ಕೊರಝೋನ್ ಡಿ ಮರಿಯಾದಲ್ಲಿ ಅಪ್ಪ-ಮಗ, ಯೆರಮೈಟ್ಸ್ ಹೆಸರಿನವರು, ಇದ್ದರು-ಬಹಳ ಹಿಂದಿನ ಕಾಲದಲ್ಲೇನೂ ಅಲ್ಲ. ಇಬ್ಬರದ್ದೂ ಒಂದೇ ಹೆಸರು. ಇಬ್ಬರನ್ನೂ ಗುರುತಿಸುವುದು ಕಷ್ಟವಲ್ಲದಿದ್ದರೂ ಒಬ್ಬನ ಹೆಸರು ಯೂರೆಮಿಯೋ ಸೆಡಿಲ್ಲೋ. ಇನ್ನೊಬ್ಬ ಕೂಡ ಯೂರೆಮಿಯೋ ಸೆಡಿಲ್ಲೋ. ಒಬ್ಬ ಇನ್ನೊಬ್ಬನಿಗಿಂತ ಇಪ್ಪತ್ತೈದು ಸಮೃದ್ಧ ವರ್ಷಗಳಷ್ಟು ದೊಡ್ಡವನು.
ಆ ಸಮೃದ್ಧಿ ಎತ್ತರವಾದ, ಬಲವಾದ ಮೈಕಟ್ಟಿನ ಸಮೃದ್ಧಿ; ನಮ್ಮಪ್ಪ ದೇವರು ಅದನ್ನೆಲ್ಲ ದಂಡಿಯಾಗಿ ಹಿರಿಯ ಯೂರೆಮಿಯೋಗೆ ಕೊಟ್ಟಿದ್ದ. ಕಿರಿಯನನ್ನು, ದೇಹದಲ್ಲಿ ಮಾತ್ರವಲ್ಲ ತಿಳಿವಳಿಕೆಯಲ್ಲೂ ಅದಕ್ಕೆ ವಿರುದ್ಧವಾಗಿ ಇರುವಂತೆ ಮಾಡಿದ್ದ. ಕಬ್ಬಿಣದ ಕಂಬಿಯ ಹಾಗೆ ತೆಳ್ಳಗೆ ಇದ್ದ; ಅವನ ಬದುಕು, ಅದನ್ನ ಬದುಕು ಅನ್ನುವುದಾದರೆ, ದ್ವೇಷದ ಬಂಡೆಯ ಕೆಳಗೆ ಸಿಕ್ಕಿ ನಲುಗಿಕೊಂಡು ಸಾಗುತಿತ್ತು. ಅವನು ಹುಟ್ಟಿದ್ದೇ ದುರಾದೃಷ್ಟ ಅಂತ ಅನ್ನಬಹುದು.
ಸ್ವತಃ ಅವನ ಅಪ್ಪನೇ ಅವನನ್ನು ಬಹಾಳ ದ್ವೇಷಿಸುತ್ತಾ ಇದ್ದ. ಯಾಕೆ ಅಂದರೆ, ಮಗುವಿಗೆ ಚರ್ಚಿನಲ್ಲಿ ತೀರ್ಥಸ್ನಾನ ಮಾಡಿಸಿದ್ದು ನಾನೇ. ಹಾಗೆ ನಡೆದುಕೊಂಡದ್ದು ಅವನ ಸ್ವಭಾವಕ್ಕೆ ತಕ್ಕ ಹಾಗೇ ಇತ್ತು ಅನ್ನಿಸತದೆ. ದೊಡ್ಡ ಗಾತ್ರ, ಸಾಮಾನ್ಯ ಮನುಷ್ಯರ ಒಂದೂವರೆಯಷ್ಟಿದ್ದ. ಅವನ ಪಕ್ಕದಲ್ಲಿ ನಿಂತರೆ ಸಾಕು, ನಿಂತು ನೋಡಿದರೆ ಸಾಕು, ಅವನ ಗಾತ್ರದ ಬಗ್ಗೆ, ಶಕ್ತಿಯ ಬಗ್ಗೆ ಭಯವಾಗುತಿತ್ತು. ಅವನು ಹಾಗಿದಾನೆ ನಾವು ಮಾತ್ರ ದೇವರಿಗೆ ಕೆಟ್ಟ ಮೂಡಿನಲ್ಲೋ ಕೆಲಸಕ್ಕೆ ಬಾರದ ಸ್ಪೇರ್‌ಪಾರ್ಟುಗಳನ್ನು ಬಳಸಿಕೊಂಡೋ ಸೃಷ್ಟಿಯಾದವರು ಅನಿಸುತಿತ್ತು. ಕೊರಝೋನ್ ಡಿ ಮರಿಯಾ ಮತ್ತೆ ಸುತ್ತಮುತ್ತಲ ಊರುಗಳಲ್ಲಿ ಅವನಷ್ಟು ಎತ್ತರ ಇದ್ದದ್ದು ಅವನೊಬ್ಬನೇ. ಅಲ್ಲಿನ ಜನ ಅಡ್ಡಡ್ಡ ಬೆಳೆಯುತಿದ್ದರೇ ಹೊರತು ಉದ್ದ ಬೆಳೆಯುತ್ತಿರಲಿಲ್ಲ. ಲೋಕದ ಗಿಡ್ಡರೆಲ್ಲ ಅಲ್ಲೇ ಹುಟ್ಟಿದವರು ಅನ್ನುತಿದ್ದರು ಜನ, ಆ ಊರಿನವರು ಆಗಬೇಕು ಅಂದರೆ ಗಿಡ್ಡರಾಗೇ ಇರಬೇಕು. ಅಲ್ಲಿಯವರು ಯಾರಾದರೂ ಇದ್ದರೆ, ಈ ಮಾತು ಕೇಳಿ ಬೇಜಾರು ಮಾಡಿಕೊಂಡಾರು. ಆದರೂ ನನ್ನ ಮಾತಿಗೆ ಬದ್ಧ ನಾನು.
