ಮೂಲ: ಆರ್ ಕೆ ನಾರಾಯಣ್
ಗೋಡೆಯಲ್ಲಿದ್ದ ಬಿರುಕಿನ ಮೂಲಕ ಸೂರ್‍ಯನ ಕಿರಣವೊಂದು ಬಂದು ಮುರುಗನ ಕಣ್ಣನ್ನು ಚುಚ್ಚಿತು. ಅವನು ಕಣ್ಣು ತೆರೆದು ಬಹಳಕಾಲ ಹಾಗೆಯೇ ಬಿಟ್ಟು ಕೊಂಡಿದ್ದ. ಮೈಯೆಲ್ಲ ಹಗುರವಾಗಿ ತೋರುತ್ತಿತ್ತು. ಲವಲವಿಕೆಯಾಗಿಲ್ಲದಿದ್ದರೂ ಮೈಯ್ಯಿ ಹಗುರವಾಗಿತ್ತು. ಅನೇಕ ಗಂಟೆಗಳ ಕಾಲ ಹೊಟ್ಟೆಗೆ ಏನೂ ಬೀಳದಿದ್ದರೆ ಯಾವ ಬಗೆಯಲ್ಲಿ ಮೈಯ್ಯಿ ಹಗುರವಾಗುತ್ತದೆಯೋ ಹಾಗೆ ಹೊಕ್ಕಳಿನ ಬಳಿ ಒಂದು ರೀತಿಯ ಉರಿತಲೆ ಸುತ್ತುತ್ತಿತ್ತು. ಏಳಬೇಕಾದುದಾದರೂ ಏಕೆ ಎಂದು ಯೋಚಿಸುತ್ತ ಮುರುಗ ಮಲಗಿಕೊಂಡೇ ಇದ್ದ. ಹಗಲು, ಸಂಜೆ, ರಾತ್ರಿ ನಿದ್ದೆ. ಮತ್ತೆ ಮಾರನೆಯ ದಿನ, ಆ ಮರುದಿನವನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ. ಅದನ್ನು ಎದುರಿಸಲೇ ಬೇಕು. ಬಹುಹಿಂದೆ ಎಂದೋ ಒಂದು ಮಧ್ಯಾಹ್ನ ಊಟ ಮಾಡಿದ್ದ ಹಾಗೆ ನೆನಪು. ನಿಜವಾಗಿ ನೋಡಿದರೆ ಅಷ್ಟೇನೂ ಕಾಲ ಕಳೆದಿರಲಿಲ್ಲ. ಮೂರೇ ಮೂರು ದಿನವಾಗಿತ್ತು. ಅಷ್ಟೆ. ತೆಂಗಿನತೋಪಿನ ಆಳು ಒಂದು ಸ್ವಲ್ಪ ಅನ್ನ, ಒಂದು ತೆಂಗಿನ ಕರಟದ ತುಂಬ ಮಜ್ಜಿಗೆ ಕೊಟ್ಟಿದ್ದ ಅಂದು.
ಆರು ತಿಂಗಳ ಹಿಂದೆ ಮುರುಗನು ಯಾವುದೋ ಹಣಕಾಸಿನ ತೊಡಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದ. ಬೇರೆಯವರ ಹಣ. ಊರ ಪಂಚಾಯಿತಿಯವರು ಮುರುಗನಿಗೆ ವಿರೋಧವಾಗಿ ತೀರ್ಮಾನಮಾಡಿದರು. ಅದರ ಫಲವಾಗಿ ಮುರುಗನ ಆಸ್ತಿಯೆಲ್ಲ ಹೋಯಿತು. ಜತೆಗೆ ಒಳ್ಳೆಯ ಹೆಸರೂ ಹೋಯಿತು. ಪಂಚಾಯಿತಿಯ ತೀರ್ಪು ಬಂದಮೇಲೆ ಹಳ್ಳಿಯ ಒಕ್ಕಲಿಂದ ಅವನಿಗೆ ಬಹಿಷ್ಕಾರವಾದಂತೆಯೆ. ಬಹಿಷ್ಕಾರ ಎಂದು ಅವರೇನೂ ಹೆಸರಿಟ್ಟಿರಲಿಲ್ಲ. ಆದರೆ ಜನ ಅವನೊಡನೆ ಬೆರೆಯುತ್ತಿರಲಿಲ್ಲ. ದೂರವಾಗಿರುತ್ತಿದ್ದರು. ಮೂರೇ ಮೂರು ಜನ ಮಾತ್ರ ಇನ್ನೂ ಇವನ ಕೈ ಬಿಡದಿದ್ದುದು : ಹೆಂಡತಿ, ಆ ತೆಂಗಿನ ತೋಪಿನ ಆಳು, ಮತ್ತು ಅಣ್ಣ ಕಣ್ಣ. ತೆಂಗಿನ ತೋಪಿನ ಆಳಿಗೆ ಇವನನ್ನು ಕಂಡರೆ ಬಹಳ ಕನಿಕರ. ಬೇರೆ ಯಾರೂ ನೋಡದೆ ಇದ್ದಾಗ ಏನಾದರೂ ತನ್ನ ಕೈಲಾದ ಸಹಾಯ ಮಾಡುವನು. ಅಣ್ಣನ ಸ್ಥಿತಿ ಇಮ್ಮಡಿಯಾಗಿ ಕಷ್ಟವಾಗಿತ್ತು. ಹಳ್ಳಿಯವರಿಗೆ ತಿಳಿಯದೆ ತಮ್ಮನಿಗೆ ಸಹಾಯಮಾಡುವುದಿರಲಿ, ತನ್ನ ಹೆಂಡತಿ ಕಾಳಿಗೂ ತಿಳಿಯದಂತೆ ಸಹಾಯಮಾಡಬೇಕು. ಕಣ್ಣನು ಕಾಳಿಯನ್ನು ಮದುವೆ ಮಾಡಿ ಕೊಂಡ ಮೇಲೆಯೇ ಅಣ್ಣ ತಮ್ಮಂದಿರು ಬೇರೆಯಾದುದು. ಅಂದು ಗ್ರಾಮದವರಿಗೆಲ್ಲ ಆಶ್ಚರ್ಯ. ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯವರೆಗೆ ಒಂದು ತಿಂಗಳು ಅನಾಮತ್ತು ಹಳ್ಳಿಯವರೆಲ್ಲ ಅದೇ ಮಾತನ್ನೇ ಆಡುತ್ತಿದ್ದರು.
