ಕಾಡುತಾವ ನೆನಪುಗಳು – ೧೦

ಕಾಡುತಾವ ನೆನಪುಗಳು – ೧೦

ಕತೆಗಳನ್ನು ಬರೆಯುತ್ತಿದ್ದೆ, ಹಾಗೆ ಕಾದಂಬರಿಗಳನ್ನು ಓದುತ್ತೇನೆ ಎಂದಿದ್ದೆ ಅಲ್ವಾ? ಹಾಗೆಯೇ ಬರೆದಿದ್ದೆ. ನೀನೂ ಓದಿ ನಗಬೇಡ ತಿಳಿಯಿತಾ?

“ನನಗೆ ಚಂದ್ರ ಬೇಕಾಗಿರಲಿಲ್ಲ… ತಾರೆಗಳಿದ್ದರೆ ಸಾಕು… ನೋಡುತ್ತಾ ಆನಂದಪಡುತ್ತಿದ್ದೆ. ಆದರೆ ತಾರೆಗಳೂ, ಕಳಚಿ ಬಿದ್ದಿದ್ದವು. ಚಂದ್ರ, ತಾರೆಗಳಿದ್ದರೆ ತಾನೇ ಬೆಳದಿಂಗಳು. ನಾನು ಸಿಗಲಾರದ ವಸ್ತುವಿಗೆ ಕೈ ಚಾಚಿದರೆ ಹೇಗೆ. ಬರೆಯುತ್ತಿದ್ದ ಹಾಗೆಯೇ ಕಣ್ಣುಗಳಲ್ಲಿ ನೀರು ತುಂಬಿ ಬರುತ್ತಿದೆ. ಹೇಗೆ ಬರೆಯಲಿ? ರೆಪ್ಪೆಗಳು ಒದ್ದೆಯಾದರೆ ಹೇಗೆ ನಿದ್ದೆ ಮಾಡಲಿ? ನನ್ನ ಮುತ್ತಿನಂತಹ ಕನಸು ಒಡೆದು ಚೂರಾಗಿತ್ತು. ಕನಸೇ ಆಗಿದ್ದರೂ ಅದೂ ಅಪೂರ್ಣವಾಗಿ ಹೋಗಿಬಿಟ್ಟಿತ್ತು”.

ಹೀಗೆ ಬರೆಯುತ್ತಾ ಕಾಲ ಕಳೆಯುತ್ತಿದ್ದೆ. ಆದರೆ ಎಂ.ಡಿ. ಡಿಗ್ರಿ ಮಾಡಲು ಮತ್ತೆ ಕಾಲೇಜು ಸೇರಿದ್ದೆಯಲ್ಲವಾ? ಓದುವುದು, ಬರೆಯುವುದು ಜಾಸ್ತಿಯಿರುತ್ತಿತ್ತು. ಮನೆಯಲ್ಲಿದ್ದುದರಿಂದ ಅವ್ವನ ಹೆದರಿಕೆಯಿಂದ ಓದಲೇಬೇಕಾಗಿತ್ತು.

