ಭೂಗರ್‍ಭಶಾಸ್ತ್ರಜ್ಞನೆತ್ತಿ ಹಿಡಿದನು ಕೊಳದ
ತಳಕಿರುವ ಶಿಲೆಯೊಂದ ಬಂಡೆಗಲ್ಲದು ಸವೆದು
ಹರಳಾದುದೆನ್ನುವನು, ಮತ್ತದರ ಮೇಲುಳಿದ
ಮರದ ಕಿರಿಯಾಕೃತಿಯದಿಂತು ಮುದಿಮರ ತವಿದು
ಕೊಳದ ನೀರಿನ ಕೆಳಗೆ ಬಿದ್ದಿರಲರೆಯ ಕೂಡಿ
ಕಾಲೋದಧಿಯ ಹೊನಲ ತೆರೆತೆರೆಗೆ ತಲೆಬಾಗಿ
ಕಾಲಾಂತರದಿ ಹರಳಮೇಲೆ ಚಿತ್ರವು ಮೂಡಿ
ನಿಂತಂತೆ ತೋರುವುದು! ಹಳೆಯದನೆ ಹೊನ್ನಾಗಿ-
ಸುತ್ತ ಕುದಿವನು ಜ್ಞಾನಿ ಮತ್ತೆ ವಿಜ್ಞಾನಿ ಸಹ!
ಕಾಮಾರ್‍ಧಧರ್‍ಮಮೋಕ್ಷಗಳ ಕುರಿತ ವಿಚಾರ-
ವೆಂದಿನಂತಿಹುದೆಂದು ನುಡಿಯೆ ಜನಸಂದೋಹ,-
ನಮ್ಮ ಜನಜೀವನವ ಮುತ್ತಿಹುದನಾಚಾರ!
ಹಳತೆಲ್ಲ ಕೊಳೆತಿರಲಿ; ಮತ್ತೆ ಮೊಳೆತೀತಂತೆ.
ಹೊಚ್ಚಹೊಸ ಬಾಳುವೆಯು ಬರಲಿ ಹೊಂಗನಸಂತೆ.
*****