ಬಹಿಷ್ಕಾರಬೀಳುವ ಮುಂಚೆ ಮುರುಗನೂ ಅವನ ಹೆಂಡತಿಯೂ ಅನುಕೂಲವಾಗಿಯೇ ಇದ್ದರು. ಶೇಕದಾರರ ಮನೆಯಲ್ಲಿ ಪಾತ್ರೆ ತೊಳೆಯುವುದು, ಕಾಳು ಬೀಸುವುದು ಈ ಮೂಲಕ ಲಕ್ಷ್ಮಿ ಒಂದಷ್ಟು ಹಣ ತರುತ್ತಿದ್ದಳು. ಮುರುಗನಿಗೆ ಗದ್ದೆಗಳಲ್ಲಿ ತಪ್ಪದೆ ಕೆಲಸ ಸಿಗುತ್ತಿತ್ತು. ಆದರೆ ಪಂಚಾಯಿತಿಯ ತೀರ್ಮಾನವಾದ ಮೇಲೆ ಶೇಕದಾರರ ಮನೆಯವರು, “ಪಾತ್ರೆಗಳನ್ನೇನೂ ತೊಳೆಯಬೇಕಾಗಿಲ್ಲ, ಬೀಸುವುದಕ್ಕೇನೂ ಕಾಳಿಲ್ಲ” ವೆಂದು ಲಕ್ಷ್ಮಿಗೆ ಹೇಳಿಬಿಟ್ಟರು. ನೀನು ಬರದೆ ಹೋದರೂ ಪರವಾಯಿಲ್ಲ, ಪೈರು ಬೆಳೆಯುತ್ತಿದೆ ಎಂದು ಜಮೀನ್ದಾರರು ಮುರುಗನಿಗೆ ತಿಳಿಸಿಬಿಟ್ಟರು. ಇದಾದಮೇಲೆ ಇವರಿಗೆ ಉಪವಾಸ ವ್ರತವಾಯಿತು. ಮುರುಗನ ಜತೆಗೆ ಲಕ್ಷ್ಮಿ, ಲಕ್ಷ್ಮಿಯ ಜತೆಗೆ ಮುರುಗ.
ಈ ಹಗಲಂತೂ ಮುರುಗನಿಗೆ ಏನೂ ದಾರಿ ತೋರಲಿಲ್ಲ. ಈಚಲ ಚಾಪೆಯ ಮೇಲೆ ಮಲಗಿದ್ದವನು ಒಂದುಸಲ ಕಣ್ಣನ್ನು ಹೊರಳಿಸಿ ತಮ್ಮ ಗುಡಿಸಿಲೆಲ್ಲವನ್ನೂ ನೋಡಿದ. ಮಣ್ಣಿನ ಮಡಕೆಗಳು, ಹಿತ್ತಾಳೆಯ ಒಂದೆರಡು ಪಾತ್ರೆಗಳು ಬೋರಲಿಸಿರುವುದು ಕಣ್ಣಿಗೆಬಿತ್ತು. ಪಕ್ಕದಲ್ಲಿ ಮಲಗಿದ್ದ ಹೆಂಡತಿಯನ್ನು ಮೊಣಕೈಯಿಂದ ತಿವಿದು, “ಲಕ್ಷ್ಮಿ, ಮೂಲೆಯಲ್ಲಿದೆಯಲ್ಲ ಮಡಕೆಗಳು ಪಾತ್ರೆಗಳು, ಅವನ್ನು ನೋಡಿದರೆ ನಿನಗೇನು ನೆನಪಾಗುತ್ತದೆ ಹೇಳು” ಎಂದು ಕೇಳಿದ.
“ಏನೋ ನನಗೆ ತಿಳಿಯದು” ಎಂದಳು ಅವಳು.
