊದ್ದು ಕಂಗೊಳಿಸುತ್ತಿತ್ತು.
ಟ್ರೇನ್ ಮಡಗಾಂವ್ ದಿಂದ ಮಂಗಳೂರಿನತ್ತ ಹೊರಟಿತು. ಈ ಮಾರ್ಗದಲ್ಲಿ ದಿನವೂ ದಣಿಯದೇ ಓಡುವ ಪ್ಯಾಸೆಂಜರ್ ನಲ್ಲಿ ಪಾಯಲ್, ಬಿಂದು ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಸಂಚರಿಸುವ ಪ್ರಯಾಣಿಕರು. ಪಿಂಪ್ ಗಳ ದೂರವಾಣಿ ಕರೆ ಆಧರಿಸಿ ಅವರು ಸೂಚಿಸಿದ ಘರ್ ವಾಲಿ ಮನೆಗೋ ಅಥವಾ ಹೋಟೆಲ್ ಗೋ ತೆರಳಿ ಅಲ್ಲಿ ನೆಲೆ ನಿಂತು, ದೇಹ ತೃಷೆ ತೀರಿಸಿ, ಹಣ ಪಡೆದು ದಿನದೂಡುವುದು ಅವರ ಬದುಕಾಗಿತ್ತು. ಮನಸ್ಸಿಲ್ಲದ ಮನಸ್ಸಿಂದ ದೇಹ ವ್ಯಾಪಾರದ ದಂಧೆಗೆ ಇಳಿದ ಪಾಯಲೆ ಗೆ ಬಿಂದು ಪರಿಚಯವಾದದ್ದು ದಾಹತಣಿಸುವ ಅನುರಾಧ ಆಂಟಿ ಮನೆಯಲ್ಲಿ. ಒಬ್ಬರಿಗೊಬ್ಬರಿಗೆ ಆಳ ಪರಿಚಯ ಇಟ್ಟುಕೊಳ್ಳದ ಈ ದಂಧೆಯಲ್ಲಿ ಮಾತು ಕಡಿಮೆ. ಯಾವ ಭಾವನಾತ್ಮಕ ಸಂಬಂಧಗಳ ಬೆಸುಗೆಗೆ ಇಲ್ಲಿ ಸ್ಥಳಾವಾಕಾಶವೇ ಇಲ್ಲ. ಎಲ್ಲವೂ ಇಲ್ಲಿ ಅವಸರ. ಪೋಲೀಸರ ಮರ್ಜಿ ಕಾದು, ಅಕ್ಕಪಕ್ಕದವರ ಕಣ್ಣು ತಪ್ಪಿಸಿ ನಡೆದುಕೊಂಡು ಬಂದಿರುವ ವರ್ತುಲಕ್ಕೆ ಪಾಯಲ್ ಬಂದಾಗಿತ್ತು. ಕಿತ್ತು ತಿನ್ನುವ ಬಡತನ ಮೃತ್ಯುಕೂಪಕ್ಕೆ ತಳ್ಳಿತ್ತು.