ಆಗಲೇ ಹೇಳತಾ ಇದ್ದ ಮಾತಿಗೇ ಬರತೇನೆ. ಕೊರಝೋನ್ ಡಿ ಮರಿಯಾದಲ್ಲಿ ಕೆಲವು ವರ್ಷದ ಹಿಂದೆ ಇದ್ದವರ ಬಗ್ಗೆ ಹೇಳತಾ ಇದ್ದೆ. ಹಿರಿಯ ಯೂರೆಮಿಯೋಗೆ ಲಾಸ್ ಅನಿಮಾಸ್ ಅನ್ನುವ ದೊಡ್ಡ ಹುಲ್ಲುಗಾವಲು ಇತ್ತು. ಯಾವ ಯಾವದೋ ಕಾರಣಕ್ಕೆ ಹಾಳುಬಿದ್ದಿತ್ತು. ಬಹಳ ಮುಖ್ಯವಾದ ಕಾರಣ ಅಂದರೆ ಅವನು ಜಮೀನನ್ನ ಗಮನ ಕೊಟ್ಟು ನೋಡಿಕೊಳ್ಳತಾ ಇರಲಿಲ್ಲ. ಅದನ್ನ ತನ್ನ ಮಗನಿಗೆ ಪಿತ್ರಾರ್ಜಿತವಾಗಿ ಬಿಟ್ಟು ಹೋಗುವ ಆಸೆ ಅವನಿಗಿರಲಿಲ್ಲ. ಅವನ ಮಗ ನನ್ನ ಗಾಡ್ ಸನ್ ಅಂತ ಆಗಲೇ ಹೇಳಿದೆನಲ್ಲಾ. ತನ್ನ ಜಮೀನನ್ನೆಲ್ಲಾ ಕುಡಿದೇ ಖಾಲಿ ಮಾಡಿದ. ಅಷ್ಟಷ್ಟು ಜಮೀನು ಮಾರುವುದು, ಕುಡಿಯುವುದು, ಹೀಗೆ. ತನ್ನ ಮಗ ದೊಡ್ಡವನಾದಮೇಲೆ ಬದುಕುವುದಕ್ಕೆ ಯಾವ ಆಸರೆಯೂ ಇರಬಾರದು ಅದು ಅವನ ಉದ್ದೇಶ. ಬಹಳಾ ಮಟ್ಟಿಗೆ ಅವನ ಆಸೆ, ಅವನ ಉದ್ದೇಶ ಕೈ ಗೂಡಿತು. ಆ ಮಗ ನೆಲ ಬಿಟ್ಟು ಮೇಲೇಳಲೇ ಇಲ್ಲ. ಯಾರು ಯಾರೋ ಪುಣ್ಯಾತ್ಮರು ಅವನ ಕೈ ಹಿಡಿದು ಮೇಲೆತ್ತಿದರು. ಮಗನನ್ನ ನೋಡಿದರೆ ಸಾಕು ರಕ್ತ ಕುದಿಯುತದೆ ಅನ್ನುವ ಹಾಗೆ ಆ ಅಪ್ಪ ಮಗನ ಬಗ್ಗೆ ಇನ್ನೂ ಗಮನ ಕೊಡಲೇ ಇಲ್ಲ.
ಇದೆಲ್ಲ ಅರ್ಥವಾಗಬೇಕಾದರೆ ಸ್ವಲ್ಪ ಹಿಂದಿನ ಕಥೆ ಹೇಳಬೇಕು. ಆ ಹುಡುಗ ಹುಟ್ಟುವುದಕ್ಕೂ ಹಿಂದಿನ ಕಥೆ, ಹಿರಿಯ ಯೂರೆಮಿಯೋ ಆ ಹುಡುಗನ ತಾಯಿ ಆಗುವವಳನ್ನ ನೋಡುವುದಕ್ಕೂ ಮುಂಚಿನ ಕಥೆ.
ಆ ಹುಡುಗನ ತಾಯಿ ಹೆಸರು ಮಟಿಲ್ಡೆ ಆರ್‍ಚೆಂಜಲ್, ಅಂದ ಹಾಗೆ ಅವಳು ಕೊರಝೊನ್ ಡಿ ಮರಿಯಾ ಊರಿನವಳಲ್ಲ, ಇನ್ನೂ ಮೇಲೆ ಇದೆಯಲ್ಲ ಚುಪೆಡರೋಸ್‌ನವಳು, ಯೂರೆಮಿಯೋ ಯಾವತ್ತೂ ಆ ಊರಿಗೆ ಹೋದವನಲ್ಲ. ಹೆಚ್ಚೆಂದರೆ ಯಾರಾದರೂ ಮಾತಾಡುವಾಗ ಆ ಊರಿನ ಹೆಸರು ಹೇಳಿದ್ದು ಕೇಳಿದ್ದಾನು ಅಷ್ಟೆ. ಆ ಸುಮಾರಿನಲ್ಲಿ ನನಗೂ ಅವಳಿಗೂ ನಿಶ್ಚಿತಾರ್ಥ ಆಗಿತ್ತು. ಮುಂದೆ ಏನಾಗತದೆ ಅದು ಯಾರಿಗೂ ಗೊತ್ತಿರಲ್ಲವಲ್ಲಾ. ಹಾಗೇ ನಾನೂ ಅವನನ್ನ ಕರೆದುಕೊಂಡು ಹೋಗಿ ಹುಡುಗಿಯ ಪರಿಚಯ ಮಾಡಿಸಿದೆ; ಅವಳು ಎಷ್ಟು ಚಂದ ಅಂತ ತೋರಿಸಿ ಜಂಬ ಪಡುವ ಆಸೆ, ಮತ್ತೆ ನನ್ನ ಮದುವೆಗೆ ದಾತಾರನಾಗು ಅಂತ ಕೇಳುವ ಅಪೇಕ್ಷೆ. ನನಗೆ ಖಂಡಿತ ಗೊತ್ತಿರಲಿಲ್ಲ-ನನ್ನ ಬಗ್ಗೆ ಅವಳು ಇದೆ ಅಂತ ಹೇಳುತಿದ್ದ ಭಾವನೆಗಳನ್ನೆಲ್ಲ ಅಷ್ಟು ಬೇಗ ಒಣಗಿಸಿ ಆರಿಸಿಕೊಂಡುಬಿಡುತ್ತಾಳೆ, ಅವನ ಬಿಸಿ ಉಸಿರಿನ ಬಿಸಿ ಮಾಯವಾಗತದೆ, ಅವಳ ಮನಸ್ಸನ್ನ ಬೇರೆಯವರು ಕದ್ದು ಬಿಡುತ್ತಾರೆ ಇದೆಲ್ಲ ನನಗೆ ಗೊತ್ತಿರಲಿಲ್ಲ.