“ನಿನ್ನ ಜ್ಞಾಪಕಶಕ್ತಿಗೆ ಬೆಂಕಿಹಾಕ, ನಿಮ್ಮ ತಂದೆ ಒಂದು ಪದ ಹಾಡುತ್ತ ಇದ್ದರಲ್ಲ,-
ಅನ್ನದಾ ಮಡಕೆಯೂ ಪಳಪಳನೆ ಹೊಳೆಯುತ್ತ
ಬಿದ್ದು ಕೊಂಡಿದ್ದರೇ ಬೋರಲಾಗಿ
ಓಡೋಡಿ ಬರುವಳೂ ಮೂಲೆಯ ಮೂದೇವಿ
ಕತ್ತೇ ಸವಾರಿಯನು ಮಾಡಿಕೊಂಡೂ
ಆ ಪದ ನಿನಗೆ ನೆನಪಾಗುವುದಿಲ್ಲ?”
“ಅವಳು ಬಂದು ಎಷ್ಟೋದಿನವಾಯಿತು, ಬಿಡಿ. ನಮ್ಮ ಮನೆಗೆ ಅವಳು ಪಳಗಿಹೋಗಿದ್ದಾಳೆ.” ಎಂದಳು ಲಕ್ಷ್ಮಿ.
ಬೆಳಗ್ಗೆ ಏಳುತ್ತಲೇ ಹೀಗೆ ಹಾಸ್ಯದ ಚಮಕಿಗಳನ್ನು ಹಾರಿಸಿ, ಇಬ್ಬರೂ ಊರ ಕೆರೆಗೆ ಹೋಗಿ ನೀರು ಕುಡಿದರು. ಆ ವೇಳೆಗೆ ಸರಿಯಾಗಿ ಕಣ್ಣ ಅತ್ತ ಕಡೆ ಹಾದುಹೋಗುತ್ತಿದ್ದ. ಒಂದು ನಿಮಿಷ ನಿಂತು ಅವರ ಕಡೆಯೇ ನೋಡಿ ಮುಂದೆ ಹೊರಟುಹೋದ.
ಬೆಳಿಗ್ಗೆ ಆ ವೇಳೆಗೇ ಅವರಿಬ್ಬರೂ ನೀರು ಕುಡಿಯುತ್ತಿದ್ದುದೇಕೆಂದು ಅವನಿಗೆ ಅರ್ಥವಾಯಿತು. ಮನಸ್ಸು ಕಲಕಿತು. ಮನೆಗೆ ಹೋದ. ತಮ್ಮನಿಗೆಂದು ಒಂದು ಸೇರು ಅಕ್ಕಿಯನ್ನು ಅಳತೆಮಾಡುತ್ತೇನೆಂದು ನಿಶ್ಚಯ ಮಾಡಿಕೊಂಡ. ಆದರೆ ಅಷ್ಟು ಹೊತ್ತಿಗೆ ಸರಿಯಾಗಿ ಸೊಂಟದಲ್ಲೊಂದು ನೀರಿನ ಕೊಡವನ್ನು ಇರುಕಿಕೊಂಡು ಕಾಳಿ ಬಂದುದನ್ನು ನೋಡಿ ಒಂದು ಗಳಿಗೆ ತಡೆದ. ನಗುವುದಕ್ಕೆಂದು ಪ್ರಯತ್ನಿಸಿದ. ಆದರೆ ಇದೊಂದನ್ನೂ ಲಕ್ಷಕ್ಕೆ ತೆಗೆದುಕೊಳ್ಳದೆ ಅವಳು ಮುಂದೆ ಸಾಗಿದಳು. ಅವಳು ಕರೆಗೆ ಹಿಂದಿರುಗುವವರೆಗೆ ಕಣ್ಣ ಕಾದಿದ್ದ. ಬಾಗಿಲಬಳಿಗೆ ಓಡಿ ಹೋಗಿ ಅವಳು ಹೋಗುವುದನ್ನೇ ನೋಡುತ್ತಿದ್ದೆ. ಅವಳು ಕೆರೆಯ ಕಡೆ ಹೋಗುವ ಸಂದು ತಿರುಗಿದೊಡನೆ ಮನೆಯೊಳಕ್ಕೆ ಮತ್ತೆ ಬಂದ. ದೊಡ್ಡ ಕೊಪ್ಪರಿಗೆಯ ಮುಚ್ಚಳ ತೆಗೆದು, ತುಕ್ಕು ಹಿಡಿದ ಸೇರನ್ನು ಅದರೊಳಕ್ಕೆ ಇಳಿಯಬಿಟ್ಟು ಒಂದು ಸೇರು ಅಕ್ಕಿಯನ್ನು ಅಳೆದ. ತನ್ನ ವಸ್ತ್ರವನ್ನು ಹರಡಿ, ಅದರೊಳಕ್ಕೆ ಆ ಅಕ್ಕಿಯನ್ನು ಸುರಿದು ಒಂದು ಸಣ್ಣ ಅಚ್ಚುಕಟ್ಟಿನ ಗಂಟು ಕಟ್ಟಿದ. ಮುಚ್ಚಳವನ್ನು ಮತ್ತೆ ಕೊಪ್ಪರಿಗೆಯ ಮೇಲಿಟ್ಟು ಸರಸರನೆ ಹೊರಬಿದ್ದ.
