ಮಠ ಕಟ್ಟಿ ನೋಡುವುದೀಗ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಮೇಲುವರ್ಗದ ಪ್ರಾಚೀನ ಮಠಗಳು ಇಂದು ದೇಶಕ್ಕಾಗಿ, ಜನತೆಗಾಗಿ ಮಾಡಿರುವುದನ್ನು ಗಮನಿಸಿದರೆ ಸಾಕು, ಹೊಸ ಹೊಸ ಮಠಗಳ ಹುಟ್ಟು ದೇಶಕ್ಕೆ ಶಾಪವೇ ಹೊರತು ಖಂಡಿತ ವರವಲ್ಲ. ಕಾರಣ ಈವತ್ತು ಮಠಗಳನ್ನು ಮಠಾಧಿಪತಿಗಳನ್ನು ಗುಮಾನಿಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಈಗಿರುವ ಮಠಗಳು ತಾವು ಜಾತ್ಯತೀತ ಎಂದು ಹೇಳಿಕೊಂಡರೂ ಎಲ್ಲವೂ ಜಾತಿಯ ಮಠಗಳೆಂಬುದರಲ್ಲಿ ಕಿಂಚಿತ್ತೂ ಅನುಮಾನಪಡಬೇಕಿಲ್ಲ.
ಸರ್ವರೂ ಜಾತಿಯ ಗುರುಗಳೇ ವಿನಾ ಜಗದ್ಗುರುಗಳಲ್ಲವೇ ಅಲ್ಲ. ಬಸವಣ್ಣನವರು ಮಠದ ವಿರೋಧಿಗಳಾಗಿದ್ದವರು. ‘ಸಾವರಕ್ಕಳಿವುಂಟು ಜಂಗಮಕ್ಕಿಲ್ಲ ಎಂದು ಸೂಚ್ಯವಾಗಿ ಸಾರಿದವರು, ‘ದೇಹವೇ ದೇವಾಲಯ’ ವೆಂದು ಗುಡಿ ಸಂಸ್ಕೃತಿ ಮಡಿ ಸಂಸ್ಕೃತಿಯನ್ನಳಿದವರು. ಅವರ ತತ್ವಾದರ್ಶಗಳೆಲಾ ಈಗ ಕಾವಿಗಳ ತುಟಿಯ ಮೇಲೆ ಮಾತ್ರ ಉಳಿದಿದೆ. ಮಠಗಳಿಂದ ಶೈಕ್ಷಣಿಕವಾಗಿ ನಾಡಿಗೆ ಒಂದಿಷ್ಟು ಸೇವೆ ಸಂದಿದೆ ಅನ್ನುವ ಮಾತು ನಿಜ. ಜೊತೆಗೆ ಡೊನೇಷನ್ , ಕಾಪಿಟೇಷನ್‍ಗಳಿಗಾಗಿ ರಣಹದ್ದಿನಂತೆ ಕಾಯುವ ಕಾವಿದೈವಗಳು ವಿದ್ಯಾದಾನದ ಹೆಸರಲ್ಲಿ ವಿದ್ಯೆಯ ಮಾರಾಟ ಮಾಡುತ್ತಾ, ಮಾರಾಟ ಕೇಂದ್ರಗಳನ್ನಾಗಿ ಮಾಡಿಕೊಂಡಿರುವುದನ್ನೂ ನಾವು ಮರೆಯುವಂತಿಲ್ಲ.
