ಚರಂಡಿ ಪಕ್ಕ ಕೂತು ಕಪ್ಪೆಗಳು ಹೊರಗೆ ಬರುವುದನ್ನೇ ಕಾಯುತ್ತಾ ಇದೀನಿ. ನಿನ್ನೆ ರಾತ್ರಿ ನಾವು ಊಟ ಮಾಡುತಿರುವಾಗ ಗಲಾಟೆ ಎಬ್ಬಿಸಿದ್ದವು. ಬೆಳಗಿನ ಜಾವದವರೆಗೆ ವಟವಟ ಗಾನ ನಿಲ್ಲಿಸಲೇ ಇಲ್ಲ. ನನ್ನ ಗಾಡ್‍ಮದರ್ ಕೂಡ ಅದನ್ನೇ ಅಂದಳು. ಕಪ್ಪೆಗಳ ಕಿರುಚಾಟ ಅವಳ ನಿದ್ರೆಯನ್ನು ಅಂಜಿಸಿ ಓಡಿಸಿಬಿಟ್ಟಿತ್ತು. ಈಗ ನಿದ್ದೆ ಮಾಡಬೇಕು ಅನ್ನುತಿದ್ದಾಳ. ಅದಕ್ಕೇ, ಬಡಿಗೆ ಹಿಡಿದು ಚರಂಡಿ ಪಕ್ಕ ಕೂತುಕೋ, ಯಾವುದಾದರೂ ಕಪ್ಪೆ ಕಂಡರೆ ಬಡಿದು ಸಾಯಿಸು ಅಂತ ನನಗೆ ಹೇಳಿದಾಳೆ… ಕಪ್ಪೆಗಳ ಮೈಯೆಲ್ಲ ಹಸಿರು, ಹೊಟ್ಟೆ ಮಾತ್ರ ಅಲ್ಲ. ನೆಲಗಪ್ಪೆ ಪೂರಾ ಕಪ್ಪು. ನನ್ನ ಗಾಡ್‍ಮದರ್ ಕಣ್ಣು ಕೂಡ ಕಪ್ಪು. ಕಪ್ಪೆ ತಿನ್ನುವುದಕ್ಕೆ ರುಜೆ ಇರುತದೆ. ನೆಲಗಪ್ಪೆ ತಿನ್ನಬಾರದು ಅನ್ನತಾರೆ. ಆದರೂ ತಿಂದಿದೀನಿ. ಅದರ ರುಚಿ ಕೂಡ ಕಪ್ಪೆ ಥರಾನೇ ಇರತ್ತೆ. ಫೆಲಿಪಾ ಇದಾಳಲ್ಲ ಅವಳು ನೆಲಗಪ್ಪೆ ತಿನ್ನಬಾರದು, ಒಳ್ಳೇದಲ್ಲ ಅನ್ನುತಾಳೆ. ಫೆಲಿಪಾ ಕಣ್ಣು ಹಸಿರು ಬಣ್ಣ ಇದೆ, ಬೆಕ್ಕಿನ ಹಾಗೆ. ಊಟದ ಹೊತ್ತಿಗೆ ನನ್ನ ಕರೆದು ಅಡುಗೆ ಮನೆಯಲ್ಲಿ ನನಗೆ ಊಟ ಕೊಡುವಳು ಫೆಲಿಪಾ. ನಾನು ಕಪ್ಪೆಗಳನ್ನ ಹೊಡೆಯುವುದು ಅವಳಿಗೆ ಇಷ್ಟ ಇಲ್ಲ. ಈ ಕೆಲಸ ಮಾಡು, ಆ ಕೆಲಸ ಮಾಡು ಅಂತ ಬಹಳ ಮಟ್ಟಿಗೆ ಹೇಳುವುದೆಲ್ಲ ನನ್ನ ಗಾಡ್‍ಮದರ್ ಮಾತ್ರ… ಅವಳಿಗಿಂತ ಫೆಲಿಪಾನ ಕಂಡರೆ ನನಗೆ ಇಷ್ಟ. ನಮಗೆ ಊಟಕ್ಕೆ ಬೇಕಾದದ್ದೆಲ್ಲ ಅಂಗಡಿಯಿಂದ ತರುವುದಕ್ಕೆ ಪರ್ಸಿನಿಂದ ದುಡ್ಡು ತೆಗೆದು ಫೆಲಿಪಾಗೆ ಕೊಡುವುದು ಏನಿದ್ದರೂ ನನ್ನ ಗಾಡ್‍ಮದರ್. ಫೆಲಿಪಾ ಮಾಡುವ ಒಂದೇ ಕೆಲಸ ಅಂದರೆ ಅಡುಗೆ ಮನೆಯಲ್ಲೇ ಇದ್ದು ನಮ್ಮ ಮೂವರಿಗೂ ಅಡುಗೆ ಮಾಡುವುದು, ಅಷ್ಟೇ. ನಾನು ನೋಡಿದಾಗಿನಿಂದ ಬೇರೆ ಯಾವ ಕೆಲಸಾನೂ ಮಾಡಿಲ್ಲ ಅವಳು. ಪಾತ್ರೆ ತೊಳೆಯುವುದು ನನ್ನ ಕೆಲಸ. ಒಲೆಗೆ ಸೌದೆ ತರುವುದು ಕೂಡ ನನ್ನದೇ ಕೆಲಸ. ಆಮೇಲೆ ನನ್ನ ಗಾಡ್‍ಮದರ್ ಎಲ್ಲರಿಗೂ ಊಟ ಹಾಕುತಾಳೆ. ಮೊದಲು ಅವಳು ತಿಂದು, ಮಿಕ್ಕಿದ್ದನ್ನು ಎರಡು ಭಾಗ ಮಾಡಿ ಫೆಲಿಪಾಗೆ ಒಂದು, ನನಗೆ ಇನ್ನೊಂದು ಕೊಡುತ್ತಾಳೆ. ಒಂದೊಂದು ಸಾರಿ ಫೆಲಿಪಾಗೆ ಊಟ ಮಾಡುವುದಕ್ಕೆ ಇಷ್ಟ ಇರಲ್ಲ. ಆಗ ಎರಡು ಪಾಲಿನ ಊಟವೂ ನನಗೇ. ಅದಕ್ಕೇ ನನಗೆ ಫೆಲಿಪಾನ ಕಂಡರೆ ಇಷ್ಟ. ನನಗೆ ಯಾವಾಗಲೂ ಹಸಿವು. ಊಟ ಮಾಡಿದ ಮೇಲೂ ನನ್ನ ಹೊಟ್ಟೆ ತುಂಬುವುದೇ ಇಲ್ಲ. ಮನೆಯಲ್ಲಿ ಮಾಡಿದ್ದನ್ನೆಲ್ಲ ಕೊಟ್ಟರೂ ನನ್ನ ಹೊಟ್ಟೆ ತುಂಬುವುದು ಇಲ್ಲವೇ ಇಲ್ಲ. ಫೆಲಿಪಾಗೂ ಇದು ಗೊತ್ತು… ನನ್ನ ಹೊಟ್ಟೆ ಯಾವಾಗಲೂ ಹಸಿಯುತಲೇ ಇರತ್ತೆ, ನಾನು ಹುಚ್ಚ ಅಂತ ಬೀದಿಯಲ್ಲಿ ಜನ ಆಡಿಕೊಳ್ಳತಾರೆ. ಜನ ಹೀಗನ್ನುವುದನ್ನು ನನ್ನ ಗಾಡ್‍ಮದರ್ ಕೇಳಿಸಿಕೊಂಡಿದಾಳೆ. ನಾನು ಕೇಳಿಲ್ಲ. ನಾನು ಓಬ್ಬನೇ ಬೀದಿಗೆ ಹೋಗುವುದಕ್ಕೆ ಗಾಡ್‍ಮದರ್ ಬಿಡಲ್ಲ. ನನ್ನ ಅವಳು ಹೊರಗೆಲ್ಲಾದರೂ ಕರಕೊಂಡು ಹೋದರೆ ಅದು ಚರ್ಚೆಗೆ, ಮಾಸ್ ಪಾರ್ಥನೆ ಕೇಳುವುದಕ್ಕೆ. ನನ್ನನ್ನ ಅವಳ ಪಕ್ಕದಲ್ಲೇ ಕೂರಿಸಿಕೊಂಡು ನನ್ನ ಎರಡೂ ಕೈಗೆ ಅವಳ ಶಾಲಿನ ತುದಿ ಬಿಗಿದು ಕಟ್ಟುತಾಳೆ. ಕೈ ಯಾಕೆ ಕಟ್ಟುತಾಳೋ ಗೊತ್ತಿಲ್ಲ. ನಾನು ಏನಾದರೂ ಹುಚ್ಚು ಕೆಲಸ ಮಾಡದೆ ಇರಲಿ ಅಂತ ಕಟ್ಟತೇನೆ ಅನ್ನತಾಳೆ. ಯಾರದೋ ಕತ್ತು ಹಿಸುಕಿ ಉಸಿರು ಕಟ್ಟಿಸಿ ಸಾಯಿಸುತ್ತಾ ಇದೇನೆ ಅಂತ ಜನ ಒಂದು ಸಾರಿ ಬಂದು ಹೇಳಿದ್ದರು. ಯಾರೋ ಹೆಂಗಸಿನ ಕತ್ತು ಹಿಸುಕುತ್ತ ಖುಷಿ ಪಡತಾ ಇದ್ದೆನಂತೆ. ನನಗೆ ಜ್ಞಾಪಕ ಇಲ್ಲ. ಆದರೂ ಇಂಥ ಕೆಲಸ ನಾನು ಮಾಡತೇನೆ ಅಂತ ಗಾಡ್‍ಮದರ್ ಹೇಳತಾ ಇರತಾಳೆ. ಅವಳು ಯಾವತ್ತೂ ಸುಳ್ಳು ಹೇಳಲ್ಲ. ಊಟ ಮಾಡು ಬಾ ಅಂತ ಕರೆದಾಗ ನನ್ನ ಪಾಲಿನ ಊಟ ನನಗೆ ಕೊಡತಾಳೆ. ಮಿಕ್ಕವರ ಹಾಗೆ ಅಲ್ಲ. ಅವರೆಲ್ಲ ತಿನ್ನೋದಕ್ಕೆ ಕೊಡತೇವೆ ಬಾ ಅನ್ನತಾರೆ. ಹತ್ತಿರ ಹೋದರೆ ತಿಂಡಿಯೂ ಇಲ್ಲದೆ, ಏನೂ ಇಲ್ಲದೆ ನಾನು ಓಡಿ ಹೋಗುವವರೆಗೆ ಕಲ್ಲಲ್ಲಿ ಹೊಡೆಯುತಾರೆ. ನನ್ನ ಗಾಡ್ಮದರ್ ನನ್ನ ಚೆನ್ನಾಗಿ ನೋಡಿಕೊಳ್ಳತಾಳೆ. ಅದಕ್ಕೇ ಅವಳ ಮನೆಯಲ್ಲಿ ಖುಷಿಯಾಗಿದೇನೆ. ಅಲ್ಲದೆ ಫೆಲಿಪಾ ಅಲ್ಲೇ ಇರತಾಳೆ. ಫೆಲಿಪಾ ನನ್ನ ತುಂಬ, ತುಂಬ ಚೆನ್ನಾಗಿ ನೋಡಿಕೊಳ್ಳತಾಳೆ. ಅದಕ್ಕೇ ಅವಳು ಅಂದರೆ ನನಗೆ ಪ್ರೀತಿ. ಅವಳ ಹಾಲು ಬಿಳಿಯ ದಾಸವಾಳದಷ್ಟು ಸೀ… ಮೇಕೆ ಹಾಲು ಕುಡಿದಿದೇನೆ, ಆಗತಾನೇ ಮರಿ ಹಾಕಿದ ಹಂದಿ ಹಾಲು ಕುಡಿದಿದೇನೆ, ಯಾವುದೂ ಫೆಲಿಪಾ ಹಾಲಿನಷ್ಟು ಚೆನ್ನಾಗಿರಲ್ಲ… ನಮಗೆ ಪಕ್ಕೆಲುಬು ಇರುವ ಜಾಗದಲ್ಲಿ ಅವಳಿಗೆ ಇರುವ ಉಬ್ಬುಗಳನ್ನು, ಭಾನುವಾರದ ದಿನಗಳಲ್ಲಿ ನಮ್ಮ ಗಾಡ್‍ಮದರ್ ಕೊಡುವ ಹಾಲಗಿಂತಲೂ ರುಚಿಯಾದ ಅವಳ ಹಾಲು ಬರುವ ಜಾಗ ಚೀಪಿದರೆ, ಚೀಪುವುದು ಹೇಗೆಂದು ಗೊತ್ತಿದ್ದರೆ ಸಾಕು ಸಿಗುತದೆ ಹಾಲು, ಬಿಟು ಬಹಳ ಕಾಲವೇ ಆಗಿದೆ… ದಿನಾ ರಾತ್ರಿ ಫೆಲಿಪಾ ನನ್ನ ಕೋಣೆಗೆ ಮಲಗುವುದಕ್ಕೆ ಬರುತಿದ್ದಳು. ನನ್ನ ಮಗ್ಗುಲಲ್ಲಿ ನನಗೊತ್ತಿಕೊಂಡು ಇಲ್ಲಾ ನನ್ನ ಮೇಲೇರಿ ಮಲಗುತಿದ್ದಳು. ಆಮೇಲೆ ಬೆಚ್ಚನೆ ಸೀ ಹಾಲು ನನ್ನ ಬಾಯಿಗೆ ಇಳಿಯುವ ಹಾಗೆ ತೆಗೆದು ನನ್ನ ಬಾಯಿಗೆ ಇಡುತಿದ್ದಳು. ಹಸಿವು ಅಂತ ಎಷ್ಟೋ ಸಾರಿ ಬಿಳೀ ದಾಸವಾಳ ತಿಂದಿದೇನೆ. ಫೆಲಿಪಾ ಹಾಲಿಗೂ ಅಂಥದೇ ಪರಿಮಳ ಇರುತಿತ್ತು. ಅವಳ ಮೊಲೆತೊಟ್ಟು ನನ್ನ ಬಾಯಿಗೆ ಇಟ್ಟಾಗ ಕಚಗುಳಿ ಕೊಡುತಿದ್ದಳು. ಅದಕ್ಕೇ ಅವಳ ಹಾಲು ರುಚಿ ಅನ್ನಿಸುತಿತ್ತು. ಆಮೇಲೆ ನನ್ನ ಪಕ್ಕದಲ್ಲೇ ಮಲಗಿ ನಿದ್ರೆ ಮಾಡುತಿದ್ದಳು, ಬೆಳಗಿನ ಜಾವದವರೆಗೂ. ಆವಾಗ ನನಗೆ ಚಳಿ ಆಗತಿರಲಿಲ್ಲ, ರಾತ್ರಿ ಹೊತ್ತು ಒಬ್ಬನೇ ಅಲ್ಲೇ ಸತ್ತರೆ ನರಕಕ್ಕೆ ಹೋದೇನು ಅನ್ನುವ ಭಯ ಆಗತಿರಲಿಲ್ಲ… ಒಂದೊಂದು ಸಾರಿ ನರಕದ ಭಯ ಇರತಾ ಇರಲ್ಲ, ಒಂದೊಂದು ಸಾರಿ ಇರತ್ತೆ. ಆವಾಗೆಲ್ಲ ನನ್ನ ನಾನೇ ಹೆದರಿಸಿಕೊಳ್ಳತೇನೆ, ಗಟ್ಟಿತಲೆಯವನು ನಾನು, ಕಣ್ಣೆದುರಿಗೆ ಏನು ಕಂಡರೂ ಡಿಕ್ಕಿ ಹೊಡೆಯುತೇನೆ, ಇವತ್ತಲ್ಲ ನಾಳೆ ನರಕಕ್ಕೆ ಹೋಗುವವನೇ ಅಂದುಕೂಳ್ಳತಿದ್ದೆ. ಫೆಲಿಪಾ ಬಂದು ನನ್ನ ಹೆದರಿಕೆಗಳನ್ನೆಲ್ಲ ಅಂಜಿಸಿ ಓಡಿಸಿಬಿಡತಾಳೆ. ಕಚಗುಳಿ ಇಟ್ಟು ನಗಿಸುತಾಳೆ. ನನಗಿರುವ ಭಯ ಮನಸಿಗೇ ಬರದ ಹಾಗೆ ತಡೀತಾಳೆ. ಸ್ವಲ್ಪ ಹೊತ್ತು ಎಲ್ಲಾ ಮರೀತೇನೆ… ನನ್ನ ಜೊತೆ ಇರುವುದು ಅವಳಿಗೆ ಇಪ್ತವಾಗಿದ್ದಾಗ ನೀನು ಮಾಡಿರುವ ಪಾಪಗಳನ್ನೆಲ್ಲ ದೇವರ ಹತ್ತಿರ ಹೇಳಿಬಿಡುತೇನೆ ನೋಡು ಅನ್ನತಾಳೆ. ಇವತ್ತಲ್ಲ ನಾಳ ಸ್ವರ್ಗಕ್ಕೆ ಹೋಗತೇನೆ, ಹೋಗಿ ದೇವರನ್ನ ಕಾಣತೇನೆ, ನಿನ್ನ ತಲೆಯಿಂದ ಕಾಲಿನವರೆಗೂ ತುಂಬಿರುವ ಪಾಪ ಕ್ಷಮಿಸಿಬಿಡು ಅಂತ ನಿನ್ನ ಪರವಾಗಿ ಹೇಳತೇನೆ ಅನ್ನತಾಳೆ. ನಿನ್ನ ಕ್ಷಮಿಸುವುದಕ್ಕೆ ಹೇಳತೇನೆ, ತಲೆ ಕೆಡಿಸಿಕೊಳ್ಳಬೇಡ ಅನ್ನತಾಳೆ. ಅದಕ್ಕೇ ದಿನಾ ಚರ್ಚಿಗೆ ಹೋಗಿ ಪಾಪ ನಿವೇದನೆ ಮಾಡಿಕೊಳ್ಳತಾಳೆ. ಅವಳು ಕೆಟ್ಟವಳು ಅಂತಲ್ಲ, ನನ್ನೊಳಗೆ ದೆವ್ವಗಳಿವೆ, ಚರ್‍ಚಿಗೆ ಹೋಗಿ ನನ್ನ ಪರವಾಗಿ ನಿವೇದನೆ ಮಾಡಿಕೊಂಡು ಅವನ್ನೆಲ್ಲ ಓಡಿಸಬೇಕು ಅಂತ ದಿನಾ ಹೋಗತಾಳೆ. ದಿನಾ. ದಿನಾ ಮಧ್ಯಾಹ್ನ ಹೋಗತಾಳೆ. ಬದುಕಿರುವವರೆಗೂ ಹೀಗೇ ಮಾಡತೇನೆ ಅನ್ನತಾಳೆ. ಫೆಲಿಪಾ ಹೀಗೆ ಅಂತ ಅವಳ ಮೇಲೆ ನನಗೆ ತುಂಬ ಪ್ರೀತಿ. ನನ್ನ ತಲೆ ಗಟ್ಟಿ ಅನ್ನವುದೇ ದೊಡ್ಡ ಕಷ್ಟ. ನಮ್ಮ ಮನೆಯ ಹಜಾರದಲ್ಲಿರುವ ಕಂಬಗಳಿಗೆ ದಿನಾ ಗಂಟಿಗಟ್ಟಲೆ ತಲೆ ಚಚ್ಚಿಕೊಳ್ಳತೇನೆ. ಇಷ್ಟು ದಿನವಾದರೂ ಒಂದು ಕಂಬವಾದರು ಬಿರುಕು ಕೂಡ ಬಿಡದೆ ನೆಟ್ಟಗೇ ನಿಂತಿವೆ. ಒಂದೊಂದು ಸಾರಿ ನೆಲಕ್ಕೆ ತಲೆ ಚಚ್ಚಿಕೊಳ್ಳತೇನೆ. ನಿಧಾನವಾಗಿ ಶುರುಮಾಡಿ, ಆಮೇಲೆ ಜೋರಾಗಿ. ಡೋಲಿನ ಥರ ಶಬ್ದ. ಚರ್‍ಚಿನಲ್ಲಿ ಚಿರಿಮ್ಲಾ ಓಲಗದ ಜೊತೆ ಇರುತ್ತದಲ್ಲ ಅಂಥ ಡೋಲಿನ ಶಬ್ದದ ಹಾಗೆ. ಚರ್ಚಿನಲ್ಲಿ ನನ್ನ ಕೈ ಕಟ್ಟಿಸಿಕೊಂಡು ಗಾಡ್‍ಮದರ್ ಜೊತೆ ಕೂತಿರುವಾಗ ಹೊರಗೆ ಧಡ್ ಧಡ್ ಡೋಲಿನ ಸದ್ದು… ನನ್ನ ಕೋಣೆಯಲ್ಲಿ ತಿಗಣೆ, ಜಿರಳೆ ಇದ್ದರೆ ನಾನು ನರಕಕ್ಕೆ ಹೋಗಿ ಬೆಂಕಿಯಲ್ಲಿ ಬಿದ್ದು ಬೇಯತೇನೆ, ನೆಲಕ್ಕೆ ತಲೆ ಚಚ್ಚಿಕೊಳ್ಳತೇನಲ್ಲ ಅದಕ್ಕೇ ನರಕಕ್ಕೆ ಹೋಗತೇನಂತೆ, ಹಾಗಂತ ಗಾಡ್‍ಮದರ್ ಅನ್ನತಾಳೆ. ಡೋಲಿನ ಶಬ್ದ ಕೇಳುವುದಕ್ಕೆ ನನಗೆ ಇಷ್ಟ. ಅವಳಿಗೆ ತಿಳೀಬೇಕು ಅದು. ಹೊರಗೆ ಓಡಿ ಹೋಗಿ ಅದು ಹೇಗೆ ಅಷ್ಟು ದೂರದ ಡೋಲಿನ ಶಬ್ದ ಒಳಗೆ ಪಾದ್ರಿಯ ಜೋರು ಜೋರು ಮಾತನ್ನೂ ಮೀರಿಸಿ ಕೇಳುತ್ತದೆ ಅನ್ನುವುದನ್ನು ತಿಳಿಯಲು ಕಾತರಪಡುತ್ತಾ ಚರ್ಚಿನೊಳಗೆ ಕೇಳಿಸಿಕೊಳುತ್ತೇನಲ್ಲ ಹಾಗೆ ಕೇಳಿಸಿಕೊಳ್ಳುವುದಕ್ಕೆ ಇಷ್ಟ. ‘ಒಳಿತನ ದಾರಿಯಲ್ಲಿ ಬೆಳಕು ಇರುವುದು, ಕೆಡುಕಿನ ದಾರಿಯಲ್ಲಿ ಕತ್ತಲು,’ ಅದು ಪಾದ್ರಿಯ ಮಾತು… ಇನ್ನೂ ಕತ್ತಲಿರುವಾಗಲೇ ಎದ್ದು ಕೋಣೆಯಿಂದ ಆಚೆಗೆ ಹೋಗತೇನೆ. ಬೀದಿಯನ್ನೆಲ್ಲ ಗುಡಿಸಿ ಬೆಳಕು ನನ್ನ ಮೇಲೆ ಬೀಳುವುದಕ್ಕೆ ಮೊದಲೇ ಕೋಣೆಗೆ ವಾಪಸು ಬಂದುಬಿಡತೇನೆ. ರಸೆಯ ಮೇಲೆ ಏನೇನೋ ಅಗತದೆ. ಜನ ಕಲ್ಲೆಸೆದು ತಲೆ ಬುರುಡೆ ಬಿಚ್ಚಿ ಬಿಡತಾರೆ. ದಪ್ಪ ದಪ್ಪ ಮಳೆ ಹನಿಯ ಹಾಗೆ ಎಲ್ಲಾ ಕಡೆಯಿಂದ ಕಲ್ಲು ಬೀಳತವೆ. ಆಮೇಲೆ ನನ್ನ ಅಂಗಿಗೆ ನಾನೇ ಹೊಲಿಗೆ ಹಾಕಿಕೊಳ್ಳಬೇಕು, ಮುಖದ ಮೇಲೆ ಮಂಡಿಯ ಮೇಲೆ ಆಗಿರುವ ಗಾಯ ವಾಸಿ ಆಗುವುದಕ್ಕೆ ಎಷ್ಟೋ ದಿನ ಬೇಕು. ಮತ್ತೆ ಕೈ ಕಟ್ಟಿಸಿಕೊಂಡು ಕೂತಿರಬೇಕು. ಇಲ್ಲದಿದ್ದರೆ ಅವೆಲ್ಲ ಗಾಯದ ಹೊಪ್ಪಳೆ ಕಿತ್ತು ಮತ್ತೆ ರಕ್ತ ಸುರಿಯುತದೆ. ರಕದ ರುಚಿ ಚೆನ್ನಾಗಿದ್ದರೂ ಫೆಲಿಪೆಯ ಹಾಲಿನ ರುಚಿ ಇರಲ್ಲ ಅದಕ್ಕೆ… ಅದಕ್ಕೇ ಯಾವಾಗಲೂ ಮನೆಯಲ್ಲೇ ಇರತೇನೆ. ಆಗ ಯಾರೂ ಕಲ್ಲಲ್ಲಿ ಹೊಡೆಯುವುದಿಲ್ಲ. ಊಟ ಆದಮೇಲೆ ಕೋಣೆಗೆ ಸೇರಿಕೊಂಡು, ಬಾಗಿಲು ಹಾಕಿ, ಚಿಲುಕ ಹಾಕಿ ಭದ್ರಮಾಡತೇನೆ. ಕತ್ತಲಲ್ಲಿ ಪಾಪಗಳು ಒಳಕ್ಕೆ ಬಂದು ನನ್ನ ಹುಡುಕಿ ಹಿಡಿಯಬಾರದು ಅಂತ. ಜಿರಲೆಗಳು ಮೈಮೇಲೆಲ್ಲ ಓಡಾಡಿದರೂ ದೀಪ ಹಚ್ಚಲ್ಲ. ಹಾಸಿಕೊಂಡ ಚೀಲದ ಮೇಲೆ ಅಲ್ಲಾಡದೆ ಮಲಗಿರತೇನೆ. ನನ್ನ ಕತ್ತಿನ ಹತ್ತಿರ ಜಿರಳೆಯ ಕಾಲು ತಾಕಿದ ತಕ್ಷಣ ಕೈಯಲ್ಲಿ ರಪ್ಪನೆ ಹೊಡೆದು ಉಜ್ಜಿ ಸಾಯಿಸತೇನೆ. ದೀಪ ಮಾತ್ರ ಹಚ್ಚಲ್ಲ. ಕಂಬಳಿಯ ಒಳಗೆ ಎಲ್ಲೆಲ್ಲಿ ಜಿರಲೆ ಸೇರಿಕೊಂಡಿವೆ ಅಂತ ನೋಡುವುದರಲ್ಲಿ ಮೈಮರೆತಿರುವಾಗ ದೀಪದ ಬೆಳಕಲ್ಲಿ ಪಾಪಗಳು ಬಂದು ನನ್ನ ಹಿಡಿದುಬಿಟ್ಟರೆ… ಜಿರಳೆಗಳನ್ನ ಹೊಡೆದಾಗ ಪುಟ್ಟ ಪಟಾಕಿ ಹೊಡೆದ ಹಾಗೆ ಚಟಚಟ ಸದ್ದು ಬರತದೆ. ಜೀರುಂಡೆಗಳು ಹಾಗೆ ಸದ್ದು ಮಾಡುತ್ತವೋ ಇಲ್ಲವೋ ಗೊತಿಲ್ಲ. ನಾನು ಜೀರುಂಡೆಗಳನ್ನ ಕೊಲ್ಲಲ್ಲ. ಜೀರುಂಡೆಗಳು ಯಾವಾಗಲೂ ಸದ್ದು ಮಾಡತವೆ, ಉಸಿರು ತಗೊಳ್ಳುವುದಕ್ಕೂ ಕೂಗುವುದು ನಿಲ್ಲಿಸಲ್ಲ, ನರಕದಲ್ಲಿ ಹಿಂಸೆ ಪಡುವ ಆತ್ಮಗಳು ಚೀರಾಡುವ ಶಬ್ದ ನಮಗೆ ಕೇಳಬಾರದು ಅಂತ ಹಾಗೆ ಕೂಗತವೆ ಅನ್ನುತಾಳೆ ಫೆಲಿಪಾ. ಜೀರುಂಡೆಗಳು ಕೂಗುವುದನ್ನು ನಿಲ್ಲಿಸಿದ ದಿವಸ ಲೋಕದಲ್ಲೆಲ್ಲ ಆತ್ಮಗಳು ಚೀರಾಡುವ ಶಬ್ದವೇ ತುಂಬಿಕೊಂಡು ನಾವೆಲ್ಲ ತಲೆ ಕೆಟ್ಟು ದಿಕ್ಕಾಪಾಲಾಗಿ ಓಡಬೇಕಾಗತ್ತಂತೆ. ಅಲ್ಲದೆ ಒಂದು ಜೀರುಂಡೆ ಸದ್ದು ಕೇಳಿಸಿಕೊಳ್ಳುವುದಕ್ಕೆ ಅಂತಲೇ ಒಂದು ಕಿವಿ ಆ ಕಡೆಗೇ ಇಟ್ಟಿರತೇನೆ. ನನ್ನ ಕೋಣೆ ತುಂಬಾ ಇವೆ. ಮಲಗುವುದಕ್ಕೆ ಹಾಸಿಕೊಳ್ಳುವ ಚೀಲಗಳಲ್ಲಿ ಜಿರಳೆಗಳಿಗಿಂತ ಮಿಡತೆಗಳೇ ಜಾಸ್ತಿ. ಚೇಳೂ ಇದಾವೆ. ಚಾವಣಿಯಿಂದ ಎಷ್ಟೊಂದು ಬೀಳತವೆ. ಅವು ಮೈ ಮೇಲೆ ಹರಿದು ಆ ಕಡೆ ನೆಲ ಮುಟ್ಟುವವರೆಗೆ ಅಲ್ಲಾಡದ ಹಾಗೆ ಉಸಿರು ಬಿಗಿ ಹಿಡಕೊಂಡೇ ಇರಬೇಕು. ಕೈ ಕಾಲು ಒಂದಿಷ್ಟು ಆಡಿಸಿದರೂ, ಹೆದರಿಕೊಂಡು ಮೈ ನಡುಗಿದರೂ ಕುಟುಕುತವೆ. ತುಂಬ ನೋವಾಗತ್ತೆ. ಒಂದು ಸಾರಿ ಫೆಲಿಪಾ ಅಂಡಿಗೆ ಚೇಳು ಕಚ್ಚಿತ್ತು. ನರಳಿದಳು, ಸುಮ್ಮನೆ ಚೀರಿದಳು, ಮಾತೆ ಮೇರಿಗೆ ಪ್ರಾರ್ಥನೆ ಮಾಡತಾ ತನ್ನ ಹಿಂಬದಿಯ ಆಕಾರ ಹಾಳಾಗದಿರಲಿ ಅಂತ ಬೇಡಿಕೊಂಡಳು. ಚೇಳು ಕಚ್ಚಿದ್ದ ಜಾಗಕ್ಕೆ ಉಗುಳು ಹಚ್ಚಿದೆ. ಇಡೀ ರಾತ್ರಿ ಉಗುಳು ಹೆಚ್ಚುತ್ತಲೇ ಇದ್ದೆ. ಅವಳ ಜೊತೆ ನಾನೂ ಪ್ರಾರ್ಥನೆ ಮಾಡತಾ ಇದ್ದೆ, ನನ್ನ ಔಷಧಿಯಿಂದ ಅವಳಿಗೆ ವಾಸಿ ಆಗಿಲ್ಲ ಅಂತ ಗೊತಾದಾಗ ಕಣ್ಣೀರು ಕೂಡ ಸೇರಿಸುತಿದ್ದೆ… ಇರಲಿ. ಹೊರಗಡೆ ಇರುವುದಕ್ಕಿಂತ ನನ್ನ ಕೋಣೆಯಲ್ಲೇ ಆರಾಮವಾಗಿರತೇನೆ. ಹೊರಗೆ ಹೋದರೆ ಬೇರೆಯವರನ್ನ ಹೊಡೆಯುವುದಕ್ಕೆ ಇಷ್ಟ ಪಡುವ ಜನದ ಕಣ್ಣಿಗೆ ಬೀಳತೇನೆ. ಕೋಣೆಯೊಳಗೆ ನನಗೆ ಯಾರೂ ಏನೂ ಮಾಡಲ್ಲ. ನಾನು ದಾಸವಾಳ ತಿನ್ನತಾ ಇದ್ದರೆ, ಇಲ್ಲ ಅವಳಿಟ್ಟುಕೊಂಡಿದ್ದ ದಾಳಿಂಬರೆ ತಿಂದರೂ ಗಾಡ್‍ಮದರ್ ಕೂಗಾಡತಾ ಇರಲಿಲ್ಲ. ಯಾವಾಗಲೂ ತಿನ್ನುತಾ ಇರೋದಕ್ಕೆ ನನಗೆ ಇಷ್ಟ ಅಂತ ಅವಳಿಗೆ ಗೊತ್ತು. ನನ್ನ ಹಸಿವು ಮುಗಿಯುವುದೇ ಇಲ್ಲ ಅನ್ನುವುದು