ತಮ್ಮನ ಮನೆಯೊಳಕ್ಕೆ ಹೋದ. ತಮ್ಮನೂ ಅವನ ಹೆಂಡತಿಯೂ ಕುಳಿತಿದ್ದರು. ಗಂಟನ್ನು ಕೆಳಗಿರಿಸಿ, “ಇಲ್ಲೊಂದು ಸೇರು ಅಕ್ಕಿ ಇದೆ. ಪಳನಿಯ ದೇವರು ನಿಮ್ಮ ಮೇಲೆ ದಯೆತೋರಿಸಿದರೆ, ಈ ಅಕ್ಕಿಯನ್ನು ಹಿಂದಕ್ಕೆ ಕೊಡುವಿರಂತೆ. ಅದುವರೆಗೆ ಚಿಂತಿಸಬೇಡಿ, ಒಳ್ಳೆಯದಾಗಲಿ” ಎಂದು ಹೇಳಿ, ಅಕ್ಕಿಯನ್ನು ಒಂದು ಮಣ್ಣಿನ ಹರವಿಯ ಮೇಲೆ ಸುರಿದು ಹೊರಗೆ ಬಂದುಬಿಟ್ಟ. ಅವನು ಹೊರಟುಹೋದಮೇಲೆ ಲಕ್ಷ್ಮಿ ಕಣ್ಣೀರು ಸುರಿಸಿದಳು. ಮುರುಗ ನೆಲದ ಕಡೆಯೇ ದಿಟ್ಟಿಸಿನೋಡುತ್ತ ಗಂಭೀರವಾಗಿ ಕುಳಿತಿದ್ದ.
ಮುರುಗ ಮೇಲಕ್ಕೆದ್ದು, “ಲಕ್ಷ್ಮಿ, ಒಲೆಯನ್ನು ಹೊತ್ತಿಸಿ ಅನ್ನ ಮಾಡು. ದೇವರೇ ನಮಗಿದನ್ನು ಕಳುಹಿಸಿದ್ದಾನೆ. ನೀನು ಅಡಿಗೆಮಾಡು. ನಾನು ಆ ವೇಳೆಗೆ ಒಂದಷ್ಟು ಓಡಾಡಿಕೊಂಡು ಬರುತ್ತೇನೆ. ಹಿಂದಕ್ಕೆ ಬರುವವೇಳೆಗೆ ಇನ್ನು ಚೆನ್ನಾಗಿ ಹಸಿವಾಗಿರುತ್ತದೆ. ಚೆನ್ನಾಗಿ ಕವಳ ಕತ್ತರಿಸಬಹುದು” ಎಂದ.
“ಹಸಿವಾಗುವುದಕ್ಕೆ ಓಡಾಡಬೇಕೇ?” ಎಂದು ಕೇಳಿ ಲಕ್ಷ್ಮಿ ಗಹಗಹಿಸಿ ನಕ್ಕಳು.
ಒಲೆಯ ತುಂಬ ಜಿರಳೆಗಳು, ಹಲ್ಲಿಗಳು, ಜೇಡಗಳು ಸೇರಿದ್ದುವು. ಆ ಕಸವನ್ನೆಲ್ಲ ತೆಗೆದು, ಸಗಣಿಯನ್ನು ಸಾರಿಸಿ, ಸೌದೆಯ ಕಡ್ಡಿಗಳನ್ನು ಆಯ್ದು ತರುವುದಕ್ಕೆಂದು ಲಕ್ಷ್ಮಿ ಹೊರಟಳು. ಯಾವುದೋ ಒಂದು ಹಾಡು ಮನಸ್ಸಿನಲ್ಲಿ ಓಡಾಡುತ್ತಿತ್ತು. ಅನ್ನ ಬೇಯಿಸುವ ಮಡಕೆಯನ್ನು ಎತ್ತಿಕೊಳ್ಳುತ್ತ ಲಕ್ಷ್ಮಿ ತನಗೆ ತಾನೇ ಮಟಗುಟ್ಟಿಕೊಂಡಳು.
ಅನ್ನದಾ ಮಡಕೆಯೂ ಪಳಪಳನೆ ಹೊಳೆಯುತ್ತ
ಬಿದ್ದು ಕೊಂಡಿದ್ದರೇ ಬೋರಲಾಗಿ
ಓಡೋಡಿ ಬರುವಳೂ ಮೂಲೆಯಾ ಮೂದೇವಿ
ಕತ್ತೇ ಸವಾರಿಯನು ಮಾಡಿಕೊಂಡೂ
ಕೆರೆಗೆ ಹೋಗಿ, ಯಾರಿಗೂ ಕಾಣದಂತೆ ಆ ಮಡಕೆಯನ್ನು ಬೆಳಗಿ, ನೀರು ತುಂಬಿಕೊಂಡು ಮನೆಗೆ ತಂದಳು. ಒಲೆ ಉರಿಹಾಕಿ, ಮಡಕೆಯನ್ನು ಅದರ ಮೇಲಿಟ್ಟಳು. ಇನ್ನೂ ಆ ಹಾಡು ಹಾಗೆಯೇ ಅವಳ ಮನಸ್ಸಿನಲ್ಲಿ ಓಡಾಡುತ್ತಲೇ ಇತ್ತು.