ಇದೆಲ್ಲ ಗೊತ್ತಾಗಿದ್ದು ತುಂಬಾ ಆಮೇಲೆ.
ಇರಲಿ, ಮೊದಲು ಮೆಟ್ಟಿಲ್ಡಾ ಆರ್‍ಚೇಂಜಲ್ ಎಂಥಾವಳು ಅನ್ನುವುದು ನಿಮಗೆ ಗೊತ್ತಾಗಬೇಕು. ಅದನ್ನೇ ಹೇಳುವುದಕ್ಕೆ ಬಂದೆ. ಅರ್ಜೆಂಟು ಬೇಡ. ನಿಧಾನವಾಗಿ ಹೇಳತೇನೆ. ನಮ್ಮ ಇಡೀ ಆಯುಷ್ಯಾನೇ ಇದೆಯಲ್ಲ ಹೇಳುವುದಕ್ಕೆ, ಕೇಳುವುದಕ್ಕೆ.
ಅವಳು ಡೊನಾ ಸಿನೇಸಿಯಾ ಮಗಳು, ಅದೇ, ಚುಪಾಡೆರೋದಲ್ಲಿ ಹೆಂಡದಂಗಡಿ ಇದೆಯಲ್ಲ, ನಮ್ಮ ದಿನಗೂಲಿಯೆಲ್ಲ ಹೋಗಿ ಹೋಗಿ ಸಾಯುತ್ತಲ್ಲಾ ಅದೇ ಅಂಗಡಿಯ ಓನರು. ಹಾಗಾಗಿ ನಾವು, ಕತ್ತೆ ಹೊಡೆದುಕೊಂಡು ಹೊಗುತ್ತೇವಲ್ಲ ನಮಗೆಲ್ಲ ಅವಳ ಪರಿಚಯ ಆಗಿತ್ತು. ಮೆಟಿಲ್ಡಾನ ನೋಡಿ ಕಣ್ಣು ತಂಪು ಮಾಡಿಕೊಳ್ಳುತ್ತಾ ಇದ್ದೆವು. ಆ ದಿನಗಳಲ್ಲಿ ಮೆಟಿಲ್ಡಾ ಹುಡುಗಿ, ಗಂಟಲಲ್ಲಿ ನೀರು ಇಳಿಯುವಷ್ಟು ಸಲೀಸಾಗಿ ನಮ್ಮೊಳಗೆ ಇಳಿದಿದ್ದಳು.
ಯಾವತ್ತೋ ಒಂದು ದಿನ, ಹೇಗೋ ಏನೋ, ನಮಗೆ ಗೊತ್ತೇ ಆಗದ ಹಾಗೆ ಅವಳು ಹೆಣ್ಣಾಗಿಬಿಟ್ಟಿದ್ದಳು. ಕನಸಿನಂಥ ನಗು ಅವಳ ಮುಖದಿಂದ ಏಳುತಿತ್ತು. ನೋಡಿದವರ ಮನಸ್ಸಿಗೆ ಮೊಳೆಯ ಹಾಗೆ ಆಳವಾಗಿ ಸಲೀಸಾಗಿ ಇಳಿದುಬಿಡುತಿತ್ತು. ಆಮೇಲೆ ಅದನ್ನ ಕೀಳುವುದಕ್ಕೆ ಬಹಳ ಕಷ್ಟ, ನೋವು ಪಡಬೇಕಾಗುತಿತ್ತು. ಮುತ್ತುಗಳಿಂದ ಭಂಗಪಟ್ಟ ಹಾಗೆ ಅವಳ ತುಟಿ ಅರಳುತಿತ್ತು. ಅವಳು ಚೆಲುವೆ ಅಂತಲೇ ಅನ್ನಬೇಕು.
ತಕ್ಕವನಲ್ಲ ಅಂದುಕೊಂಡರೆ ಪರವಾಗಿಲ್ಲ. ಹೇಳಿ ಕೇಳಿ ನಾನು ಕತ್ತೆ ನೋಡಿಕೊಳ್ಳುವವನು. ಆ ಕೆಲಸದಲ್ಲಿ ಖುಷಿ ಇದೆ. ರಸ್ತೆ ಹಿಡಿದು ದೂರ ದೂರ ಹೋಗತಾ ನನ್ನಷ್ಟಕ್ಕೇ ಮಾತಾಡಿಕೊಳ್ಳಬಹುದು.
ಅವಳ ದಾರಿ ಬಲು ದೂರದ್ದು. ಅಷ್ಟುದ್ದದ ದಾರಿ ನಾನು ಬದುಕಿನಲ್ಲೇ ಯಾವತ್ತೂ ಸವೆಸಿದ್ದಿಲ್ಲ. ಅಷ್ಟು ದಾರಿ ಸಾಗುವಾಗಲೂ ಅವಳ ಮೇಲಿನ ನನ್ನ ಪ್ರೀತಿ ಯಾವತ್ತಾದರೂ ಕಡಮೆ ಆಗತದೆ ಅನ್ನಿಸಿದ್ದಿಲ್ಲ.
ಕಥೆ ಮುಗಿಯಿತು. ಯೂರೆಮಿಯೋ ಅವಳನ್ನು ಸ್ವಾಧೀನಕ್ಕೆ ಪಡೆದಿದ್ದ.