ಈ ಮಧ್ಯೆ ನನ್ನ ತಂಗಿಯ ಮದುವೆಯಾಯಿತು. ಅವ್ವಳಿಗೆ ಆಕೆಯ ಮದುವೆ ಮಾಡಿಸಲು ಅಷ್ಟು ಇಷ್ಟವಿರಲಿಲ್ಲ. ಎಲ್ಲರ ಹಣೆಬರಹ ಒಂದೇ ರೀತಿಯಲ್ಲಿ ಎಲ್ಲಿರುತ್ತದೆ? ತನ್ನಂತೆಯೇ ತನ್ನ ಮಕ್ಕಳು ಕಷ್ಟ ಪಡಬಾರದು ಎಂಬುದೊಂದೇ ಆಕೆಯ ಮನಸ್ಥಿತಿ ಇತ್ತು. ಎರಡನೆಯ ವರ್ಷದ ಡಿಗ್ರಿ ಓದುತ್ತಿದ್ದ ಅವಳನ್ನು ನರ್ಸಿಂಗ್ ಕೋರ್ಸಿಗೆ ಸೇರಿಸುವ ಆಸೆ ಆಕೆಗೆ ಯಾಕೆಂದರೆ ನನ್ನ ತಂಗಿ ಓದುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ನಾನೇ ಬೇಡವೆಂದೆ. ನಾನು ಮದುವೆಯಾಗೋದಿಲ್ಲ, ಮೊಮ್ಮಕ್ಕಳನ್ನು ಆಡಿಸುವ ಸುಖವನ್ನು ಅವ್ವ ಕಳೆದುಕೊಳ್ಳಬಾರದು ಎಂಬುದು ನನ್ನ ಆಶಯವಾಗಿತ್ತು. ಅವ್ವನಿಗೆ ಪರಿಪರಿಯಾಗಿ ವಿವರಿಸಿ ಹೇಳಿದ ನಂತರ ಆಕೆಯ ಮದುವೆಗೆ ಒಪ್ಪಿದ್ದಳು. ಮದುವೆಯೂ ಆಯಿತು. ಮೊಮ್ಮಕ್ಕಳ ಆಟ ಪಾಠಗಳಿಂದ, ಬಾಣಂತಿತನ ಮಾಡುವ ಆನಂದ ಸಂಭ್ರಮವನ್ನು ಅವ್ವ ಖುಷಿಯಾಗಿ ಮಾಡಿದ್ದಳು. “ನೀನು ಕೆಲಸ ಬಿಟ್ಟು ಬಿಡವ್ವ, ಹೇಗೂ ನಾನು ದುಡಿಯಲು ಹೋಗುತ್ತೇನಲ್ಲ…” ಎಂದಿದ್ದೆ. ನಾನು ಎರಡನೆಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿರುವಾಗ ತನ್ನ ಕೆಲಸಕ್ಕೆ ಅವ್ವ ರಾಜಿನಾಮೆ ಕೊಟ್ಟಿದ್ದಳು.

