ಪ್ರೀತಿಯ ಕಿಟಿ,
ಮಮ್ಮ ತುಂಬಾ ಕಿರಿಕಿರಿಗೊಂಡ ಹಾಗಿದ್ದಾರೆ. ಅದು ನನ್ನ ಮೇಲಿನ ಅಸಮಾಧಾನದಿಂದ ಎಂದು ಕಾಣುತ್ತದೆ. ಡ್ಯಾಡಿ ಮತ್ತು ಮಮ್ಮಿ ಎಂದಿಗೂ ಮಾರ್‍ಗೊಟ್‌ಳ ಮೇಲೆ ಸಿಟ್ಟಾಗದೇ ಇರುವುದು, ಎಲ್ಲದಕ್ಕೂ ನನ್ನ ಮೇಲೆ ಗೂಬೆ ಕೂರಿಸುವುದು ಅವರಿಗೊಂದು ಚಾನ್ಸ್ ಎಂದು ಕಾಣುತ್ತದೆ. ನಿನ್ನೆ ಹಾಗೇ ಆಯಿತು. ಮಾರ್‍ಗೊಟ್ ನಿನ್ನೆ ಒಂದು ಪುಸ್ತಕ ಓದುತ್ತಿದ್ದಳು. ಅದರ ಮೇಲೆಲ್ಲಾ ಚೆಂದದ ಚಿತ್ರಗಳ ಬಿಡಿಸಿದ್ದರು. ಸಡನ್ನಾಗಿ ಆಕೆ ಪುಸ್ತಕವನ್ನು ಅಲ್ಲೆ ಕೆಳಗಿಟ್ಟು, ಮತ್ತೆ ಬಂದು ಓದಿದರಾಯ್ತೆಂದು ಮೇಲ್ಮಹಡಿಗೆ ಹೊರಟುಹೋದಳು. ಆ ಹೊತ್ತಿಗೆ ನಾನು ಸುಮ್ಮನೇ ಕುಳಿತಿದ್ದೆ. ಹಾಗೆ ಆ ಪುಸ್ತಕವನ್ನು ಎತ್ತಿಕೊಂಡು ಆ ಚಿತ್ರಗಳನ್ನು ನೋಡತೊಡಗಿದೆ. ತಿರುಗಿ ಬಂದ ಮಾರ್‍ಗೊಟ್ ಪುಸ್ತಕ ನನ್ನ ಕೈಲಿರುವುದನ್ನು ನೋಡಿ ಹುಬ್ಬುಗಂಟಿಕ್ಕಿಕೊಂಡೇ ಪುಸ್ತಕ ವಾಪಸ್ಸು ಕೇಳಿದಳು. ನಾನು ಇನ್ನೂ ಅದನ್ನು ನೋಡುತ್ತಲೇ ಇದ್ದೆ. ಆಕೆಯ ಕೋಪ ಹೆಚ್ಚುತ್ತಲೇ ಹೋಯಿತು. ಅಲ್ಲಿಗೆ ಮಮ್ಮಿಯೂ ಬಂದು ಸೇರಿಕೊಂಡರು. ಮಾರ್‍ಗೊಟ್‌ಳ ಪುಸ್ತಕ ಕೊಟ್ಟುಬಿಡು, ಆಕೆ ಅದನ್ನು ಓದುತ್ತಿದ್ದಳು ಮಮ್ಮಿ ಹೇಳಿದರು. ಅದೇ ಹೊತ್ತಿಗೆ ಡ್ಯಾಡಿಯೂ ಕೋಣೆಯೊಳಗೆ ಬಂದರು. ಅವರಿಗೆ ಅಲ್ಲೇನಾಗುತ್ತಿದೆ ಎಂಬ ಕಿಂಚಿತ್ತೂ ಸಂಗತಿ ಗೊತ್ತಿರಲಿಲ್ಲ. ಆದರೆ ಮಾರ್‍ಗೊಟ್‌ಳ ಬಾಡಿದ ಮುಖನೋಡಿ, ಸರಿಯಾಗಿ ನನ್ನ ಮೇಲೆ ಹರಿಹಾಯ್ದರು. ಒಂದೊಮ್ಮೆ ಮಾರ್‍ಗೊಟ್ ನಿನ್ನ ಪುಸ್ತಕಗಳನ್ನೇನಾದರೂ ತೆಗೆದುಕೊಂಡರೆ ನೀನು ಹೇಗೆ ವರ್ತಿಸಬಹುದು ಎಂಬುದನ್ನು ನನಗೆ ನೋಡಬೇಕೆನ್ನಿಸುತ್ತದೆ. ಆಗ ನಾನು ಒಮ್ಮೇಲೆ ಇಳಿದುಹೋದೆ. ಪುಸ್ತಕವನ್ನು ಕೆಳಗಿಟ್ಟು ಅಲ್ಲಿಂದ ಎದ್ದು ಹೋದೆ. ಅವರೆಲ್ಲ ನಾನು ಉದ್ದಟತನದಿಂದ ಎದ್ದು ಹೋಗಿರುವೆನೆಂದು ತಿಳಿದರು. ಆದರೆ ನಾನು ಧಿಕ್ಕರಿಸಿರಲಿಲ್ಲ. ಅಥವಾ ಅವರಿಗೆ ವಿರುದ್ಧವಾಗಿ ವರ್ತಿಸಿಯೂ ಇರಲಿಲ್ಲ. ಆದರೆ ನನಗೆ ಬಹಳ ಕೆಟ್ಟದೆನಿಸಿತ್ತು. ಅಲ್ಲಿ ನಿಜಕ್ಕೂ ಏನು ಗದ್ದಲವಾಗಿದೆ ಎಂದು ತಿಳಿಯದೆ ಡ್ಯಾಡಿ ಹಾಗೆ ವರ್ತಿಸಿದ್ದು ತಪ್ಪು. ಮಮ್ಮಿ ಮತ್ತು ಡ್ಯಾಡಿ ಮಧ್ಯೆ ಪ್ರವೇಶಿಸದೇ ಇದ್ದಿದ್ದರೆ ನಾನು ಆ ಮೊದಲೇ ಪುಸ್ತಕವನ್ನು ಮಾರ್‍ಗೊಟ್‌ಳಿಗೆ ಕೊಟ್ಟಿರುತ್ತಿದ್ದೆ. ಆಕೆಗೆ ಅದೇನೋ ಅನ್ಯಾಯವಾಗಿದೆ ಎಂಬಂತೆ ಅವರಿಬ್ಬರೂ ಮಾರ್‍ಗೊಟ್‌ಳ ಪಕ್ಷ ವಹಿಸಿದರು.
ಮಮ್ಮಿ ಯಾವಾಗಲೂ ಮಾರ್‍ಗೊಟ್‌ಳ ಎತ್ತಿ ಹಿಡಿಯುವುದು ಸ್ಪಷ್ಟವಿತ್ತು. ಅವರಿಬ್ಬರೂ ಸದಾ ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುತ್ತಾರೆ. ಮಮ್ಮಿಯ ಬೈಗುಳ, ಮಾರ್‍ಗೊಟ್‌ಳ ಮನಸ್ಥಿತಿಯನ್ನು ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.
