Home / ಕವನ / ಕವಿತೆ / ವಿಜಯ ನಗರವೆ!

ವಿಜಯ ನಗರವೆ!


ವಿಜಯ ನಗರವೆ! ವಿಜಯ ನಗರವೆ! ಹಿಂದೆ ನೀ ಮು೦ದೊತ್ತಿಹೆ
ನಿಜ ಮಹೋತ್ಸಾಹದಲಿ ಲೋಕದ ಬೆರಗಿನುತ್ಸವವಾಂತಿಹೆ!
ಹಿಗ್ಗಿನಲಿ ತೊಳ ತೊಳಗಿಹೆ!- ನೀ
ಬಗ್ಗದೆಯೆ ಬೆಳಬೆಳಗಿಹೆ!!


# ಹಿಂದೆ ಮಾರುತಿ–ವಾಲಿ–ಸುಗ್ರೀವಾದಿ ಕಪಿಗಳ ಗೆಳೆತನ,
ಸಂದ ರಾಘವ-ಲಕ್ಷ್ಮಣಾರ್ಯರ ಮೈತ್ರಿಯಾ ದೊಡ್ಡಿಸ್ತನ,
ಇವುಗಳಲಿ ಮೆರೆದಾಡಿಹೆ!- ಮ-
ತ್ತವನಿಜೆಯ ತೊಡವಾಂತಿಹೆ!!


ಸಾವಿರದ ಮುನ್ನೂರ ಮೂವತ್ತಾರನೆಯ ಶುಭ ‘ಇಸವಿ’ಲಿ
ದೇವರಾಶೀರ್ವಾದದಲಿ ಹೇ ವಿಜಯನಗರವೆ! ನಿನ್ನಲಿ
ಸಾಸಿ ವಿದ್ಯಾರಣ್ಯರು- ಸಿ೦-
ಹಾಸನ ಸ್ಥಾಪಿಸಿದರು


‘ಏಳು, ಸಾಯಣ! ಕಟ್ಟು ಗ್ರಂಥವ’ ನೆಂದ ವಿದ್ಯಾರಣ್ಯರು,-
ಏಳು, ಹರಿಹರ! ಕಟ್ಟು ರಾಜ್ಯವ’ ನೆಂದ ಮೌನಿವರೇಣ್ಯರು-
ಎಲ್ಲಿ ಶಾಸ್ತ್ರದ ಕವಿಗಳು? ಅವ-
ರೆಲ್ಲಿ ಕೀರ್ತಿಯ ರವಿಗಳು?


ಮನ್ನಣೆಯ ವೇದಗಳ ‘ಭಾಷ್ಯ’ ವನೊರೆದ ಸಾಯಣ ವಿಪ್ರನು,
ಕನ್ನಡದಿ ಭಾರತವ ಬರೆದಿಹ ಆ ಕುಮಾರ ವ್ಯಾಸನು,
ನಿನ್ನ ಘನತೆಯ ಬೀರುತ,-ಇಂ-
ದಿನ್ನು ಮೆರೆವರು ಸಂತತ!


ವಿಜಯನಗರವೆ! ನೈಜದಿಂದೆವೆದೆರೆದನಾ ಭಾಗ್ಯದ ರವಿ!
ವಿಜಯ-ವಿಭವದ ಹೆಮ್ಮೆ..ಹುಮ್ಮಸ ಮಿರುಗಿತಾ ಪ್ರಗತಿಚ್ಛವಿ!!
ಅ೦ದೆ ನೀ ಮುಂದೊತ್ತಿದೆ!… ಕಣ್‌-
ಮುಂದೆ ಮಿಗೆ ತಲೆಯೆತ್ತಿದೆ!!


ಅಂದು ವಿಪುಲೈಶ್ವರ್ಯದಿಂದಲಿ ಜಗವ ವಿಸ್ಮಯಗೊಳಿಸಿದೆ;
ಮುಂದರಿದು, ನವ ನಾಗರೀಕತೆಯಿಂದ ಚೇತನಕೆಳಸಿದೆ
ಶಿಲೆಗಳಿಗೆ ರೂಪಿತ್ತಿಹೆ- ಸತ್‌-
ಕಲೆಗಳಲಿ ಕಳೆಯೇರಿಹೆ


ಯಾರು ವಿಜಯದ ದಶಮಿಯಲಿ ಹೊಸ ಹುರುಪಿನಲಿ ಹೊರಹೊಮ್ಮುತ
ಸಾರಿ ಪರರಾಷ್ಟ್ರವನು ಸಮರದಿ ವೀರ ವಿಜಯದೊಳುಬ್ಬುತ
ಮೆರೆದರೋ ಆ ರಾಜರು- ಈ
ಗಿರುವರೇ ನವ ತೇಜರು ?


