ಪ್ರತಿ ದಿನವೂ ಒಬ್ಬೊಬ್ಬ ಹೊಸ ಸೂರ್ಯ ಉದಯಿಸುತ್ತಲೇ ಇರುತ್ತಾನೆ. ನಾನೂ ನಿರೀಕ್ಷಿಸುತ್ತಲೇ ಇದ್ದೇನೆ – ಯಾವನಾದರೊಬ್ಬ ಹೊಸ ಸೂರ್ಯ ನನ್ನ ಬದುಕನ್ನು ಹೊಸದಾಗಿಸಿಯಾನೆಂದು. ಇಂದೂ ಸಹ ಇನ್ನೊಬ್ಬ ಸೂರ್ಯ ಪೂರ್ವದಿಂದ ಕೆಂಬಣ್ಣದ ಪರದೆಯ ಮುಂದೆ ಪಾತ್ರಧಾರಿಯಂತೆ ಉದಯಿಸುತ್ತಿದ್ದಾನೆ. ಅಂತೆಯೇ ನನ್ನ ಹಿಂದಿನ ಅದೇ ಕೆಲಸವೂ ಪ್ರತಿ ದಿನದ ನಿಯಮದಂತೆ ಹೊಸದಾಗಿಯೇ ಆರಂಭವಾಗುತ್ತದೆ.
ನಾನು ಎದ್ದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಬೋರ್‌ವೆಲ್‌ನಿಂದ ನೀರು ಹೊಡೆದು ಮನೆಗೆ ತುಂಬಿಸುವುದು. ಅದಕ್ಕಾಗಿ ಏಳಬೇಕಾಗಿರುವುದು ನಾಲ್ಕು ಗಂಟೆಗೆ ಏಕೆಂದರೆ ಊರಲ್ಲಿರುವುದು ಒಂದೇ ಬೋರ್‌ವೆಲ್ ಸರ್ಕಾರದವರೇನೋ ಮೂರು ಗುಂಡಿಗಳನ್ನು ತೋಡಿಸಿ ನೀರು ಬರಲಿಲ್ಲ ಎಂದು ಟೋಪಿ ಹಾಕಿ ಹೋದವರು ಇನ್ನೂ ಬಂದಿಲ್ಲ. ನಮ್ಮೂರಿನ ಪುಣ್ಯವೋ ಏನೋ, ಇದೊಂದರಲ್ಲಿ ಅಷ್ಟೋ ಇಷ್ಟೋ ನೀರಿದೆ. ಆದರೆ ಬಳಕೆದಾರರೇ ಅತಿಯಾಗಿದ್ದಾರೆ. ಬೆಳಿಗ್ಗೆ ಯಾರು ಬೇಗ ಎದ್ದು ನೀರು ಹೊಡೆಯುತ್ತಾರೋ ಅವರಿಗೆ ಮಾತ್ರ ಈ ಗಂಗಾಜಲ ಲಭ್ಯ. ಉಳಿದವರು ಬಾಯಿ ಬಾಯಿ ಬಡಿದು ಕೊಳ್ಳುವುದೊಂದೇ ಬಾಕಿ. ಎಷ್ಟು ಹೊಡೆದರೂ ನೀರೇ ಹೊರ ಬರುವುದಿಲ್ಲ. ಬದಲಿಗೆ ಲಬ್ ಲಬ್ ಎಂದು ಗಾಳಿ ಬರುತ್ತದೆ!
ನನಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಬಹಳ ದಿನಗಳಿಂದ. ಡಿಗ್ರಿ ಓದುತ್ತಿದ್ದಾಗ ನಾಲ್ಕು ಗಂಟೆಗೇ ಎದ್ದು ನೆಹರು ಸ್ಟೇಡಿಯಮ್ಮನ್ನು ಇಪ್ಪತ್ತು ಸುತ್ತು ಹಾಕುತ್ತಿದ್ದೆ. ಓಡುತ್ತಾ. ವ್ಯಾಯಾಮವನ್ನೂ ಮಾಡುತ್ತಿದ್ದೆ. ಆದರೆ ಈಗ ಈ ಊರಿನ ರಸ್ತೆಗಳಲ್ಲಿ ಓಡುವುದಿರಲಿ, ನಡೆದರೇ ಕಾಲು ಉಳುಕುವಂತಿದೆ. ಒಟ್ಟಿನಲ್ಲಿ ವ್ಯಾಯಾಮಕ್ಕೆ ಪರ್ಯಾಯವಾಗಿ ಬೋರ್ ಹೊಡೆಯುವ ಕರ್ಮ ಅಂಟಿಕೊಂಡಿದೆ.
