“ಬಯಲು ಬಯಲನೆ ಉಂಡು,
ಬಯಲು ಬಯಲಾಗಿತ್ತು……”
ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ. ಸಣ್ಣಗೆ ಮರ್ಕ್ಯೂರಿ ಬೆಳಕಿದೆ. ಹೆದರಿಕೆಯಿಲ್ಲ… ಆ ಕಡೆಯಿಂದ ಬಂದ ದೂರವಾಣಿಯಲ್ಲಿ ಆಕೆ ಆಗ್ರಹಪೊರ್ವಕವಾಗಿ ಹೇಳಿದಳು. ’ಆಯ್ತು’ ಎಂದು ಉತ್ತರಿಸಿ ಮೊಬೈಲ್ ಕಟ್ ಮಾಡಿದ ನಿರಂಜನ.
ಹೀಗೆ ಪೇಟೆ ಸುತ್ತಲು ಎಂದು ಹೊರಟವನು ಬೈಕೆನನ್ನು ಬಸ್ ಸ್ಟ್ಯಾಂಡ್ ಕಡೆಗೆ ಓಡಿಸಿ, ಪೇಪರ್ ಅಂಗಡಿ ಬಳಿ ನಿಂತ. ಸಮಯ ಆರು ನಾಲ್ವತ್ತಾಗಿತ್ತು. ಇನ್ನು ಇಪ್ಪತ್ತು ನಿಮಿಷ ಇದೆ. ಕ್ಯಾಂಟೀನ್ ನಲ್ಲಿ ಕುಳಿತು ಚಹಾ ಆರ್ಡರ್ ಮಾಡಿ, ಸಿಗರೇಟು ಎಳೆಯುತ್ತಾ ಕುಳಿತ. ಆಕೆ ಏನು ಹೇಳಬಹುದು.
ಊರಲ್ಲಿದ್ದರೂ ಮುಖ ತೋರಿಸದ, ಮಾತನಾಡಲು ಬಯಸದ ಗುಪ್ತಗಾಮಿನಿ ಇದ್ದಕ್ಕಿದ್ದಂತೆ ಕಡಲದಂಡೆಗೆ ಕರೆದದ್ದು ಅಚ್ಚರಿ ತಂದಿತ್ತು.
ನಿರಂಜನನಿಗೆ ಆಕೆಯ ಪರಿಚಯವಾದದ್ದೇ ಆಕಸ್ಮಿಕ. ಪರಿಚಯದ ಬೆನ್ನು ಹತ್ತಿದ ಆಕೆ ಪೋನ್ ನಲ್ಲಿ ಆಗಾಗ ಗಂಟೆಗಟ್ಟಲೇ ಹರಟುತ್ತಾ, ಕಷ್ಟ ಹೇಳುತ್ತಲೇ ಸ್ನೇಹಿತೆಯಾಗಿದ್ದಳು.
ಅವನದೋ ಉನ್ನತವಲಯದಲ್ಲಿ ಕೆಲಸ. ಅಧಿಕಾರಿ-ರಾಜಕಾರಣಿಗಳ ಪರಮಾಪ್ತ ನಂಟು – ನೆಲೆ ಸಿಗುವ ಜಾಗ. ಆತನ ಸುತ್ತ ಕೋಟೆಯೂ ಉಂಟು, ಗೌಜು ಗದ್ದಲವೂ ಉಂಟು. ಸ್ವಾರ್ಥ ಸಾಧನೆಗೆ ಹರಟುವವರೇ ಹೆಚ್ಚು. ’ನೀವು ಹೇಳಿದ್ರೆ ಕೆಲ್ಸ ಆಗುತ್ತೆ. ಸ್ವಲ್ಪ ಹೇಳ್ರಿ ’ ಎಂದು ನಿರಂಜನನ ಬಳಿ ಕೆಲಸ ಮಾಡಿಸಿಕೊಳ್ಳುವವರಿಗೇನೂ ಕಡಿಮೆ ಯಿಲ್ಲ. ಇಂಥ ಕೆಲಸ ಮಾಡಿಸಿಕೊಳ್ಳುವಲ್ಲಿ ಬೆರಕಿತನ ಹೊಂದಿದ್ದ ಗಜಗಾತ್ರದ ಮಹಿಮಾ ಎಂಬಾಕೆ ಯಿಂದ ಈ ಗುಪ್ತಗಾಮಿನಿಯ ಪರಿಚಯವಾಗಿತ್ತು. ಮಹಿಮಾ ಖ್ಯಾತಿ – ಅಪಖ್ಯಾತಿ ಎರಡನ್ನು ಹೊತ್ತಾಕೆ. ಅಧಿಕಾರಿ ವಲಯದ ಪರಮಾಪ್ತ ಸ್ನೇಹಿತೆ. ರಾತ್ರಿಕೂಟಗಳು ಆಕೆಗೆ ಮಾಮೂಲಿ. ವಯಸ್ಸು ಅರವತ್ತು ದಾಟಿದರೂ ನಡಿಗೆಯಲ್ಲೇ ಐವತ್ ಅರವತ್ತು ಗಡಿಯಲ್ಲಿರುವ ಕಾಮಾತುರರನ್ನು ಸೂಜಿಗಲ್ಲಿನಂತೆ ಸೆಳೆವ ಮಹಿಳೆ. ಬೀದಿ ಪುಂಡರ ಮಾತಿಗೆ ಕೇರ್ ಮಾಡುವ ಜಾಯಮಾನದವಳಲ್ಲ. ಪ್ಲೊಟಾನಿಕ್ ಸಂಬಂಧಗಳನ್ನು ಹೊಸೆದು ಕೆಲಸ ಸಾಧಿಸಿಕೊಳ್ಳುವ ಗಟ್ಟಿಗಿತ್ತಿಯೆಂದೇ ಪ್ರಸಿದ್ಧಿ ಪಡೆದಾಕೆ. ಆಧುನಿಕ ಕಲ್ಯಾಣಗುಣಗಳನ್ನು ಮೈಗೂಡಿಸಿಕೊಂಡಿದ್ದ ಮಹಿಮಾ ಈ ಕತೆಯ ’ನಾಯಕಿ’ಯನ್ನು ತನ್ನ ಹಾದಿಗೆ ಕೆಡವಿಕೊಳ್ಳಲು ಹನ್ನೆರಡು ವರ್ಷ ಪ್ರಯತ್ನಿಸಿ ವಿಫಲಳಾಗಿದ್ದಾಳೇ ಎಂಬುದೇ ಅಚ್ಚರಿ.
ಇನ್ನು ಈ ಕಥಾನಾಯಕಿಯೋ ಹೆಚ್ಚು ಬಿಚ್ಚಿಕೊಳ್ಳದ ನಿಗೂಢ ಸ್ವಭಾವದ ಕೂರ್ಮಾವತಾರ ಎಂದು ಅನಿಸಿದ್ದುಂಟು. ದಟ್ಟ ಕಾಡು, ಜೇಡರ ಬಲೆ, ಒಡೆದ ಕನ್ನಡಿ ಈಕೆಯನ್ನು ನೋಡಿದಾಗಲೆಲ್ಲಾ ನೆನಪಾಗುವ ಪ್ರತಿಮೆಗಳು. ಸೂಜಿ ಮಲ್ಲಿಗೆ ತೂಕದ, ತನ್ನ ಸುತ್ತ ಕೋಟೆ ಕಟ್ಟಿಕೊಂಡಂತಿದ್ದವಳು ಇಂದು “ಏನೋ ಅಚ್ಚರಿ ಸುದ್ದಿ ಹೇಳಬಹುದು” ಎಂಬ ಊಹೆ ಕಾಡತೊಡಗಿತ್ತು, ಇಪ್ಪತ್ತು ನಿಮಿಷಗಳ ಕಾಯುವಿಕೆಯಲ್ಲಿ. ಬೆಂಕಿ ಹೊತ್ತಿಕೊಂಡಿದ್ದ ಸಿಗರೇಟು ಮುಗಿಯುತ್ತಾ ಬಂತು. ಸಿಗರೇಟು ಸ್ಮೆಲ್ ಬರದಿರಲೆಂದು, ಪಿಂಟು ಪಾನ್ ಶಾಪ್ ಬಳಿ ನೂತನವಾಗಿ ಮಾರ್ಕೆಟ್ ಗೆ ಬಂದಿದ್ದ “ಪಾಸ್ ಪಾಸ್” ಹಾಕಿಕೊಂಡು ಬೀಚ್ ನತ್ತ ಹೊರಟ ನಿರಂಜನ.
ಮಬ್ಬುಗತ್ತಲು ಆವರಿಸುತ್ತಿತ್ತು. ಚಂದ್ರನ ತೆಳು ಬೆಳಕು ಸ್ವಾಗತಿಸುತ್ತಿತ್ತು. ಕಡಲದಂಡೆಯ ತಲುಪಿ ಆಕೆಯ ಬರುವಿಕೆಗೆ ಕಾದ. ಈ ಶತಮಾನದ ಹೆಣ್ಣುಗಳ ನಾನಾ ಮುಖಗಳು ಮನದಲ್ಲಿ ಸುಳಿಯತೊಡಗಿದವು. ಮಹಿಮಾಳಂಥ ಶ್ರೀಮಂತಿಕೆಯ ಮದದಲ್ಲಿರುವ, ಸದಾ ಹಣದ ಅಧಿಕಾರದ ಹಪಾಹಪಿತನದ ಗೊಸುಂಬೆ ಯಂಥವರು, ಬಸ್ ನಿಲ್ದಾಣದ ಅಪರಿಚಿತರಿಂದ ಅತ್ಯಾಚಾರಕ್ಕೆ ತುತ್ತಾಗಿ, ಬಸಿರು ಹೊತ್ತು, ಕೊನೆಗೆ ಪುಟ್ಟಮಗುವನ್ನು ಕಂಕುಳಲ್ಲಿ ತುಂಬಿಕೊಂಡು ಭಿಕ್ಷೆ ಬೇಡಿ ಬದುಕುವ ಹೆಸರೇ ಇಲ್ಲದ ಯುವತಿ…. ತರಾಕಾರಿ ಮಾರುವ ಮುದುಕಿಯರು, ಕಾಲೇಜಿಗೆ ಉತ್ಸಹದ ಬುಗ್ಗೆಯಂತೆ ತೆರಳುವ ಹುಡುಗಿಯರ ದಂಡು …. ಬೀಚ್ ನಲ್ಲಿ ಬಣ್ಣ ಬಣ್ಣದ ಹಕ್ಕಿಗಳ ಹಿಂದೆ ವಾಕಿಂಗ್ ನೆಪದಲ್ಲಿ ನಡೆವ ಪೋಲಿಗಳು…. ಮುಸ್ಸಂಜೆಯ ಕಡಲಿಗೆ ರಂಗು ತಂದಿಟ್ಟ ಚಿತ್ರಗಳು…. ಒಟ್ಟಿಗೆ ತೇಲಿ ಹೋದವು.
