ಬೆಟ್ಟದ ಚಾಮರಾಜ ಒಡೆಯರಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಹಿರಿಯರಾದ ತಿಮ್ಮರಾಜ ಒಡೆಯರಿಗೆ ಹೆಮ್ಮನಹಳ್ಳಿಯು ಲಭಿಸಿತು. ಈ ತಿಮ್ಮರಾಜ ಒಡೆಯರು ಒಂಭತ್ತು ಮೈಲು ದೂರದಲ್ಲಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವರಲ್ಲಿ ಬಹಳ ಭಕ್ತಿಯನ್ನಿಟ್ಟಿದ್ದರು. ಆದರೆ ನಂಜನಗೂಡಿಗೆ ಹೋಗುವ ಮಾರ್ಗದಲ್ಲಿಯೇ ಸ್ವತಂತ್ರರಾದ ಇಬ್ಬರು ಪಾಳೆಯಗಾರರು ಆಳುತ್ತಿದ್ದರು. ಹೋದಾಗಲೆಲ್ಲ ಆ ಪಾಳಯಗಾರರ ಅನುಮತಿಯನ್ನು ಕೇಳಬೇಕಾಗಿತ್ತು.

ತಿಮ್ಮರಾಜರ ವೈಭವವನ್ನ ಆ ಪಾಳೆಯಗಾರರು ಸಹಿಸದೆ ಅಸೂಯೆ ಪಡುತ್ತಿದ್ದರು. ಒಂದು ಸಲ ತಿಮ್ಮರಾಜ ಒಡೆಯರು ಮುನ್ನೂರು ಭಟರನ್ನು ಮೈಗಾವಲಿಗೆ ಕರೆದುಕೊಂಡು ಅಟ್ಟಹಾಸದಿಂದ ನಂಜನಗೂಡಿಗೆ ಹೋಗಿ ಪೂಜೆ ಮಾಡಿಸಿ ಸಮಾರಾಧನೆ ಮಾಡಿಸಿದರು. ಆಗ ಅಸೂಯೆಯನ್ನು ತಾಳಲಾರದೆ ಆ ಪಾಳಯಗಾರು ಕಾಲುಕೆರೆದು ಜಗಳವಾಡಿದರು. ಯುದ್ಧವೇ ಆಯಿತು. ಹೊಡೆದಾಟದಲ್ಲಿ ಅನೇಕರು ಸತ್ತರು. ಆದರೆ ತಿಮ್ಮರಾಜ ಒಡೆಯರು ಜಯಶೀಲರಾದರು. ಕೂಡಲೆ ತನಗೆ ಶತ್ರುವಾಗಿದ್ದ ಉಮ್ಮತ್ತೂರಿನ ಒಡೆಯರಿಂದ ಕಪ್ಪಕಾಣಿಕೆಯನ್ನು ಸುಲಿದುಕೊಂಡು. ತಮ್ಮ ಪ್ರಾಬಲ್ಯವನ್ನು ರಕ್ಷಿಸಿಕೊಂಡರು.
*****
[ವಿಸ್ಕ್ಸ್; ಸಂಪುಟ ೧- ಪುಟ ೨೨]