ಆದರೂ ನಾನವರನ್ನು ಪ್ರೀತಿಸುತ್ತೇನೆ. ಅವರು ನನ್ನ ಮಮ್ಮಿ ಮತ್ತು ಮಾರ್‍ಗೊಟ್ ಆದ ಕಾರಣ. ಆದರೆ ಡ್ಯಾಡಿಯ ವಿಚಾರದಲ್ಲಿ ಇದು ಬೇರೆಯೇ. ಒಂದೊಮ್ಮೆ ಡ್ಯಾಡಿ ಮಾರ್‍ಗೊಟ್‌ಳ ಪರ ವಹಿಸಿದರೆ, ಆಕೆಯ ಕೆಲಸಗಳನ್ನು ಹೊಗಳಿದರೆ, ಆಕೆಯ ಬಗ್ಗೆ ಅತಿಯಾಗಿ ಕಾಳಜಿ ತೋರಿದರೆ ನನಗೆ ಒಳಗೊಳಗೆ ಚುಚ್ಚಿದಂತಾಗುತ್ತದೆ. ಯಾಕೆಂದರೆ ನನಗೆ ಡ್ಯಾಡಿ ಎಂದರೆ ಬಹು ಮೆಚ್ಚು. ಅವರೊಬ್ಬರನ್ನೆ ನಾನು ಗೌರವಿಸುವುದು, ಅವರಷ್ಟು ನಾನ್ಯಾರನ್ನೂ ಪ್ರೀತಿಸುವುದಿಲ್ಲ. ಡ್ಯಾಡಿ ನನ್ನನ್ನು ಮಾರ್‍ಗೊಟ್‌ಗಿಂತ ಭಿನ್ನವಾಗಿ ನಡೆಸಿಕೊಳ್ಳುತ್ತಿರುವ ವಿಚಾರವನ್ನು ಅವರು ಗ್ರಹಿಸಲಿಲ್ಲ. ಈಗ ಮಾರ್‍ಗೊಟ್ ಜಗತ್ತಿನಲ್ಲಿಯೇ ಅತ್ಯಂತ ಚೆಂದದ, ಮುದ್ದಾದ, ಅತಿ ಸುಂದರಿಯಾದ ಹುಡುಗಿ. ಆದರೆ ಅದರಂತೆ ಸಿರಿಯಸ್ಸಾಗಿ ತೆಗೆದುಕೊಳ್ಳಬೇಕಾದಂತಹ ಕೆಲವು ಹಕ್ಕು ನನಗೂ ಇವೆ. ಆದರೆ ನಾನು ಅತಿ ದಡ್ಡ, ಇಡೀ ಕುಟುಂಬದಲ್ಲಿಯೇ ಏನನ್ನೂ ನೆಟ್ಟಗೆ ಮಾಡಲಾಗದವಳು. ಯಾವಾಗಲೂ ನನ್ನ ಕೆಲಸಗಳಿಗೆಲ್ಲಾ ಡಬಲ್ ಸಂಬಳಗಳು, ಮೊದಲಿಗೆ ಬೈಗುಳ, ನಂತರ ಆ ಕಾರಣಗಳಿಂದಾಗಿ ನನ್ನ ಭಾವನೆಗಳಿಗೆ ಉಂಟಾಗುವ ಧಕ್ಕೆ. ಒಬ್ಬರನ್ನೇ ಓಲೈಸುವಿಕೆಯ ರೀತಿಗೆ ನನಗೆ ಈಗ ಸಮಾಧಾನವಿಲ್ಲ. ನಾನು ಡ್ಯಾಡಿಯಿಂದ ಬೇರೇನನ್ನೋ ನಿರೀಕ್ಷಿಸುತ್ತೇನೆ. ಆದರೆ ಅವರಿಗೆ ಅದನ್ನು ನನಗೆ ನೀಡಲಾಗದು.
ನನಗೆ ಮಾರ್‍ಗೊಟ್‌ಳೆಂದರೆ ಮತ್ಸರವಿಲ್ಲ. ಎಂದಿಗೂ ಇರದು. ಆಕೆಯ ಚೆಂದ ಮತ್ತು ಸೌಂದರ್ಯದ ವೈರಿಯೂ ನಾನಲ್ಲ. ನನ್ನದು ಒಂದೇ ಆಸೆ, ಅದು ಡ್ಯಾಡಿಯ ನಿಜವಾದ ಪ್ರೀತಿ ನನಗೆ ದಕ್ಕಬೇಕೆಂಬುದು, ಅದು ನಾನು ಆತನ ಮಗಳಾಗಿದ್ದಕ್ಕಲ್ಲ., ಬದಲಿಗೆ ಅದು ಆನ್ ಅಂದರೆ ನನಗೆ ಸಿಗಬೇಕು.
