ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ
ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ
ಅಸತ್ಯದ ಕುಲುಮೆಯೊಳಗೆ
ಸುತ್ತಿಗೆ ಹಿಡಿದು ಮತ್ತೊಮ್ಮೆ
ಬರಬಾರದೇ ನೀನು ‘ಕಮ್ಮಾರನಾಗಿ’
ಜಾತಿ ಮತ ಕುಲ ಧರ್ಮಗಳ
ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ
ಪಕ್ಷಗಳು ಗಂಟಲು ಹರಿದು ಕಿರುಚಿತಿಹರು
ಪಕ್ಷಗಳ ನೇತಾರರು
ಮೋಸ ಮಾಡುತಿವೆ ಬಡವರಿಗೆ
ಮೋಡಿ ಹಾಕುವ ಆಶ್ವಾಸನೆಯ ಭರವಸೆಗಳು
ಭಾವನೆಗಳಿಗೆ ಬೆಲೆ ಕೊಡದೆ
ಮತ ಗಳಿಸುವ ಕದೀಮರನೊಯ್ದು
ಚಿಲುಮೆಗೊಮ್ಮೆ ನೂಕಲು ಕರಕಾಗಿಸಲು
ಮತ್ತೊಮ್ಮೆ ಬರಬಾರದೇ ನೀನು….
ಬಾಂಬುಗಳಿಗೆ ಹತರಾಗುತ ನೋವಿನಲಿ ನಲಗುತ
ಮಾತನಾಡಲಾಗದವರ ಬಂಡೇಳದವರ
ಹಸಿದವರ ಬೆವರು ಹರಿಸುವವರ
ಕಾಲು ಕಸವಾಗುವವರ ಬೆಲೆಯೇ ಇಲ್ಲದವರ
ಕನಸುಗಳು ಕುಸಿಯುತಿವೆ.
‘ಬರುತ್ತಿಲ್ಲ ಈಗ ಸಾಂತ್ವನಕ್ಕೆ
ನಿನ್ನ ಸತ್ಯದ ಅಹಿಂಸೆಯ ಮಾತುಗಳು
ಹೋದವೆಲ್ಲಿ ನಿನ್ನ ಸತ್ಯ ಅಹಿಂಸೆಯ ಕ್ರಾಂತಿಗಳು’
ಅನರ್ಥಗಳಿಗೆ ಹಪಹಪಿಸುವ
ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೊಡೆದಾಡುವ
ಈ ರಾಜಕೀಯ ಕ್ರಾಂತಿಗಳು ತೋಳ
ಕುರಿಯಾಟಗಳ ರಕ್ತಕ್ರಾಂತಿಗಳಾಗುತಲಿವೆ
ಬಿಡು ಇನ್ನು ಮೌನ ಹಿಡಿ ಇನ್ನು ಸುತ್ತಿಗೆ
ಕೊಡು ಇನ್ನು ಪೆಟ್ಟು ಬಾ ಮತ್ತೊಮ್ಮೆ…
ಮಾಂಸ ಮೃಷ್ಟಾನ್ನ ಭೋಜನದ ಬೊಜ್ಜುಗಾರರಿಗೆ
ಏರ್ ಕಂಡೀಷನ್‌ದ ಮೋಜುಗಾರರಿಗೆ
ಅಧಿಕಾರ ಮದದ ಗೂಳಿ ಗೂಂಡಾಗಳಿಗೆ
ಗುಂಡಿನ ಲಾಬಿಗಳಲಿ ಹೊರಳಾಡುವ ಹೆಗ್ಗಣ ಹದ್ದುಗಳಿಗೆ
ಧರ್ಮದ ನೆಪ ಧರ್ಮಾಂಧರಿಗೆ
ಸಮಯ ಸಾಧಕರಿಗೆ ಪಕ್ಷಾಂತರಿಗಳನೆಲ್ಲ
ಚಿಲುಮೆಯಗ್ನಿಯಲಿ ಹಾಕು ಸುಡು
ಕುಲುಮೆಯಲಿ ಕಾಯಿಸಿ ಕರಗಿಸಿ
ಸುತ್ತುಗೆಯಿಂದ ಹೊಡೆ ಹೊಡೆದು
ರೂಪ ಕೊಡಲು ಬಾ ಮತ್ತೊಮ್ಮೆ
ದೇಶಕ್ಕೆ ಕಮ್ಮಾರನಾಗಿ
ಕೇಳಿಸಲಿ ಮತ್ತೊಮ್ಮೆ ಆ
ಚಮ್ಮಟೆ ಧ್ವನಿ ದೇಶದೊಳ ಹೊರಗೆಲ್ಲ.
*****