ಒಂದು ಸಾರಿ ಹೀಗೇ ಯಾವುದೋ ಊರಿಗೆ ಕತ್ತೆಯನ್ನು ಬಾಡಿಗೆಗೆ ತೆಗೆದುಕೊಂಡು ಹೊಗಿದ್ದವನು ವಾಪಸು ಬಂದಾಗ ಅವಳು ಆಗಲೇ ಮದುವೆಯಾಗಿಬಿಟ್ಟಿದ್ದಳು-ಲಾಸ್ ಅನಿಮಾಸ್ ಜಮೀನಿನ ದಣಿಯನ್ನ, ಆಸೆಗೆ ಬಲಿಬಿದ್ದಿದ್ದಳು, ಅವನ ಗಾತ್ರ ನೋಡಿ ಮರುಳಾಗಿದ್ದಳು ಅಂದುಕೊಂಡೆ. ಕಾರಣಗಳೇನು ಬೇಕಾದಷ್ಟು ಸಿಗುತಿದ್ದವು. ಆದರೂ ನನಗೆ ತುಂಬ ನೋವಾಗಿದ್ದು, ಕಿಬ್ಬೊಟ್ಟಗೆ ಪೆಟ್ಟು ಬಿದ್ದರೆ ತುಂಬ ನೋವಾಗುತದಲ್ಲ ಹಾಗೆ ನೋವಾಗಿದ್ದು ಯಾಕೆಂದರೆ ಅವಳನ್ನು ದಿನಾ ನೋಡಿ ಅವಳ ನೋಟದ ಶಾಖದಲ್ಲಿ ಬೆಚ್ಚಗಾಗುತಿದ್ದ ಕೆಲಸಕ್ಕೆ ಬಾರದ ಗಂಡಸರ ಗುಂಪನ್ನೆಲ್ಲ ಅವನು ಮರೆತೇಬಿಟ್ಟಿದ್ದ. ಅದರಲ್ಲೂ ನಾನು, ಟ್ರಾಂಕ್ವಿಲಿನೋ ಹರೇರನನ್ನು, ಅವಳ ಜೊತೆ ನಿಶ್ಚಿತಾರ್ಥವಾಗಿದ್ದವನನ್ನು, ಮರೆತೇಬಿಟ್ಟಿದ್ದ. ಆದರೂ, ನಿಜ ಏನೆಂದರೆ, ಹಸಿವು ತಾಳಲಾಗದೆ ಇದ್ದಾಗ ಯಾವುದೇ ಪ್ರಾಣಿ ಕೊಟ್ಟಿಗೆ ಬಿಟ್ಟು ಓಡಿಹೋಗುವುದು ನಿಮಗೂ ಗೊತ್ತಲ್ಲ. ಅವಳಿಗೂ ಯಾವತ್ತೂ ಹೊಟ್ಟೆ ತುಂಬುವಷ್ಟು ಊಟ ಸಿಕ್ಕಿರಲಿಲ್ಲ ಅನ್ನಬಹದು. ಮನೆಯಲ್ಲಿ ಬಹಳ ಜನ ಇದ್ದೆವು, ಅವಳ ಪಾಲಿಗೆ ಬರುತಿದ್ದದ್ದು ಅವಳಿಗೆ ಸಾಕಾಗುತ್ತಿರಲಿಲ್ಲ. ಒಂದೊಂದು ಸಾರಿ ತನ್ನ ಪಾಲಿನ ತುತ್ತು ನಮ್ಮ ಬಾಯಿಗೇ ಇಡುತಿದ್ದಳು.
ಆಮೇಲೆ ಅವಳಿಗೆ ಚೆನ್ನಾಗಿ ಮೈ ಬಂತು. ಮಗುವಾಯಿತು. ಆಮೇಲೆ ಸತ್ತು ಹೋದಳು. ಲಾಯ ಬಿಟ್ಟು ಓಡಿ ಬಂದಿದ್ದ ಕುದುರೆಯ ಕಾಲಿಗೆ ಸಿಕ್ಕಿ ಸತ್ತು ಹೋದಳು.
* * *
ಆಗ ತಾನೇ ಮಗುವಿಗೆ ತೀರ್ಥಸ್ನಾನ ಮಾಡಿಸಿಕೊಂಡು ಬಂದಿದ್ದೆವು. ಮಗು ಎತ್ತಿಕೊಂಡಿದ್ದಳು. ಕುದುರೆ ಅದು ಹೇಗೆ ಕಟ್ಟು ಬಿಚ್ಚಿಕೊಂಡಿತು ಅನ್ನುವ ವಿವರವೆಲ್ಲ ನಿಮಗೆ ಹೇಳಲಾರೆ. ಯಾಕೆ ಅಂದರೆ ನಾನು ಮುಂದೆ ನಡೀತಾ ಇದ್ದೆ. ಕಂದು ಬಣ್ಣದ ಕುದುರೆ, ಅಷ್ಟು ಮಾತ್ರ ಜ್ಞಾಪಕ ಇದೆ. ಅದು ಮಳೆಯ ಮೋಡದ ಹಾಗೆ ನಮ್ಮನ್ನ ದಾಟಿ ಹೋಯಿತು. ಕುದುರೆಗಿಂತ ಅದು ಹೋದ ಸ್ಪೀಡಿಗೆ ಎದ್ದ ಗಾಳಿಯನ್ನು ಏನಪ್ಪಾ ಇದು ಅಂತ ನೋಡಿದೆವು. ಒಂದಿಷ್ಟಗಲ, ನೆಲದ ಮೇಲೆ ಕಲೆ ಆದ ಹಾಗೆ, ನೆಲದ ಮೇಲೆ ನಿಂತಿದ್ದ ನೀರಿನಲ್ಲಿ ಮುಖ ಅಡಿಯಾಗಿ ಬಿದ್ದಿದ್ದಳು ಮೆಟಿಲ್ಡಾ ಆರ್‍ಚೆಂಜೆಲ್. ನಾವೆಲ್ಲಾ ಅಷ್ಟೊಂದು ಇಷ್ಟಪಡುತ್ತ ಪ್ರೀತಿಮಾಡುತಿದ್ದ ಪುಟ್ಟ ಮುಖ, ಇನ್ನೂ ಚಡಪಡಿಸುತ್ತಿದ್ದ ಮೈಯಿಂದ ಉಕ್ಕಿಬರುತಿದ್ದ ರಕ್ತವನ್ನು ತೊಳೆದುಕೊಳ್ಳುವ ಹಾಗೆ ಕೆಸರು ನೀರಿಗೆ ಬಗ್ಗಿದ್ದಾಳೆ ಅನ್ನುವ ಹಾಗಿತ್ತು.