ಆರಂಭದಲ್ಲಿ ಎಂಥಾ ನೀಚ ಜೀವನ ಅನ್ನಿಸಿದ್ದ ಮೈಮಾರಾಟ, ಕೊನೆ ಕೊನೆಗೆ ಬದುಕನ್ನು ನಡೆಸಲು ಇದು ಒಂದು ಮಾರ್ಗ ಎಂಬಷ್ಟರಮಟ್ಟಿಗೆ ಪಾಯಲ್ ಮನಸ್ಥಿತಿ ಬದಲಾಗಿ ಹೋಗಿತ್ತು. ಟ್ರೇನ್ ಕಿಡಕಿ ಪಕ್ಕವೇ ಕುಳಿತಿದ್ದ ಪಾಯಲ್ ಭೂತಕ್ಕೆ ಜಾರಿದ್ದಳು. ಜೊತೆಯಿದ್ದ ಬಿಂದು ಕುಳಿತಲ್ಲೇ ಸಣ್ಣ ನಿದ್ದೆ ಯನ್ನ ಹೊಕ್ಕಿದ್ದಳು. ಘರ್ ವಾಲಿ ಅನುರಾಧ ಆಂಟಿ ಹೇಳುತ್ತಿದ್ದ ಮಾತುಗಳು ಕಿವಿಯಲ್ಲಿ ಗುಂಯ್ ಗುಡುತ್ತಿದ್ದವು. ’ಗಂಡಸರಿಗೆ ದೇಹದ ಹಸಿವು ಜಾಸ್ತಿ. ಅವರ ಜೊತೆ ಹೀಗಿರ್ಬೇಕು…… ಮಾತಿಗೆಳೆಯ ಬೇಕು. ಮೋಹದ ನಡಿಗೆ ಯಿಂದ ಅವರೆದರು ಓಡಾಡಬೇಕು… ರಮಿಸಬೇಕು…. ಕ್ಷಣಹೊತ್ತಿನಲ್ಲಿ ಅಂಗೈಗೆ ಸ್ವರ್ಗ ಇಳಿಸಿದಂತೆ ನಟಿಸಬೇಕು.’ ಎಂಬ ಪಾಠ ನಿತ್ಯ ನಡೆಯುತ್ತಿತ್ತು. ಆಂಟಿ ಫ಼ೀಲ್ಡ್ ಗೆ ಬಂದ ಹೊಸ ಹುಡುಗಿಯರನ್ನು ದಂಧೆಗೆ ಅಣಿಗೊಳಿಸುತ್ತಿದ್ದ ಕಲೆ ಅದ್ಭುತವಾಗಿತ್ತು. ಮಾತಿನ ಜಾಲದ ಮನೆಯಲ್ಲಿ ಪುರುಷರ ಹಸಿವು ತೀರಿಸುವ, ಆ ಮೂಲಕ ಹಣ ಮಾಡಿ ದಿನ ದೂಡುತ್ತಿದ್ದ ಅನುರಾಧ ಒಂದು ಕಾಲಕ್ಕೆ ಪಡ್ಡೆ ಹೈಕಳ ಹಿಂಡನ್ನೇ ತನ್ನ ಮುಷ್ಟಿಯಲ್ಲಿ ಕುಣಿಸಿದವಳು. ಹಾಗಾಂತ ಅನೇಕ ಸಲ ತನ್ನ ಯೌವ್ವನದ ಸುಗ್ಗಿ ಕಥೆಯನ್ನ ದಂಧೆ ಬಂದ ಹೊಸ ಹುಡುಗಿಯರ ಮುಂದೆ, ಸೆಕ್ಸನ್ನು ಫ್ಯಾಶನ್ ಆಗಿ ಸ್ವೀಕರಿಸಿದವರ ಪಿಸುಮಾತಲ್ಲಿ, ದೇಹದೊಡನೆ ಹೆಗ್ಗಿಲ್ಲದೇ ಮುಸುಗುಡುವ ಗಂಡಸರ ಜೊತೆ ಹೇಳಿಕೊಂಡವಳಲ್ಲ.
ಬಯಲು ಸೀಮೆಯಿಂದ ಬಂದವನನ್ನು ಹೆಸರಿಗೆ ಗಂಡ ಅಂಥ ಕಟ್ಟಿಕೊಂಡಿದ್ದ ಆಕೆ, ಮದ್ವೆಯಾಗಿ ಹತ್ತು ಬೇಸಿಗೆಗಳ ನಂತರ ಊರಿಂದಲೇ ಓಡಿಸಿದ್ದಳು. ಅದು ಹಲವು ವಸಂತಗಳ ಹಿಂದಿನ ಮಾತು. ಬಯಲಸೀಮೆ ಯಿಂದ ಮನೆಕಟ್ಟಡದ ಕೂಲಿ ಕೆಲ್ಸಕ್ಕೆ ಬಂದಿದ್ದ ಜಗ್ಗು ಯಾನೆ ಜಗನ್ನಾಥ ಮಡಗಾಂವ್ ದಲ್ಲಿನ ಗಗನ ಚುಂಬಿ ಕಟ್ಟಡ ನಿರ್ಮಾಣ ಕಾರ್ಮಿಕರ ಗುಂಪಲ್ಲಿ ಒಬ್ಬನಾಗಿದ್ದ. ಹೀಗೊಂದು ದಿನ ಮೆಸ್ತ್ರಿ ಫ಼ರ್ನಾಂಡಿಸ್ ಲಿಂಕ್ ಮೇಲೆ ಅನುರಾಧಳ ಪರಿಚಯವಾಗಿ, ಆಕೆಯಲ್ಲಿ ಸೆರೆಯಾಗಿದ್ದ. ಮದ್ವೆ ಮಾಡಲು ಗಂಡೇ ಸಿಗದಿದ್ದ ಅನುರಾಧಳನ್ನು ಜಗನ್ನಾಥ್ ಗೆ ಕಟ್ಟಿ ಕೈತೊಳೆದುಕೊಂಡು, ಕೆಲದಿನಗಳಲ್ಲೇ ಕಣ್ಮುಚ್ಚಿದ್ದ ಹಮ್ಮಣ್ಣ. ಫ಼ರ್ನಾಂಡೀಸ್ ಒಂದು ಕಾಲಕ್ಕೆ ಕಂಟ್ರಕ್ಟ್ ಕೆಲಸ ಮಾಡುತ್ತಿದ್ದ ಹಮ್ಮಣ್ಣನ ಕೈಕೆಳಗೆ ಕೆಲಸ ಮಾಡಿದವ. ಕಾಂಟ್ರಕ್ಟ್ ಒಂದರಲ್ಲಿ ನಷ್ಟ ಅನುಭವಿಸಿ ಹಣ್ಣಾಗಿದ್ದ ಹಮ್ಮಣ್ಣ ಎಲ್ಲಾ ಬಿಟ್ಟು ಬಯಲಾಗಿ ಕುಳಿತಾಗ, ಮಡಗಾಂವ್ ನತ್ತ ತೆರಳಿ ಮೇಸ್ತ್ರಿಯಾಗಿದ್ದ ಫ಼ರ್ನಾಂಡೀಸ್.
ಅನು ಹರೆಯಕ್ಕೆ ಕಾಲಿಟ್ಟಾಗ ಆಕೆಯ ಹಿಂದೆ ಹದವಾದ ಯುವಪಡೆಯಿತ್ತು. ಕೈಯಲ್ಲಿ ಹಣವಿದ್ದ ಹೈಕಳು ಹಲವು ಸುತ್ತು ಸುತ್ತಿಯಾಗಿತ್ತು. ಪಿಯು ಮುಗಿಸಲಾಗದ ಅನು ದಿನಕಳೆಯಲು ಎಸ್ ಟಿಡಿ ಬೂತ್, ಝೆರಾಕ್ಸ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ತಿಂಗಳೆರಡು ತಿಂಗಳಿಗೆ ಲೋಕೇಶನ್ ಬದಲಿಸುತ್ತಲೇ ಇದ್ದಳು. ಫ಼ರ್ನಿಚರ್ ಅಂಗಡಿಯಲ್ಲಿ ಲೆಕ್ಕಬರೆಯಲು, ಬಂದ ಗಿರಾಕಿಗಳಿಗೆ ಸೋಫ಼ಾಗಳ ಸ್ಪೆಶಾಲಿಟಿ ಬಗ್ಗೆ ಹೇಳುವ ಕೆಲಸದಲ್ಲಿದ್ದ ಅನುರಾಧ, ಮಧ್ಯಾಹ್ನ ಅಂಗಡಿ ಮಾಲಿಕ ಊಟಕ್ಕೆ ತೆರಳಿದಾಗ ತನ್ನ ಎದುರಿನ ಕಟ್ಟಡದಲ್ಲಿ ಇಂಟರ್ನೆಟ್ ಸೆಂಟರ್ ನಡೆಸುತ್ತಿದ್ದ ವೇಣು ಎಂಬ ಯುವಕನಿಗೆ ಗಂಟು ಬಿದ್ದಳು, ಮಧ್ಯಾಹ್ನ ವಾಗುತ್ತಿದ್ದಂತೆ ವೇಣು- ಅನು ಪ್ರಣಯ ಮೀಟಿಂಗ್ ಪಾಯಿಂಟ್ ಇಂಟರ್ ನೆಟ್ ನಲ್ಲಿ ಶುರುವಿಟ್ಟುಕೊಳ್ಳತ್ತಿತ್ತು. ಇಂಟರ್ ನೆಟ್ ನಲ್ಲಿ ನ್ಯೂಡ್ ಚಿತ್ರಗಳನ್ನು ತೋರಿಸುತ್ತಿದ್ದ ವೇಣು ಚಾಲಾಕಿ ಹುಡುಗ. ಫ಼ರ್ನೆಚರ್ ಅಂಗಡಿಯಲ್ಲಿ ತಿಂಗಳೂ ದುಡಿದ್ರೂ ಸಿಗೋದು ಎರಡು ಸಾವಿರ. ಪ್ರತಿ ರವಿವಾರ ನಂಜೊತೆ ಬಾ, ಎರಡು ಸಾವಿರ ಕೊಡ್ತೇನೆ ಎಂದು ಪುಸಲಾಯಿಸತೊಡಗಿದೆ. ಇಂಥ ಪ್ರಯತ್ನದಲ್ಲಿ ವೇಣು ಒಮ್ಮೆ ಯಶಸ್ಸು ಕಂಡ. ಇದು ಹತ್ತಾರು ವಾರಗಳು ನಡೆಯುತ್ತಿದ್ದಂತೆ ಫ಼ರ್ನಿಚರ್ಸ ಅಂಗಡಿ ಮಾಲಿಕ ಅನುಳನ್ನು ಕೆಲ್ಸ ದಿಂದ ಕಿತ್ತು ಬಿಸಾಡಿದ್ದ. ಆ ಕ್ಷಣದಿಂದ ಮೀಟಿಂಗ್ ಪಾಯಿಂಟ್ ನ ಪರಮನೆಂಟ್ ಗೆಳತಿಯಾದ ಆಕೆ, ಅಲ್ಲಿ ಬೆಳೆದ ಲಿಂಕ್ ಗಳಿಂದ ತಪ್ಪಿಸಿಕೊಳ್ಳಲಾಗದ ಜಾಲದಲ್ಲಿ ಸಿಕ್ಕಿದ್ದಳು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ, ಮೆಟ್ರಿಕ್ ಆಧಾರದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅನುರಾಧಳನ್ನು ಪಿಂಪ್ ರಂಗಣ್ಣ ಅಧಿಕಾರಿಗಳಿಗೆ ತಲೆ ಹಿಡಿದು ದುಡ್ಡು ಮಾಡಿಕೊಂಡಿದ್ದ. ಮುಂದೆ ಹಮ್ಮಣ್ಣ ಹಾಗೂ ಹೀಗೂ ಫ಼ರ್ನಾಂಡೀಸ್ ನ ಅಸಿಸ್ಟೆಂಟ್ ಜಗನ್ನಾಥಗೆ ಗಂಟು ಹಾಕಿದಾಗ, ಒಂದು ನೆಲೆಗೆ ಬಂದಿದ್ದ ಅನುರಾಧ ಒಂದು ಕೂಸು ಹೆತ್ತು ಸಾಕಿದ್ದಳು. ದುಡಿಯುತ್ತಿದ್ದ ಜಗನ್ನಾಥನಿಗೂ, ಅನುರಾಧಳಿಗೂ ಹೆಚ್ಚು ಕೂಡಿ ಬರಲಿಲ್ಲ. ಅಂತೂ ಹತ್ತು ಬೇಸಿಗೆ ಕಳೆಯುವ ವೇಳೆಗೆ ಅವ್ರ ಹಗರಣ ಹಲವು ಸಲ ಪೊಲೀಸ್ ಠಾಣೆ ಹತ್ತಿಯಾಗಿತ್ತು. ಈ ವೇಳೆಗಾಗಲೇ ಪೊಲೀಸ್ ನೆರವು ಪಡೆವಲ್ಲಿ ಸಿದ್ಧಹಸ್ತಳಾಗಿದ್ದ ಅನುರಾಧ ದಂಧೆಗೆ ಅಡ್ಡವಾಗಿದ್ದ ಗಂಡ ಎನ್ನುವ ತಕರಾರು ಪ್ರಾಣಿಯನ್ನ ಮನೆಯಿಂದ ಓಡಿಸಲು ಹವಣಿಸಿದ್ದಳು. ಕಿರುಕುಳದ ಆರೋಪದ ಮೇಲೆ ಪೊಲೀಸರು ಜಗ್ಗುನನ್ನು ಬಂಧಿಸಿ, ಹದಿನೈದು ದಿನ ಕೃಷ್ಣಜನ್ಮ ಸ್ಥಾನದಲ್ಲಿಟ್ಟಿದ್ದು ಆಯ್ತು. ಹೊರ ಬಂದವನೆ ಒಂದು ದಿನ ಜಗನ್ನಾಥ ಊರಿಂದ ಕಾಲ್ಕಿತ್ತ.
