Home / ಕವನ / ಕವಿತೆ / ಆಫ್ರಿಕ

ಆಫ್ರಿಕ

ಕೆಂಪು ಸಮುದ್ರದ ನೀರು ಕತ್ತಲೆಯಂತೆ ಕರ್‍ರಗಿರಲು
ಆಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು.
ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು.
ಅಬಿಸೀನಿಯದ ಕೊಲೆ, ನಿಗರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,-
ಕಪ್ಪುಹಚ್ಚುವ ಕೃತಿಗಳಿವು,-ರಕ್ತವರ್ಣದವು!
ಆಫ್ರಿಕಖಂಡದ ಜನರ ಮೆಯ್ಯಲ್ಲಿಲ್ಲ ಮಾಂಸಖಂಡ,-
ಗುಲಾಮರ ಲೋಕವದು-ಮಾನವನು ಮೆಟ್ಟಿದ ಪಾತಾಳವದು-
ಅಂಧಂತಮಸ್ಸದು–ಕೊಲೆಗಡಕರಡುಮನೆಯದು-
ಅಲ್ಲಿ ಮುಳುಗುವ ರವಿಯು ಕೂಡ ರಕ್ತದ ಮಡುವಿನಲೀಸುತಿದ್ದ!

ಇ೦ತಿರಲು ಆಫ್ರಿಕದ ಮುಳುಗು,-ಮೂಡಿತೊಂದಾಸೆಯಲ್ಲಿ.
ಬೆಳ್ಳಿಯ ಕಡ್ಡಿಯನು ಬಿಳಿ ಬೆಳಕಿನಲೆದ್ದಿ ಬರೆದ ಗೆರೆಯಂತೆ
ಮುಗಿಲ ಪಟದ ಮೇಲೆ ವಿರಾಜಿಸಿದ ಬಿದಿಗೆಯ ಚಂದ್ರಮನು.
ಕಳೆಯೇರಿದನು, ಕರೆತಂದನು ಕೆಲವು ಚಿಕ್ಕೆಗಳನು,
ಹಿಡಿದ ಕೊಂಬಿನಲ್ಲಿ ಬಿಂಬಿಸಿದನು ಬೆಳಕನೆಲ್ಲ,
ಆಸೆಯಿದೆಯೆಂದನು, ಕೃಷ್ಣೋದಕದ ಹೃದಯವ ಕೂಡ
ಭೇದಿಸಿದನು ಹೊಳೆವ ಕಿರಣಗಳ ಕೂರಲಗಿನಿಂದ.

ಅರೆನಿಮಿಷ ಬೆಳಗಿರಲಿಲ್ಲ,-ಕಳೆಗುಂದಿದನು ಚಂದ್ರ.
ಕಂದಿತೆಲ್ಲ ಅವನ ಬಣ್ಣ! ಕೇದಿಗೆಯ ಬಿಳುಪು ಬಂತು:
ಬಾಗಿದನು, ಮೊಗ ತಗ್ಗಿಸಿದನು, ಹುದುಗಿದನು ಬೆಟ್ಟಗಳ ಹೊದರಿನಲ್ಲಿ.
ಹೆದರಬೇಡ ಆಫ್ರಿಕವೆ! ಬರಬಹುದು ನಿನ್ನ ಹುಣ್ಣಿಮೆ ನಾಳೆ.
ಹುಣ್ಣಿಮೆಯಿದ್ದಲ್ಲಿ ಅಮಾವಾಸ್ಯ,-ಅಮಾವಾಸ್ಯವಿದ್ದಲ್ಲಿ ಹುಣ್ಣಿಮೆ;
ಇಂತಿಹುದು ಕಾಲಚಕ್ರ, ಕದಲಬಹುದು ನಿನ್ನ ಕತ್ತಲೆ!
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...