ನಿರಂತರ ಸ್ತ್ರೀ ದೌರ್ಜನ್ಯವೂ-ಕಣ್ಣೊರೆಸುವ ದೈವತ್ವದ ಪರಿಕಲ್ಪನೆಯೂ

ನಿರಂತರ ಸ್ತ್ರೀ ದೌರ್ಜನ್ಯವೂ-ಕಣ್ಣೊರೆಸುವ ದೈವತ್ವದ ಪರಿಕಲ್ಪನೆಯೂ

ಮೊನ್ನೆ ಮೊನ್ನೆ ಸರ್‍ವಧರ್‍ಮ ಸಮನ್ವಯ ಸೌಹಾರ್‍ದ ಕಾರ್‍ಯಕ್ರಮವೊಂದರಲ್ಲಿ “ಯತ್ರ ನಾರ್‍ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂದು ಹೆಣ್ಣಿಗೆ ದೇವರ ಸ್ಥಾನವನ್ನು ಕೊಟ್ಟ ದೇಶ ನಮ್ಮದು ಎಂದು ಘಂಟಾಘೋಷವಾಗಿ ಭಾಷಣ ಬಿಗಿದ ಯುವ ನೇತಾರರ ಮಾತು ಕೇಳುವ ಅವಕಾಶ ಸಿಕ್ಕಿತು. ದೇಶದ ಬಗ್ಗೆ, ನಮ್ಮ ಸಂಸ್ಕೃತಿ ಅದರ ಆದರ್‍ಶಗಳ ಬಗ್ಗೆ ಹೆಮ್ಮೆ ಪಡುವಂತಾಯಿತು. ಮೈರೋಮಗಳು ನಿಮಿರಿ ನಿಂತವು. ಭಾಷಣಕಾರರುಗಳ ಆವೇಶದ ಮಾತುಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಾಡಿನ ಹೆಗ್ಗಳಿಕೆಗಳನ್ನೆಲ್ಲಾ ಎಲ್ಲ ಭಾಷಣಕಾರರು ಬಹು ಚೆನ್ನಾಗಿ ವಿವರಿಸಿದರು. ಸ್ತ್ರೀ ಸಮಾನತೆಗೆ ಹೊಡೆದಾಡುವ ಮಾತಾಡುವ ಇಂದಿನ ಹೆಂಗಸರು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಹೆಣ್ಣನ್ನು ದೈವತ್ವದಲ್ಲಿ ನೋಡುವ ಒಂದೇ ದೇಶ ಭಾರತ ಎಂದೆಲ್ಲ ಕೊಂಡಾಡಿದರು. ಬರಿಯ ಶಾಸ್ತ್ರಗಳ ಬದನೆಕಾಯಿಗಳ ಬಾಯಲ್ಲಿ ಈ ಮಾತು ಬರಬಹುದಲ್ಲದೇ ಬೇರಾರಿಂದ ಸಾಧ್ಯ? ಎಂದು ಒಂದು ಕ್ಷಣ ಮನಸ್ಸು ಯೋಚಿಸಿತ್ತು. ನಿತ್ಯ ಜಗತ್ತಿನ ದೌರ್‍ಜನ್ಯ ನೋಡುವ ಕಣ್ಣುಗಳು ಕುರುಡೇ? ಇಲ್ಲ ಕೇಳುವ ಕಿವಿಗಳು ಕಿವುಡೇ? ಎಂಬ ಗೊಂದಲ ಮನದಲ್ಲಿ ಮೂಡಿತು. ಅದೆಷ್ಟು ಕುಸುಮ ಕೋಮಲೆಯರು ಕಾಮುಕರ ಕಣ್ಣಿಗೆ ಬಲಿಯಾಗುತ್ತಿದ್ದಾರೆ. ಪರಿಸ್ಥಿತಿಯ ಒತ್ತಡಕ್ಕೆ ಅದೆಷ್ಟು ಹೂಗಳು ಕಮರಿ ಹೋಗುತ್ತಿವೆ. ನಿಜವಾಗಿ ಸಮಾಜ ಉನ್ನತಿಗೇ ಆಗಬೇಕಾದದ್ದೇನು?