ಈ ವೇಳೆಗೆ ಕಾಳಿ ತನ್ನ ಮನೆಗೆ ಹಿಂದುರಿಗಿ, ನೆಲದ ಮೇಲೆ ಚೆಲ್ಲಿದ್ದ ಅಕ್ಕಿಯ ಕಾಳನ್ನು ನೋಡಿದಳು. ಕೊಪ್ಪರಿಗೆಯವರೆಗೆ ಸಾಲಾಗಿ ಕಾಳು ಬಿದ್ದಿದ್ದುದು ಅವಳಿಗೆ ಕಾಣಿಸಿತು. ತುಕ್ಕು ಹಿಡಿದ ಸೇರನ್ನು ಅವಳು ಯಾವಾಗಲೂ ಕೊಪ್ಪರಿಗೆಯೊಳಗೇ ಇಟ್ಟಿರುವುದು ವಾಡಿಕೆ. ಈಗ ಅದು ನೆಲದಮೇಲಿತ್ತು. ಸ್ವಲ್ಪ ಹೊತ್ತು ಅದನ್ನೇ ನೋಡಿ ತುಟಿ ಕಚ್ಚಿಕೊಂಡಳು. ಈ ಬಗೆಯ ಕೆಲಸ ಹಿಂದೆ ಕೆಲವುಸಲ ನಡೆದಿತ್ತು. ಅವಳಿಗೆ ಗೊತ್ತಾಯಿತು. ಮತ್ತೆ ಕೆರೆಯ ಕಡೆ ಹೋದಳು, ಕಡೆಯ ಬಿಂದಿಗೆ ನೀರು ತರುವುದಕ್ಕೆ ಬಂದು, ಬಿಂದಿಗೆಯನ್ನಿಳಿಸಿ ತೋಳುಗಳನ್ನು ಸ್ವಲ್ಪ ಸವರಿಕೊಂಡಳು. ಒಂದುಸಲ ಮೈಯ್ಯನ್ನೆಲ್ಲ ಕುಲುಕಿಕೊಂಡು, ಸೀರೆಯ ನೆರಿಗೆಯನ್ನು ಸರಿಮಾಡಿಕೊಂಡು ಹೊರಟಳು.
ನೀರು ಕುದಿಯ ತೊಡಗಿತ್ತು. ಲಕ್ಷ್ಮಿ ಅಕ್ಕಿಯನ್ನು ಅದರೊಳಗೆ ಸುರಿಸಿದಳು. ಆದು ಕುದಿಯುವುದನ್ನೇ ನೋಡುತ್ತ ಒಲೆಯ ಮುಂದೆ ಕುಳಿತಿದ್ದಳು. ಬಾಗಿಲು ತಟ್ಟಿದ ಸದ್ದಾಯಿತು. ಹೋಗಿ ಬಾಗಿಲು ತೆಗೆದಳು. ಹೊರಗಡೆ ವಾರಗಿತ್ತಿ ನಿಂತಿದ್ದಳು. ಕಾಳಿಯು ಮೈ ಬಣ್ಣ ಕಪ್ಪಗಿದ್ದರೂ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು. ಲಕ್ಷ್ಮಿಗೆ ಬುದ್ದಿ ತೋಚದೆ ಕೊಂಚಹೊತ್ತು ಮಾತೇ ಇಲ್ಲದೆ ನಿಂತಿದ್ದಳು. ಆ ಮೇಲೆ ಸತ್ವವೇ ಇಲ್ಲದ ದನಿಯಿಂದ “ಬಾಮ್ಮ ಒಳಗೆ” ಎಂದಳು.
ಔಡು ಕಚ್ಚಿಕೊಂಡು ಕಾಳಿ ಒಳಗೆ ಬಂದಳು. ಲಕ್ಷ್ಮಿಯನ್ನು ತಲೆಯಿಂದ ಕಾಲಿನವರೆಗೆ ನೋಡಿ “ಬಡತನದಲ್ಲಿ ಬಿದ್ದಿರುವ ಭಿಕಾರಿಗಳು” ಎಂದು ಬುಸಗುಟ್ಟಿದಳು, ಒಲೆಯ ಮೇಲೆ ಕುದಿಯುತ್ತಿದ್ದ ಅಕ್ಕಿಯನ್ನು ತೋರಿಸಿ “ಇದು ಯಾರ ಅಕ್ಕಿ?” ಎಂದು ಕೇಳಿದಳು.
“ಯಾರ ಅಕ್ಕಿ!”
“ಹೂ, ಮಡಿಕೆಯಲ್ಲಿ ಕುದಿಯುತ್ತಿದೆಯಲ್ಲ, ಆ ಅಕ್ಕಿಯ ನಿನಗೆ ಯಾರು ಕೊಟ್ಟರು ? ದೇವರೇ ನಿಮ್ಮನ್ನು ಕೈಬಿಟ್ಟಿರುವಾಗ ಅಕ್ಕಿಯೆಲ್ಲಿಂದ ಬಂತು ? ”
“ಅಯ್ಯೋ ಅಕ್ಕಾ! ಏನೇನೋ ಮಾತಾಡುತ್ತಿಯಲ್ಲೆ?” ಎಂದು ಲಕ್ಷ್ಮಿ ಗೋಳಿಟ್ಟಳು. “ಇದು ನನ್ನ ಅಕ್ಕಿ” ಎಂದು ಬಲವಾಗಿ ಕಿರಿಚಿದಳು ಕಾಳಿ. ಹಾಗೆ ಹೇಳಿ, ಮಡಕೆಯನ್ನು ಒಲೆಯಿಂದ ಎತ್ತಿ ಬಲವೆಲ್ಲಾ ಬಿಟ್ಟು ನೆಲದ ಮೇಲೆ ಝಾಡಿಸಿ ಕುಕ್ಕಿದಳು.