ಇದು ನಡೆದಾಗ ಅವಳು ನಮ್ಮ ಮನೆಯವಳಾಗಿರಲಿಲ್ಲ, ಯೂರೆಮಿಯೋ ಸೆಡಿಲ್ಲೋನ ಸ್ವತ್ತು ಆಗಿದ್ದಳು. ಅವಳನ್ನ ತನ್ನ ಹಾಗೇ ತಿದ್ದಿಕೊಂಡಿದ್ದ. ಮೆಟಿಲ್ಡ ಮಾತ್ರ ನಿಜಕ್ಕೂ ಅದ್ಭುತವಾಗಿದ್ದಳು. ಅವಳನ್ನ ತನ್ನ ಹಾಗೆ ತಿದ್ದಿಕೊಂಡದ್ದು ಮಾತ್ರವಲ್ಲ, ಅವಳ ಚರ್ಮ, ಮಾಂಸವನ್ನು ದಾಟಿ ಒಳಹೊಕ್ಕು ಅವಳು ಬಸಿರಾಗಿ ಮಗುವನ್ನು ಹೆರುವ ಹಾಗೆ ಮಾಡಿದ್ದ. ಹಾಗಾಗಿ ಅವಳು ತೀರಿಕೊಳ್ಳುವ ಹೊತ್ತಿಗೆ ಅವಳು ಬರಿಯ ನೆರಳು, ನೆನಪಿನ ಒಂದು ಎಳೆ ಅಷ್ಟೇ ಆಗಿಬಿಟ್ಟಿದ್ದಳು.
ಆದರೂ ಅವಳನ್ನ ನೋಡದೆ ಇರುವುದಕ್ಕೆ ಆಗತಿರಲಿಲ್ಲ. ಅವರ ಮಗನಿಗೆ ಗಾಡ್ ಫಾದರ್ ಆಗುವುದಕ್ಕೆ ಒಪ್ಪಿಕೊಂಡೆ, ಹಾಗಾದರೂ ಸ್ವಲ್ಪ ಹೊತ್ತು ಅವಳ ಹತ್ತಿರದಲ್ಲಿರಬಹುದು
ಅಂತ.
ಹಾಗಾಗಿ ನನ್ನ ಪಕ್ಕದಲ್ಲಿ ಬೀಸಿಕೊಂಡು ಹೋದ, ಅವಳ ಬದುಕಿನ ಉರಿಯನ್ನು ನಂದಿಸಿದ ಗಾಳಿ ಇನ್ನೂ ಬೀಸುತ್ತಲೇ ಇದೆ, ನನ್ನ ತಾಕುತ್ತಲೇ ಇದೆ ಅನ್ನಿಸುತ್ತದೆ.
ನೀರು ತುಂಬಿದ್ದ ಅವಳ ಕಣ್ಣು ಮುಚ್ಚಿಸಿ, ಅವಳ ಒಳ ಹೊಕ್ಕು, ಪ್ರಾಣಿ ಅವಳನ್ನು ಬೀಳಿಸಿ ಓಡಿ ಹೋದಮೇಲೂ ಅವಳು ಕೆಳಕ್ಕೆ ಬೀಳುವವರೆಗೆ ಹೆಚ್ಚುತ್ತಲೇ ಇದ್ದ ನೋವನ್ನು ತಾಳದೆ ಸೊಟ್ಟಗಾಗಿದ್ದ ಬಾಯಿ ನೇರ ಮಾಡುವ ಕೆಲಸ ನನ್ನ ಪಾಲಿಗೆ ಬಂತು. ಹೇಳಿದೆನಲ್ಲಾ ಆಗಲೇ, ಮಗುವನ್ನು ತೋಳಿನಲ್ಲಿ ಅವುಚಿಕೊಂಡಿದ್ದಳು. ಅವಳ ಬದುಕಿನ ದುರಂತ ಹೀಗೆ ತೆರೆದುಕೊಳ್ಳುತಿದ್ದಾಗ ರಕ್ತ ಸೋರಿ ಮೈ ಸೆಟೆದುಕೊಳ್ಳುತಿತ್ತು. ಕಣ್ಣು ತೆರೆದುಕೊಂಡು ನೋಟ ಮಗುವಿನ ಮೇಲೆ ನೆಟ್ಟಿತ್ತು. ಕಣ್ಣೀರಿನಿಂದಲ್ಲ, ರಸ್ತೆಯ ಮೇಲೆ ನಿಂತಿದ್ದ ಕೊಳಕು ನೀರಿನಿಂದ ಅವಳ ಮುಖ ಒದ್ದೆಯಾತ್ತು. ಮಗುವಿನ ಮೈ ಮೇಲೆ ಬಿದ್ದಿಲ್ಲ ಅನ್ನುವ ಸಂತೋಷ ಆದಹಾಗಿತ್ತು ಅವಳಿಗೆ. ಆ ಸಂತೋಷದ ಬೆಳಕು ಅವಳ ಕಣ್ಣಲ್ಲಿತ್ತು. ಅಗಲೇ ಹೇಳಿದೆನಲ್ಲ ಅವಳು ಬದುಕಿದ್ದಾಗ ಇತ್ತು ಅಂತ, ಅಂಥದೇ ನೇವರಿಸುವ ನೋಟ ಅವಳ ಕಣ್ಣಲ್ಲಿತ್ತು.
ಅವಳ ಸಮಾಧಿ ಮಾಡಿದೆವು. ಮುಟ್ಟಲಾಗದ ಅವಳ ಬಾಯಿಯ ತುಂಬ ನಿಧಾನವಾಗಿ ಮಣ್ಣು ತುಂಬುತಿತ್ತು. ನಾವು ನೋಡುತ್ತಾ ಇದ್ದ ಹಾಗೇ ಅವಳ ಆಕಾರ ಒಂದಿಷ್ಟೂ ಕಾಣದ ಹಾಗೆ ಇಡಿಯಾಗಿ ಗೋರಿಯೊಳಕ್ಕೆ ಸೇರಿ ಹೋದಳು. ಬೇಲಿಯ ಕಂಬದ ಹಾಗೆ ಯೂರೆಮಿಯೋ ಸೆಡಿಲ್ಲೋ ಅಲ್ಲೇ ನಿಂತಿದ್ದ. ‘ಚುಪಾಡೆರೋದಲ್ಲಿ ಅವಳ ಪಾಡಿಗೆ ಅವಳನ್ನ ಅವನು ಬಿಟ್ಟಿದ್ದಿದ್ದರೆ ಇನ್ನೂ ಬದುಕಿರುತಿದ್ದಳೇನೋ ಅಂದುಕೊಂಡೆ.