***
ನಗರದ ಮುಖ್ಯ ರಸ್ತೆಯ ಮುರ್ಕಿಗಿದ್ದ ಚಹಾ ಅಂಗಡಿ ತರೇವರಿ ಜನರ ಸಂಪರ್ಕ ಬೆಸೆಯುವ ಕೇಂದ್ರವಾಗಿತ್ತು. ದುಡಿದು ಬದುಕುವ ಮುಖವಾಡಕ್ಕೆ ಚಹಾ ಅಂಗಡಿ ನೆಪವೂ ಆಗಿತ್ತು. ಅಂಥ ಕತರ್ ನಾಕ್ ದಂಧೆಗಳು ಇಲ್ಲಿ ಹುಟ್ಟಿಕೊಳ್ಳುತ್ತಿದ್ದವು. ಹತ್ತಿರವೇ ಇದ್ದ ಪೊಲೀಸ್ ಠಾಣೆಗೂ ಸ್ಪೆಶಲ್ ಚಹಾ ರವಾನೆಯಾಗುತ್ತಿದ್ದುದು ಇಲ್ಲಿಂದಲೇ. ಹೆಡ್ ಕಾನ್ಸಸ್ಟೇಬಲ್ ಭೀಮ್ಯಾ ಅನುರಾಧ ಆಂಟಿ ಮನೆಯ ಮಾಮೂಲು ವಸೂಲಿ ಡ್ಯೂಟಿಯನ್ನ ಹಲವು ವರ್ಷಗಳಿಂದ ತಪ್ಪದೇ ಸಂಪ್ರದಾಯದಂತೆ ನಡೆಸಿಕೊಂಡು ಬಂದಿದ್ದ. ಅನುರಾಧಳ ಮಗಳಿಗೆ ಹರೆಯ ಆವರಿಸಿಕೊಳ್ಳತೊಡಗಿತು. ಅವಳಿಗೆ ಮರೆಮಾಚಿ ದಂಧೆ ನಡೆಸುವುದು ಕಷ್ಟಸಾಧ್ಯವಾಗಿತ್ತು. ಕಂಡು ಕಾಣದಂತೆ ನಡೆದುಕೊಂಡ ಬಂದ ವಹಿವಾಟಿಗೆ ಮಾತಿಲ್ಲವಾಗಿತ್ತು ಅಷ್ಟೆ. ಸ್ವಂತ ಮಗಳ ಭವಿಷ್ಯದ ಕನಸು ಕಾಣುತ್ತಾ, ದಂಧೆಗೆ ಬಂದ ಹರೆಯದ ಹುಡುಗಿಯರನ್ನ ತಲೆಹಿಡಿಯುತ್ತಾ ಕೆಲಸಲ ಗೊಂದಲಕ್ಕೆ ಬೀಳುತ್ತಿದ್ದುದೂ ಉಂಟು. ವ್ಯಕ್ತಪಡಿಸಲಾಗದ ಅವ್ಯಕ್ತ ನೋವು ಕಾಡತೊಡಗಿದರೂ ಅದನ್ನು ಸ್ಪಷ್ಟಗೊಳಿಸಿಕೊಳ್ಳದೇ, ಹಣ ಎಣಿಸುವ ಆತುರದಲ್ಲಿ ಬಂದ ಯೋಚನೆಗಳನ್ನು ತಳ್ಳಿಬಿಡುತ್ತಿದ್ದಳು.