ನನಗೆ ಆ ಮೂರು ವರ್ಷದ ಸ್ನಾತಕೋತ್ತರ ಡಿಗ್ರಿಯ ದಿನಗಳು ನರಕ ಸದೃಶ್ಯವಾಗಿದ್ದವು. ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಮಗಳು, ಕೆಳಜಾತಿಯ ಬಡವಳು ನಾಳೆ ಡಿಗ್ರಿ ಮುಗಿಸಿದ ನಂತರ ತಮ್ಮ ಜೊತೆಗೆ ಕೆಲಸಕ್ಕೆ ಬರುವುದು ಇಷ್ಟವಿರಲಿಲ್ಲವೋ, ಅಥವಾ ಅವರುಗಳು ಇರುವುದೇ ಹಾಗೋ ಈಗಲೂ ನನಗೆ ಅರ್ಥವಾಗುತ್ತಿಲ್ಲ. ತುಂಬಾ ಕಿರುಕುಳಕೊಟ್ಟರು. ಮೈಸೂರಿನಲ್ಲಿ ಸಂತೋಷದಿಂದ ಡಿಗ್ರಿ ಪಡೆದು ಬಂದಿದ್ದ ನನಗೆ ಇದು ಅತಿ ಕ್ರೂರ ಎನ್ನಿಸತೊಡಗಿತ್ತು. ನಾನು ಏನು ಮಾಡಿದರೂ ತಪ್ಪನ್ನು ಹುಡುಕುತ್ತಿದ್ದರು. ಹೀಯಾಳಿಸುತ್ತಿದ್ದರು, ಅವಮಾನಿಸಿ ನಗುತ್ತಿದ್ದರು. ಅದೂ ಕುಹಕವಾಗಿ. ಆದರೂ ನಮ್ಮ ಮುತ್ತಿನಂತಹ Head of the Department ಡಾ|| ಮೀರಾ ಕಾಮತ್ ಅವರಿದ್ದುದರಿಂದ ಎಲ್ಲಾ ನೋವನ್ನು ನುಂಗಿಕೊಳ್ಳುತ್ತಿದ್ದೆ. ಅಂತಹ ವೈದ್ಯರು, ಶಿಕ್ಷಕರು ಮತ್ತೆಂದು ಹುಟ್ಟಲಾರರು, ಇರಲಾರರು ಕಣೆ. ನನ್ನ ಶಿಕ್ಷಕರ ಗುಂಡಿನಲ್ಲೊಬ್ಬ ಸ್ತ್ರೀಪೀಡಕನಿದ್ದ. ಅವನು ತನ್ನಂತಹ brilliant ಯಾರೂ ಇಲ್ಲ ಎಂದು ತಲೆಕುಣಿಸಿ, ಆ ಹೆಂಗಸರ ಮಧ್ಯೆ ಇದ್ದ. ಅವನು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನನ್ನ ಮನಸ್ಸಿಗೆ ಘಾಸಿಯಾಗುವಂತೆ ಮಾಡುತ್ತಿದ್ದ. ನನ್ನ ಹಣೆಬರಹಕ್ಕೆ ನನ್ನ ಆ ಡಿಗ್ರಿ ಪದವಿಗೆ ಅವನೇ ನನ್ನ ಗೈಡಾಗಿದ್ದ. ಇದುವರೆಗೂ ನಾನು ಬರೆದಿದ್ದ Dessertation ನನ್ನು ಚೆನ್ನಾಗಿಲ್ಲವೆಂದು ಸಹಿ ಮಾಡಲು ನಿರಾಕರಿಸಿದ್ದ. ಹಾಗೇ ನೋಡಿದರೆ ಅವನಂತೆಯೆ ಖ್ಯಾತ ವೈದ್ಯರಾಗಿದ್ದ, ಈಗವರಿಲ್ಲ, ಡಾ॥ ಇಂದುಮತಿಯೇ ನನಗೆ ಆ ಪ್ರಬಂಧ ಬರೆಯಲು ಸಹಾಯ ಮಾಡಿದ್ದರು. ಮೇಲಾಗಿ ಡಾ॥ ಮೀರಾಕಾಮತ್ ಸಹ ತಮ್ಮ ಒಪ್ಪಿಗೆ ಸೂಚಿಸಿದ್ದರು. ಆದರೆ ಆ ಸ್ತ್ರೀಪೀಡಕ ಏನೇನೋ ಸಬೂಬುಗಳನ್ನು ಹೇಳಿ ಸಹಿ ಮಾಡಲು ನಿರಾಕರಿಸುತ್ತಿದ್ದ. ಪ್ರಬಂಧವನ್ನು ಪದೇ ಪದೇ ತಿದ್ದಿ ಟೈಪ್ ಮಾಡಿಸಲು ನನಗೆ ಕಷ್ಟವಾಗುತ್ತಿತ್ತು. ಆರ್ಥಿಕ ಸಮಸ್ಯೆಯೂ ಆಗಿತ್ತು. ಹೆಚ್ಚು ಕಾಲ ತಿದ್ದಿ ಬರೆಯುವುದರಲ್ಲಿಯೇ ನನ್ನ ಸಮಯ ವ್ಯರ್ಥವಾಗುತ್ತಿತ್ತು. ಓದಲು ಸಮಯವೇ ಸಿಗುತ್ತಿರಲಿಲ್ಲ. ಚಿನ್ನು ಪರೀಕ್ಷೆಗೆ ಕೂಡುವ ಮೊದಲು ಈ ಪ್ರಬಂಧವು ಒಪ್ಪಿಗೆಯಾಗಬೇಕಿತ್ತು. ನನ್ನ ಸಂಯಮದ ಕಟ್ಟೆಯೊಡೆದಿತ್ತು. ಶೋಭಾಳಿಂದ ತಿದ್ದಿ ತೀಡಲ್ಪಟ್ಟಿದ್ದ ನಾನು ಸಮಾಧಾನವಾಗಿ, ತಾಳ್ಮೆಯಿಂದಿರಲು ತುಂಬಾ ಪ್ರಯತ್ನಿಸುತ್ತಿದೆ. ಆದರೆ ನನ್ನ ತಾಳ್ಮೆಯ ಬೆಟ್ಟ ಸಿಡಿದಿತ್ತು.