ಮಣಗಟ್ಟಲೆ ಬಂಗಾರ ಸಂಗ್ರಹಿಸಿರುವ ಮಠಗಳು ದೇಶಾದ್ಯಂತ ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದು, ಕಾಂಪ್ಲೆಕ್ಸ್, ಹೋಟೆಲ್, ಸಿನಿಮಾ ಉದ್ಯಮದ ಕಡೆಗೂ ಹೆಜ್ಜೆ ಹಾಕಿ ಜನರನ್ನು ದೋಚಲು ಮುಂದಾಗಿವೆ. ಕಾಯಕವೇ ಕೈಲಾಸ ಎಂಬ ಮಾತೀಗ ಕಾಸಿದ್ರೆ ಕೈಲಾಸ ಎಂದು ಮಾರ್ಪಾಡಾಗಿದೆ. ಮಠಗಳಲ್ಲಿ ಕೊಳೆಯುತ್ತಿರುವ ಟನ್ ಗಟ್ಟಲೆ ಬೆಳ್ಳಿ, ಬಂಗಾರವನ್ನು ಸರ್ಕಾರಕ್ಕೆ ನೀಡಿ ದೇಶದ ಪ್ರಗತಿಗೆ ಸಹಕರಿಸಬೇಕಾದ ಸರ್ವಸಂಗ ಪರಿತ್ಯಾಗಿಗಳು ಎ.ಸಿ. ರೂಮುಗಳಲ್ಲಿ ಕಂಟೆಸಾ ಕಾರುಗಳಲ್ಲಿ, ಭವ್ಯ ಬಂಗಲೆಗಳಲ್ಲಿ, ಫಾರಿನ್ ಟೂರ್ ಗಳಲ್ಲಿ ಕಾಲ ಕಳೆಯುತ್ತಾ ಐಷಾರಾಮ ಜೀವನ ನಡಸುತ್ತಲಿದ್ದಾರೆ. ದೇಶಾದ್ಯಂತ ಇರುವ ಸಾವಿರಾರು ಎಕರೆ ಭೂಮಿಯಲ್ಲಿ ಮಠದ ಶ್ರೇಯಸ್ಸಿಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ಬಡಬಗ್ಗರಿಗೆ ನಿವೇಶನಗಳನ್ನಾಗಿ ಪರಿವರ್ತಿಸಿ ಹಂಚಿದರೆ ಅದೆಂತಹ ಸಾರ್ಥಕವಾದ ಕೆಲಸ ! ಜನೋಪಕಾರವಲ್ಲವೆ !
ಪ್ರಚಾರ
ಈ ಬಗ್ಗೆ ಆಲೋಚಿಸದೆ ಬರೀ ಅಡ್ಡಪಲ್ಲಕ್ಕಿ ಉತ್ಸವ ಬಿಟ್ಟೆ, ಪಾದಯಾತ್ರೆ ಹಿಡಿದೆ, ಪಾನನಿಷೇಧಕ್ಕೆ ಹೊರಟೆ ಸಾಮೂಹಿಕ ವಿವಾಹಗಳ ಜಾತ್ರೆ ನಡೆಸಿದೆ ಅಂತ ಪ್ರಚಾರ ಗಿಟ್ಟಿಸಿಕೊಳ್ಳುವ ಸ್ವಾಮಿಗಳು ಮಠದ ಆಸ್ತಿಯನ್ನು ಹೆಚ್ಚಿಸಿಕೊಳ್ಳಲು ಪಾನವಿರೋಧಿಗಳಾದ ತಾವು ಅಬ್ಕಾರಿ ದೊರೆಗಳಿಗೆ ‘ದಾನಶಿರೋಮಣಿ’ ಬಿರುದು ನೀಡಿ ಗೌರವಿಸುತ್ತಾ ಅವರಿಂದ ಕೋಟಿಗಟ್ಟಲೆ ದಾನ ಸ್ವೀಕರಿಸುತ್ತಿರುವುದು ಎಂಥ ವಿಪರ್ಯಾಸ!
ಚುನಾವಣೆಯಲ್ಲಿ ಅಂಥವರ ಪರವಾಗಿ ಕಾನ್ವಾಸ್ ಮಾಡುವ ಪಾರ್ಟ್‍ಟೈಂ ಕಾವಿ ರಾಜಕಾರಣಿಗಳೂ ನಮ್ಮಲ್ಲುಂಟು. ಒಂದು ತುತ್ತು ಅನ್ನವನ್ನು ಸ್ವತಃ ದುಡಿದು ತಿನ್ನಲರಿಯದ, ‘ಹಸಿವು’ ಎಂದರೇನು ಅಂತಲೇ ತಿಳಿಯದ ಇಂತಹ ಪರಪುಷ್ಪರಿಂದ ಕ್ರಾಂತಿ, ಸಾಮಾಜಿಕ ಪರಿವರ್ತನೆ ಸಾಧ್ಯವೆ ? ಇವರೆಲ್ಲಾ ಥೇಟ್ ವೈದಿಕಶಾಹಿಗಳ ಡೂಪ್ಲಿಕೇಟ್ ಗಳೆಂಬುದರಲ್ಲಿ ನೋ ಡೌಟ್.