ನಾನು ಡ್ಯಾಡಿಗೆ ಜೋತು ಬೀಳುತ್ತೇನೆ. ಅವರಿಗಾಗಿಯೇ ನಾನು ಕುಟುಂಬವನ್ನು ಪ್ರೀತಿಸುವುದು. ಕೌಟಂಬಿಕ ಸಂವೇದನೆಯನ್ನು ಇಟ್ಟುಕೊಳ್ಳುವುದು. ಕೆಲವೊಮ್ಮೆ ಮಮ್ಮಿ ಮೇಲಿನ ನನ್ನ ಭಾವನೆಗಳಿಗೆ ದಾರಿಯೊಂದು ನನಗೆ ಬೇಕು. ಡ್ಯಾಡಿಗೆ ಅದು ಅರ್ಥವಾಗುವುದಿಲ್ಲ. ಡ್ಯಾಡಿ ಅದರ ಕುರಿತು ಮಾತನಾಡಲು ಬಯಸುವುದೇ ಇಲ್ಲ. ಅವರಿಗೆ ಮಮ್ಮಿಗೆ ಕೆಲಸಮಾಡಲಾಗದಂತಹ ಏನಾದರೂ ಕಷ್ಟಗಳು ಬರುತ್ತವೆಯೋ ಅಂತವುಗಳನ್ನು ಅವರು ದೂರವಿಡುತ್ತಾರೆ. ಆದರೂ ಕೆಲವೊಮ್ಮೆ ಮಮ್ಮಿ ಮತ್ತು ಅವರ ಕಿರುಕುಳ ಉಳಿದೆಲ್ಲ ಸಂಗತಿಗಳಿಗಿಂತ ಹೆಚ್ಚು ಸಹಿಸಲಾಗದಂತಿರುತ್ತವೆ. ಇವುಗಳನ್ನೆಲ್ಲಾ ಹೇಗೆ ಸಹಿಸುವುದೋ ನನಗರ್ಥವಾಗುತ್ತಿಲ್ಲ. ಎಲ್ಲ ಸಲವೂ ನಾನೇನು ಅವರ ಅಸ್ವಚ್ಛತೆಯ ಕುರಿತು, ಅವರ ವ್ಯಂಗ್ಯದ ಬಗ್ಗೆ ಹಾಗೂ ಹಿತವಾಗದ ಅವರ ರೀತಿಯನ್ನು ಎತ್ತಿ ಹೇಳುವುದಿಲ್ಲ. ನಾನು ತಪ್ಪು ಮಾಡುತ್ತಿರುವೆನೆಂದು ನಾನು ನಂಬಲಾರೆ.
ಮಮ್ಮಿ ಮತ್ತು ನಾನು ಪರಸ್ಪರ ಸಂಪೂರ್ಣ ವಿರುದ್ಧ. ಸಹಜವಾಗೇ ಒಬ್ಬರಿಗೊಬ್ಬರು ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಮಮ್ಮಿಯ ನಡತೆಯ ಬಗ್ಗೆ ನಾನು ನನ್ನ ನಿರ್ಧಾರವನ್ನು ಪ್ರಕಟಿಸಲಾರೆ. ಅದನ್ನು ನನಗೆ ನಿರ್ಧರಿಸಲಾಗದು. ಅವರನ್ನು ನಾನು ತಾಯಿಯಾಗಿ ಮಾತ್ರ ನೋಡುವೆ. ಮತ್ತಾಕೆ ಆ ಪಾತ್ರದಲ್ಲಿ ನನ್ನ ಮಟ್ಟಿಗೆ ಪರಿಪೂರ್ಣಳಾದಂತಿಲ್ಲ. ನಾನೇ ನನ್ನ ತಾಯಿಯಾಗಬೇಕಾಗಿದೆ. ಅವರೆಲ್ಲರಿಂದ ನನ್ನನ್ನು ನಾನು ದೂರಕ್ಕೆ ಎಳೆತಂದಿದ್ದೇನೆ. ನಾನೇ ನನ್ನ ಜೊತೆಯಾಟದ ಗೆಳೆಯ ಮತ್ತು ನಂತರ ನಾನು ಎಲ್ಲಿಗೆ ಬಂದು ತಲುಪಿದೆ ಎಂಬುದನ್ನು ನೋಡುವೆ. ಇವೆಲ್ಲವೂ ಸರಿಯಾಗಿಯೇ ನಡೆಯುತ್ತಿವೆ. ಯಾಕೆಂದರೆ ನನ್ನ ಮನಸ್ಸಿನಲ್ಲಿ ತಾಯಿಯೊಬ್ಬಳ ಹಾಗೂ ಹೆಂಡತಿಯೊಬ್ಬಳ ಪರಿಪೂರ್ಣ ಚಿತ್ರಣ ಈಗಾಗಲೇ ಇದೆ. ಅಮ್ಮ ಎಂದು ಕರೆಯಬೇಕಾದ ಅವರಲ್ಲಿ ನನಗೆ ಆ ಚಿತ್ರದ ಕುರುಹೂ ಕಾಣುತ್ತಿಲ್ಲ.