ಸುಮಾರು ಹತ್ತು ಹನ್ನೆರಡು ಬಾರಿ ಮನೆಗೂ ಬೋರ್‌ವೆಲ್‌ಗೂ ಪೆಂಡುಲಂನಂತೆ ಓಡಾಡುತ್ತಿದ್ದಂತೆಯೇ ಮಹಿಮೇಗೌಡ, ತನ್ನ ಮಗಳು ಸರೋಜಳನ್ನು ಕರೆದುಕೊಂಡು ನೀರಿಗೆ ಬರುತ್ತಿದ್ದ. ಮಹಿಮೇಗೌಡ, ಹಾಳು ಊರಿಗೆ ಉಳಿದವನೇ ಗೌಡ ಎಂಬಂತೆ ಗೌಡಿಕೆ ಕಟ್ಟಿಕೊಂಡೇ ತನ್ನ ವಯಸ್ಸನ್ನು ಸವೆಸಿದ್ದನಾದ್ದರಿಂದ ಸರೋಜಳೇ ಬೋರ್‌ವೆಲ್‌ನ ಹಿಡಿಯನ್ನು ಒತ್ತ ಬೇಕಾಗಿತ್ತು. ಆಗಲ್ಲಾ ನಾನು ಅವಳೊಂದಿಗೆ ಹಿಡಿ ಹಿಡಿದುಕೊಂಡು, ಆಗಾಗ ಕೈ ತಗುಲುತ್ತಿದ್ದುದರಿಂದ ಕತ್ತಲಿನ್ನು ಇರುತ್ತಿದ್ದುದರಿಂದ ಇರಬಹುದು-ಮೈ ಪುಳಕಗೊಳಿಸಿಕೊಳ್ಳುತ್ತಾ, ಒತ್ತುತ್ತಿದ್ದೆ. ಈ ಕಾರಣದಿಂದಲೇ ನಮ್ಮ ಮನೆಗೆ ನೀರಿನ ಅವಶ್ಯಕತೆ ಯಿಲ್ಲದಿದ್ದರೂ ಸರೋಜ ನೀರಿಗೆ ಬರುವುದನ್ನು ನಿಲ್ಲಿಸುವವರೆಗೆ ಆ ಕೊಳವೆ ಬಾವಿ ಬಳಿಯಲ್ಲೇ ಇರುತ್ತಿದ್ದೆ. ಅದೂ ಇದೂ ಮಾತನಾಡುತ್ತಾ. ಎಷ್ಟೋ ಸಲ ಅವಳೊಂದಿಗೆ ನಾನೂ ಬಿಂದಿಗೆ ತೆಗೆದುಕೊಂಡು ಹೋಗಿ ಅವರ ಮನೆಗೆ ನೀರು ತುಂಬಿಸುತ್ತಿದ್ದೆ.
ನಾನು ಇಷ್ಟೊಂದು ಆಕೆಯನ್ನು ಹಚ್ಚಿಕೊಂಡಿದ್ದು ಯಾರಿಗೂ ಅನುಮಾನ ಬರಿಸುವಂತಿರಲಿಲ್ಲ; ಬಂದರೂ ಅಭಿವ್ಯಕ್ತಗೊಳಿಸುವಂತಿರಲಿಲ್ಲ. ಕಾರಣ ಸರೋಜ ನನ್ನ ತಂದೆ ತಂಗಿಯ, ಅರ್ಥಾತ್ ನನ್ನ ಅತ್ತೆಯ ಮಗಳು. ಅದೂ ಅಲ್ಲದೇ ನಮ್ಮ ಈ ಸ್ನೇಹ ಇಂದು ನಿನ್ನೆಯದಲ್ಲ. ನಾವಿಬ್ಬರೂ ಒಟ್ಟಿಗೆ ಆಡಿ ಬೆಳೆದವರು.
ಆದರೆ ಇಂದು ಸರೋಜ ನೀರಿಗೆ ಬರಲಿಲ್ಲ. ಬದಲಾಗಿ, ಆಕೆಯ ತಂಗಿಯನ್ನು ಕರೆದುಕೊಂಡು ಮಹಿಮೇಗೌಡರು ಬಂದರು. ‘ಏನ್ ಮಾವ, ಯಾಕೆ ಇವತ್ತು ತಡವಾಗಿ ಬಂದಿರಲ್ಲ, ಏನ್ ನಿದ್ದೆ ಜಾಸ್ತಿನಾ?’ ನಾನು ಪೀಠಿಕೆ ಹಾಕಿದೆ. ಆದರೆ ಕೇಳಿಸಿಯೂ ಕೇಳಿಸದಂತೆ ಸುಮ್ಮನೇ ನಿಂತಿದ್ದರು. ಮುದುಕರು. ಮೇಲಾಗಿ ನಿದ್ದೆಯ ಜೊಂಪು ಇನ್ನೂ ಇಳಿದಿರಲಿಕ್ಕಿಲ್ಲವೆಂದು ಪುನಃ ‘ಕಾಫಿ ಆಯಿತಾ?’ ಎಂದೆ. ನನ್ನ ಮುಖ ನೋಡಿದರೆಂದು ಮಬ್ಬುಗತ್ತಲಲ್ಲಿ ಅನಿಸಿತು. ಆದರೆ ಅದರ ಭಾವವನ್ನು ಗುರುತಿಸುವುದಾಗಲಿಲ್ಲ. ಆಗ ಅವರ ಮಗಳು ಅನ್ನಪೂರ್ಣ ‘ಅಪ್ಪಾ…’ ಎಂದು ನಾನು ಮಾತನಾಡಿಸುತ್ತಿದ್ದೇನೆ ಎಂಬುದನ್ನು ತಿಳಿಸುವವಳಂತೆ ಮಾತನಾಡಿದಾಗ, ‘ಅವರದ್ದು ಹೊಡೆದುಕೊಂಡು ಆಗಲಿ ಇರಮ್ಮ’ ಎಂದು ಗದರಿಸುವವರಂತೆ ಅಂದು ಆಕೆಯನ್ನು ಸುಮ್ಮನಾಗಿಸಿದರು. ಅಂದರೆ ನಾನು ಮಾತನಾಡಿಸಿದ್ದು ಕೇಳಿಸಿತ್ತು ಎಂದಾಯಿತು-ಅನ್ನಪೂರ್ಣ ನನಗಿಂತ ಮಲುದನಿಯಲ್ಲಿ ಮಾತನಾಡಿದ್ದರಿಂದ.