ಈ ಕೆಳಗಿನ ಘಟನೆಗಳನ್ನು ಓದಿದ ಮೇಲೆ ನಿಮಗೆ ಭಾರತದಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೆ ಎಂಬ ವೇದ ಕಾಲದ ಉದ್ಘಾರಗಳು ಹಾಸ್ಯಾಸ್ಪದವೆನ್ನಿಸಬಹುದು.

ಘಟನೆ ಒಂದು: ಆಕೆ ಮಾನಸಿಕ ಅಸ್ವಸ್ಥೆ. ಅಲ್ಲಲ್ಲಿ ಹರಿದ ಬಟ್ಟೆ ಧರಿಸಿ ತಲೆ ಕೆರೆದುಕೊಳ್ಳುತ್ತಾ ತನ್ನಷ್ಟಕ್ಕೆ ಮಾತನಾಡುತ್ತಿದ್ದಳು. ಎಳೆಯ ಪ್ರಾಯದ ಹೆಣ್ಣು ಹಲವು ದಿನಗಳಿಂದ ಆ ಬಸ್ ನಿಲ್ದಾಣದಲ್ಲಿ ಕಾಣ ಸಿಗುತ್ತಿದ್ದಳು. ಕೆಲವೇ ದಿನಗಳಲ್ಲಿ ಆಕೆಯ ಹೊಟ್ಟೆ ತುಸುವೇ ದೊಡ್ಡದಾಗತೊಡಗಿತು. ಆಕೆ ಗರ್‍ಭಿಣಿಯಾಗಿದ್ದಳು. ಆ ಗರ್‍ಭಕ್ಕೆ ಕಾರಣನಾರು ಎಂಬುದು ಆಕೆಗೇ ಗೊತ್ತಿರಲಿಲ್ಲ. ಹುಚ್ಚಿಯನ್ನೂ ಬಿಡದೇ ಭೋಗಿಸುವ ಈ ಜಗತ್ತಿನಲ್ಲಿ ನಾರೀ ಪೂಜಿಸಲ್ಪಡುತ್ತಾಳೆಯೇ?

ಘಟನೆ ಎರಡು: ವಾರದ ಹಿಂದೆ ವಿಜಯಪುರದಲ್ಲಿ ದಾನವ್ವನ ಪ್ರಕರಣವಾದ ನಂತರದ ಘಟನೆಯಿದು. ಆಕೆ ಹದಿಹರೆಯದ ಬಾಲೆ. ತನ್ನ ಸಂಬಂಧಿ ಹುಡುಗನೊಟ್ಟಿಗೆ ಮದುವೆಯಾಗುವಂತೆ ವ್ಯಕ್ತಿಯೊಬ್ಬ ಆ ಬಾಲೆಗೆ ಹೇಳಿದ. ಆಕೆ ಒಲ್ಲೆನೆಂದಳು. ಕೋಪಗೊಂಡ ಆತ ಇನ್ನಿತರ ಇಬ್ಬರ ಜೊತೆ ಸೇರಿ ಆಕೆಯನ್ನು ಅತ್ಯಾಚಾರಮಾಡಿದ. ಎಳೆಯ ಹೂವೊಂದು ಬಾಡಿ ಹೋಯಿತು. ತನ್ನದಲ್ಲದ ಅದ್ಯಾವ ತಪ್ಪಿಗೆ ಈ ಶಿಕ್ಷೆಗಳು ನಡೆಯುತ್ತಿವೆ. ಯಾವ ಪೂಜೆ ಹೆಣ್ಣಿಗೆ ಸಲ್ಲುತ್ತಿದೆ ಎಂಬುದನ್ನು ನಾಗರಿಕ ಸಮಾಜ ಅದರ ಬುದ್ಧಿ ತರ್ಕಿಸಲಾಗದಷ್ಟು ಕೊಳೆತಿವೆಯೇ? ಅಥವಾ ತುಕ್ಕು ಹಿಡಿದಿದೆಯೇ?

