ಬಾಂಬು ಭಯೋತ್ಪಾದನೆಯ ಸದ್ದುಗಳು
ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ
ಮನೆಗೆ ಬಂದು ಬೀಳುತ್ತವೆ
ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು
ಮುಗಿಲುದ್ದ ಬಾಂಬುಗಳ ಹೊಗೆ
ನೆಲತುಂಬ ಸಾವು ನೋವುಗಳ ಆಕ್ರಂದನ
ಅಮಾಯಕರ ಗೋಳಾಟ
ತುಂಡು ತುಂಡಾದವರ ನರಕಯಾತನೆ
ತಲೆ ತುಂಬ ಭಾರ
ಮನಸ್ಸಿಗೆ ಕಿರಿ ಕಿರಿ ಅಶಾಂತಿ
ಬಾಂಬ್ ಭಯೋತ್ಪಾದನೆ ವಿರೋಧಿಗಾಗಲಿ
ಶಾಂತಿ ಪ್ರಿಯತೆಯ ಬಗೆಗಾಗಲಿ
ಒಂದಿಷ್ಟು ಬರೆದು ಭಯೋತ್ಪಾದಕರಿಗೆ ತಲುಪಿಸಬೇಕೆನ್ನುತ್ತೇನೆ
ಮನೆಯ ತಾರಸಿಯ ಮೇಲೆ ಹೋಗಿ
ಪಾರಿವಾಳಗಳನು ಹಾರಿಸಿಬಿಡುತ್ತೇನೆ
ಪಕ್ಕದ ಮನೆಯಲ್ಲೂ ಗುಟುರು ಹಾಕುತ್ತ
ಕುಳಿತ ಪಾರಿವಾಳಗಳಿಗೂ ಶಾಂತಿ ಸಂದೇಶ
ಕೊಟ್ಟು ಬಿಳಿಯ ದುಪಟ್ಟ
ಅವುಗಳೆಡೆಗೆ ಬೀಸಿ ಹಾರಿಸಿಬಿಟ್ಟು
ಹೃದಯ ಹಗುರವಾಗಿ ಬರೆಯಲು
ಇಳಿದು ಬರುತ್ತೇನೆ.
ದೂರದಲ್ಲೆಲ್ಲಿಂದಲೋ ’ಢಮಾರ್’ ಶಬ್ದ
ಬೆಚ್ಚಿಬಿದ್ದು ಕಿಟಕಿ ಬಾಗಿಲು ತೆರೆದರೆ
ಪಾರಿವಾಳಗಳು ಪಟಪಟನೆ ರೆಕ್ಕೆ ಬಡಿಯುತ
ಒಂದಿಷ್ಟು ಉರುಳಿಬೀಳುತ್ತಿವೆ
ಉಳಿದವು ರಕ್ತ ಚೆಲ್ಲುತ ನೆರಳಿ
ಮತ್ತೆ ತಾರಸಿಗೆ ಬರುತ್ತಿವೆ.
ಅರೆರೆ ! ನಮ್ಮ ನಡುವೆಯೂ, ಸುತ್ತಲೂ
ಭಯೋತ್ಪಾದಕರೆ, ಜೇಬಿನಲಿ
ನೀಲಿ ಪೆನ್ನಿನ ಬದಲು ಚಾಕು ಚೂರಿ ಪಿಸ್ತೂಲುಗಳೆ?
ಇನ್ನೇನು ಬರೆಯಲಿ, ಎದೆ ತುಂಬ ಕಣ್ಣೀರು
ಆದರೂ ಬರೆಯುತ್ತೇನೆ
ಶಾಂತಿಗಾಗಿ ಹಂಬಲಿಸುತ್ತೇನೆ.
*****
ಪುಸ್ತಕ: ಇರುವಿಕೆ