“ಹಾ ಸೀತೇ! ಓ ಲಕ್ಷಣಾ!” ಎಂದು ಮಾರೀಚ ಪ್ರಾಣಬಿಟ್ಟ. ಅದನ್ನು ಕೇಳಿ ಸೀತೆಯ ಜೀವ ಥರ ಥರ ನಡುಗಿತು. ಲಕ್ಷಣನಿಗೆ “ಓಡು ರಾಕ್ಷಸನ ವಶವಾಗಿರುವ ನಿನ್ನ ಅಣ್ಣನನ್ನು ಉಳಿಸು” ಎಂದು ಒತ್ತಾಯಪಡಿಸಿದಳು. ಲಕ್ಷ್ಮಣ ಕದಲಲಿಲ್ಲ. ಮತ್ತೆ ಒತ್ತಾಯ ಮಾಡಿದಳು. “ಇದು ರಾಕ್ಷಸರ ಮೋಸ; ರಾಮಚಂದ್ರಣ್ಣ ಅಜೇಯ” ಎಂದು ಲಕ್ಷಣ ನುಡಿದುದಕ್ಕೆ ನೀನು ನನ್ನ ಮೇಲಿನ ಆಶೆಯಿಂದ ಹೋಗುವದಿಲ್ಲ ಅಲ್ಲವೇ?” ಎಂಬ ಕಣ್ಣೀರ ಕೊಂಕು ಮಾತು ಪತಿವ್ರತಾ ಶಿರೋಮಣಿ ಸೀತಾಮಾತೆಯಿಂದ ಬಂದಿತು.
ತಾಯಿಯಂತೆ ಸೇವಿಸುತ್ತ ಬಂದ ಅತ್ತಿಗೆಗೆ ತನ್ನಲ್ಲಿ ಇಂಥ ಸಂಶಯವೇ ಎಂದು ಲಕ್ಷಣ ನೊಂದುಕೊಂಡ. ಅವಳಿಗೆ ಏನೆಲ್ಲ ತಿಳಿಹೇಳಿದ. ಪಾತಿವ್ರತ್ಯದ ಝಳಕಿನಿಂದ ಮಂಕಾದ ಅವಳ ಬುದ್ದಿಗೆ ಅವನ ಮಾತೊಂದೂ ಸರಿಯೆನಿಸಲಿಲ್ಲ. ಅಂತೂ ಲಕ್ಷ್ಮಣ ಗೆರೆ ಎಳೆದು ಹೊರಟ. ಕದಡಿದ ಮನಸ್ಸಿನಿಂದ ಹೊರಟ ಅವನ ಬಾಯಿಂದ ಈ ಮಾತುಗಳು ಜಾರಿದವು “ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ, ಹೆಂಗಸರ ಮಾತು ಕೇಳುವ ಗಂಡಸರ ಬುದ್ಧಿ ಅಂಗಾಲ ಕೆಳಗೆ. ಹೆಣ್ಣನ್ನು ಪೂಜಿಸುವದು ಅವಳನ್ನು ಕಾಮಿಸುವಷ್ಟೇ ಕೆಡಕು. ಮಂಕು…. ಮಂಕು….ಮಂಕು…. ಏನೆಲ್ಲ ಆಗಲಿದೆಯೋ ಈ ಮಹಾಶಯಳ ಮೃಗಚರ್ಮದ ಮೋಹದ ದೆಸೆಯಿಂದ!”
*****

