ಇದಕ್ಕೆ ಕಾರಣವೇನಿರಬಹುದು?
ತಕ್ಷಣಕ್ಕೆ ಸರೋಜ ನೀರಿಗೆ ಬರದಿರಲೂ, ಮಹಿಮೇಗೌಡರು ನನ್ನೊಂದಿಗೆ ಮಾತನಾಡದಿರಲು ಸಿಕ್ಕ ಒಂದು ಉತ್ತರ, ರಾತ್ರಿಯಷ್ಟೇ ನನ್ನ ತಾಯಿಯು ತಂದೆಯ ಮುಖಾಂತರ ಸರೋಜಿಯನ್ನು ನನಗೆ ತರುವ ಬಗ್ಗೆ ಅವರ ಮನೆಗೆ ಕಳಿಸಿ ಮಾತನಾಡಿಸಿದ್ದು.
ಇಷ್ಟಕ್ಕೇ ಅವರು ನನ್ನ ಮೇಲೆ ಮುನಿಸಿಕೊಂಡಿದ್ದಾರೆ ಎಂಬುದು ಅಷ್ಟು ಸಮಂಜಸವಾಗಿ ಕಾಣಲಿಲ್ಲ. ಅಲ್ಲದೇ ಅಲ್ಲಿ ನಡೆದ ವಿದ್ಯಮಾನಗಳ ಕುರಿತು ನನಗೆ ಅಪ್ಪ ಏನೂ ಹೇಳಿರಲಿಲ್ಲ; ತಾಯಿಯ ಮೂಲಕವೂ ಹೇಳಿಸಿರಲಿಲ್ಲ.
ನನ್ನ ಮನಸ್ಸು ಇದಕ್ಕೆ ಕಾರಣವನ್ನು ಹುಡುಕಲು ಬಹಳವಾಗಿ ಪ್ರಯತ್ನಿಸುತ್ತಿತ್ತು. ನನ್ನ ಅತ್ತೆಯ ಮಗಳಾದ್ದರಿಂದ ಸಾಲಾವಳಿ ಕೂಡಿಬರುವುದರಿಂದ ಹಿಂದಿನಂತೆ ಯಾವುದೇ ತೊಂದರೆ ಬರಲಾರದು ಎಂದೇ ಈ ನಿರ್ಧಾರ ಕೈಗೊಂಡು, ಸರೋಜಳನ್ನು ಇಷ್ಟಪಟ್ಟಿದ್ದೆ.
ಬಹುಶಃ ನನ್ನ ಹಿಂದಿನ ಪ್ರೇಮ ಪ್ರಕರಣ ಇವರಿಗೆ ತಿಳಿದಿರುವುದರಿಂದ, ನನಗೆ ತಮ್ಮ ಮಗಳನ್ನು ಕೊಡಲು ಇಷ್ಟವಿಲ್ಲವೇ? ಕೇಳಿಬಿಡಬೇಕೆನಿಸಿತು. ಆದರೆ ತಕ್ಷಣ ಒತ್ತರಿಸಿ ಬಂದ ಸಂಗೀತಾಳ ನೆನಪು ಇದಕ್ಕೆ ಅವಕಾಶ ನೀಡಲಿಲ್ಲ.
ಸಂಗೀತಾ, ನಾನು ಕಾಲೇಜು ಓದುತ್ತಿದ್ದಾಗ ಪರಿಚಿತಳಾಗಿದ್ದವಳು. ಪ್ರೀತಿಸುವಷ್ಟು ಸುಂದರಿಯಲ್ಲದಿದ್ದರೂ ಅವಳ ಸೌಜನ್ಯಯುತ ಗುಣದಿಂದ, ಬುದ್ಧಿಮತ್ತೆಯಿಂದ ನನ್ನನ್ನು ಆಕರ್ಷಿಸಿದ್ದಳು. ಈ ಪ್ರೀತಿ, ಪ್ರೇಮ ಎಂಬ ಮಧುರ ಪದಗಳು ಮಾಯೆಯ ಮೋಡಿಯಲ್ಲಿದ್ದಾಗ ಮೂಡುವಂತಹವು ಮತ್ತು ಕ್ರಮೇಣ ತಣ್ಣಗಾಗಿ, ಇಸ್ತ್ರಿ ಪೆಟ್ಟಿಗೆಯಂತೆ, ತಟಸ್ಥವಾಗುವವು.