ಏಳು ಗಂಟೆ ದಾಟುತ್ತಿದ್ದಂತೆ ಆಕೆ ಬಂದಳು. ದಡದ ಗುಂಟ ಹೆಜ್ಜೆ ಹಾಕಿದರು. ಒಬ್ಬನೇ ಇದ್ದವನ ಜೊತೆ ಹೆಣ್ಣೊಂದು ಜೊತೆಯಾದದ್ದು ಕಂಡ ಯುವಕರ ದಂಡು ಅನುಮಾನದ ದೃಷ್ಟಿಯನು ಬೀರುತ್ತಾ ಹತ್ತಿಪ್ಪತ್ತು ಹೆಜ್ಜೆಗಳತನಕ ಅವರನ್ನೇ ಹಿಂಬಾಲಿಸಿದವು. ಮಬ್ಬಾಗುತ್ತಾ ಹೊದಂತೆ ಹಿಂಬಾಲಿಸಿ ಬಂದ ಹೆಜ್ಜೆಗಳು ಸಹ ಮಸುಕಾದವು. ದಂಡೆಯಲ್ಲಿ ಸುಳಿದಾಡುತ್ತಿದ್ದ ನೆರಳಾಕೃತಿಗಳು ಸಹ ಮರೆಯಾಗ ತೊಡಗಿದವು. ಕಡಲು ಅಬ್ಬರಿಸುತ್ತಿತ್ತು. ಗಾಳಿ ಸಹ ಕೊಂಚ ವೇಗದಲ್ಲಿತ್ತು. ಗಾಳಿ ಹೊಡೆತಕ್ಕೆ ಮರಳು ಸಹ ಆಗಾಗ ಮೈಗೆ ರಾಚಿದ ಅನುಭವ. ಗಾಳಿ ವೇಗಕ್ಕೆ ಕ್ಯಾಸೋರಿನಾ ಗಿಡಗಳ ಮೂಲೆಯಿಂದ ಸಹ ಸಣ್ಣನೆಯ ಸದ್ದು, ಬೀಚ್ ವಿಹಾರಕ್ಕೆ ಬಂದವರ ಮಾತು, ಪಿಸು ಮಾತುಗಳನ್ನು ಸಹ ಗಾಳಿ ಮುದ್ದೆ ಮಾಡುತ್ತಿತ್ತು. ಮನುಷ್ಯಾಕೃತಿಗಳ ಮಾತು ಗಾಳಿಯ ರಭಸ, ಅಲೆಯ ಅಬ್ಬರದಲ್ಲಿ ಬಿದ್ದು ನುಣ್ಣ ಗಾಗುತ್ತಿದ್ದವು. ನಮ್ಮ ಪಕ್ಕ ಹಾದುಹೋದ ಬಿಸಿ ಪ್ರವಾಹದ ಯುವ ಜೋಡಿಯೊಂದು ಹೆಜ್ಜೆ ಹಾಕುತ್ತಾ ಕ್ಯಾಸೋರಿನಾ ಮರಗಳ ಗುಂಪಲ್ಲಿ ಮರೆಯಾಯ್ತು.
ದುಡಿಮೆ ಮುಗಿಸಿ ಬಂದು ಕಡಲ ದಂಡೆಯ ಬಳಿ ವಿಶ್ರಮಿಸಿದ್ದ ಹತ್ತಿಪ್ಪತ್ತು ದೋಣಿಗಳ ಸಾಲು. ಜೊತೆಗೆ ಮುರಿದು ಮುಕ್ಕಾದ ಮುದಿ ದೋಣಿ, ಬದಿಗೆ ಹರಕು ಮುರುಕು ಗುಡಿಸಲು, ಹರಿದ ಬಲೆಗಳ ಗುಪ್ಪೆ. ಅದರ ಜೊತೆ ಬಿದ್ದಿದ್ದ ಮುರಿದ ಹುಟ್ಟು. ಆಗಲೂ ಈಗಲೂ ಬೀಳುವಂತಿದ್ದ ಗುಡಿಸಲ ಪಕ್ಕ ಕುಳಿತರು. ಹತ್ತು ನಿಮಿಷ ಮೌನ….ನಂತರ…
“ನಿಂಗೆ ಆಶ್ಚರ್ಯ ಆಗಿರ್ಬೇಕಲ್ಲಾ, ನಾನು ಕರೆದದ್ದು?”
“ಖಂಡಿತಾ… ಇದೇನು ಇವತ್ತು ಹೊಸ ಬೆಳವಣಿಗೆ, ಏನೂ ಅರ್ಜೆಂಟ್ ಇರ್ಬೇಕು ಅಂದ್ಕೊಂಡೆ.”
“ಮನೆಯಲ್ಲಿ ಜಗಳ ಆಯ್ತು. ಆತನಿಗೆ ಹೆಂಡ್ತಿ ಬೇಕಂತೆ. ಮನೆಮುಂದೆ ಬಂದು ಜಗಳ ತೆಗೆದ. ಇಪ್ಪತ್ತು ವರ್ಷ ಆಯ್ತು. ಇದೇ ಗೋಳು ಮಾರಾಯ. ಡೈವೋರ್ಸ್ ತಗೋಳೋಕೆ ಆಗ್ತಿಲ್ಲಾ. ಅವ್ನು ಸತ್ತೂ ಹೋಗೋದಿಲ್ಲ. ಡೈವೋರ್ಸ್ ಪೇಪರ್ ಗೆ ಸಹಿನೂ ಮಾಡಲ್ಲ. ಆ ಬೇವರ್ಸಿ ಲಾಯರೂ ಅಷ್ಟೇ. ಡೈವೋರ್ಸ್ ಮಾಡ್ಸಿಕೊಡು ಅಂದ್ರೆ, ಹೊಂದಾಣಿಕೆ ಆಗ್ಬಹುದು ಅಂತಾನೆ. ಮನೆಯಲ್ಲೂ ಅದೇ ರಾಗ, ಅದೇ ಮಾತು….” ವಿಷಾದವಿತ್ತು ಆಕೆಯ ಮಾತಲ್ಲಿ.
ಕಡಲ ಅಲೆಯ ಬೋರ್ಗರೆತ ನಿರಂತರವಾಗಿತ್ತು. ಮಾಗಿಯ ಚಳಿ ದಾಟಿದ ದಿನಗಳು. ಕಡಲದಂಡೆ ಸಣ್ಣಗೆ ಬಿಸಿಯೇರಿಸಿಕೊಳ್ಳತೊಡಗಿತ್ತು.
“ಡೈವೋರ್ಸ ನಿನ್ನ ಪಾಲಿಗೆ ಮುಗಿಯದ ಕಥೆಯಂತಿದೆ. ಲಾಯರ್ ಬದಲಿಸಿಬಿಡು.” ಎಂದ ನಿರಂಜನ.
“ಜಾತಿ ಮನುಷ್ಯ ಅಂತಾ ಲಾಯರ್ ಹತ್ರ ಹೋದದ್ದೇ ತಪ್ಪಾಯಿತು. ಡೈವೋರ್ಸ್ ಪೇಪರ್ ರೆಡಿ ಮಾಡು ಎಂದು ವರ್ಷಗಳು ಗತಿಸಿವೆ. ಏನು ಮಾಡೋದು ಅಂತಾ ತಿಳಿತಾಯಿಲ್ಲಾ.
ಪೀಡಕನನ್ನ ಪೋಲೀಸರಿಂದ ಹೆದರಿಸಿಯೂ ಆಯ್ತು. ಮೊನ್ನೆ ಮೊನ್ನೆ ಮನೆಯ ಹೊರಗೆ ಒಣಗಿಸಲು ಹಾಕಿದ್ದ ಸೀರೆಗಳಿಗೆ ಬೆಂಕಿ ಹಾಕಿದ್ದಾನೆ. ಕುಡಿದ ಅಮಲಿನಲ್ಲಿ ಜೀವಕ್ಕೆ ಏನು ಮಾಡ್ತಾನೋ ಎಂಬ ಭಯ ಬೇರೆ.”
“ಸೀರೆಗೆ ಬೆಂಕಿ ಹಾಕಿದ್ನಾ… ಎಂಥ ವಿಕೃತ ಮನುಷ್ಯ ಅವ. ಹುಷಾರಾಗಿರು. ಏನಾದ್ರೂ ಮಾಡಿಬಿಟ್ಟಾನು.”
“ಅಷ್ಟು ಧೈರ್ಯ ಇಲ್ಲ ಅವ್ನಿಗೆ. ಹೋಗ್ಲಿ ಬಿಡು. ಹಾಳಾದವ್ನ ವಿಷ್ಯಾ ಬೇಡ. ಅವನನ್ನ ನೆನಸಿಕೊಂಡ್ರೆ ಮತ್ತಷ್ಟೂ ಹಿಂಸೆ…”
“ಊರಲ್ಲಿ ಏನು ವಿಶೇಷ. ಹೇಗಿದೆತದಡಿ. ಗೋಕರ್ಣಕ್ಕೆ ಹೋಗಿದ್ದ್ಯಾ?”
“ಇಲ್ಲ, ಬಾಲಚಂದ್ರನ ತಾಯಿ ಸಿಕ್ಕಿದ್ಳು. ಅವರ ಮನೆಗೆ ಹೋಗಿ, ಆತನ ಫೋಟೋಕ್ಕೆ ಕೈ ಮುಗ್ದು ಬದೆ.”
“ನಿನ್ನ ಅಪರಾಧಿ ಸ್ಥಾನದಲ್ಲಿ ನಿಲ್ಸಿಲ್ಲ ಬಾಲನ ತಾಯಿ. ಅದೇ ದೊಡ್ಡದು.”
“ಏನೇ ಹೇಳು. ಬಾಲಚಂದ್ರನ ನೆನಪು ಮಾತ್ರ ಎಂದಿಗೂ ಅಳಿಸದಂಥದ್ಧು. ಅವ್ನ ಶಾಪ ತಟ್ತು ನನ್ಗೆ. ಆದ್ರೆ ನಂದೇನೂ ತಪ್ಪಿಲ್ಲ. ನಾನು ಅವನನ್ನ ಪ್ರೀತಿಸ್ತೇನೆ ಎಂದು – ಎಂದೂ ಹೇಳಿರಲಿಲ್ಲ. ಒಂದೇ ಊರಿನವರು ಎಂಬುದು ಒಂದು ನೆವ. ನಾನು ಮೆಟ್ರಿಕ್ ಇದ್ದಾಗ ಅವ ಕುಮ್ಟೆಯಲ್ಲಿ ಕಾಲೇಜ್ಗೆ ಹೋಗ್ತಿದ್ದಾ. ಮದ್ವೆ ಆಗು ಅಂಥ ಗಂಟು ಬಿದ್ದಿದ್ದ. ನನ್ಗೂ ಏನು ತಿಳಿಯದ ವಯಸ್ಸು. ಸಂದಿಗ್ಧ ಸ್ಥಿತಿ. ಬಿಎಸ್ಸಿ ಮುಗ್ಸಿ ಆರ್ ಟಿಒ ಇಲಾಖೆ ಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ. ಕಪ್ಪಗಿದ್ದ. ಅವರಪ್ಪನಿಗೂ, ನಮ್ಮ ತಂದೆಗೂ ಎಂಥದ್ದೂ ವೈರತ್ವ. ಮದ್ವೆಗೆ ನನ್ನಪ್ಪನ ಸಮ್ಮತಿಯೂ ಇರಲಿಲ್ಲ. ಆತ ನನ್ನನ್ನು ಕಾಡುವಂಥ ಸುಂದರನೂ ಅಲ್ಲ, ಅಂಥ ಮನಸ್ಸಿನವನೂ ಆಗಿರಲಿಲ್ಲ. ಜಾತಿ ಹುಡ್ಗ, ಊರಿನವನು ಎಂಬುದು ಬಿಟ್ರೆ, ಮತ್ತೇನೂ ಇರಲಿಲ್ಲ. ಆತನನ್ನ ಪ್ರೀತಿಸುವ ಪ್ರಸಂಗವೇ ಇರಲಿಲ್ಲ. ಆದ್ರೂ ಆತ ಬದುಕಿನ ಕೊನೆಯವರೆಗೆ ಕಾಡುವಂತಹ ಗಾಯ ಮಾಡಿ ಹೋದ.”