‘ಆ ಹುಡುಗನದೇ ತಪ್ಪು. ಇಲ್ಲದಿದ್ದರೆ ಅವಳಿನ್ನು ಬದುಕಿರುತಿದ್ದಳು’ ಅಂತ ಹೇಳುವುದಕ್ಕೆ ಶುರುಮಾಡಿದ. ಅವರು ಸವಾರಿ ಮಾಡತಾ ಇದ್ದ ಕುದುರೆ ಬೆದರಿದಾಗ ಮಗುವಿಗೆ ಯಾಕೋ ಗೂಬೆಯ ಥರ ಕಿರುಚಬೇಕು ಅನ್ನಿಸಿತು ಅಂದ. ಮಗು ಕಿರುಚದ ಹಾಗೆ ನೋಡಿಕೋ ಅಂತ ಅವನು ತಾಯಿಗೆ ಎಷ್ಟೋ ಸಾರಿ ಹೇಳಿದನಂತೆ. ‘ಅವಳು ಬೀಳುವುದನ್ನ ತಪ್ಪಿಸಿಕೊಳ್ಳಬಹುದಾಗಿತ್ತು, ಮಗು ಬೀಳದಿರಲಿ ಅಂತ ನೋಡಿಕೊಳ್ಳುವುದಕ್ಕೆ ಓರೆಯಾಗಲು ಹೋಗಿ ಜೀವಬಿಟ್ಟಳು. ಅದಕ್ಕೇ ಮತ್ತೆ, ಹೇಗೆ ನೋಡಿದರೂ ಮಗುವಿನದ್ದೇ ತಪ್ಪು. ಅದು ಬಡಿದುಕೊಳ್ಳುವುದಕ್ಕೆ ಶುರುಮಾಡಿದರೆ ಎಂಥಾವರಿಗೂ ಹೆದರಿಕೇನೇ. ಇಂಥಾ ಮಗೂನ ಹೇಗೆ ಪ್ರೀತಿ ಮಾಡಲಿ? ಅವಳು ನನಗೆ ಬೇಕಾದಷ್ಟು ಮಕ್ಕಳನ್ನ ಹೆತ್ತು ಕೊಡತಿದ್ದಳು. ಈ ಮಗ ನನ್ನ ಸುಖಕ್ಕೂ ಅಡ್ಡ ಬಂದ,’ ಅಂತ ಸಿಡುಕುತ್ತಾ ಇದ್ದ. ಸತ್ತು ಹೋದ ಹೆಂಗಸಿನ ಮೇಲೆ ಅವನಿಗೆ ಪ್ರೀತಿ ಇತ್ತೋ ಸಿಟ್ಟು ಇತ್ತೋ ಸತ್ತಳು ಅಂತ ದುಃಖ ಇತ್ತೋ ಗೊತ್ತಾಗತಾ ಇರಲಿಲ್ಲ.
ಮಗನ ಮೇಲೆ ಅವನಿಗೆ ಇದ್ದ ದ್ವೇಷ ಮಾತ್ರ ಗೊತ್ತಾಗತಾ ಇತ್ತು.
ಮೊದಲಿನಿಂದಲೂ ನಿಮಗೆ ಹೇಳತಾ ಇರುವುದೇ ಅದನ್ನ, ಹಿರಿಯ ಯೂರೆಮಿಯೋ ಕುಡಿಯುವುದಕ್ಕೆ ಶುರುವಿಟ್ಟುಕೊಂಡ. ಎಷ್ಟು ಕುಡಿದ ಅಂದರೆ ಕ್ರಮೇಣ ಇಷ್ಟಿಷ್ಟೆ ಜಮೀನು ಮಾರಿ ಪೀಪಾಯಿಗಟ್ಟಲೆ ಬಿಂಗಾರೋಟ್ ತರಿಸಿ ಕುಡಿದ. ಒಂದು ಸಾರಿಯಂತೂ ಸ್ವತಃ ನಾನೇ ಸಾಲು ಸಾಲು ಕತ್ತೆಗಳ ಮೇಲೆ ಪೀಪಾಯಿಗಳನ್ನು ತಂದು ಹಿರಿಯ ಯೂರೆಮಿಯೋಗೆ ಕೊಟ್ಟಿದ್ದೆ. ಕುಡಿದು, ತನ್ನ ಶಕ್ತಿಯನ್ನೆಲ್ಲ ನನ್ನ ಗಾಡ್ ಸನ್‌ನನ್ನು ಹೊಡೆಯುವುದಕ್ಕೆ ಖರ್ಚುಮಾಡುತಿದ್ದ. ಕೈ ಸೋಲುವ ತನಕ ಹೊಡೆಯುತಿದ್ದ.
ಹೀಗೇ ಎಷ್ಟೋ ವರ್ಷ ಕಳೆದವು. ಅಪ್ಪ ಏನೇ ಮಾಡಿದರೂ ಕಿರಿಯ ಯೂರೆಮಿಯೋ ಅವರಿವರ ಕರುಣೆಯಲ್ಲೇ ಬೆಳೆದ. ಅವನು ಹುಟ್ಟಿದಾಗ ಜೊತೆಗೆ ತಂದಿದ್ದ ಉಸಿರು ಬಿಟ್ಟರೆ ಅವನದ್ದು ಅಂತ ಬೇರೆ ಏನೂ ಇರಲಿಲ್ಲ. ಹೇಡಿಯೆಂದೂ ಕೊಲೆಗಾರನೆಂದೂ ಅಪ್ಪ ದಿನವೂ ಮಾಡುತಿದ್ದ ನಿಂದನೆಗಳಿಂದ ಜಜ್ಜಿ ಹೋಗಿದ್ದ ಅವನು. ಮಗನನ್ನು ಕೊಲ್ಲುವ ಬಯಕೆ ಇರದಿದ್ದರೂ ಹಸಿವಿನಿಂದ ಸಾಯಲಿ, ಸತ್ತು ಅವನ ನೆನಪ ಒರೆಸಿಹೋಗಲಿ ಅಂತಲೇ ಅಪ್ಪ ಬಯಸುತ್ತಾ ಇದ್ದ. ಆದರೂ ಅವನು ಬದುಕಿಕೊಂಡ. ಅಪ್ಪ ಮಾತ್ರ ಕಾಲದ ಬೆಟ್ಟದ ಇಳಿಜಾರಿನಲ್ಲಿ ಉರುಳಿ ಹೋಗುತ್ತಾ ಇದ್ದ. ನಿಮಗೂ ಗೊತ್ತು, ನನಗೂ ಗೊತ್ತು, ಎಲ್ಲಾರಿಗೂ ಗೊತ್ತು- ಮನುಷ್ಯನಿಗೆ ಎಲ್ಲಾ ಭಾರಗಳಿಗಿಂತ ಕಾಲದ ಹೊರೆಯ ಭಾರ ಮಾತ್ರ ತೀರ ಸಹಿಸುವುದಕ್ಕೆ ಕಷ್ಟದ್ದು, ಹಾಗಾಗಿ ಮನಸ್ಸಿನ ಕಹಿಯನ್ನು ಬೆಳೆಸಿಕೊಳ್ಳುತ್ತಲೇ ಹೋದರೂ ಅವನ ದ್ವೇಷ ಮಾತ್ರ ಕಡಮೆಯಾಗುತ್ತ ಇಬ್ಬರದೂ ಜೀವಂತ ಒಂಟಿಬಡಕ ಬದುಕಾಗಿತ್ತು.