ಬಂದ ಗಿರಾಕಿಗಳು ಎದುರು ನಾಲ್ಕು ಗೊಡೆಗಳ ಪುಟ್ಟಕೋಣೆಯಲ್ಲಿ ಕ್ಷಣಾರ್ಧದಲ್ಲಿ ಹುಡುಗಿಯರು ಬೆತ್ತಲಾಗುತ್ತಿದ್ದರು. ದಿನಕ್ಕೆ ಹತ್ತಾರು ಸಲ ದೇಹವನ್ನು ನಗ್ನಗೊಳಿಸುವ, ಮತ್ತೆ ದೆಹಕ್ಕೆ ಬಟ್ಟೆ ತೊಡಿಸುವ ದಂಧೆಗೆ ಅಲ್ಲಿದ್ದವರ ಹರೆಯ ಒಗ್ಗಿಹೋಗಿತ್ತು. ಆ ಮನೆಯ ಎರಡು ಕೋಣೆಗಳಲ್ಲಿ ಇದು ನಿರಂತರ ಕ್ರಿಯೆ ಯಾಗಿತ್ತು. ಹತ್ತು ಹದಿನೈದು ನಿಮಿಷಕ್ಕೆ ಒಬ್ಬಿಬ್ಬರು ಆ ಮನೆ ಒಳಹೊಕ್ಕುವುದು, ಹೊರಬರುವುದು ನಡೆದಿರುತ್ತಿತ್ತು. ವರ್ಷಕ್ಕೆ ಎರಡು ಸಲ ನಡೆವ ಪೊಲೀಸ್ ರೈಡ್ಗಳು ಸಹ ಸುತ್ತಣ ಮನೆಯವರಿಗೆ ಮಾಮೂಲು ದೃಶ್ಯವಾಗಿತ್ತು. ಲಕ್ಷ ಲಕ್ಷ ಜನರಿರುವ ಬೃಹತ್ ನಗರದ ನೂರಾರು ಪುಂಡರ ಆಕಾಂಕ್ಷೆಗಳ ಭಾವವೊಂದನ್ನು ನಿಭಾಯಿಸುತ್ತಿರುವ ಹೆಮ್ಮೆಯೂ ಅನುರಾಧಳಿಗೆ ಆಗಾಗ ಮೂಡುತ್ತಿತ್ತು. ಗಿರಾಕಿಗಳ ಹೊಗಳಿಕೆಯಿಂದ ಆಕೆಗೆ ಏನು ಮಹತ್ತರ ಭಾವವೊಂದನ್ನು ನಿರ್ವಹಿಸಿಕೊಂಡು ಹೋಗುತ್ತಿರುವ ಸಮಾಧಾನವೂ ಇತ್ತು. ಆದರೂ ಈಚೀಚೆಗೆ ಹರೆಯಕ್ಕೆ ಕಾಲಿಡುತ್ತಿರುವ ಮಗಳನ್ನು ಈ ಮನೆ ಯಿಂದ ದಾಟಿಸಬೇಕೆಂಬ ಚಿಂತೆ ಸಹ ಕಾಡತೊಡಗಿತು. ಬಂದ ಗಿರಾಕಿಗಳು ಹೊಸ ಹುಡುಗಿ ಬಂದಂತಿದೆ ಎಂದು ಕೇಳತೊಡಗಿದಾಗ ತಳಮಳದ ಜೊತೆ ಮನಸ್ಸನ್ನು ವಿಷಾಧ ಮುತ್ತಿಕೊಳ್ಳತೊಡಗಿತು.
***
ಆಗಾಗ ಮನೆಗೆ ಬರುತ್ತಿದ್ದ ಮುಂಬಯಿನ ಶ್ರೀಮಂತ ಕುಳ ಸುಬ್ರಮಣ್ಯಗೆ ಮಗಳು ಶಾಲಿನಿಯನ್ನ ಅನುರಾಧ ಕಟ್ಟಿ ತನ್ನ ಜೀವನದ ಮಹತ್ಯಾರ್ಯ ಮುಗಿಸಿದೆನೆಂದು ನಿರಾಳವಾದಳು.