ಆಗತಾನೆ ನನ್ನ ಡಿಪ್ಲಮೋ ಮುಗಿದಿತ್ತು. ಮನೆಯಲ್ಲಿ ಮದ್ವೆಗಿಂತ ಮುಂಚೆ ನೌಕರಿಯ ತಲಾಷೆಯಲ್ಲಿದ್ದರು. ಅಪ್ಪ ಪ್ರಭಾವಿಯೂ ಆಗಿದ್ದ. ಹಣವನ್ನು ಚೆಲ್ಲಿದ. ನೌಕರಿಯೂ ಸಿಗ್ತು. ಈ ಹಂತದಲ್ಲಿ ಕೊನೆಯದಾಗಿ ಮನೆಗೆ ಬಂದ ಬಾಲಚಂದ್ರ ಮದ್ವೆ ಮಾಡಿಕೊಡುವಂತೆ ಕೇಳ್ದ. ಹತ್ತು ವರ್ಷ ಕಾದಿದ್ದ. ಆದರೆ ಅವ್ನ ಮದ್ವೆ ಆಗಲೂ ನನಗೂ ಮನಸ್ಸಿರಲಿಲ್ಲ. ನನ್ನಪ್ಪ ಮದ್ವೆಗೆ ನಿರಕರಿಸಿದ್ದೇ ನೆಪವಾಯ್ತು. ನೌಕರಿ ಸಿಕ್ಕ ನಾನು, ಇತ್ತ ’ಪ್ರೀತಿಯ ಬಂಧನ’ದಲ್ಲಿ ಸಿಕ್ಕಿದ್ದೆ. ಅಪ್ಪ ಮುದ್ದಿನ ಮಗಳ ಪ್ರೀತಿ ಸಂಬಂಧಕ್ಕೆ ಅಡ್ಡಿ ಬರಲಿಲ್ಲ. ತಾಯಿಯ ತೆಳು ಆಕ್ಷೇಪ ನಿಲ್ಲಲಿಲ್ಲ.
ನನ್ನ ಮದ್ವೆ ಸುದ್ದಿ ತಿಳಿದ ಎರಡೇ ದಿನಗಳಲ್ಲಿ ಬಾಲಚಂದ್ರ ನೇಣಿಗೆ ಶರಣಾದ ಸುದ್ದಿ ಹುಟ್ಟಿದೂರಿಂದ ಬಂತು. ಹೇಗಾಗಿರಬೇಡ. ನನ್ನ ಸ್ಥಿತಿ. ನನ್ನನ್ನ ಮದ್ವೆ ಆಗಬೇಕೆಂದಿದ್ದ ಒಬ್ಬ ತರುಣ, ನೌಕರಿ ಸಿಕ್ಕು ಬದುಕಿನ ಒಂದು ಹಂತ ತಲುಪಿದ್ದವ ’ನೇಣು’ ಬಿಗಿದುಕೊಂಡ ಸುದ್ದಿ ಹರಡುತ್ತಿದ್ದಂತೆ ತಲೆ ತಿಂದ್ರು ನನ್ನ ಮನೆಯವರು. ಪುಣ್ಯಕ್ಕೆ ಅವ್ನ ಮನೆಯವ್ರು ನನ್ನ ಅನ್ನಲಿಲ್ಲ. ಅವನೇನು ಹೋಗ್ಬಿಟ್ಟಾ, ಶಾಶ್ವತವಾದ ಗಾಯ ಮಾಡಿ. ಇಂಥ ಮೂರ್ಖ ನಿರ್ಧಾರಕ್ಕೆ ಅವ್ನು ಬರ್ತಾನೆಂದು ಕನಸಿನಲ್ಲೂ ನೆನಸಿರಲಿಲ್ಲಾ. ಅವನ ಬಗ್ಗೆ ಯೋಹಿಸುವಂತಹ ಯಾವುದೇ ಭಾವನಾತ್ಮಕ ಸಂಬಂಧಗಳು ನಮ್ಮ ನಡುವೆ ಇರ್ಲಿಲ್ಲಾ. ನಾನು ಸಿಗಲಿಲ್ಲಾ ಎಂಬ ಒಂದೇ ಕಾರಣಕ್ಕೆ, ಬದುಕನ್ನೇ ನಿರಾಕರಿಸಿ ಹೋದ…. ಮರಳಿ ಬಾರದ ಹಾದಿಗೆ…. ಆತ ನೇಣು ಬಿಗಿದುಕೊಂಡು ಕಣ್ಮರೆಯಾದ ದಿನದಿಂದ ಈತನಕ….. ಇಪ್ಪತ್ತು ವರ್ಷಗಳು ಕಳೆದರೂ ಆತ ಕಾಡುವ ಪರಿಮಾತ್ರ……. ಚುಚ್ಚುವಂಥದ್ದು. ಬೃಹತ್ ಮರವನ್ನು ತುಂಡಾಗಿಸುವ ಗರಗಸದಂತೆ….. ಎತ್ತ ಹೋದರು, ಏನೂ ಮಾಡಿದರೂ, ಎಲ್ಲಿ ಕುಳಿತರೂ ಕಾಡುವ ನೋವು….. ಕಾಲದ ಕ್ರೂರತೆ ಅಂದ್ರೆ ಇದೆನಾ? ಆತಂಗೆ ನಾನು ಏನಾಗಿದ್ದೇನೋ ತಿಳಿಯದು. ಆತ ಸಾಯುವ ಮುನ್ನ ನನ್ಗೆ ಅವನನ್ನ ಹಚ್ಚಿಕೊಳ್ಳಲು ಕಾರಣಗಳೇ ಇಲ್ಲ. ಆದರೂ ನನಗಾಗಿ ನೇಣು ಹಾಕಿಕೊಂಡನಲ್ಲಾ? ಯಾಕೆ ಎಂಬ ಬಿಡಿಸಲಾರದ ಪ್ರಶ್ನೆ ಕಾಡುತ್ತಲೇ ಇದೆ.