ಗೊತ್ತು ಅವಳಿಗೆ. ಎಷ್ಟು ಊಟ ಹಾಕಿದರೂ ಸಾಲಲ್ಲ, ಅಲ್ಲಿ ಇಲ್ಲಿ ಏನೇನೋ ಗೆಬರಿಕೊಂಡು ಯಾವಾಗಲೂ ಬಾಯಾಡಿಸಿದರೂ ನನ್ನ ಹೊಟ್ಟೆ ತುಂಬುವುದೇ ಇಲ್ಲ ಅಂತ ಅವಳಿಗೆ ಗೊತ್ತು. ಬಡಕಲು ಹಂದಿಗೆ ಹಾಕುವ ಬೂಸ, ಕೋಳಿಗೆ ಹಾಕುವ ಕಾಳು ಕೂಡ ಮುಕ್ಕುತೀನಿ ಅನ್ನುವುದು ಗೊತ್ತು. ಬೆಳಗಿನಿಂದ ರಾತ್ರಿವರೆಗೂ ನನಗೆ ಎಷ್ಟು ಹಸಿವು ಇರುತ್ತೆ ಅನ್ನುವುದು ಅವಳಿಗೆ ಗೊತ್ತು. ಈ ಮನೆಯಲ್ಲಿ ತಿನ್ನುವುದಕ್ಕೆ ಏನಾದರೂ ಸಿಗುತ್ತಾ ಇರುವವರೆಗೂ ಇಲ್ಲೇ ಇರತೇನೆ. ತಿನ್ನುವುದು ನಿಲ್ಲಿಸಿದ ದಿನ ಸತ್ತು ಹೋಗತೇನೆ. ಆಮೇಲೆ ಸೀದಾ ನರಕಕ್ಕೆ ಹೋಗತೇನೆ. ನನ್ನ ಯಾರೂ ಅಲ್ಲಿಂದ ಕರಕೊಂಡು ಬರುವುದಕ್ಕೆ ಆಗಲ್ಲ. ಒಳ್ಳೆಯವಳಾದರೂ ಫೆಲಿಪಾಗೂ ಆಗಲ್ಲ, ನನ್ನ ಗಾಡ್ಮದರ್ ನನ್ನ ಕತ್ತಿಗೆ ಹಾಕಿರುವ ತಾಯತ ಕೂಡ ಕಾಪಾಡಲ್ಲ… ಈಗ ಚರಂಡಿ ಪಕ್ಕ ಕೂತು ಕಪ್ಪೆ ಹೊರಕ್ಕೆ ಬರಲಿ ಅಂತ ಕಾಯತಾ ಇದೇನೆ. ಇಷ್ ಹೊತ್ತು ಮಾತಾಡತಾ ಇದ್ದರೂ ಒಂದೇ ಒಂದು ಕಪೇನೂ ಬಂದಿಲ್ಲ. ಅವು ಬರುವುದಕ್ಕೆ ಇನ್ನೂ ಲೇಟು ಮಾಡಿದರೆ ನಾನು ನಿದ್ದೆ ಹೋಗತೇನೆ, ಅವನ್ನ ಕೊಲ್ಲಕ್ಕೆ ಆಗಲ್ಲ, ಅವುಗಳ ಗಲಾಟೆಗೆ ಗಡ್‍ಮದರ್‍ಗೆ ನಿದ್ರೆ ಬರಲ್ಲ, ನಿಜವಾಗಲೂ ಸಿಟ್ಟು ಮಾಡಿಕೊಳ್ಳತಾಳೆ. ಆಮೇಲೆ ಅವಳ ಕೋಣೆಯಲ್ಲಿರುವ ಸಂತರ ಪಟಗಳ ಮುಂದೆ ನಿಂತು ನನ್ನ ನೇರವಾಗಿ ನರಕಕ್ಕೆ ತಳ್ಳಿ, ಶಾಶ್ವತವಾಗಿ ಅಲ್ಲೇ ಇರುವ ಹಾಗೆ ಮಾಡಿ, ಅಪ್ಪ ಅಮ್ಮನ ಮುಖ ತೋರಿಸಲೇಬೇಡಿ ಅಂತ ಪಾರ್ಥನ ಮಾಡತಾಳೆ… ಹೀಗೇ ಮಾತಾಡತಾ ಇರೋದೇ ವಾಸಿ… ಫೆಲಿಪಾ ಹಾಲನ್ನ ಮತ್ತೆ ಬಾಯಿ ತುಂಬ ತುಂಬಿಕೊಳ್ಳಬೆಕು, ದಾಸವಾಳದ ರಸದ ರುಚಿ ಇರುವ ಹಾಲು…
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Macario