ಪ್ಲಾಸ್ಟಿಕ್ ಫ಼್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿದ್ದ ಸುಬ್ರಮಣ್ಯ ತಿಂಗಳಿಗೆ ಸಾವಿರಾರು ರೂ.ದುಡಿಯುತ್ತಾನೆ. ಮುಂಬೈನಲ್ಲಿ ಪ್ಲಾಟವೊಂದನ್ನು ಖರೀದಿಸಿದ್ದಾನೆ ಎಂದು ಅನುರಾಧ ಬಲವಾಗಿ ನಂಬಿದ್ದಳು. ಸುಬ್ರಮಣ್ಯನ ಬಗ್ಗೆ ಮುಂಬೈನ ಸ್ನೇಹಿತೆ ಆಶಾ ಹೇಳಿದ್ದನ್ನು ಅಕ್ಷರಶಃ ನಂಬಲು ಕಾರಣವೂ ಇತ್ತು. ಆಶಾ ಅನುರಾಧಳ ಬಾಲ್ಯದ ಗೆಳತಿಯಾಗಿದ್ದಳು. ಆಶಾಳ ಸಂಬಂಧಿಕರು ಮುಂಬಯಿನಲ್ಲೇ ನೆಲೆಸಿದ್ದರು. ಸುಬ್ರಮಣ್ಯ ಸಹ ಆಶಾಳ ದೂರದ ಸಂಬಂಧಿಯೇ ಆಗಿದ್ದ. ಹಾಗಾಗಿ ಸುಬ್ರಮಣ್ಯನನ್ನು ಅನುಮಾನಿಸುವ ಪ್ರಮೇಯವೇ ಅನುರಾಧಗೆ ಬಂದಿರಲಿಲ್ಲ. ಶಾಲಿನಿ ಸಹ ಮದುವೆಯಾಗಿ ಎರಡು ವರ್ಷ ಕಾಲದಲ್ಲಿ ಸುಬ್ರಮಣ್ಯನ ಬಗ್ಗೆ ಒಂದು ದೂರನ್ನು ಹೇಳಿರಲಿಲ್ಲ. ಆತ ದಿನನಿತ್ಯ ಬೆಳಿಗ್ಗೆ ಹೊರಬಿದ್ದವ ಮನೆ ತಲುಪುವಾಗ ರಾತ್ರಿಯಾಗಿರುತ್ತಿತ್ತು. ಮುಂಬಯಿ ಜೀವನಕ್ಕೆ ಅನುರಾಧಳ ಮಗಳು ಹೊಂದಿಕೊಂಡಿದ್ದಳು. ಆದರೆ ಈಚೀಚೆಗೆ ಶಾಲಿನ ಪೂನ್ ಬರುವುದು ನಿಂತು ಹೋಯಿತು. ಸುಬ್ರಮಣ್ಯನನ್ನು ಸಂಪರ್ಕಿಸಲು ಮಾಡಿದ ಅನುರಾಧಗಳ ಯತ್ನಗಳು ಸಫಲವಾಗಲಿಲ್ಲ. ಮುಂಬೈ ಗೆಳತಿ ಆಶಾ ಸಹ ಅಕಾಲಿಕ ಸಾವಿಗೆ ತುತ್ತಾಗಿದ್ದಳು. ಮಗಳನ್ನು ಮದುವೆ ಮಾಡಿದ ಹೊಸತರಲ್ಲಿ ಮುಂಬೈ ಕಂಡು ಬಂದಿದ್ದ ಅನುರಾಧ, ಮತ್ತೆ ಮಗಳ ಶೋಧಕ್ಕೆ ತೆರಳಿದಾಗ ಮಗಳು-ಅಳಿಯ ಇದ್ದ ಮನೆ ಬದಲಾಯಿಸಿ ವರ್ಷ ಕಳೆದಿತ್ತು. ಮನೆ ಬದಲಿಸಿದರೂ ಮಗಳು ಸುಳಿವು ನೀಡದೇ ಹೋದದ್ದು ಆತಂಕ ತಂದಿಟ್ಟಿತು. ತನ್ನೂರು ಬಿಟ್ಟು ಮುಂಬಯಿನಲ್ಲಿ ನೆಲೆನಿಂತವರ ಬಳಿ ಒಂದೆರಡು ದಿನ ಅಲೆದರೂ ಮಗಳು ಅಳಿಯನ ಸುಳಿವು ಎಟುಕದಾಯಿತು. ಪರಿಚಯವಿಲ್ಲದ ಊರಿನಲ್ಲಿ ಅನಾಥರಂತೆ ಸುತ್ತಿ ಸುತ್ತಿ ಸುಸ್ತಾದ ಅನುರಾಧ ತಳಮಳದ ಹೊರೆ ಹೊತ್ತುಕೊಂಡು ಊರಿಗೆ ಹಿಂದಿರುಗಿದಳು.
