ನೆನೆಯಿರಿ ಹಿರಿಯರ
ಹಣ್ಣು, ಮರಗಿಡಗಳ ಬೆಳೆಯುವವರ.
ಕೃಷಿ ಪ್ರೇಮ
ಇಹಕೂ ಆಯಿತು
ಪರಕೂ ಆಯಿತು
ಸಾರ್ಥಕ ಬದುಕಿನ ಸಂಕೇತವಾಯಿತು.
ನೆಟ್ಟ ಮರ ಗಿಡಗಳಲಿ
ಒಂದು ಒಣಗಿದರೂ
ಹುಳುಕು ಫಲಗಳ ಹೊತ್ತು ನಿಂತರೂ
ಹೌಹಾರುತ್ತಿದ್ದರು
ಎದೆ ಅಪಮೌಲ್ಯಗೊಂಡಿದೆಯೆಂದು.
ಕೊರಗಿ ಕಾಲವ ನೂಕಿ ಸಾಯುತ್ತಿರಲಿಲ್ಲ
ಪುಟ ಚೆಂಡಿನಂತೆ
ಬೆಳೆಯುವ ಪಟ್ಟು ಬಿಡದೆ
ಆತ್ಮ ನಿರೀಕ್ಷಣೆ ನಡೆಸಿ
ತಪ್ಪು ಹುಡುಕಿ, ತಿದ್ದಿ
ಒಂದರ ಬದಲು ಹತ್ತು ನೆಟ್ಟು
ಮರಳಿ ಸಮಾಧಾನ ಪಡೆಯುತ್ತಿದ್ದರು.
ಸಂಪ್ರೀತ
ವಸುಂಧರೆಯ ವದನದಲಿ
ಗೊಮ್ಮಟನ ಸವಿ ಮಂದಹಾಸ ಮಿನುಗುತ್ತಿತ್ತು
ಮೋಹಿತ ಅಲೌಕಿಕರು
ಬಂದು ಹೋಗುವ
ಸುಂದರ ತಾಣವಾಗಿತ್ತು.
ಇಲ್ಲಿ
ಈಗಿನ ಕಾಲದಲಿ
ಅವರು ಬಂದು ಹೋಗುವುದಿರಲಿ
ನಮಗೇ ಇರಬೇಕೆನಿಸುವುದೇ ? ಹೇಳಿ!
*****