***
ಡಿಪ್ಲಮೋ ಓದುವ ದಿನಗಳು. ದಿನಕ್ಕೆ ಒಬ್ಬ ಹುಡ್ಗ ಪ್ರೇಮ ಪತ್ರ ಬರೆದಿದ್ದನ್ನ ಓದಿ, ತಲೆ ಹಾಳಾಗ್ತಿತ್ತು. ಕೂದಲು ಕಪ್ಪು ಎಂಬುದು ಬಿಟ್ರೆ ವಿದೇಶಿ ಹುಡ್ಗಿಯಂತಿದ್ದೆ ನಾನು. ’ಮಿನುಗುತಾರೆ’ಎಂಬ ಹೊಗಳಿಕೆ ವಾರಿಗೆಯ ಗೆಳತಿಯರಿಂದ. ಉನ್ನತ ದರ್ಜೆಯ ನೌಕರಿಯಲ್ಲಿದ್ದ ಅಪ್ಪ. ಯಾವುದಕ್ಕೂ ಕೊರತೆಯಿಲ್ಲದ ಜೀವನ. ಶ್ರೀಮಂತಿಕೆ ಕಣ್ಣು ಮುಚ್ಚಿಸಿರಲಿಲ್ಲ. ಸೌಂದರ್ಯದ ಅಹಂಕಾರವೂ ಇರಲಿಲ್ಲ. ಸುಂದರ ದೇಹ ಗೊಂದಲಗಳನ್ನು ನನ್ನಲ್ಲಿ ಬಿತ್ತಿತ್ತು. ಪ್ರೇಮಪತ್ರಗಳು ಚೂರು ಚೂರಾಗಿ ಕಸದಬುಟ್ಟಿ, ಬಿಸಿ ನೀರು ಕಾಯಿಸುವ ಬೆಂಕಿಯ ಗೂಡು ಸೇರುತ್ತಿದ್ದವು. ದಿನಕ್ಕೊಂದು ಗೊಂದಲ. ಯಾರನ್ನ ಪ್ರೀತಿಸುವುದು, ಯಾರನ್ನ ತಿರಸ್ಕರಿಸುವುದು. ಅಷ್ಟಕ್ಕೂ ಪ್ರೀತಿ ಅಂದ್ರೆ ಸ್ಪಷ್ಟವಾಗಿ ಗೊತ್ತಿಲ್ಲದ ಗೋಜಲಿನ ದಿನಗಳು. ಗಂಡು-ಹೆಣ್ಣಿನ ಸಂಬಂಧ, ಮಿಲನ ಅರಿಯದ ದಿನಗಳು. ಹುಡ್ಗರನ್ನು ದೂರವೇ ಇಡಬೇಕು ಎಂಬ ಭಾವನೆ ಒಮ್ಮೆ ಇದ್ದರೆ, ಅವರ ಆತುರವನ್ನು ಸವಿಯುವ ಮನಸ್ಸು ಇತ್ತು. ಮನೆಯ ಬಂಧನೆಗಳು, ಹೆತ್ತವರ ಕಣ್ ಕಾವಲಿನಲ್ಲಿ ಕನಸುಗಳು ಕಮರಿದವು. ಹುಚ್ಚುತನಗಳಿಗೆ ಅವಕಾಶವೇ ಇರಲಿಲ್ಲ. ಇದರ ನಡುವೆ ಜಾತಿ ಹುಡುಗರು, ಹೆಣ್ಣುಗಳನ್ನು ಬೇಟೆ ಆಡುತ್ತಾ ಮದ್ವೆಯ ಬಂಧನಕ್ಕೆ ಆತೊರೆಯುವ ಕ್ಷಣಗಳು ತಲೆ ತಿಂದಿದ್ದವು. ಇಂಥ ಸಮಯದಲ್ಲೇ ಪ್ರೇಮಾಂಕುರವಾದದ್ದು ಈಗಿರುವ ಪೀಡಕನ ಜೊತೆಗೆ, ಪ್ರೇಮ, ಪ್ರಣಯವಾಗಿ ಬಂಧನಕ್ಕೆ ತಿರುಗಿ ಹೆತ್ತವರ ವಿರೋಧದ ನಡುವೆ ಮದ್ವೆ ಆದ್ರೆ, ಭ್ರಮನಿರಸನಕ್ಕೆ ಹೆಚ್ಚಿನ ದಿನಗಳು ಬೇಕಾಗಲಿಲ್ಲ. ಎರಡು ವರ್ಷದಲ್ಲಿ ಸಂಬಂಧನರಕವಾಯ್ತು. ಪ್ರೀತಿಸಿದ ತಪ್ಪಿಗೆ ಶನಿ ಗಂಟು ಬಿತ್ತು ಎಂದು ತಿಳಿದ ತಕ್ಷಣ ಆತನಿಂದ ದೂರವಾದೆ.
