ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ
ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ
ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ
ಕೆಳೆಯ ನೋನೋಡೆಂದು ಸರಸ ಕೌತುಕದಿ
ನುಡಿಬೆರಳ ನೇವರಿಕೆಗಳವಡುವ ಹಲಕೆಲವ-
ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು
ಜೀವ ಜೀವದ ನಡುವೆ ಹರಿದೆನ್ನ ಜೀವವಿದು
ಪಡೆಯುತಿಹ ನಿರ್ ವೃತಿಯ ಚಿತ್ರ ಚಿತ್ರದೊಳು
ಹಿರಿಗಾಳಿ ಹೆಗ್ಗಡಲು ಬಯಲು ನೆಲ ಬೆಂಕಿಗಳಿಗೊಳಗ ನೀಡುವ ದಿವ್ಯದೇವಕುಲದಿ
ದೀಪ್ತಚಿತ್ತವ ಹೊಗುವ ವಿವಿಧಾನುಭೂತಿಗಳ ಕಾಂತಿಯೊಳು ನನ್ನೊಳಗ ಮೆರೆಯಿಸುವ ಭರದಿ.
*****

