ಶೂರ ಹರಿಹರ-ಬುಕ್ಕ ನರಪತಿ-ವೀರ ಕಂಪ ನೃಪಾಲಕ,
ಧೀರ ಕೃಷ್ಣ ಸುದೇವರಾಯನು-ಅಧಟಿನೆಚ್ಚಮನಾಯಕ
ಎ೦ದು ಮೊದಲಾದರಸರು-ಎ-
ಲ್ಲಿಂದಿಹರು ಬಹು ಸರಸರು?

೧೦
ಅಂದು ನಿನ್ನಲಿ ನೃಪರು ಮೆರೆದರು; ಅಂದು ರಾಣಿಯರೊಲಿದರು,
ಅಂದು ಕವಿಗಳು ಕವನ ಕಟ್ಟಿದರಂದು ಗಾಯಕರು ಉಲಿದರು,
ವಾದಿಸಿದರಾ ವಾದಿಗಳ್,- ಮ-
ತ್ತೋದಿದರು ವರ ಗಮಕಿಗಳ್

೧೧
ಏನು ಹೇಳಲಿ? ವಿಜಯನಗರವೆ! ನಿನ್ನ ಪರಿಭವ ವಾರ್ತೆಯ
ಮಾನಸವು ಮರುಗುವುದು- ಶತ್ರುಗಳಿಂದು ನುಗ್ಗುತ ನಿನ್ನಯ
ಪಟ್ಟಣವ ಪುಡಿಗೈದರು-ನಿ
ನ್ನಟ್ಟಹಾಸವ ಹಿಳಿದರು

೧೨
*ತಾಳಿಕೋಟೆಯ ಕಾಳಗದ ಕಳದಲ್ಲಿ ನಿನ್ನ ಮಹತ್ವವ
ಸೀಳಿಬಿಟ್ಟನೆ ಕಾಲ ರಾಕ್ಷಸ?- ಕೋಳುಗೊಂಡನೆ ಸತ್ವವ?
ಅ೦ದಿನಾ ದುಷ್ಕಾಲವು?- ಆ-
ನಂದದಾ ಕೊನೆಗಾಲವು

೧೩
ಸತ್ಕಲಾಚಾರ್ಯರ ಪರಿಶ್ರಮದಿಂದಲೇಳಿಗೆವಡೆದಿಹ,
ಉತ್ಕಟಾಮಲ ದೈವ ಭಕ್ತಿಯ ಶಕ್ತಿಯಲಿ ಮೈವೆತ್ತಿಹ
ಆ ಬೃಹದ್ವಿಗ್ರಹಗಳು- ಸಂ-
ಕ್ಷೋಭೆಯನು ಪಡೆದವುಗಳು

೧೪
ನಿನ್ನ ಕೀರ್ತಿಯ ವಿಜಯ ತೂರ್ಯವು ಅಂದು ಗಾನವ ನಿಲಿಸಿತೇ?
ನಿನ್ನ ಹೆಸರಿನ ‘ವಿಜಯ’ ಶಬ್ದದ ಮೊಗಕೆ ಅಪಜಯ ಕವಿಯಿತೇ
ಆ ಮಹಾ ಸಾಮ್ರಾಜ್ಯವು- ತ-
ನ್ನಾಮ ಮಾತ್ರದಿ ಶೇಷವು!

೧೫
ಒಂದೆ ದಿನದಲಿ ನಿನ್ನ ಮಂಗಲ ತಿಲಕ ಹಣೆಯಿಂದಳಿಯಿತು
ಸುಂದರ ಸ್ವಾತಂತ್ರ್ಯ ಕೇತುವು, ಮುರಿದು, ಮಳಲಲಿ ಮುರುಟಿತು!
ಆಶೆಯಾ ಕುಡಿ ಮುಗ್ಗಿತು-ಸಂ-
ತೋಷದಾ ಕಳೆ ಕುಗ್ಗಿತು

೧೬
ಕಾಲ ಚಕ್ರದ ಕಾಲಡಿಗೆ ನೀ ಬಿದ್ದು ಗಾಸಿಯ ಪಡೆದರೂ,
ಲೀಲೆಯಾ ನೋಟಗಳು ನಿನ್ನಲಿ ತುಂಬಿಹವು- ಅದನಾದರೂ
ಇಂದು ನೋಡುತ, ನೆನೆಯುವ-ನಾ-
ವಂದಿನಾ ಗತವೈಭವ!
*****
೧೯೩೬
# ತ್ರೇತಾಯುಗದಲ್ಲಿ, ರಾಮಾಯಣ ಕಾಲದಲ್ಲಿ.
*ರಕ್ಕಸತಂಗಡಿ
ವಿಜಯನಗರದ ಷಟ್‌ ಶತ ಸಾಂವತ್ಸರಿಕೋತ್ಸವದ ಸವಿಪಿನೆನಪಿಗೆ ಅದೇ ವರ್‍ಷ ಬರೆದುದು

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...