ನಾನೇನೂ ಅವರನ್ನ ನೋಡುವುದಕ್ಕೆ ಹೋಗತಾ ಇರಲಿಲ್ಲ. ಯಾರೋ ಹೇಳಿದ್ದು ಕೇಳಿದೆ. ಅಪ್ಪ ಕುಡಿದು ಮಲಗಿದ್ದಾಗ ನನ್ನ ಗಾಡ್ ಸನ್ ಕೊಳಲು ನುಡಿಸುತ್ತಾ ಇದ್ದನಂತೆ. ಅಪ್ಪ ಮಗ ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡತಾ ಇರಲಿಲ್ಲ. ಆದರೂ ಕೊರಝೋನ್ ಡಿ ಮರಿಯಾದವರಿಗೆಲ್ಲ ದಿನಾ ರಾತ್ರಿ ಕೊಳಲು ಕೇಳುತಿತ್ತು, ಒಂದೊಂದು ಸಾರಿ ಮಧ್ಯರಾತ್ರಿ ಕಳೆದ ಮೇಲೂ ಕೇಳುತ್ತಲೇ ಇರುತಿತ್ತು.
ಕಥೆ ಸ್ವಲ್ಪದರಲ್ಲಿ ಹೇಳಬೇಕು ಅಂದರೆ-ಒಂದು ದಿನ, ಎಲ್ಲಾ ನಿಶ್ಯಬ್ದವಾಗಿದ್ದಾಗ, ಇತ್ತೀಚೆಗೆ ಸಾಮಾನ್ಯವಾಗಿ ನಮ್ಮ ಕಡೆ ಊರುಗಳೆಲ್ಲ ಪ್ರತಿ ದಿನವೂ ನಿಶ್ಯಬ್ದವಾಗೇ ಇರತವೆ, ಒಂದಷ್ಟು ತಂಟೆಕೋರರು ಕೊರಝೋನ್ ಡಿ ಮರಿಯಾಕ್ಕೆ ಬಂದರು. ಬೀದಿಯಲ್ಲೆಲ್ಲ ಹುಲ್ಲು ಬೆಳೆದಿದ್ದರಿಂದ ಒಂದಿಷ್ಟೂ ಸದ್ದೇ ಆಗಲಿಲ್ಲ. ಎಲ್ಲಾರೂ ಕುದುರೆ ಸವಾರಿ ಮಾಡತಾ ಇದ್ದರೂ ನಿಶ್ಯಬ್ದವಾಗಿ ಊರು ದಾಟಿ ಹೋದರು. ಎಷ್ಟು ನಿಶ್ಯಬ್ದ ಇತ್ತು ಅಂದರೆ ಕಡಲ ಹಕ್ಕಿಗಳ ಕೂಗು, ಮಿಡಿತೆಗಳ ಕಿಟಿಕಿಟಿ ಕೇಳತಾ ಇತ್ತಂತೆ. ಅವಕ್ಕಿಂತ ಹೆಚ್ಚಾಗಿ ಅವರು ಯೆರುಮಿಯೋ ಮನೆಯ ಹತ್ತಿರ ಬಂದಹಾಗೆ ಕೊಳಲಿನ ಸದ್ದು ಕೇಳತಾ ಇತ್ತಂತೆ, ಆಮೇಲೆ ದೂರ ಆಗತಾ ಆಗತಾ ಮಾಯವಾಯಿತಂತೆ.
ಆ ತಂಟೆಕೋರರು ಯಾರೋ, ಏನು ಮಾಡಿದರೋ ಯಾರಿಗೆ ಗೊತ್ತು? ನಿಜ ಏನಪ್ಪ ಅಂದರೆ, ಇದು ನಾನು ಕೇಳಿದ ಮಾತು, ಸರ್ಕಾರದ ಸೈನ್ಯದ ತುಕಡಿ ಬಂದು, ನಿಲ್ಲದೆ, ಊರನ್ನು ದಾಟಿಕೊಂಡು ಹೋಯಿತಂತೆ. ಆವಾಗ ಹಿರಿಯ ಯೆರುಮಿಯೋ, ಅಷ್ಟು ಹೊತ್ತಿಗಾಗಲೇ ವೀಕ್ ಆಗಿದ್ದವನು, ‘ನನ್ನನ್ನೂ ಕರಕೊಂಡು ಹೋಗಿ,’ ಅಂತ ಕೇಳಿದನಂತೆ. ಅವರು ಅಟ್ಟಿಸಿಕೊಂಡು ಹೋಗತಾ ಇದ್ದ ತಂಟೆಕೋರ ಕಳ್ಳರಲ್ಲಿ ಒಬ್ಬನ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂದನಂತೆ. ಅವರು ಹೂಂ ಅಂದರು; ಅವನು ರೈಫಲ್ ಹಿಡಿದುಕೊಂಡು, ಕುದುರೆ ಹತ್ತಿ ಅವರ ಜೊತೆ ಹೊರಟುಬಿಟ್ಟ, ಆಗಲೇ ಹೇಳಿದ್ದೆನಲ್ಲ, ಅವನು ಮನುಷ್ಯನ ಹಾಗೆ ಕಾಣುವುದಕ್ಕಿಂತ ಉದ್ದವಾದ ಬಾವುಟದ ಕೋಲಿನ ಹಾಗೆ ಕಾಣುತಿದ್ದ. ತಲೆಗೆ ಹ್ಯಾಟು ಇರಲಿಲ್ಲ, ಉದ್ದ ಕೂದಲು ಗಾಳಿಗೆ ಹಾರಾಡುತಿತ್ತು..
