Home / ಕವನ / ಕವಿತೆ / ಅಮ್ಮ!

ಅಮ್ಮ!

(ವಿಯೋಗ ಗೀತ)

೧
ಅಮ್ಮ! ನಿನ್ನ ವಿಯೋಗದರಿವಿನಲಿ ನನ್ನೆದೆಯು
ಸಂತಾಪದಲಿ ಸಿಡಿಯುತಿತ್ತು!
ದುಮ್ಮಾನದುರಿಯಲ್ಲಿ ಆಹುತಿಗೆ ಸಂದಿತ್ತು!
ಮನವು ಸುಡುಗಾಡಿನಂತಿತ್ತು!

೨
ಕಣ್ಣೀರ ಕಾಳ್ಪುರವು ಕಾಲಾಗಿ ಹರಿದತ್ತು!
ಉತ್ಸಾಹದೈಸಿರಿಯ ಮೇಲೆ
ಮಣ್ಣೆರಚಿದಂತಾಯ್ತು! ನಲವಿನೊರತೆಯು ಬರತು,
ನಾಟ್ಯವೆಸೆಗಿತು ದುಃಖಲೀಲೆ!

೩
ಜೀವನದ ದಾರಿಯಲಿ ಕೈದೀಪದಂತಿದ್ದೆ;-
ದೀಪವದು ನಂದಿದಂತಾಯ್ತು!
ಓವಿ ಮುನ್ನಡೆಸುತಿಹ ಊರ್ಗೋಲಿನಂತಿದ್ದೆ;-
ಆ ಕೋಲು ಮುರಿದ ಹಾಗಾಯ್ತು

೪
ಕಣ್ಣಿಗಾ ನಿನ್ನ ಭೌತಿಕ ಶರೀರದ ರೂಹು
ಇನ್ನು ಕಾಣದಿರಲೇನಹುದು?-
ನಿನ್ನ ಮಂಗಲ ರೂಪವೆನ್ನ ಹೃದಯದ ಪಟದಿ
ಅಚ್ಚಳಿಯದಂತೆ ನೆಲಸಿಹುದು

೫
ಎನ್ನಲ್ಲಿ ಹೆಚ್ಚಾದ ನಿನ್ನೊಲವ ನೆನೆನೆನೆದು,
ಅವ್ಯಾಜ ಪ್ರೇಮವನು ಸ್ಮರಿಸಿ,
ಉನ್ನತಿಯನೈದುತಿದೆ ವಿರಹಾಗ್ನಿಯದನೀಗ
ನ೦ದಿಸುವೆ ಕಂಬನಿಯ ಸುರಿಸಿ

೬
ನಾನಂದು ಶಾಲೆಯಿಂದೈತರುವ ಸಮಯದಲಿ
ಒ೦ದಿನಿತು ಹೊತ್ತಾಗುವಲ್ಲಿ,
ನೀನು ಮನೆಯಿಂದಿಳಿದು ಬಂದೆನ್ನ ದಾರಿಯನು
ಕಾಯುತ್ತ ನಿಂತಿದ್ದೆಯಲ್ಲಿ

೭
ಹೆಣ್ಣಮಕ್ಕಳು ನಿನಗೆ ಹುಟ್ಟಿದಿಹ ಮರುಕದಲಿ
ಚಿಕ್ಕಂದು ನಮ್ಮ ತಲೆ ನೆಯ್ದು,
ಗೋರಂಟಿ ಹೂದಂಡೆ ನೆತ್ತಿವರೆಗೂ ಸೂಡಿ,
ಸಂತೋಷವಾಂತಿದ್ದೆಯೊಲಿದು

೮
ಅದನೀಗ ಮನದಲ್ಲಿ ನೆನೆವಲ್ಲಿ, ಕೂರಲಗು
ನೆಟ್ಟಂತೆ ವೇದನೆಯ ಬಾಧೆ
ಒದವುತಿದೆ; ನಿನ್ನತುಲ ಮಮತೆಯರಿವಾಗುತಿದೆ
ನಲ್ಮೆಯಾ ನೆನಹದಾಗುತ್ತಿದೆ

೯
ಅಸ್ಥಿರದ ಜಡದೇಹ ಮರೆಯಾದರೇನಂತೆ?
ನಿನ್ನ ಪರಿಶುದ್ಧಾತ್ಮದೊಲವು
ಸುಸ್ಥಿರವದಾಗೆನ್ನ ಬೆಂಬಿಡದೆ ಸರಿಯಾಗಿ
ಪೊರೆಯುತಕಿರಲನವರತವು!
*****
೧೯೩೫

Tagged:

Leave a Reply

Your email address will not be published. Required fields are marked *

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...