ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು
ನಮ್ಮ ನಾಡಿನವರಲ್ಲ ಬಿಡು ಭಂಟನೆ
ಇಂದು ಜುಲೈ ಐದು, ಎರಡುಸಾವಿರದ ಹದಿನೈದು
ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ
ಈಗ ಹದಿಮೂರರ ಹರೆಯ ಮೂಡುತ್ತಿತ್ತು.
ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದಿದ್ದರೆ.
ಬಿಸಿಲನಾಡು ಗುಲಬರ್ಗಾದಿಂದ ಗುಳೆಹೋದ
ಹೊಟ್ಟೆಪಾಡಿನ ಹೆಣ್ಣುಮಗಳು ಕೌಸರ್‌ಬಾನು.
ಇಪ್ಪತ್ತೆರಡರ ಹರೆಯದ ತುಂಬು ಗರ್ಭಿಣಿ
ಕೌಸರಳ ಹೊಟ್ಟೆಗೆ ತ್ರಿಶೂಲದಿಂದ ತಿವಿದು
ಮಗುವ ಬಗೆದು ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ಅವರು ನಿನ್ನ ರಕ್ಷೆಯಲ್ಲಿರುವ ಏಜೆಂಟರು.
ತನ್ನ ಮಗುವಿನನೊಂದಿಗೆ ಸೆಲ್ಫೀ ಕ್ಲಿಕ್ಕಿಸಲು
ಕೌಸರ್‌ಬಾನು ಕೈಬೀಸಿ ಕರೆಯುತ್ತಿದ್ದಾಳೆ.
ವಿದೇಶಿಯರ ಅಪ್ಪುಗೆಯಲ್ಲಿ ಸೆಲ್ಫಿಗೆ ಪೊಜು
ಕೌಸರಳೊಂದಿಗೆ ಸೆಲ್ಫೀ ತೆಗೆಸಲು
ನಿನಗೆ ಮುಖವಿದೆಯೇ ಭಂಟನೇ?
ಸಂದರ್ಶನದಲ್ಲಿ “ಮನ್ ಕಿಬಾತ್” ಹೇಳುತ್ತೀ
‘ದಿಲ್ ಕೆ ಅಂದರ’ ಒಮ್ಮೆ ಇಣುಕಿ ನೋಡು
ಹೊಟ್ಟೆ ಸೀಳಿಸಿಕೊಂಡು ಒದ್ದಾಡುತ್ತಿದ್ದಾಳೆ ಕೌಸರ್
ಮಾನ ಪ್ರಾಣ ಉಳಿಸಲು ಮೊರೆಯಿಡುತ್ತಿದ್ದಾಳೆ.
ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದಾಳೆ.
ನಿನ್ನ ಕರ್ಣಗಳೇನು ಕೀವುಡಾದವೇ? ಧೈರ್ಯವಿದ್ದರೆ
ಅವಳೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿ ನೋಡು.
ದುಡಿದು ತಿನ್ನುವ ಕೌಸರಳ ಪಾಡಿದು.
ಶಾಸಕ ಎಹ್ಸಾನ್ ಜಾಫ್ರಿಗೂ ಕೊಂದಿರಿ
ಮಗಳು ತೀಸ್ತಾ ಕಟಕಟೆಗೆ ಕರೆಯುತ್ತಿದ್ದಾಳೆ.
ಗುಜುರಾತಿನ ಸೇತುವೆಯಡಿ ಶವದಬೆಟ್ಟವಿದೆ
ಆ ಕೊಳೆತ ಮೂಳೆಗಳು ಕೈಬೀಸಿ ಕರೆಯುತ್ತಿವೆ.
ಅವರೊಂದಿಗೆ ಒಂದು ಬಾರಿ ಒಂದೇ ಒಂದು ಬಾರಿ
ಸೆಲ್ಫೀ ಕ್ಲಿಕ್ಕಿಸಿ ನೋಡು ಚಹಾದಂಗಡಿಯವನೇ.
ಬೆಸ್ಟ್ ಬೇಕರಿಯ ಸುಟ್ಟ ಶವಗಳ ಹೊಗೆಯಲ್ಲಿ
ಕೆಟ್ಟ ಘಮಟು ವಾಸನೆಗೆ ಹೊಟ್ಟೆಯಲ್ಲಿ ತಳಮಳ
ಕೋಮು ಗಲಭೆಯಲಿ-ನೊಂದವರ ಕಣ್ಣೀರು
ಇಂದಿಗೂ ನಿಂತಿಲ್ಲ ದುಃಖದಲೆಗಳ ಅಬ್ಬರ
ನಿನ್ನ ಸೆಲ್ಫೀಯಲ್ಲಿ ಅವರ ಕಣ್ಣೀರ ಚಿತ್ರ
ಹೇಳಿ ನಾಯಕರೆ ಮೂಡಿ ಬರಲಾರದೇ?
*****

















