ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ
ಈ ತೋಟದಲ್ಲಿ
ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ,
ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ
ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ
ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮಾತನುಲಿಯಲಿಲ್ಲ
ಬಿಸಿಲಿಗೊದ್ದಿ ಮೈ ಚರ್ಮ ಮಿರಿಮಿರಿ ಮಿಂಚಲಿಲ್ಲ
ಮಿತ್ರನ ಕಣ್ಣ ಕಿರಣಗಳು ರೋಮಗಳೂಡನೆ ಬೆಸೆದು
ಬೆವರಿನರ್ಥವ ಕಂಡುಕೊಳ್ಳಲಿಲ್ಲ
ಹಕ್ಕಿಗಳೊಡನಾಡುವ ಇವಕ್ಕೆ ಪರದೇಶಿಗಳೊಡನೆ
ಸಂಭಾಷಿಸುವ ಗುದ್ದಾಟ
ಅಂಗಾಂಗಗಳ ಕತ್ತರಿಸಿಕೊಂಡ ಈ ಕೃತಕ ಚೆಲುವೆಯರಲಿ
ವಿಶ್ರಮಿಸಲು ಬರುವ ಪ್ರಣಯಿಗಳಿಗೆ ಪ್ರೇತಕಂಡ ಭಯ
ಇಲ್ಲಿಯ ಹೂಗಳಿಗೆಲ್ಲ ಮೇಲೊಂದು ಬಣ್ಣದ ಲೇಪ
ಇಲ್ಲಿಯ ಕಾಯಿಗಳಿಗೆ ಬೂದಿ ಬಿಳಿಚುಗಳ ಧೂಪ,
ಇಲ್ಲಿಯ ಹಣ್ಣುಗಳಿಗೆ ಬೇರೆ ವೇಷದ ಮೋಹ
ಮತ್ತು ಇವಕೆಲ್ಲ ಮೂಗಿನಿಂದ ಬ್ರಹ್ಮರಂದ್ರಕ್ಕೆ
ಸಲಾಕಿಯೇರಿಸುವ ಕಟು ವಾಸನೆ
*****