ಮೌನ ವಿಶ್ವವು ಗಾನ ತುಂಬಿತು
ಶೂನ್ಯ ಸಕ್ಕರೆಯಾಯಿತು
ಬಯಲು ಆಲಯವಾಗಿ ಅರಳಿತು
ಜೀವ ತೇರನು ಎಳೆಯಿತು.
ಬೆಳಕಿನದ್ಭುತ ನಾಟ್ಯ ನಡೆದಿದೆ
ನೋಡ ಬಾರೊ ಗೆಳೆಯನೆ
ಬಿಸಿಲ ಕೋಲ್ಗಳು ಬಣ್ಣ ಬೀಸಿವೆ
ಇತ್ತ ನೋಡೊ ಅರಮನೆ
ಅಲ್ಲಿ ಬಿಸಿಲು ಇಲ್ಲಿ ಗಾಳಿ
ಕಡಲು ಭೂಮಿಯ ತೋರಣಾ
ಸುತ್ತ ಮುತ್ತಾ ಬೆತ್ತ ಬಿದಿರು
ಒಡಲು ವಿಸ್ಮಯ ಚಾರಣಾ
ಯಾರು ಕೊಟ್ಟರು ಮಣ್ಣು ನೀರನು
ಇಗೋ ಬೆಂಕಿಯ ಬಟ್ಟಲಾ
ಯಾರು ಗಗನಕೆ ಗಾಳಿ ತಂದರು
ಪಂಚ ತತ್ತ್ವದ ತೊಟ್ಟಿಲಾ
ಇಲ್ಲಿ ಪೂರ್‍ಣತೆ ಹೂರ್‍ಣವಾಗಲಿ
ಕಂಪು ಕಸಕಸಿ ತುಂಬಲಿ
ಬಿಸಿಯ ಹೋಳಿಗೆ ತುಪ್ಪ ಸುರಿಯಲಿ
ಜೀವ ಶಿವಮಯವಾಗಲಿ
*****