ಒಂದಷ್ಟು ದಿನ ಯಾರಿಗೂ ಏನೂ ಗೊತ್ತಾಗಲಿಲ್ಲ. ಎಲ್ಲಾ ಮೊದಲಿನ ಹಾಗೇ ನಿಶಬ್ದವಾಗಿ, ಮಾಮೂಲಾಗಿ ಇತ್ತು. ಆ ಹೊತ್ತಿಗೆ ನಾನು ಬಂದೆ. ನಾನು ಬೆಟ್ಟದ ಕೆಳಗಿನ ಊರಿನಿಂದ ಬಂದಿದ್ದೆ. ನಾನು ಇದ್ದ ಊರಿನಲ್ಲೂ ಎಂಥದೂ ಸಮಾಚಾರ, ಸುದ್ದಿ ಇರಲಿಲ್ಲ. ಇದ್ದಕಿದ್ದ ಹಾಗೆ ಜನ ಬರುವುದಕ್ಕೆ ಶುರುವಾಯಿತು. ನಿಮಗೆ ಗೊತ್ತಲ್ಲ, ಕೋಮಿಲೆರೋಗಳು, ಅದೇ ಬೆಟ್ಟದ ಜಮೀನುಗಳಲ್ಲಿ ಬಿತ್ತನೆ ಕೆಲಸ ಮಾಡುವ ಜನ, ಅವರು ಬೆಟ್ಟ ಇಳಿದು ಬಯಲಿಗೆ ಬಂದರೆ ಅವರ ಮನಸ್ಸಿನಲ್ಲಿ ಏನೋ ಇದೆ ಅಂತಲೇ ಅರ್ಥ. ಭಯ ಬಿದ್ದು ಬೆಟ್ಟ ಇಳಿದು ಬಂದೆವು ಅಂದರು. ಕೆಲವು ದಿನಗಳಿಂದ ಬೆಟ್ಟಗಳಲ್ಲಿ ಹೊಡೆದಾಟ ನಡೆಯುತಿದೆಯಂತೆ. ಕೆಲವು ಜನ ರಕ್ಷಣೆ ಸಿಗುತ್ತದೆ ಅಂದುಕೊಂಡು ಇಳಿದು ಬರತಾ ಇದ್ದರು.
ಮಧ್ಯಾಹ್ನ ಕಳೆಯಿತು. ಯಾರೂ ಹೊಸಬರು ಊರು ದಾಟಿ ಹೋಗಲಿಲ್ಲ. ರಾತ್ರಿಯೂ ಆಯಿತು. ಅವರೆಲ್ಲ ಬೇರೆ ದಾರಿ ಹಿಡಿದು ಹೋಗಿರಬೇಕು ಅಂತ ನಾವು ಕೆಲವರು ಅಂದುಕೊಂಡೆವು. ಬಾಗಿಲು ಭದ್ರಮಾಡಿಕೊಂಡು ಮನೆಯೊಳಗೇ ಕಾಯುತ್ತ ಕೂತಿದ್ದೆವು. ಚರ್ಚಿನ ಗಂಟೆ ಒಂಬತ್ತು ಹೊಡೆಯಿತು. ಆಮೇಲೆ ಹತ್ತು. ಆಮೇಲೆ, ರಾತ್ರಿ ಒಂದು ಗಂಟೆ ಹೊತ್ತಿಗೆ ತುತ್ತೂರಿ ಶಬ್ದ, ಕುದುರೆಗಳ ಹೆಜ್ಜೆ ಶಬ್ದ, ಯಾರು ಬಂದವರು ಅಂತ ನೋಡಿದೆ. ಗೂಂಡಾ ಪೋಕರಿಗಳು, ಬಡಕಲು ಕುದುರೆಗಳ ಮೇಲೆ ಬಂದಿದ್ದರು. ಕೆಲವರ ಮೈಯಲ್ಲಿ ರಕ್ತ ಸುರಿಯುತಾ ಇತ್ತು. ಇನ್ನು ಕೆಲವರು ಆಯಾಸಕ್ಕೆ ತೂಕಡಿಸತಾ ಇದ್ದರು. ಊರು ದಾಟಿ ಹೋಗುತಿದ್ದರು.
ರಾತ್ರಿಯ ಕತ್ತಲಲ್ಲಿ ಗೊತ್ತಾಗದ ಆಕಾರಗಳ ಈ ಮೆರವಣಿಗೆ ಮುಗಿಯುವ ಹೊತ್ತಿಗೆ ಮೊದಲು ಅಸ್ಪಷ್ಟವಾಗಿ, ಆಮೇಲೆ ಸಣ್ಣದನಿಯಲ್ಲಿ, ಆಮೇಲೆ ಸ್ಪಷ್ಟವಾಗಿ ಕೊಳಲಿನ ದನಿ ಕೇಳಿಸಿತು. ಆಮೇಲೆ ನೋಡಿದರೆ ನನ್ನ ಗಾಡ್ ಸನ್ ಯೆರುಮಿಯೋ ಬರುತಾ ಇದ್ದ. ಅಪ್ಪ ಯೆರುಮಿಯೋ ಸಡಿಲ್ಲೋನ ಕುದುರೆಯ ಮೇಲೆ ಕೂತಿದ್ದ. ಹಿಂದೆ ಇದ್ದ. ಎಡಗೈಯಲ್ಲಿ ಕೊಳಲು ಇತ್ತು. ಜೀವವನ್ನೇ ಬಸಿಯುವ ಹಾಗೆ ಕೊಳಲು ನುಡಿಸುತ್ತಾ ಇದ್ದ. ಅವನ ಬಲಗೈ, ಸತ್ತು ಹೋದ ಅಪ್ಪನ ಹೆಣವನ್ನು ಬಳಸಿ ಲಗಾಮು ಹಿಡಿದಿತ್ತು.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : La herencia de Matildeit Arcángel The Legacy of Matilde Arcángel


