ಶತಶತಮಾನಗಳಿಂದ ಪರಂಪರಾಗತವಾಗಿ ಬಂದ ಮಠಗಳಿಂದಲೇ ಈವತ್ತು ಸಮಪಾಲು ಸಮಬಾಳು ನೀಡಲು ಆಗದಿರುವಾಗ ಇಂಥ ಭೂಪತಿಗಳಿಂದ ಜನ್ಮ ತಳೆದ, ಸರಿಯಾದ ನೆಲಗಟ್ಟಿಲ್ಲದ ಕೆಳಜಾತಿಯ ಮಠಗಳು ಏನನ್ನು ತಾನೇ ಸಾಧಿಸಲು ಸಾಧ್ಯ ? ಹಿಂದುಳಿದ ಜಾತಿ ಜನಗಳಿಗೆ ಮಠಗಳಿಲ್ಲದೆ ಇದ್ದಾಗ ಆಗಿದ್ದ ನಷ್ಟವಾದರೂ ಏನು / ಇಂದಿನ ಸ್ಪೀಡ್ ಯುಗದಲ್ಲಿ ಎಷ್ಟು ಮಂದಿ ಮಠಕ್ಕೆ ಹೋಗಬಲ್ಲರು ? ಸ್ವಾಮಿಗಳಿಗೆ ಡೊಗ್ಗು ಸಲಾಂ ಹೊಡೆದಾರು. ಅದಕ್ಕೆಲಾ ಪುರುಸೊತ್ತಾದರೂ ಎಲ್ಲಿದೆ ! ಇವರು ಶ್ರೀಸಾಮಾನ್ಯನಿಗಿಂತ ಯಾವುದರಲ್ಲಿ ಶ್ರೇಷ್ಠರು ? ರಾಜಕಾರಣಿಗಳಂತೆ ಪೀಠಗಳಿಗಾಗಿ ಹಲ್ಲೆ ದರೋಡೆ ನಡೆಸುವ, ಡೆಂಟಲ್ಲು ಮೆಡಿಕಲ್ಲು ಎಂಜಿನೀರಿಂಗ್ ಕಾಲೇಜುಗಳಿಗೆ ಸರ್ಕಾರದ ಮುಂದೆ ಹಲ್ಲುಗಿಂಜಿ ಸಲಾಂ ಹೊಡೆದ, ಅಧಿಕಾರಿಗಳ ಬಾಲವಸೆಯುವ, ತಮ್ಮ ಜಾತಿಯವನನ್ನೇ ಮಂತ್ರಿಪದವಿಗೇರಿಸಲು ತಂತ್ರ ಕುತಂತ್ರ ನಡೆಸುವ ಈ ಆಶೆಬುರುಕ ‘ಡಾನ್’ಗಳನ್ನು ಗೌರವಿಸುವುದಾದರೂ ಹೇಗೆ ? ತಮ್ಮ ಪೀಠಗಳ ಉಳಿವಿಗಾಗಿ ಜಾತಿಯನ್ನು ಒಳಗೇ ಪ್ರೀತಿಸುವ ಇವರು, ಧರ್ಮದ ಹೆಸರಿನಲ್ಲಿ ದೇಶವನ್ನೇ ಛಿದ್ರ ಮಾಡಲೂ ಹೇಸದ ಪಟ್ಟಭದ್ರರು. ಇಂಥ ಮಹನೀಯರಿಂದ ತಯಾರಾದ ಕೆಳಜಾತಿಯ ಸ್ವಾಮಿಗಳಿಂದ ನಾವು ತಾನೆ ಮಹತ್ವದ್ದನ್ನು ನಿರೀಕ್ಷಿಸಲು ಶಕ್ಯವೇ ?