ಹೆಂಡ್ತಿ ನೌಕರಿ ಮಾಡಬಾರ್ದು, ಸದಾ ತನ್ನ ಹಿಂದೆ ಸುತ್ತುತ್ತಿರಬೇಕು. ಯಾರನ್ನು ನೋಡ್ಬಾರದು. ಯಾರ ಜೊತೆ ಮಾತ್ನಾಡ್ಬಾರದು…. ಸಂಶಯದ ’ಪ್ರಾಣಿ ಅದು’ ಎಂದು ತಿಳಿಯಲು ಆರು ತಿಂಗಳು ಸಾಕಾಯ್ತು. ಮದ್ವೆ, ಪ್ರೇಮದ ಹೊಸ ಬದುಕು ನರಕವಾಗ್ತಿದೆ ಎಂದು ಅರಿವಿಗೆ ಬಂದ ಕ್ಷಣ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು ತೆಗೆಸಲು ಪ್ರಯತ್ನಿಸಿದೆ. ಪುಣ್ಯಕ್ಕೆ ನೌಕರಿ ಬಿಡಲು ಒಪ್ಪಲಿಲ್ಲ ನಾನು. ’ನಿನ್ನ ಬಿಡುತ್ತೇನೆ. ನೌಕರಿ ಬಿಡಲ್ಲಾ’ ಅಂಥ ಶಪಥ ಮಾಡ್ದೆ. ಹಾಗೆ ಮಾಡ್ದೆ. ಮದ್ವೆಯಾಗಿ ಎರಡು ವರ್ಷಕ್ಕೆ ಹುಟ್ಟಿದ ಮಗನನ್ನ ನಾನು ಕಣ್ಣೆತ್ತಿ ನೋಡಲಿಲ್ಲ. ದೊಡ್ಡಮ್ಮ ನನ್ನ ಮಗನ್ನ ಬೆಳೆಸಿದ್ರು. ಆತ ಬೆಳೆದು ನಿಂತಿದ್ದಾನೆ. ಇಪ್ಪತ್ತು ವರ್ಷಗಳು ಉರುಳಿವೆ. ಪೀಡಕ ಇದೇ ಊರಲ್ಲಿ ಉಳಿದುಕೊಂಡಿದ್ದಾನೆ. ತಿಂಗಳಿಗೊಮ್ಮೆ ಜಗಳ ಮಾಮೂಲು. ಕುಡಿತದಿಂದ ಜರ್ಜರಿತನಾಗಿದ್ದಾನೆ. ಆತನ ಬಗ್ಗೆ ಯಾವ ಮೂಲೆಯಲ್ಲೂ ಕರುಣೆ ಉಳಿದಿಲ್ಲ. ಕೆಲವೊಮ್ಮೆ ಸಂಬಧ ಬೆಸೆಯಲು ಮಾಡಿದ ಆತನ ಯತ್ನಗಳನ್ನು ವಿಫಲ ಮಾಡುತ್ತಾ ಬಂದಿದ್ದೇನೆ. ನೇಣಿಗೆ ಶರಣಾದ ಬಾಲಚಂದ್ರನ ನೆನಪಲ್ಲಿ. ಅಲ್ಲಿಂದ ಮತ್ತೆ ಗಂಡಸಿನ ಸಾನಿಧ್ಯ ಬೇಕೆನಿಸಿಲ್ಲ…. ನಿನ್ನನ್ನು ಬಿಟ್ಟರೆ ಎಂದ್ಲು. ನಿರಂಜನನ ಎದೆ ’ದಸಕ್’ ಅಂತು.
***
ಆಕೆ ಬದುಕಿನ ಎರಡನೇ ಅಧ್ಯಾಯದ ಮುಕ್ತಾಯಕ್ಕೆ ಬಂದಿದ್ದಳು. ಕತ್ತಲನ್ನು ತೆಳುವಾಗಿ ಹಿಂದಿಕ್ಕುವ ಮಬ್ಬುಗತ್ತಲು. ಹುಣ್ಣಿಮೆಗೆ ಇನ್ನೂ ಹತ್ತು ದಿನ ಬಾಕಿ. ತೆಳುಗೆರೆಯ ಅರ್ಧ ಚೆಂದಿರ ನೊರಾರು ನಕ್ಷತ್ರಗಳ ಮಧ್ಯೆ ಬೆಳುದಿಂಗಳ ಆಶಯ ಬಿತ್ತುತ್ತಿದ್ದ. ಕಡಲು ಅಬ್ಬರಿಸುತ್ತಿತ್ತು. ಮೇಲು ಗಾಳಿ, ಕಡಲ ದಂಡೆಯ ಉದ್ದಕ್ಕೂ ವಿರಮಿಸಿದ್ದ ದೊಣಿಗಳು. ಕಡಲದಂಡೆಯಲ್ಲಿ ವಾಕಿಂಗ್ ಮಾಡುವ ಮಧ್ಯ ವಯಸ್ಕರು …. ದಂಪತಿಗಳು… ಪ್ರಣಯ ಜೋಡಿಗಳು ಅವರವರ ಲೋಕದಲ್ಲಿದ್ದರು…. ಕೆಲವರು ಮನೆಗೆ ಮರಳುವ ಮೂಡ್ ನಲ್ಲಿದ್ದರು.
ಆಕೆಗೆ ಅರಿವಿದ್ದೋ, ಇಲ್ಲದೆಯೋ ಆಕೆ ನಿರಂಜನನ ಎದೆಗೊರಗಿದ್ದಳು.