ಘಟನೆ ಮೂರು: ಇದು ಕಳೆದ ವರ್ಷದ ಘಟನೆ. ಸಮೀಪದ ಜೋಯಿಡಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯ ಮೇಲೆ ನಡೆದ ಲೈಂಗಿಕ ಹಲ್ಲೆ. ಆಕೆ ಹಳ್ಳಿಯೂರಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಬೆಳಗಾವಿಯಂತಹ ಪಟ್ಟಣದ ಊರಿನಿಂದ ಜೊಯಿಡಾದ ಹಳ್ಳಿಯಲ್ಲಿ ಸೇವೆಸಲ್ಲಿಸುತ್ತಿದ್ದ ಆಕೆಗೆ ಅದು ನಿತ್ಯ ಅಭ್ಯಾಸವಾಗಿತ್ತು. ಸಂಜೆಯಾಗುತ್ತಿದ್ದರಿಂದ ಬೇಗ ಮನೆಮುಟ್ಟುವ ತವಕ. ಆ ದಿನ ಕಾರಿನಲ್ಲಿ ಬಂದ ಎಳೆಯ ಪ್ರಾಯದ ವ್ಯಕ್ತಿಯೊಬ್ಬನ ಮಾತು ನಂಬಿ ಆತನ ಕಾರು ಹತ್ತಿದವಳ ಮೇಲೆ ಲೈಂಗಿಕ ಧಾಳಿಮಾಡಿ ಆಕೆಯ ಆಭರಣ ದೋಚಿಕೊಂಡು ಅರೆ ಪ್ರಜ್ಞೆಗೆ ಮುಟ್ಟಿಸಿ ಹೋಗಿದ್ದ ಪ್ರಳಯಾಂತಕನೊಬ್ಬ. ಪಾಠ ಹೇಳುವ ಅದರಲ್ಲೂ ತನಗಿಂತ ಹಿರಿಯ ವಯಸ್ಸಿನ ಶಿಕ್ಷಕಿಯನ್ನು ಬಿಡದೇ ಹಿಂಸಿಸುವ ಪುರುಷ ಪ್ರವೃತ್ತಿಗೆ ಏನೇನ್ನೋಣ? ಭಾರತದಲ್ಲಿ ಎಲ್ಲ ಪುರುಷರೂ ಸಾಧುಗಳು. ಅವರಿಂದ ನಾರಿ ಪೂಜಿಸಲ್ಪಡುತ್ತಾಳೆ ಎಂದರೆ ಅದು ಅಸಂಬದ್ಧ ವ್ಯಾಖ್ಯೆ ಎಂದೇ ಅನ್ನಿಸುವುದು. ಆಧುನಿಕತೆಯ ಪಾಶ್ಚಾತ್ಯ ಜೀವನ ಶೈಲಿಯಿಂದ ಪ್ರಭಾವಿತಗೊಂಡ ಈ ದಿನಗಳಲ್ಲಿ ಹೆಣ್ಣು ಎಂದಾಕ್ಷಣ ವಯಸ್ಸಿನ ಮಿತಿಗಳು ಅಕ್ಕ ತಂಗಿಯೆಂಬ ಗೌರವದ ಭಾವಗಳು ಯುವ ಜನಾಂಗದಲ್ಲಿ ಮೂಡುವುದು ತೀರಾ ವಿರಳ.

