ಗಂಡಾಂತರಕೆ ಮೈ-
ಯೊಡ್ಡುವವ ನಾಯಕ
ತಾನೇ ಕಾಯಕ
ಮಾಡುವವ ನಾಯಕ

ಎಲ್ಲರಿಗುಣಿಸಿ ತಾ-
ನುಣುವವ ನಾಯಕ
ಜನ ಹಸಿದು ಸಾವಾಗ ತಾ-
ನುಣ್ಣದವ ನಾಯಕ

ಎಲ್ಲರು ಮಲಗಿರಲು ತಾನೆಚ್ಚರ
ಇರುವವ ನಾಯಕ
ಹೊಗಳಲಿ ತೆಗಳಲಿ ಹಚ್ಚಿ-
ಕೊಳ್ಳದವ ನಾಯಕ

ಹೆಣ್ಣು ಹೊನ್ನು ಮಣ್ಣೆಂದು ಮರು-
ಲಾಗದವ ನಾಯಕ
ಇತರ ಮಕ್ಕಳ ತಳ್ಳಿ ತನ್ಮಕ್ಳ ಮುಂದಕ್ಕೆ
ತರದವ ನಾಯಕ

ಹೆತ್ತವರ ಹಿರಿಯರ ಗುರುಗಳ ಮರೆಯ-
ದಿರುವವ ನಾಯಕ
ತನ್ನ ಪ್ರತಿಮೆಯನೆಲ್ಲು
ನಿಲ್ಲಿಸದವ ನಾಯಕ

ಕಂಡಲ್ಲಿ ತನ್ಹೆಸರ
ಅಳಿಸುವವ ನಾಯಕ
ಇತರರ ಹೆಸರುಗಳ
ಮರೆಸುವವ ನಾಯಕ

ಚಾಡಿ ಮಾತುಗಳ
ಕೇಳದವ ನಾಯಕ
ತಪ್ಪುಗಳೆಲ್ಲವ
ಕ್ಷಮಿಸುವವ ನಾಯಕ

ತಿದ್ದುವವ ನಾಯಕ
ತೀಡುವವ ನಾಯಕ
ಯಾರದೇ ಜೀವ
ತೆಗೆಯದವ ನಾಯಕ

ನ್ಯಾಯಕೆ ತನ್ನದೆ ಜೀವ
ಕೊಡುವವ ನಾಯಕ
ಜನರೇ ದೇವ-
ರೆನ್ನುವವ ನಾಯಕ

ತನಗಾಗಿ ಏನೊಂದೂ
ಬಯಸದ ನಾಯಕ
ಅವನೇ ದೇವಾನಾಂ
ಪ್ರಿಯದರ್‍ಶಿ ನಾಯಕ
*****