ನೀರು, ಬಿಂದಿಗೆಯನ್ನು ತುಂಬಿ ಕೆಳಗೆ ಹರಿಯುತ್ತಿತ್ತು. ನಾನು ಸುಮ್ಮನೇ ಹಿಡಿಯನ್ನು ಜಗ್ಗುತ್ತಲೇ ಇದ್ದೆ. ಮಹಿಮೇಗೌಡರಂತೂ ಮಾತನಾಡಿಸುವಂತಿರಲಿಲ್ಲ. ಅನ್ನಪೂರ್ಣ ‘ಭಾವಾ’ ಎಂದು ಒಮ್ಮೆ, ‘ಭಾವ ತುಂಬ್ತು’ ಎಂದು ಮತ್ತೊಮ್ಮೆ ಅಂದದ್ದು ಕಿವಿಗೆ ಕೇಳಿಸಿತ್ತು. ಆದರೆ ಮೆದುಳಿಗೆ ತಲುಪಿ, ಕೈಗೆ ಪ್ರತಿಕ್ರಿಯಿಸುವಂತೆ ಆದೇಶ ಬಂದಿರಲಿಲ್ಲ. ನಾರಾಯಣ ಭಾವ…” ಎಂದು ಗಟ್ಟಿಯಾಗಿ ಆಕೆ ಅಂದಾಗಲೇ ನನಗೆ ವಾಸ್ತವದ ಅರಿವಾದುದು.
ಬಲಗೈಯಲ್ಲಿ ನೀರ ಬಿಂದಿಗೆಯನ್ನು, ಎಡಗೈಯಲ್ಲಿ ಲುಂಗಿಯ ಅಂಚನ್ನು ಹಿಡಿದು ಯೋಚಿಸುತ್ತಲೇ ಮನೆಯತ್ತ ಕಾಲು ಹಾಕಿದೆ ಅರೆ ಪ್ರಜ್ಞಾವಸ್ಥೆಯಲ್ಲಿರುವವನಂತೆ. ಎದುರು ಮನೆಯ ಹದಿಹರೆಯದ ಹುಡುಗಿ ಆಗ ತಾನೇ ಎದ್ದು ಕಣ್ಣು ಉಜ್ಜುತ್ತಿದ್ದವಳು ನನ್ನನ್ನು ಕಂಡು ಕಣ್ಣಗಲಿಸಿ ನೋಡಲಾರಂಭಿಸಿದ್ದನ್ನು ಹೇಗೋ ಗಮನಿಸಿದ್ದೆ. ಈಕೆಯ ನೋಟಗಳು ನನ್ನನ್ನು ಬಯಸುತ್ತಿದ್ದುದನ್ನು ಈ ಹಿಂದೆಯೇ ಅರಿತಿದ್ದ.
ಸಂಗೀತಾಳನ್ನು ನಾನು ಇಷ್ಟಪಟ್ಟಿದ್ದು, ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದು; “ನಿಮಗೆ ಇಷ್ಟವಿದ್ದು ಮದುವೆ ಮಾಡುವಿರಾದರೆ ಸಂತೋಷ” ಎಂದು ನನ್ನ ತಂದೆಯನ್ನೇ ಅವರ ಮನೆ ತೋರಿಸಿ ಕಳುಹಿಸಿದ್ದು, ಊಟವೆಲ್ಲಾ ಮುಗಿದಾದ ನಂತರ ಹುಡುಗಿ ಸುಂದರವಾಗಿದ್ದಾಳೆಂದು ಒಪ್ಪಿ, ಮಾತುಕತೆಗೆ ಕುಳಿತಾಗ ನನ್ನ ತಂದೆಯವರು, “ನಿಮ್ಮದು ಯಾವ ಬೆಡಗು” ಎಂದು ಕೇಳಿದ್ದು, ಸಂಗೀತಾಳ ತಂದೆ ಗಲಿಬಿಲಿಗೊಂಡು, ತಾವು ಒಕ್ಕಲಿಗರಲ್ಲ ಎಂದು ತಿಳಿಸಿದ್ದು, ಮಾತುಕತೆ ಕೊನೆಗೊಂಡಿದ್ದು, ಅದು ಹೇಗೋ ಅಪ್ಪ, ಅವರು ಹರಿಜನರೆಂದು ತಿಳಿದುಕೊಂಡಿದ್ದು, ಮನೆಗೆ ಬಂದು, “ಮಾದ್ರ ಮನೇಲಿ ಉಣ್ಣು ಸ್ಬುಟ್ಯಲ್ಲೋ ಸೂಳೇ ಮಗ್ನೆ” ಎಂದು ಎಗರಾಡಿ ನನ್ನನ್ನು ಹೊಡೆಯಲು ಬಂದದ್ದು, ತಾಯಿ ಬಿಡಿಸಿಕೊಂಡಿದ್ದು, “ನಂಗೇನೂ ಗೊಂಗಟಗಾರರೇ ಆಗ್ಬೇಕೂಂತಿರಲಿಲ್ಲ, ಬುಜ್ಜಣಿಗೇರೋ, ದೇಶಾಭಾಗದವರೋ ಆಗಿದ್ರೂ ಒಪ್ಕೊಂಡು ಬಂದ್ಬಿಡುತ್ತಿದ್ದೆ” ಎಂದು ಬಯ್ಯುತ್ತಿದ್ದುದು, “ಕೊಲುವವನು ಮಾದಿಗ, ಹೊಲಸು ತಿನ್ನುವವನು ಹೊಲೆಯನೆಂದು ಎಂಟು ನೂರು ವರ್ಷದ ಹಿಂದೆಯೇ ಮಹಾನುಭಾವನೊಬ್ಬ ಹೇಳಿದ್ದಾನೆ” ಎಂದೇನೋ ನನ್ನನ್ನು ಸಮರ್ಥಿಸಿಕೊಳ್ಳಲು ಹೋದದ್ದು; ‘ನಂಗೇ ಬುದ್ಧಿವಾದ ಹೇಳ್ಕೊಡ್ತಿಯೇನೋ ಬೋಸುಡಿ ಮಗ್ನೇ’ ಎಂದು ತಾಯಿಯ ಹಿಡಿತ ಬಿಡಿಸಿಕೊಂಡು ಕಾಲಿನಿಂದ ಝಾಡಿಸಿ ಒದ್ದದ್ದು, ಮೂಲೆಗೆ ಸೇರಿಸಿ ಕೊರಳಪಟ್ಟಿ ಹಿಡಿದುಕೊಂಡು, “ನಾನು ಮಾಗಡಿ ಕೆಂಪೇಗೌಡ್ರು ಕುಲುಕ್ಕೆ ಸೇರ್ದೋನು ಕಣೋ; ನಿನ್ನಂಗೆ ಬೆರ್ಕೇ ಕುಲುಕ್ಕೆ ಹುಟ್ದೋನಲ್ಲ” ಎಂದು ತಮ್ಮ ಪ್ರತಿಷ್ಟೆ ತೋರಿಸುವ ಭರದಲ್ಲಿ ತನಗರಿವಿಲ್ಲದೇ ಎಡವಿದ್ದು, ಅಮ್ಮ, ಅಪ್ಪನ ‘ಬೆರ್ಕೆ ಕುಲ’ ಎಂಬ ಮಾತನ್ನು ಹಿಡಿದು ತರಾಟೆಗೆ ತೆಗೆದುಕೊಂಡದ್ದು, ವಿಷಯಾಂತರವಾದ್ದರಿಂದ ಸಮರ್ಥಿಸಿಕೊಳ್ಳಲಾಗದೇ ಏನೇನೋ ಗೊಣಗುತ್ತಾ ಹೊರ ಹೋದದ್ದು ಇವೆಲ್ಲವೂ ಕ್ರಮವಾಗಿ ಬಿಚ್ಚಿಕೊಳ್ಳತೊಡಗಿದವು.
“ಅಯ್ಯೋ ನಿಂಗೇನೋ ಬಂತು ದೊಡ್ರೋಗ” ಎಂದು ಬಯ್ಯುತ್ತಾ ಬಂದ ನನ್ನಕ್ಕ ಅನುರಾಧ ವಾಸ್ತವಕ್ಕೆ ತಂದಿದ್ದಳು. ಆಗ ತಾನೇ ಆಕೆ ಕಷ್ಟಪಟ್ಟು ಹಚ್ಚಿದ್ದ ನೀರೊಲೆಯ ಬೆಂಕಿಗೆ ನೀರುಣಿಸುತ್ತಿದ್ದೆ. ಅಷ್ಟರಲ್ಲಾಗಲೇ ಹಂಡೆ ತುಂಬಿದ್ದುದನ್ನು ಗಮನಿಸುವಷ್ಟು ವಾಸ್ತವಿಕ ಪ್ರಜ್ಞೆ ಇರಲಿಲ್ಲ.
ನೀರು ತರುವುದನ್ನು ನಿಲ್ಲಿಸಿ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೊರಟೆ. ಸೊರಬಿಡುವ ತನಕ ಕಾದು, ಕರುವನ್ನು ಗೊಂತಿಗೆ ಕಟ್ಟಿಹಾಕಿ ಮೊಲೆ ಹಿಂಡುತ್ತಾ ಕುಕ್ಕರಗಾಲಲ್ಲಿ ಕುಳಿತೆ.