ಸ್ತ್ರೀಯರನ್ನು ಇಂದಿನ ಸಮಾಜ ನೋಡುವ ದೃಷ್ಟಿಕೋನ ತೀರಾ ಭಿನ್ನವಾಗಿದೆ. ವೇದಗಳ ಕಾಲದ ದೃಷ್ಟಿಕೋನ ಇಂದಿಗೂ ಇದೆ ಎಂಬುದು ಭ್ರಮೆಯಷ್ಟೇ. ಬದಲಾದ ಜೀವನ ವಿಧಾನಗಳು, ಸ್ತ್ರೀ ಪುರುಷನಂತೆ ಹೊರಜಗತ್ತಿನಲ್ಲಿ ವ್ಯವಹರಿಸುವ ಇಂದಿನ ದಿನಗಳಲ್ಲಿ ಈ ಪಿತೃಪ್ರಧಾನ ವ್ಯವಸ್ಥೆಯ ಪಿತೂರಿಗಳು ಹೆಣ್ಣಿಗೆ ಅರ್‍ಥವಾಗದ ಸಂಗತಿಗಳಲ್ಲ. ದೈಹಿಕ ಅಬಲತೆಯನ್ನು ಅಸ್ತ್ರವಾಗಿಟ್ಟುಕೊಂಡು ದುಷ್ಟ ಪುರುಷ ನಡೆಸಬಲ್ಲ ದೌರ್‍ಜನ್ಯವನ್ನು ಮೆಟ್ಟಿನಿಲ್ಲಬೇಕಾದ ಕಾಲವಿದು. ಆ ಮಾನಸಿಕ ಸ್ಥೈರ್‍ಯ ಧೈರ್‍ಯಗಳ ಒಡಮೂಡಿಸಬೇಕಾದ ಪ್ರಮೇಯ ಬಂದಿದೆ. ಪುರುಷನೆಂದಾಕ್ಷಣ ಆತನ ಎಲ್ಲ ಆದೇಶಗಳನ್ನು ದೌರ್‍ಜನ್ಯಗಳನ್ನು ಹೆಣ್ಣಾದ ಕಾರಣ ಸಹಿಸಿಕೊಳ್ಳತಕ್ಕದ್ದು ಎಂಬ ಅಘೋಷಿತ ನಿಯಮಗಳ ವಿರುದ್ಧವಷ್ಟೇ ಸ್ತ್ರೀ ಸಜ್ಜಾಗಬೇಕಾಗಿದೆ. ಆಕೆಯನ್ನು ದೈವತ್ವಕ್ಕೆ ಏರಿಸುವ ಶ್ರೇಷ್ಟತೆಗಿಂತ ಆಕೆ ಬಯಸುವುದು ಪುರುಷನಿಗೆ ಸರಿಸಮಾನವಾದ ವ್ಯಕ್ತಿತ್ವ. ಅದಾಕೆಯ ಹಕ್ಕು.

ಅಮೇರಿಕಾದಂತಹ ದೇಶಗಳಲ್ಲೂ ಈ ದೌರ್‍ಜನ್ಯ ಇದೆಯಾದರೂ ಅದು ವ್ಯಾಪಕವಾಗಿಲ್ಲ. ಅಲ್ಲಿಯ ಕಾನೂನು ಹಾಗೂ ಸಾಂಘಿಕ ಹೋರಾಟದ ಮಟ್ಟಗಳು ನಮಗಿಂತ ತೀರಾ ಶ್ರೇಷ್ಠ ಮಟ್ಟದ್ದಾಗಿರುತ್ತವೆ. ಆದರೆ ಸಂಸದೀಯ ಆಡಳಿತ ಕ್ರಮದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಕಟ್ಟುನಿಟ್ಟಾದ ಕ್ರಮಗಳು ತಪ್ಪಿತಸ್ಥನನ್ನು ಶಿಕ್ಷಿಸದೇ ಇರುವುದರಿಂದ ಈ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಅದೂ ಕೂಡಾ ಸನಾತನೀಯತೆಯನ್ನು ಎತ್ತಿಹಿಡಿಯುವತ್ತ ಸರಕಾರದ ಕ್ರಮಗಳು ಹೆಚ್ಚುತ್ತಿರುವಂತೆ ಮಹಿಳೆಯರ ಹಾಗೂ ಕೆಳವರ್‍ಗದ ಜನರ ಮೇಲಿನ ದಬ್ಬಾಳಿಕೆಗಳು ಹೆಚ್ಚುತ್ತಿವೆ. ೨೦೧೭ರಲ್ಲಿ ಆರ್ಥಿಕ ಇಲಾಖೆ ಸ್ತ್ರೀ ಲೈಂಗಿಕ ದೌರ್‍ಜನ್ಯದ ಕುರಿತು ಪ್ರಸ್ತಾಪಿಸುತ್ತಾ ಭಾರತದಲ್ಲಿ ಹೆಣ್ಣು ಮಕ್ಕಳ ಹಾಗೂ ಸ್ತ್ರೀಯರ ಅಪಹರಣ, ಹಾಗೂ ಅತ್ಯಾಚಾರಗಳು ಮಿತಿ ಮೀರಿ ಹೆಚ್ಚುತ್ತಲಿದೆ ಎಂದು ಸ್ಪಷ್ಟಪಡಿಸಿದೆ. ಇನ್ನು ಅಸಹ್ಯದ ಸಂಗತಿ ಎಂದರೆ ಶೇಕಡಾ ೯೦ರಷ್ಟು ಇಂತಹ ಲೈಂಗಿಕ ದೌರ್‍ಜನ್ಯಗಳು ಸಂತ್ರಸ್ತೆಯ ಕುಟುಂಬವರ್‍ಗ ಇಲ್ಲವೇ ಪರಿಚಯಸ್ಥರಿಂದಲೇ ಆಗುತ್ತಿರುತ್ತವೆ ಎಂಬುದು.

ಹಾಗೆಂದು ಅನಾದಿಕಾಲದಿಂದಲೂ ಸ್ತ್ರೀಗೆ ಗೌರವ ಕೊಟ್ಟ ದೇಶ ಭಾರತ ಎಂಬುದನ್ನು ಮರೆಯುವುದಿಲ್ಲ. ಎಲ್ಲರೂ ಸ್ತ್ರೀಯರನ್ನು ಅಗೌರವದಿಂದಲೇ ಕಾಣುತ್ತಾರೆ ಎಂಬ ವಾದದಲ್ಲೂ ಹುರುಳಿಲ್ಲ. ಎಲ್ಲ ಗಂಡಸರು ಕೆಟ್ಟವರೆಂಬ ತೀರ್‍ಮಾನವೂ ಅಲ್ಲ. ಮನುವಾದ ಪ್ರತಿಪಾದಿಸಿದ ಸಂಗತಿಗಳೆಲ್ಲ ಸ್ತ್ರೀ ವಿರೋಧಿ ಸಂಗತಿಯೇ ಎಂಬುದೂ ಅಲ್ಲ. ಅಲ್ಲೂ ಸ್ತ್ರೀ ಪುರುಷ ಧರ್ಮಗಳ ಉಲ್ಲೇಖವಿದೆ. ಹೆಣ್ಣು ತನ್ನ ಇಂದ್ರಿಯಗಳ ನಿಗ್ರಹ ಮಾಡಿಕೊಂಡಂತೆ ಗಂಡಿಗೂ ಅದರ ಅಗತ್ಯವನ್ನು ಮನುಸ್ಮೃತಿ ಹೇಳುತ್ತದೆ. ರಾಮ ಧರ್ಮರಾಯರಂತಹ ಶ್ರೇಷ್ಠ ಪುರುಷ ವ್ಯಕ್ತಿತ್ವವನ್ನು ಸೃಷ್ಟಿಸಿದಂತೆ, ಸೀತಾ ಸಾವಿತ್ರಿಯಂತಹ ಸ್ತ್ರೀ ರತ್ನಗಳನ್ನು ನಮ್ಮ ಅಭಿಜಾತ ಸಾಹಿತ್ಯಗಳಲ್ಲಿ ಕಂಡುಬರುತ್ತವೆ. ಇದರರ್ಥ ಗಂಡು ಮತ್ತು ಹೆಣ್ಣಿಗೆ ಅವರದೇ ಅದ ನೆಲೆಯಲ್ಲಿ ಸಮಾನ ಯೋಗ್ಯತೆಗಳಿವೆ. ಎಲ್ಲ ಹೆಣ್ಣು ದೌರ್ಜನ್ಯದಿಂದ ಬಳಲುವುದಿಲ್ಲ. ಹಾಗೆ ಎಲ್ಲ ಗಂಡೂ ದೌರ್ಜನ್ಯವೆಸಗುವುದಿಲ್ಲ ಎಂಬ ಸಾಮಾನ್ಯ ಗೃಹಿಕೆಯೊಂದಿಗೆ ಸಾಮಾಜಿಕ ನೆಲೆಯಲ್ಲಿ ಬದುಕನ್ನು ಸಹ್ಯವಾಗಿಸಿಕೊಳ್ಳಬೇಕಾದಲ್ಲಿ ಹೆಣ್ಣು ಸ್ತ್ರೀತ್ವದ ಗೌರವವನ್ನು ಕಳೆದುಕೊಳ್ಳದಂತೆ ವ್ಯವಹರಿಸತಕ್ಕದ್ದು. ಹಾಗೂ ಮೇಲಿನ ಉಲ್ಲೇಖಗಳನ್ನೂ ಮೂಢವಾಗಿ ನಂಬದೇ ನೈಜ ಬದುಕಿನ ರೀತಿನೀತಿಗಳ ಅರಿತುಕೊಳ್ಳಬೇಕಾದ ಅಗತ್ಯತೆ ಇದೆ. ಸ್ತ್ರೀಗೆ ಅವಳದೇ ಆದ ವ್ಯಕ್ತಿತ್ವವಿದೆ. ಪುರುಷನೇ ಸ್ತ್ರೀ ವ್ಯಕ್ತಿತ್ವದ recognizing agent ಎಂಬ ಆ ಹಿಂದಿನ ಗೊಡ್ಡು ವಿಚಾರವನ್ನು ನಿರಾಕರಿಸುವ ಸಾಮರ್‍ಥ್ಯವನ್ನು, ತನ್ನತನವನ್ನು ಸ್ಪುಟಗೊಳಿಸಿಕೊಳ್ಳಬಲ್ಲ ಕಾಲವಿದು. ಇದಕ್ಕೂ ಇಂದು ಭಾರತದಲ್ಲಿ ಹೇರಳ ಅವಕಾಶವಿದೆ. ಲೈಂಗಿಕ ದೌರ್‍ಜನ್ಯ ಎಸಗುವವರು ಮಾನಸಿಕ ವಿಕೃತರೇ ಹೊರತು ಸಹಜ ಪುರುಷರಲ್ಲ. ಭಾರತದಲ್ಲಿ ನಾರಿ ಗೌರವಿಸಲ್ಪಡುತ್ತಾಳೆ ಎಂಬುದು ನಮ್ಮ ದೇಶದ ಉದಾತ್ತ ಕಲ್ಪನೆ. ಅದಕ್ಕೊಂದು ಕೌಟಂಬಿಕ ಹಿನ್ನೆಲೆಯಿದೆ. ಆದರೆ ಆಧುನಿಕ ಜಗತ್ತಿನ ಭಾರತದಲ್ಲಿ ಪುರುಷನಂತೆ ಹೊರ ಜಗತ್ತಿನಲ್ಲಿ ವ್ಯವಹರಿಸುವ ಹೆಣ್ಣು ತನ್ನ ಸ್ವರಕ್ಷಣೆಯ ತಂತ್ರಗಳ ತಿಳಿದುಕೊಳ್ಳಬೇಕಾಗಿದೆ. ಹಾಗೆ ಪುರುಷರ ಮಾನಸಿಕ ವ್ಯಾಪಾರಗಳಿಗೂ ಚಿಕಿತ್ಸೆಯ ಅಗತ್ಯವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪದೇಶ
Next post ಮೌನ ವಿಶ್ವವು ಗಾನ ತುಂಬಿತು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…