“ನನ್ನ ಜಗತ್ತು ಸೀಮಿತವಾಗಿದೆ. ಮನೆಯ ನಾಲ್ಕು ಗೋಡೆಯ ನಡುವೆ ಇಪ್ಪತ್ತು ವರ್ಷ ಸವೆಸಿದ್ದೇನೆ. ನೌಕರಿ ಮಾಡುವ ಕಚೇರಿ, ಅಲ್ಲಿನ ಸಿಬ್ಬಂದಿ ಮಾತ್ರ ಹೊರಜಗತ್ತಿನ ಸಂಪರ್ಕ ಕೊಂಡಿ. ಮನಸ್ಸು ಬಂದ್ರೆ ಟಿ.ವಿ.ನೋಡ್ದೆ. ಇಲ್ಲದಿದ್ರೆ ಅದೂ ಇಲ್ಲ. ಮನಸ್ಸು ಕಾಠಿಣ್ಯದ ಕೂಪವಾಗಿದೆ. ನನ್ನ ಸ್ಥಿತಿಗೆ ನಾನೇ ಕಾರಣ ಎಂದು ಹಲವು ಸಲ ಅನ್ನಿಸಿದೆ. ಯಾರನ್ನೂ ದೂರಿ, ಯಾರನ್ನೋ ಗುರಿ ಮಾಡಲಾರೆ…”
“ನನಗೆ ಶಾಶ್ವತ ಸಂಬಂಧಗಳಲ್ಲಿ ನಂಬಿಕೆಯಿಲ್ಲ. ಗಟ್ಟಿಯಾಗಿ ಹಿಡಿದಿಡಬೇಕೆಂದು ಯಾವ ಸಂಬಂಧವನ್ನು ಬಯಸಿಲ್ಲ. ಕಟ್ಟಳೆಗಳನ್ನು ವಿಧಿಸದ, ಶರತ್ತುಗಳಿಲ್ಲದ ಬಂಧ ಬೇಕು. ಆಗುತ್ತಾ… ಯಾವುದಕ್ಕೂ ಒತ್ತಾಯಿಸಬಾರ್ದು…. ನಾನು ಎಂದು ಕಲ್ಪಿಸಿಕೊಳ್ಳದ ಬಾಲಚಂದ್ರ ಉರುಳಿಗೆ ಶರಣಾಗಿ ಕಾಡಿದ. ಕಾಡುತ್ತಲೇ ಇದ್ದಾನೆ. ನಾನಾಗಿಯೇ ಕಟ್ಟಿಕೊಂಡು ಗಂಡ ಎನಿಸಿಕೊಂಡವ ಇದ್ದು ಕಾಡುತ್ತಿದ್ದಾನೆ. ನಿನ್ನ ಸಂಬಂಧವೂ ಹಾಗಾಗ ಬಾರದು…”
“ಪರಿಚಯವಾಗಿ ಎರಡು ವರ್ಷವಾಯ್ತು. ಮಾತಿಗೆ ಸಿಕ್ಕಿದ್ದ ನಾಲ್ಕು ಸಲ. ನಿನ್ಗೆ ಏನನಿಸ್ತುತ್ತಿದೆ.”
“ನಿನ್ನ ಬಗ್ಗೆ ಪ್ರೀತಿಯಿದೆ” ಆಕೆ ಕಿವಿಯಲ್ಲಿ ಉಸುರಿದಳು.
“ನನಗೂ….”
“ನಾನು…… ಇವತ್ತು ಮನ್ಗೆ ಹೋಗಲ್ಲಾ. ಜೋಗಮ್ಮನ ಜೊತೆ ಇರ್ತೇನೆ.”
“ಜೋಗಮ್ಮ ನಿತ್ಯ ಸಂಚಾರಿ. ನಿನ್ನ ಉಪಕಾರಕ್ಕೆ ಆಕೆಯ ಪ್ರತ್ಯುಪಕಾರ ಇದ್ದದ್ದೆ, ಊಟ ಹಾಕಿದ್ದಕ್ಕೆ, ನಿನ್ನ ಸಂತೈಸಲು, ನಿನ್ನನ್ನು ತನ್ನೆದೆಯಲ್ಲಿ ತಾಯಿ ಹಾಲುಣಿಸುವ ಮಗುವನ್ನ ಹದುಗಿಸಿಕೊಂಡಂತೆ ಹುದುಗಿಸಿಕೊಂಡು ಸಂತೈಸಲು ಒಂದು ಜೀವ ಇದೆ. ಆಕೆಯ ಅನುಭವಗಳ ಮುಂದೆ ನೀನು ಚಿಕ್ಕವಳು. ಯಾರದೋ ದುಃಖಕ್ಕೆ ಯಾವುದೋ ನೆವರಿಸುವ ಕೈಗಳು….” ನಿರಂಜನ ಮನದಲ್ಲೇ ಗುನಗಿಕೊಂಡ.
“ಬದುಕು ಅಂದ್ರೆ ಹೀಗೆನೇ. ಕಡಲಿಗಿಳಿದ ದೋಣಿ…..ಕಡಲದಂಡೆಗೆ ಬಂದು, ದೋಣಿ ಹತ್ತಿದವರ ಆಟ, ಹೋರಾಟ ಮೆಲುಕು ಹಾಕಿದಂತೆ. ಎದೆಗುಂದ ಬೇಡ. ಹತಾಶನಾಗಿರುವ ಆತನಿಂದ ಎಚ್ಚರದಿಂದರು.”
“ಅವ್ನಿಗೆಲ್ಲಾ ಕೇರ್ ಮಾಡಲ್ಲ. ನಾನು ಬರ್ತೇನೆ. ಪೂನ್ ಮಾಡ್ಬೇಕು ಅನ್ನಿಸಿದಾಗ ಮಾಡುವೆ.”
“ನಿನ್ನಿಷ್ಟ” ಎಂದ ನಿರಂಜನ.
ಆಕೆ ಮತ್ತೆ ಕಡಲಂಚಿನಿಂದ ಹೆಜ್ಜೆ ಹಾಕತೊಡಗಿದಳು…….
*****
(ಮಾರ್ಚ್ ೨೦೦೯)