ಸಂಗೀತಾಳ ತಂದೆ ವಾಲೆಂಟರಿ ರಿಟೈರ್ ಮೆಂಟ್ ಪಡೆದು ತಮ್ಮ ಖಾಯಂ ಊರಿಗೆ ಹೋದರೆಂದು ಆಕೆಯ ಗೆಳತಿಯರಿಂದ ತಿಳಿಯಿತು. ನನ್ನ ತಂದೆಯ ಕೋಪದ ಪ್ರಖರತೆಯಿಂದ ತನ್ನ ಮಗಳನ್ನು ರಕ್ಷಿಸಲು ಹಾಗೆ ಮಾಡಿದರೋ ಏನೋ ತಿಳಿಯಲಿಲ್ಲ. ಪೂರ್ವಭಾವೀ ಸೂಚನೆಗಳಿರದ ಕಾರಣ ಆಕೆಯ ವಿಳಾಸವೂ ನನಗೆ ಗೊತ್ತಿರಲಿಲ್ಲ; ಅಥವಾ ಹೋಗಿ ಬರುತ್ತೇನೆಂದು ಒಂದು ಮಾತು ಹೇಳಿಯೂ ಹೋಗಿರಲಿಲ್ಲ. ಬಹುಶಃ ಆಕೆಗೆ ಅಲ್ಲಿಗೆ ಹೋಗ ಬೇಕಾಗಿದೆಯೆಂದು ತಿಳಿದ ನಂತರ ನಾನು ಸಿಕ್ಕಿಯೇ ಇಲ್ಲವೇನೋ? ನಂತರ ನನಗೆ ಪತ್ರವನ್ನೂ ಬರೆಯಲಿಲ್ಲ. ನನ್ನ ಅಂತರಂಗದ ಭಾವನೆಗಳನ್ನೆಲ್ಲಾ ತೋಡಿಕೊಂಡು ಅಂದಾಜಿನ ವಿಳಾಸ ಬರೆದು ಕಳಿಸಿದ್ದ ಪತ್ರ, ವಾಪಸ್ಸು ಬಂದಿತ್ತು. ಸದ್ಯ ಅಪ್ಪನ ಕೈಗೆ ಸಿಕ್ಕಿರಲಿಲ್ಲ.
ಹಾಲು, ಚಂಬನ್ನು ತುಂಬಿ ನೊರೆಯಾಗಿ ಹೊರಗೆ ಹರಿಯುತ್ತಿತ್ತು. ಕರು ಅದು ಹೇಗೋ ನಾನೇ ಗಟ್ಟಿಯಾಗಿ ಕಟ್ಟಿದ್ದೆನೆಂದು ಖಾತ್ರಿಯಿಲ್ಲ ಕಿತ್ತುಕೊಂಡು ಬಂದು ನನ್ನನ್ನು ಪಕ್ಕಕ್ಕೆ ನೂಕಿದಾಗಲೇ ನನ್ನಿರುವಿನ ಅರಿವಾದದ್ದು.
ಇನ್ನೊಂದು ಕರುವನ್ನು ಕುಡಿಯಲು ಬಿಟ್ಟು, ಹಸು ಗಂಜಲವನ್ನು ಹೊಯ್ದು ಸೊರ ಬಿಡಲಿ ಎಂದು ಕಾಯುತ್ತಾ ನಿಂತೆ.
ನನ್ನ ತಾತನಿಗೆ ಇಬ್ಬರು ಹೆಂಡಿರು. ಹಿರಿಯ ಹೆಂಡತಿಯ ಏಕಮಾತ್ರ ಪುತ್ರ ನನ್ನ ತಂದೆ. ಆಕೆ ಎರಡನೆಯ ಹೆರಿಗೆಯ ಕಾಲದಲ್ಲಿ ಏನೋ ಕಷ್ಟವಾಗಿ ಸತ್ತಳಂತೆ. ಆನಂತರ ನನ್ನ ತಾತ ಇನ್ನೊಂದು ಮದುವೆಯಾದರಂತೆ. ಆಕೆಗೆ ಮೂರು ಹೆಣ್ಣು ಮಕ್ಕಳೂ, ಎರಡು ಗಂಡುಮಕ್ಕಳೂ ಆದ ಮೇಲೆ ಪ್ಲೇಗಿನಿಂದ ಸತ್ತಳಂತೆ, ಅವರಲ್ಲಿ ಮೊದಲಿನ ಹೆಣ್ಣು ಮಗಳೇ ಸರೋಜಳ ತಾಯಿ ಲಕ್ಷ್ಮಮ್ಮ, ಮತ್ತು ಆಕೆಯ ತಮ್ಮ ನನ್ನ ಚಿಕ್ಕಪ್ಪ ಗಂಗಯ್ಯ.
ಕಳೆದ ವರ್ಷ ತಾನೇ ನನ್ನ ಚಿಕ್ಕಪ್ಪನೆನಿಸಿಕೊಂಡವನಿಗೆ ಮದುವೆಯಾಯಿತು- ಲಕ್ಷ್ಮಮ್ಮನ ಹಿರಿಯ ಮಗಳೊಡನೆ. ಆಗ ನಾನು ಸಾಕಷ್ಟು ಕುತೂಹಲದೊಂದಿಗೇ, ಈ ಮದುವೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಪ್ರಾರಂಭವಾಗಲು ಕೇವಲ ಹದಿನೈದು ದಿನಗಳಿದ್ದರೂ ನನಗಾವ ಅಂಜಿಕೆಯೂ ಇರಲಿಲ್ಲ. ಸಂಗೀತಾಳನ್ನು ವಿಶೇಷವಾಗಿ ಆಮಂತ್ರಿಸಿ ನನ್ನ ಚಿಕ್ಕಪ್ಪ-ಚಿಕ್ಕಮ್ಮರ ಸ್ಥಾನದಲ್ಲಿ ನಾವು ಕುಳಿತ ಕನಸನ್ನು ಕಲ್ಪಿಸಿ ನಕ್ಕಿದ್ದೆವು. ಆಗ ಈ ಇದೇ ಮದುವೆ ನನ್ನ ಜೀವನದಲ್ಲಿ ಸಂಕೀರ್ಣ ಪರಿಸ್ಥಿತಿಯನ್ನು ಉಂಟು ಮಾಡೀತು ಎಂಬ ಕಲ್ಪನೆಯೂ ಇರಲಿಲ್ಲ.