ನಾನು ಸದಾ ಸಂಕಲ್ಪ ಮಾಡುತ್ತಿರುತ್ತೇನೆ ಅದು ಮಮ್ಮಿಯ ಕೆಟ್ಟ ಉದಾಹರಣೆಗಳನ್ನು ಗಮನಿಸಲಿಕ್ಕಲ್ಲ. ಅವರಲ್ಲಿಯ ಒಳ್ಳೆಯ ಗುಣಗಳನ್ನು ಕಾಣಬಯಸುತ್ತೇನೆ. ಹಾಗೇ ನನಗೆ ಗೋಚರಿಸದ ಅವರನ್ನು ನನ್ನಲ್ಲಿ ಕಾಣಲು ಬಯಸುತ್ತೇನೆ. ಆದರೆ ಇದರಿಂದ ಪ್ರಯೋಜನವಿಲ್ಲ. ಅದರ ದುಷ್ಪರಿಣಾಮವೆಂದರೆ ಡ್ಯಾಡಿಯಾಗಲಿ ಮಮ್ಮಿಯಾಗಲಿ ಇದರಿಂದ ನನ್ನ ಬದುಕಿನಲ್ಲಿ ಆಗುತ್ತಿರುವ ಗ್ಯಾಪನ್ನು ಅರಿಯಲಾರರು. ಹಾಗಾಗಿ ನಾನವರ ದೂರುತ್ತೇನೆ. ತಮ್ಮ ಮಕ್ಕಳಗೆ ಪೂರ್ಣವಾಗಿ ಖುಷಿಕೊಡುವಲ್ಲಿ ಯಾರಾದರೂ ಹೆತ್ತವರು ಯಶಸ್ವಿಯಾಗುವರೇ ಎಂದು ನಾನು ಯೋಚಿಸುತ್ತೇನೆ.
ಕೆಲವೊಮ್ಮೆ ದೇವರು ನನ್ನ ಪರೀಕ್ಷಿಸುತ್ತಿದ್ದಾನೆ ಎಂದು ನನಗನ್ನಿಸುತ್ತದೆ. ನನ್ನ ಸ್ವಪ್ರಯತ್ನದಿಂದ ನಾನು ಯಶಸ್ವಿಯಾಗಬೇಕು, ಬೇರಾವ ಉದಾಹರಣೆಗಳು ಇಲ್ಲದೆ, ಯಾವ ಸತ್ ಉಪದೇಶಗಳು ಇಲ್ಲದೇ ಯಶಸ್ವಿಯಾಗಬೇಕು.
ಆಮೇಲೆ ನಾನು ಎಲ್ಲ ರೀತಿಯಿಂದ ಬಹಳ ಗಟ್ಟಿಗಳಾಗುವೆ. ಆಗ ನನ್ನ ಪಕ್ಕದಲ್ಲಿರುವವ ಈ ಕಾಗದಗಳನ್ನು ಓದುವನೇ? ಯಾರಿಂದ ಅಲ್ಲದಿದ್ದರೂ ನನಗೆ ನಾನೇ ನೆಮ್ಮದಿಯನ್ನು ಪಡೆಯುವೆನೇ? ನನಗೆ ನೆಮ್ಮದಿ ಅತಿ ಮುಖ್ಯ. ಬಹಳಷ್ಟು ಸಲ ನಾನು ಶಕ್ತಹೀನ ಅತೃಪ್ತಿಯ ಭಾವ ಅನುಭವಿಸುತ್ತೇನೆ. ನನ್ನ ಶಾರ್ಟ ಕಮ್ಮಿಂಗ್ಸ ಬಹಳ. ಹಾಗಾಗಿ ನನ್ನ ಸುಧಾರಿಸಿಕೊಳ್ಳಲು ನಾನು ನಿರಂತರ ಪ್ರಯತ್ನಿಸುತ್ತಲೇ ಇರುವೆ.