ಸಂಶಯಗಳನ್ನು ಒಡಲಲ್ಲಿಟ್ಟುಕೊಂಡು ಮರಳಿದ್ದ ಅನುರಾಧ, ಮುಂಬೈಗೆ ವಾರಕ್ಕೆ ಒಮ್ಮೆ ಡ್ಯೂಟಿಗೆ ತೆರಳುತ್ತಿದ್ದ ಬಸ್ ಚಾಲಕ ಹುಸೇನಿಗೆ ಮಗಳ ಬಗ್ಗೆ ತಿಳಿಯಲು ನೆನಪಿಸುತ್ತಲೇ ಇದ್ದಳು. ಪ್ರತಿವಾರ ಹುಸೇನಿ ಡ್ಯೂಟಿ ಮುಗಿಸಿ ಬಂದಾಗ ಅವನನ್ನು ಕಂಡರು ಮುಖದ ಮೇಲೆ ನಗು ಅರಳುವ ಸುದ್ದಿ ಆಕೆಗೆ ಸಿಗಲಿಲ್ಲ. ಹತ್ತಾರು ವಾರಗಳು ನಂತರ ಸುಬ್ರಮಣ್ಯ ಕೆಲಸ ಮಾಡುತ್ತಿದ್ದ ಪ್ಲಾಸ್ಟಿಕ್ ಫ಼್ಯಾಕ್ಟರಿ ಸಹ ಮುಚ್ಚಿ ಹೋಗಿದೆ ಎಂಬ ಸುದ್ದಿ ತಂದ ಹುಸೇನ್ ಸಾಬ್. ಆದರೆ ಸುಬ್ರಮಣ್ಯ ಏನಾದ? ಕೆಲಸ ಕಳೆದುಕೊಂಡ ಆಳಿಯ ಮಗಳನ್ನು ಯಾರಿಗಾದರೂ ಮಾರಾಟ ಮಾಡಿದನೇ? ಸುಬ್ರಮಣ್ಯ ಮುಂಬಯಿನಿಂದ ಬಂದಾಗಲೆಲ್ಲಾ ದುಬೈಗೆ ಹೋಗಿ ದುಡ್ಡು ಮಾಡುವ ವಿಚಾರ ಹೇಳುತ್ತಿದ್ದ. ಹಾಗೆ ದುಡ್ಡು ಮಾಡಲೆಂದು ಅವನು ದುಬೈಗೆ ಹೋಗಿಬಿಟ್ಟನೆ? ಶಾಲಿನಿಗೆ ಅವ್ನು ಮೋಸ ಮಾಡಿರಬಹುದೇ? ಮುಂಬಯಿನಂಥ ಮಹಾನಗರಿಯಲ್ಲಿ ಅಪಘಾತಕ್ಕೆ ತುತ್ತಾದನೆ? ಲೆಕ್ಕ ವಿಲ್ಲದಷ್ಟು ಹರೆಯದ ಹುಡುಗಿಯರ ತಲೆ ಹಿಡಿದದ್ದಕ್ಕೆ ದೇವರು ತನ್ನ ಮಗಳಿಗೆ ಶಿಕ್ಷೆ ನೀಡಿದನೇ? ತನ್ನ ಮಗಳನ್ನು ಮಾತ್ರ ವೇಶ್ಯಾ ದಂಧೆಯಿಂದ ದೂರ ಇಡಲು ಮಾಡಿದ ಪ್ರಯತ್ನ ವಿಫಲವಾಯಿತೇ? ಎಂಬ ವಿಚಾರಗಳು ಅನುರಾಧಗಳಲ್ಲಿ ಹುಟ್ಟಿಕೊಳ್ಳತೊಡಗಿದವು. ಶಾಲಿನಿ ಮೈಮಾರಿ ಬದುಕು ಸಾಗಿಸುತ್ತಿರಬಹುದೇ? ಅವಳು ಯಾವುದೋ ಘರ್ ವಾಲಿ ಮನೆಗೆ ಮಾರಾಟವಾಗಿದ್ದರೂ, ಅಲ್ಲಿಂದ ತಪ್ಪಿಸಿಕೊಂಡು ತನ್ನೂರಿಗೆ ಬಸ್ ಹಿಡಿದು ಬರಬಾರದೇ? ’ಒಂದಲ್ಲಾ ಒಂದು ದಿನ ಬಂದಾಳು’ ಎಂಬ ಸಣ್ಣ ಆಶಯ ಸಹ ಅನುರಾಧಳಲ್ಲಿ ಜನಿಸಿತು.
*****
(ಅಕ್ಟೋಬರ್ ೨೦೦೯)