‘ಆಯ್ತಾ, ನಾರೈಣಣ್ಣ ಹಾಲು ಕರ್ದು?’ ಎಂದು ನೆಲ ಬಳಿಯಲು ಸಗಣಿ ತೆಗೆದುಕೊಂಡು ಹೋಗಲು ಬಂದಿದ್ದ ಹುಡುಗಿ ಅಂದಾಗಲೇ ಪ್ರಸ್ತುತ ಪರಿಸ್ಥಿತಿಯ ಅರಿವಾದುದು. ಅಷ್ಟರಲ್ಲಿ ಸೊರ ಬಿಡಲಿ ಎಂದು ಕುಡಿಯಲು ಬಿಟ್ಟಿದ್ದ ಕರು ಜೋರಾಗಿ ಬಾಲ ಅಲ್ಲಾಡಿಸುತ್ತ ತನ್ನ ಸಂತಸವನ್ನು ಮೌನವಾಗಿ ತಾನೇ ಅನುಭವಿಸುತ್ತ ಸಂಪೂರ್ಣ ಕುಡಿದುಬಿಟ್ಟಿತ್ತು.
ಹಾಲನ್ನು ತಂದು ಒಳಗಿಟ್ಟು ನನ್ನ ಬರೆಯುವ ಟೇಬಲ್ ಮೇಲೆ ಕುಳಿತು ವಾರ ಪತ್ರಿಕೆಯೊಂದನ್ನು ಬಿಡಿಸುತ್ತಿದ್ದೆ. ಅಕ್ಕ ಅನುರಾಧ ಕಡಿಮೆ ಹಾಲು ಕರೆದುಕೊಂಡು ಬಂದಿರುವುದಕ್ಕೆ ಬಯ್ಯುತ್ತಾ ಬಂದವಳು, ‘ಏನೋ ಯಾವಾಗ್ಲೂ ಏನಾದ್ರೊಂದು ಕೈಲಿಲ್ಲದಿದ್ರೆ ಸಮಾಧಾನನೇ ಇರಲ್ಲ?” ಎನ್ನುತ್ತಾ, ‘ಕಾಫಿ ತಗೋ’ ಎಂದು ನನ್ನ ಪಕ್ಕದಲ್ಲಿ ಕುಕ್ಕಿ ಒಳಹೋದಳು.
ಎದುರು ಮನೆಯ ಸೌಮ್ಯ ಕಿಟಕಿಯ ಮೂಲಕ ನನ್ನನ್ನೇ ಗಮನಿಸುತ್ತಿರುವುದನ್ನು ಅರಿತು ತಲೆತಗ್ಗಿಸಿ ಓದುತ್ತಿರುವವನಂತೆ ನಟಿಸಿದೆ.
ಅಪ್ಪ, ಪಕ್ಕದ ರೂಮಿನಲ್ಲಿ ಅಮ್ಮನೊಂದಿಗೆ ಮಾತನಾಡುತ್ತಿದ್ದರು. ತಕ್ಷಣ ರಾತ್ರಿ ಸರೋಜಳನ್ನು ನನಗೆ ಕೊಡುವ ಬಗ್ಗೆ ಕೇಳಲು ಹೋದ ವಿಚಾರವೇ ಎಂದು ತಿಳಿಯಿತು. ಕಿವಿಯನ್ನು ನಿಮಿರಿಸಿ ಆಲಿಸಿದೆ. ಒಟ್ಟಾರೆಯಾಗಿ ಇಷ್ಟು ಸ್ಪಷ್ಟವಾಯಿತು. ನನ್ನ ಚಿಕ್ಕಪ್ಪ ಗಂಗಯ್ಯನಿಗೆ ಗಂಗಮ್ಮನನ್ನು ತಂದಿರೋದು ಅಕ್ಕನ ಮಗಳೆಂದು; ನನಗೆ ಸರೋಜಳನ್ನು ತರಬೇಕಾಗಿರುವುದು ಅತ್ತೆಯ ಮಗಳೆಂದು ಎರಡೂ ಸಂಬಂಧಗಳೂ ವೈಯಕ್ತಿಕವಾಗಿ ನೋಡಿದಾಗ ಸರಿಯಾದ ವೈವಾಹಿಕ ಸಂಬಂಧಗಳೇ, ಆದರೆ ಗಂಗಮ್ಮ ಮತ್ತು ಸರೋಜ ಅಕ್ಕತಂಗಿಯರು; ಒಂದೆದೆಯ ಹಾಲನ್ನೇ ಕುಡಿದವರು. ಆದ್ದರಿಂದ ಸರೋಜಳನ್ನು ನನಗೆ ತಂದುಕೊಂಡರೆ ಚಿಕ್ಕಮ್ಮನನ್ನೇ ಮದುವೆಯಾದಂತಾಗುತ್ತದೆ. ಇದು ಅಸಂಬದ್ಧ ಸಂಬಂಧವಾಗುವುದರಿಂದ ಮಹಿಮೇಗೌಡರು ತನ್ನ ಮಗಳನ್ನು ನನಗೆ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದರಂತೆ. ಈ ಸಂದರ್ಭದಲ್ಲಿ ಅಪ್ಪ ಅದೇನೋ ಅಂದರೆಂದು ಸ್ವಲ್ಪ ಮಾತಿನ ಚಕಮಕಿಯೂ ನಡೆಯಿತಂತೆ.