ಲಕ್ಷ್ಮಿ ಮರದಂತೆ ನಿಂತಿದ್ದಳು. ಕಾಳಿ ಬಹಳ ಸಂತೋಷದಿಂದ “ನೆಲವನ್ನು ನೆಕ್ಕಿ ಈಗ…….ಈಗ ನನ್ನ ಬೆನ್ನು ತಿರುಗಿತೆಂದರೆ ಸಾಕು, ನೆಲವನ್ನು ನೆಕ್ಕದೆ ಇರುತ್ತೀರಾ?” ಎಂದು ಹೇಳಿ, ಬಾಗಿಲನ್ನು ಬಲವಾಗಿ ಬಡಿದು, ಹೊರಟು ಹೋದಳು. ಲಕ್ಷ್ಮಿ ಎಚ್ಚೆತ್ತುಕೊಂಡು, ಬಾಗಿಲವರೆಗೂ ಓಡಿಹೋಗಿ, “ಪ್ರಪಂಚದಲ್ಲೆಲ್ಲ ನಿನ್ನಂಥ ಮಾರಿ, ನಿನ್ನಂಥ ಪಿಶಾಚಿ ಇನ್ನೊಬ್ಬಳಿಲ್ಲ” ಎಂದು ಕೂಗಿಕೊಂಡಳು. ಒಳಗೆ ಬಂದು, ಮಡಕೆಯ ಚೂರುಗಳನ್ನೂ, ಮೆತ್ತಗಾಗಿದ್ದ ಅಗುಳುಗಳನ್ನೂ, ಅವುಗಳಿಂದ ಏಳುತ್ತಿದ್ದ ಹಬೆಯನ್ನೂ ನೋಡುತ್ತ ಕೆಲವು ನಿಮಿಷ ನಿಂತುಕೊಂಡಳು. ಆ ಮೇಲೆ ಒಂದು ಮೂಲೆಗೆ ಓಡಿಹೋಗಿ ಕುಸಿದು ಬಿದ್ದು ಕೊಂಡಳು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಕಾರಣದಿಂದ ಅವಳ ಮೈಯೆಲ್ಲ ಅಲುಗುತ್ತಿತ್ತು. ಮುರುಗ ಹಿಂದಿರುಗಿದ. ಅವಳನ್ನು ನೋಡಿದ. ಅರ್‍ಥವಾಗಲಿಲ್ಲ. ನೂರಾರು ಪ್ರಶ್ನೆ ಕೇಳಿದ. ಉತ್ತರ ಬರಲಿಲ್ಲ. ಲಕ್ಷ್ಮಿ ಅಳುತ್ತಲೇ ಇದ್ದಳು. ಒಡೆದ ಮಡಕೆಯ ಕಡೆ ಅವನ ನೋಟ ಹೊರಳಿತು. ಅವಳನ್ನು ಸಂತೈಸುವುದಕ್ಕಾಗಿ, “ಪರವಾ ಇಲ್ಲ ಬಿಡು. ದೇವರು ಯಾವಾಗ ಅನುಕೂಲ ಮಾಡಿಕೊಡುತ್ತಾನೋ ಆಗ ಹೊಸದೊಂದು ಮಡಕೆಯನ್ನೂ ಅಕ್ಕಿಯನ್ನೂ ಕೊಂಡುಕೊಳ್ಳೋಣವಂತೆ” ಎಂದ. ಮಡಕೆಯನ್ನು ಕೈತಪ್ಪಿ ಒಡೆದುಬಿಟ್ಟು ಅಳುತ್ತಿದ್ದಾಳೇನೋ ಎಂದು ಅವನ ಭಾವನೆ.
“ನಾ… ನಾ ……. ನಾನಲ್ಲ……..ಕಾ……..ಕಾಳಿ ಬಂದಿದ್ದಳು…..” ವಾಕ್ಯ ಪೂರಯಿಸುವುದಕ್ಕಾಗಲಿಲ್ಲ ಅವಳ ಕೈಯ್ಯಲ್ಲಿ. ಮುರುಗನಿಗೆ ಎಲ್ಲವೂ ಅರ್ಥವಾಯಿತು. ಸುಮ್ಮನೆ ನಿಂತ ಯೋಚನೆ ಮಾಡಿದಷ್ಟಕ್ಕೂ, ಮನಸ್ಸು ಇನ್ನೂ ಮೊದ್ದು ಮೊದ್ದಾಗುತ್ತ ಹೋಯಿತು. ಅವನಿಗೆ ಒಂದೇ ಒಂದರ ಅರಿವಾಗುತ್ತಿದ್ದುದು-ದ್ವೇಷ. ಎಲ್ಲ ವಿಷಯಗಳ ಮೇಲೂ ಎಲ್ಲರ ಮೇಲೂ ದ್ವೇಷ, ಹೆಂಡತಿಯ ಕಡೆ ಒಂದು ಕ್ಷಣ ನೋಡಿ, ಸದ್ದು ಮಾಡದೆ ಪಕ್ಕದ ಕೋಣೆಗೆ ಹೋದ. ಪೆಟ್ಟಿಗೆಯ ಮೇಲೆ ಮೆಟ್ಟಿಂಗಾಲಿಟ್ಟು ನಿಂತುಕೊಂಡು, ಒಂದು ಹಗ್ಗವನ್ನು ಸೂರಿನ ತೊಲೆಗೆ ಕಟ್ಟಿದ. ಹಗ್ಗದ ಇನ್ನೊಂದು ತುದಿಯಲ್ಲಿ ಒಂದು ಕುಣಿಕೆಯನ್ನು ಬಿಗಿದ. ಅದನ್ನು ತನ್ನ ಕುತ್ತಿಗೆಯ ಮೇಲೆ ಹಾಕಿಕೊಂಡ. ಆಗಲೂ ಕೂಡ ಅವನ ಮನಸ್ಸಿಗೆ ಅರಿತವಾಗುತ್ತಿದ್ದುದು ಒಂದೇಒಂದು-ಅನಂತವಾದ ಯಾತನೆ ಅದರ ಜತೆಗೆ ತನ್ನ ಆತ್ಮವನ್ನೇ ಸುಡುವಂಥ ಒಂದು ದ್ವೇಷ.
ಪಕ್ಕದ ಕೊಠಡಿಯಿಂದ ಬಂದ ವಿಕಾರವಾದ ಸ್ವರವನ್ನು ಕೇಳಿ ಲಕ್ಷ್ಮಿ ಬೆಚ್ಚಿ ಬಿದ್ದಳು. ಆ ದೃಶ್ಯವನ್ನು ಕಂಡು ಅವಳ ನೆತ್ತರು ಹೆಪ್ಪು ಗಟ್ಟಿತು.
ಅಲ್ಲಿ ಇಲ್ಲಿ ಸುತ್ತಿ ಕಣ್ಣ ಮನೆಗೆ ಹೋದ. ಒಂದು ಸೇರು ಅಕ್ಕಿಯನ್ನು ಕೊಟ್ಟದ್ದಕ್ಕಾಗಿ ಕಾಳಿ ಅವನನ್ನು ತುಚ್ಛವಾಗಿ ಮೂದಲಿಸಿದಳು.
“ಅಹಹಹಾ. ನಿನ್ನ ಕೃಪೆಯಿಂದ ಅವರಿಗೆ ಈಗ ಔತಣ ಆಗುತ್ತಾ ಇರಬೇಕು. ಹಿ………ಹಿ….ಹಿ… ಅವರ ಔತಣ ಚೆನ್ನಾಗಿ ನಡೆಯಲೆಂದು ನಾನೂ ನನ್ನ ಕೈಲಾದ ಸಹಾಯಮಾಡಿದೆ……..”
“ನೀನು ಅಲ್ಲಿಗೆ ಹೋಗಿದ್ದೆ ಯೇನು?”
“ಹೋಗಕೂಡದೇನು ? ನನ್ನ ಮುದ್ದು ತಂಗಿಯ ಮನೆಗೆ ?”
ಕಣ್ಣನಿಗೆ ತುಂಬ ಬೇಸರವಾಗಿಹೋಯಿತು. ಸ್ವಲ್ಪ ಹೊತ್ತು ಎಲ್ಲಾದರೂ ಮನೆಬಿಟ್ಟು ಹೊರಟುಹೋಗುವುದು ಲೇಸೆನ್ನಿಸಿತು. ಹೊಟ್ಟೆ ತಾಳ ಹಾಕುತ್ತಿದ್ದರೂ ಗೊತ್ತು ಗುರಿಯಿಲ್ಲದೆ ಎಲ್ಲೆಲ್ಲೋ ಅಲೆದಾಡಿದ. ತಮ್ಮನ ಮನೆ ಸಿಕ್ಕಿತು. ಅವರು ಏನುಮಾಡುತ್ತಿದ್ದರೋ ನೋಡೋಣವೆಂದು , ಒಳಕ್ಕೆ ಹೆಜ್ಜೆಯಿಟ್ಟ.
ತಮ್ಮನೂ ತಮ್ಮನ ಹೆಂಡತಿಯ ಪಕ್ಕಪಕ್ಕದಲ್ಲಿ ತೊಲೆಯಿಂದ ನೇತಾಡುತ್ತಿದ್ದರು. ಅದನ್ನು ಕಂಡು ಕಣ್ಣನ ಕಣ್ಣುಗುಡ್ಡೆಗಳು ಕಳಚಿದಂತಾದುವು. ಮೂಲೆಯಲ್ಲೊಂದು ಡೊಂಕು ಮಚ್ಚು ಬಿದ್ದಿತ್ತು. ಅದನ್ನು ತೆಗೆದುಕೊಂಡು, ಹಗ್ಗಗಳನ್ನು ಕತ್ತರಿಸಿ ಇಬ್ಬರನ್ನೂ ಪಕ್ಕ ಪಕ್ಕದಲ್ಲಿ ಮಲಗಿಸಿ, ತನ್ನ ವಸ್ತ್ರದಿಂದ ಅವರ ಮುಖವನ್ನು ಮುಚ್ಚಿದ. ಒಡೆದ ಮಡಕೆಯೂ ಚೆದುರಿದ ಅಗುಳುಗಳೂ ಅವನ ಕಣ್ಣಿಗೆ ಬಿದ್ದುವು. “ಅವರ ಔತಣ ಚೆನ್ನಾಗಿ ನಡೆಯಲೆಂದು ನಾನೂ ನನ್ನ ಕೈಲಾದಮಟ್ಟಿಗೆ ಸಹಾಯ ಮಾಡಿದೆ “… ಎಂದು ಕಾಳಿ ಹೇಳಿದ ಮಾತು ಅವನಿಗೆ ಜ್ಞಾಪಕವಾಯಿತು. ಮಚ್ಚನ್ನು ತೆಗೆದುಕೊಂಡು ಹೊರಟ.
ಅವನು ಮನೆಗೆ ಬಂದ ತಕ್ಷಣ ಅವನ ಹೆಂಡತಿ “ನಿನ್ನ ವಸ್ತ್ರವೆಲ್ಲಿ?” ಎಂದು ಕೇಳಿದಳು.
“ನನ್ನ ತಮ್ಮನ ಮನೆಯಲ್ಲಿ ಏನುಮಾಡಿದೆ ನೀನು?” ಎಂದು ಅವನು ಕೇಳಿದ.
“ಓಹ್ಹೋ! ನೀನೂ ಗಂಡುಸಾಗುತ್ತಾ ಇದ್ದೀಯಾ ?” ಎಂದು ಅವಳು ಅಣಕಿಸಿದಳು.
“ಮುಚ್ಚು ಬಾಯಿ, ಕತ್ತೆ…….ಅವರ ಅನ್ನದ ಮಡಕೆ ಒಡೆದವಳು ನೀನೇ ತಾನೇ ?”
“ನಾನೋ, ನಮ್ಮ ತಾತನೋ! ಅದೆಲ್ಲ ಕೇಳುವುದಕ್ಕೆ ನೀನು ಯಾರು ? ಆ ಹೆಂಗಸಿಗೆ ಇನ್ನೂ ಕೆಲವು ಉಡುಗೊರೆಗಳನ್ನು ಒಪ್ಪಿಸಬೇಕು ಎಂದು ಇಷ್ಟವೇನೋ ? ಅಲ್ಲವೇ ಮತ್ತೆ ? ಗುಂಡಪ್ಪನ ಹೆಂಡತಿಗೆ ಊರೆಲ್ಲ ಗಂಡಂದಿರೆ”
ಹಲ್ಲನ್ನು ಕಟಕಟನೆ ಕಡಿಯುತ್ತಾ, “ಅಯ್ಯೋ ಚಂಡಾಲಿ” ಎಂದು ಉಸುರಿ, ನುಗ್ಗಿದ ಕಣ್ಣ. ಅವಳ ತಲೆಕೂದಲನ್ನು ಹಿಡಿದು ಜಗ್ಗಿಸಿ, ಕತ್ತನ್ನು ತಿರುವಿ ತನ್ನ ಬಲವನ್ನೆಲ್ಲ ಬಿಟ್ಟು ಮಚ್ಚನ್ನು ಕುತ್ತಿಗೆಯ ಮೇಲೆ ಇಳಿಸಿದ. ಒದ್ದಾಡುತ್ತ ಹೊರಳಾಡುತ್ತ ಅವಳ ಕಳೇಬರ ರಕ್ತದ ಕುಪ್ಪೆಯಾಗಿ ಕೆಳಗೆ ಬಿತ್ತು. ಚಿಲುಮೆಯಂತೆ ರಕ್ತ ಚಿಮ್ಮತೊಡಗಿತು. ಕಣ್ಣ ಬೀದಿಯೊಳಕ್ಕೆ ಓಡಿಹೋಗಿ ಗಟ್ಟಿಯಾಗಿ ಕೂಗಿಕೊಂಡ, “ಗಂಡಸರು, ಹೆಂಗಸರು, ಮಕ್ಕಳು, ಮುದುಕರು, ಎಲ್ಲ ಬನ್ನಿ, ಎಲ್ಲ ಬನ್ನಿ, ನಿಮಗಾಗಿ ನಾನೊಂದು ನಾಟಕ ಏರ್ಪಾಡು ಮಾಡಿದ್ದೇನೆ. ನೋಡಿಬನ್ನಿ; ದುಡ್ಡು ಕೊಡಬೇಕಾಗಿಲ್ಲ, ಬಿಟ್ಟಿ ನೋಡಬಹುದು……. ಬನ್ನಿ, ಬನ್ನಿ, ಒಂದೇ ಒಂದುಸಲ ನೋಡಿ……..”
*****


