ಹಿಂದುಳಿದವರ ಆಶಾಕಿರಣದಂತೆ ಬಂದ ಆದಿಚುಂಚನಗಿರಿ ಮಹಾಸ್ವಾಮಿಗಳಂಥವರೇ ಇಂದು ಮುಂದುವರೆದ ಮಠಾಧಿಪತಿಗಳೊಂದಿಗೆ ಕೈಕುಲುಕಿ ಮೀಸಲಾತಿಗೆ ‘ಲಾತ’ ಹಾಕುವ ಕೊಳಕುತನ ತೋರುತ್ತಿರುವಾಗ ಯಾರನ್ನು ನಿಂದಿಸೋಣ? ಯಾರನ್ನು ನಂಬೋಣ? ಜಾತಿಗೆ ಒಬ್ಬ ಸ್ವಾಮಿ, ಮಠಗಳು ಬೇಕಿರುವುದು ಕೇವಲ ರಾಜಕಾರಣಿಗಳಿಗೆ ಮಾತ್ರ ರಾಜಕಾರಣಿಗಳು ನುಸುಳಿದ ಮಠ ಕೊನೆಯವರೆಗೂ ಪಾವಿತ್ರತೆ ಉಳಿಸಿಕೊಂಡೀತೆ ? ಚಿತ್ರದುರ್ಗದ ಬೃಹನ್ಮಠದ ಮಹಾಸಾಮಿಗಳು ಜಾತಿಗೊಬ್ಬ ಸ್ವಾಮಿಗಳನ್ನು ಹುಟ್ಟಿಸಿ ಶಾಖಾ ಮಠಗಳಿಗೆ ನೇಮಿಸಿ, ಅನುಭವ ಮ೦ಟಪದ ಪರಿಕಲ್ಪನೆಯನ್ನೇ ಸಾಕಾರಗೊಳಿಸುತ್ತೇನೆ ಎಂದು ಹಿಂದೆ ಹೇಳಿಕೊಂಡಾಗ ಅದನ್ನು ಮೆಚ್ಚಿ ನಾನು ಪತ್ರಿಕೆಗಳಿಗೆ ಬರೆದದ್ದುಂಟು. ಆದರೆ ಆ ಬಡಪಾಯಿ ಕಾವಿಗಳನ್ನು ಅವರವರ ಜಾತಿಗಳಿಗೆ ಸ್ವಾಮಿಗಳೆಂದು ನೇಮಿಸಹತ್ತಿರುವಾಗ ಇನ್ನು ಜಾತಿಯ ನಾಶ ಎಲ್ಲಿಂದ ಸಾಧ್ಯವಾದೀತು?