“ಬೇರೆ ಜಾತಿಯವಳನ್ನು ಮದುವೆಯಾಗಲು ಹೊರಟಾಗ ಹಂಗೆ ಹಿಂಗೆ ಅಂತ ಹೊಡೆಯಕ್ಕೆ ಬಂದಿದ್ದೆ, ಈಗ ಅತ್ತೆಯ ಮಗಳು, ಸಂಬಂಧ ನೆಟ್ಟಗೈತೆ ಅಂತ ಈ ಹುಡ್ಗೀನ ಇಷ್ಟಪಟ್ರೆ ಚಿಕ್ಕಮ್ಮ-ಗಿಕ್ಕಮ್ಮ ಅಂತ ಏನೇನೋ ಹೇಳ್ತಿದ್ದೀರಾ… ನಾನವಳನ್ನು ಮದ್ವೆ ಆಗೇ ಆಗ್ತಿನಿ…” ಎಂದು ಘೋಷಿಸುವುದೇ? ಅಥವಾ ಅವರು ಹೇಳಿದಂತೆ ಸಂಬಂಧಗಳನ್ನು ವಿಶ್ಲೇಷಿಸುತ್ತಾ, ಪುರಸ್ಕರಿಸುತ್ತಾ ಅವರು ತೋರಿಸಿದ ಹುಡುಗಿಯ ಕುತ್ತಿಗೆಗೆ ತಾಳಿ ಬಿಗಿಯುವುದೇ, ಯಾವುದು ಸರಿ? ಉಡುದಾರವನ್ನು ಬಿಚ್ಚಿ ಹಾಕುವ ಮೂಲಕ ಜಾತ್ಯಾತೀತ, ನಾಸ್ತಿಕನೆಂದು ಘೋಷಿಸಿಕೊಂಡ ನಾನು ಈ ಸಂಪ್ರದಾಯದ ನಿಷ್ಟುರಗಳಿಗೆ ತಲೆಬಾಗುವುದೆ?
ನನ್ನ ಮನಸ್ಸು ಹೆಚ್ಚು ಹೆಚ್ಚು ಸಂಕೀರ್ಣಗೊಳ್ಳುತ್ತಿತ್ತು.
ಪಕ್ಕದ ರೂಂನಲ್ಲಿದ್ದ ನನ್ನಪ್ಪನನ್ನು ಕುರಿತು, ‘ಆ ಹುಡ್ಗೀನ ಹೊಲೇರು, ಮಾದೀರು ಅಂತ ಹೀಗಳೆದಿರಿ. ಅವರಲ್ಲ ಹೊಲೇರು, ನೀವು, ನೀವು ಮಾದಿಗರು, ಸಂಬಂಧ ಎಂದು ಹೇಳಿ ಅಸಂಬದ್ಧವೆಂದೂ ಹೇಳುತ್ತೀರಿ. ಮಾತಿಗೆ ತಪ್ಪುತ್ತೀರಿ….’ ಎಂದೇನೇನೋ ಹೇಳಬೇಕೆಂದುಕೊಂಡೆ. ಆದರೆ ಈ ಮಾತಿಗೆ ಹಿಂದೆ ಸಿಕ್ಕಿದ್ದ ಪ್ರತಿಫಲವನ್ನು ನೆನೆದೋ ಏನೋ ಅಪ್ಪನ ಗಡಸು ಧ್ವನಿಯನ್ನು ಮೀರಲಾರದೇ ಈ ಮಾತುಗಳು ಗಂಟಲಲ್ಲೇ ಉಳಿದವು. ಕುತ್ತಿಗೆಯ ನರ ಉಬ್ಬಿ ಬಂದು, ತಡೆಯಲಾಗದೆ ದುಃಖದಿಂದ ಒತ್ತಲ್ಪಟ್ಟ ನೀರು ಕಣ್ಣಲ್ಲಿಳಿಯಿತು.
ಪತ್ರಿಕೆಯ ಪುಟಗಳು ತರಂಗದಂತೆ ಗಾಳಿಗೆ ತೇಲಾಡುತ್ತಿದ್ದವು. ಕಾಫಿ ತಣ್ಣಗಾಗಿತ್ತು. ತಲೆ ಎತ್ತಿದರೆ ಸೌಮ್ಯ ನನ್ನತ್ತಲೇ ನೋಡುತ್ತಿದ್ದಳು.
*****
(ಅಕ್ಟೋಬರ್ ೧೯೮೭)