ವಾಗ್ದೇವಿ ಭಾಂಡಾರ ಮುದ್ರೆಯೊಡೆದಿಹ ರನ್ನ
ನಾನಲ್ಲ. ಹೇಳಿದರೆ ನಾನೆ ಹೇಳುವದೆಂದು
ಯಾವ ಮಹರಾಯನೂ ಹೇಳಿಲ್ಲ. ನಾನಿಂದು
ತಿಳಿದಿಲ್ಲವಹುದೆಂದು ಸಕಲಗುಣಸಂಪನ್ನ.
ಇಲ್ಲಿರದು ಬಹುರೀತಿ, ದಂಗುವಡಿಸುವ ಶಬ್ದ
ಬಿರುದುಬಿದ್ದಣವಿರದೆ ಬರೆಯುವುದ್ಯಮಕಿಂತು
ಅಣಿಗೊಳುವದೇಕೆನಲು,- ಮೂಕಭಾವವನಾಂತು
ಮುನ್ನೋಡಿ ಬರೆಯುವೆನು: ಅದು ನನ್ನ ಪ್ರಾರಬ್ಧ.
ಒಂದು ದಿನ ತಾನಾಗಿ ತೆರೆಯುವದು ಭಾಂಡಾರ.
ಮುಂದೊಮ್ಮೆ ತಲೆದೂಗಬಹುದು ರಸಿಕರು ಬಂದು.
ನನ್ನ ಕಾವ್ಯದ ಭವ್ಯ ಭವನದಲಿ ಸರಸತಿಯು
ಬಂದು ವಾಸಿಸಬಹುದು, ಹೆಚ್ಚುತಿರೆ ಸಿಂಗಾರ.
ನೆರವಣಿಗೆ ಬೇಕೆನುವ ಬುದ್ಧಿಗಿಲ್ಲವೆ ಮಿತಿಯು?
ಬಾಳುವರೆ ಮೊದಲಗಿತ್ತಿಯ ದುರ್‍ನಯದಿ ಕೊಂದು?
*****