ನನ್ನ ಟ್ರೀಟಮೆಂಟ್ ಬಗೆಬಗೆಯದು. ಒಂದು ದಿನ ’ಆನ್’ ಎಷ್ಟು ಸೆನಸಿಬಲ್ ಇರುವಳೆಂದರೆ ಎಲ್ಲವನ್ನೂ ತಿಳಿದುಕೊಳ್ಳುತ್ತಾ ಹೋಗುವಳು. ಅದೇ ಮಾರನೇ ದಿನ ಆನ್‌ಳಿಗೆ ಕುರಿಮರಿಯಷ್ಟು ಬುದ್ದಿಯಿಲ್ಲ, ಏನೂ ಗೊತ್ತಿಲ್ಲ’ ಎಂಬ ಮಾತನ್ನು ನಾನು ಕೇಳಬೇಕಾಗುತ್ತದೆ. ಮತ್ತು ಆನ್ ತಾನು ಪುಸ್ತಕಗಳಿಂದ ಬಹಳ ಕಲಿತಿದ್ದಾಳೆಂದು ಊಹಿಸುತ್ತಾಳೆ. ನಾನು ಸಣ್ಣ ಮಗುವಲ್ಲ, ಹಾಗೇ ಕೆಟ್ಟುಹೋದ ಹುಡುಗಿಯೂ ಅಲ್ಲ. ಆನ್ ಮಾಡಿದ್ದನ್ನು ನೋಡಿ ನಗಲು. ನನಗೆ ನನ್ನದೇ ಆದ ಯೋಚನೆಗಳಿವೆ, ದೃಷ್ಟಿಕೋನವಿದೆ,ಯೋಜನೆಗಳಿವೆ. ಆದಾಗ್ಯೂ ಅವುಗಳನ್ನು ಇನ್ನೂ ನಾನು ವ್ಯಕ್ತಪಡಿಸಿಲ್ಲ.
ಅರೇ! ಹಾಸಿಗೆಯಲ್ಲಿ ಹೀಗೆ ಬಿದ್ದು ಕೊಂಡಿರುವಾಗಲೇ ಎಷ್ಟೊಂದು ಸಂಗತಿಗಳು ನನ್ನೊಳಗೆ ಬಲೂನಿನಂತೆ ಎದ್ದು ಉರುಳಿ ಹೋಗುತ್ತಿವೆ. ನನ್ನ ಉದ್ಧೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಈ ಜನರಿಂದ ರೋಸಿಹೋಗಿದ್ದೇನೆ. ಅವರನ್ನೆಲ್ಲಾ ಸಹಿಸಿಕೊಳ್ಳುತ್ತಲೇ ಹೋಗಬೇಕು. ಅದಕ್ಕೆ ಕೊನೆಗೆ ಯಾವಾಗಲೂ ನಾನು ನನ್ನ ಡೈರಿಯ ಹತ್ತಿರವೇ ವಾಪಸ್ಸು ಬರುವುದು. ಅಲ್ಲಿಯೇ ನನ್ನ ಪ್ರಾರಂಭ ಮತ್ತು ಕೊನೆ. ಯಾಕೆಂದರೆ ಆನ್ ಯಾವಾಗಲೂ ಬಹಳ ಶಾಂತ. ಏನೇ ಆಗಲಿ ಹೋಗಲಿ ನಾನವಳನ್ನು ಕಾಯ್ದುಕೊಳ್ಳುವೆ ಎಂದು ಭಾಷೆ ಕೊಡುವೆ. ಅದರ ಮೂಲಕ ನನ್ನ ದಾರಿ ಕಂಡುಕೊಳ್ಳುವೆ. ನನ್ನ ಕಣ್ಣೀರು ನುಂಗಿಕೊಳ್ಳುವೆ. ಮುಂದೊಂದು ದಿನ ನನ್ನ ಪ್ರೀತಿಸುವವನೊಬ್ಬ ಸಿಕ್ಕು ನಾನು ಅವನಿಂದ ಪ್ರೋತ್ಸಾಹವನ್ನು ಪಡೆಯಬಲ್ಲೆ ಎಂಬ ಆಶಯ ನನ್ನದು.
ನನ್ನ ಹಂಗಿಸಬೇಡ. ನೆನಪಿಡು, ನಾನು ಕೂಡಾ ಖುಷಿಯ ಶಿಖರವನ್ನು ಮುಟ್ಟಬಲ್ಲೆ.
ನಿನ್ನ,
ಆನ್