ಹಿಂದುಳಿದ ಮಂದಿ ಜಾಗೃತವಾಗಬೇಕು
ಹಿಂದುಳಿದವರು ಮುಂದುವರೆದ ಸ್ವಾಮಿಗಳ ಜಾಲಕ್ಕೆ ಬೀಳದೆ ಲೋಹಿಯಾ, ಅಂಬೇಡ್ಕರ್, ಬಸವಣ್ಣನವರ ತತ್ವಗಳನ್ನು ಇಂದಿಗೂ ಪಾಲಿಸುತ್ತಿರುವ ನಾಯಕರನ್ನು ಗುರುತಿಸಿ ಅವರ ನಾಯಕತ್ವದಲ್ಲಿಯೇ ಮುನ್ನಡೆ ಸಾಧಿಸಬೇಕೇ ವಿನಃ ಮಠಗಳನ್ನು ಕಟ್ಟಿಕೊಂಡು ಮತ್ತದೆ ಮೌಢ್ಯಗಳಿಗೆ ದಾಸರಾಗುವುದು ವಿಗತಿ. ಇನ್ನೂ ಕಾಲ ಮಿಂಚಿಲ್ಲ. ತಮ್ಮ ಉಳಿವಿಗಾಗಿ ಸ್ವಾರ್ಥಕ್ಕಾಗಿ ಕೆಳಜಾತಿಯವರಿಗೂ ಮಠದ ಹುಚ್ಚು ಹಿಡಿಸಿರುವ ಮೇಲುಜಾತಿಯ ಮಹಾಸ್ವಾಮಿಗಳ ಹೊಸ ತಂತ್ರಕ್ಕೆ ಬಲಿಯಾಗದೆ ಹಿಂದುಳಿದ ಮಂದಿ ಜಾಗೃತವಾಗಬೇಕಿದೆ. ಶೈಕ್ಷಣಿಕವಾಗಿ ನಾವಿಂದು ಮಠವನ್ನೇ ಅವಲಂಬಿಸಬೇಕಿಲ್ಲ. ಖಾಸಗಿ ಸಂಘ ಸಂಸ್ಥೆಗಳು ಇವಕ್ಕಿಂತ ಹೆಚ್ಚಿನ ಶಿಸ್ತು ಸಂಯಮದಿಂದ ಶಿಕ್ಷಣ ಸಂಸ್ಥೆಗಳನ್ನು ಸಕಲ ಸೌಲಭ್ಯಗಳೊಂದಿಗೆ ಆರಂಭಿಸುತ್ತಿವೆ – ನಡೆಸುತ್ತಿವೆ. ಸರಿಯಾದ ಪ್ರಯೋಗಶಾಲೆಗಳಿಲ್ಲದ, ಲೆಕ್ಚರರ್‌ಗಳಿಲ್ಲದ , ಸಿಬ್ಬಂದಿ ವರ್ಗವಿಲ್ಲದ ಕಾಲೇಜುಗಳನ್ನು ನಡೆಸುತ್ತಾ ವಿದೇಶಿ ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಡೊನೇಷನ್ ತಿನ್ನವ ಮಠಗಳು ಪಾಠ ಹೇಳುವ ಬೋಧಕರಿಗೆ, ಸಿಬ್ಬಂದಿಗೆ ಎಷ್ಟು ವೇತನ ಕೊಡುತ್ತಾರೆಂಬುದರ ಬಗ್ಗೆ ಮಾತನಾಡದಿರುವುದೇ ಲೇಸು. ಪಾಪಾಸ್ ಕಳ್ಳಿಯಂತೆ ಹುಟ್ಟುತ್ತಿರುವ ಜಾತೀಯ ಮಠಗಳಿಂದ ಸಾಮಾಜಿಕ ವಿಘಟನೆಯಾಗದಂತೆ ತಡೆಯಬೇಕಿದೆ. ಇಂತಹ ಅನಿಷ್ಟಗಳಿಗೆ ನಿಷ್ಠರಾಗದೆ ನಿಷ್ಟೂರತೆಯನ್ನು ಮೈಗೂಡಿಸಿಕೊಳ್ಳಬೇಕಿದೆ.
ಜಾತಿ, ಮತ, ಮಠ, ಧರ್ಮಗಳ ಹಂಗಿಲ್ಲದೆ ನಾವು ಹಾಯಾಗಿ ಬದುಕಬಹುದು. ಆದರೆ ಪ್ರೀತಿ ಇಲ್ಲದೆ ಕ್ಷಣ ಬದುಕಲಾರೆವು. ಯಾವುದೇ ಸೈದಾಂತಿಕ ಕಾರಣಗಳಿಲ್ಲದೆ ಮಳೆಗಾಲದ ಕಪ್ಪೆಗಳಂತೆ ಹುಟ್ಟಿಕೊಳ್ಳುತ್ತಿರುವ ಜಾತೀಯ ಮಠಗಳಿಗೆ ಮರುಳಾಗುವ ಬದಲು ಪ್ರಗತಿಪರ ಚಿಂತನೆಗಳ ಪರ ಪಣತೊಟ್ಟು ಹೋರಾಡುವುದು ಲೇಸು.
*****