ಒಂದು ದಿನ,

ಅವರೆಲ್ಲರೂ, ಎಲ್ಲಾ ಶಿಕ್ಷಕ ವರ್ಗದವರು ಮೇಡಂ ಛೇಂಬರಿನಲ್ಲಿ ಮೀಟಿಂಗ್‌ನಲ್ಲಿದ್ದರು. ನಾನು ಪ್ರಬಂಧ ಬರೆದಿದ್ದ ಫೈಲನ್ನು ಕೈಗೆತ್ತಿಕೊಂಡು ಸೀದಾ ಛೇಂಬರಿಗೆ ಗೂಳಿಯಂತೆ ನುಗ್ಗಿದೆ. ರೌದ್ರಕಾಳಿ ನನ್ನನ್ನು ಆವರಿಸಿದ್ದಳು ಅವಾಹಿತಳಾಗಿದ್ದಳು. ಕೈಯಲ್ಲಿ ಪೇಪರುಗಳಿದ್ದ ಫೈಲನ್ನು ಅವರ ಮುಂದೆ ಎಸೆದೆ.

“ನೀವು ಕೊಡುವ ಡಿಗ್ರಿಯಿಂದ ನಾನು ಬದುಕಬೇಕಿಲ್ಲ, ನನ್ನ Basic Degree M.B.B.S. ಇದೆ. ಅದರಲ್ಲಿಯೇ ನನಗೆ ನೌಕರಿಯೂ ಸಿಕ್ಕಿದೆ. ಬೇಕಾದ್ರೆ ನೀವೇ ಓದ್ಕೊಳ್ಳಿ. ಯಾರಿಗೆ ಬೇಕಾಗಿದೆ ನಿಮ್ಮ, ನೀವು ನೀಡುವ ಈ ಡಿಗ್ರಿ” ಎಂದವಳೇ ಬುಸುಗುಟ್ಟುತ್ತಾ ಹೊರಗೆ ಬಂದಿದ್ದೆ. ನನ್ನ ತಾಳ್ಮೆ ಸಹನೆಯ ಪೊರೆ ಬಿಚ್ಚಿ ಹೋಗಿತ್ತು. ಭಂಡ ಧೈರ್ಯದ, ಹಸೀ ಮೈಯಿ ಹೊರಗೆ ಬಂದಿತ್ತು. ಆ ಕ್ರೋಧ, ದಿಟ್ಟತನ ಇಂದೂ ಮಾಯವಾಗಿಲ್ಲ. ಹಾಗೆಯೇ ಇರಬೇಕೆಂದು ಬದುಕು ನನಗೆ ಪಾಠ ಕಲಿಸಿತ್ತು.

ಸೀದಾ ಮನೆಗೆ ಬಂದು ಮುಸುಕು ಹೊದ್ದು ಮಲಗಿಬಿಟ್ಟೆ ಕಣ್ಣೀರು ಬತ್ತಿ ಹೋಗಿತ್ತು. ಒಳಗಿನ ಹಳ್ಳುರಿಯಲ್ಲಿ ಹಿಂಗಿ ಹೋಗಿತ್ತು. ನಾನು ಅವರ ಮುಖದ ಮೇಲೆ ಪೇಪರುಗಳನ್ನು ಎಸೆದು ಬಂದಿದ್ದ ವಿಷಯ ಇಡೀ ಆಸ್ಪತ್ರೆಗೆ ಮಿಂಚಿನಂತೆ ಹರಡಿತ್ತು. ಅವ್ವನಿಗೆ ಏನೂಂತ ಹೇಳಲಿ? ವಿಷಯ ತಿಳಿದ ಅವ್ವ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಿದ್ದಳು.

“ಥಿಯರಿ ಪರೀಕ್ಷೆ ಬರೆದು ಹೋಗು, ಉಳಿದದ್ದನ್ನು ನಾನು ನೋಡಿ ಕೊಳ್ಳುತ್ತೇನೆ…”-ಎಂದು ಪ್ರೊಫೆಸರ್ ಮೀರಾ ಕಾಮತ್ ಹೇಳಿ ಕಳುಹಿಸಿದ್ದರು. ನಾನು ಅವರ ಮಾತುಗಳನ್ನು ನಿರಾಕರಿಸುವಂತಿರಲಿಲ್ಲ. ಹೋಗಿ ಥಿಯರಿ ಪರೀಕ್ಷೆಯನ್ನು ಬರೆದು ಬಂದು, Practicals ಗೂ ಬಲವಂತದಿಂದ ಹೋಗಿ ಬಂದಿದ್ದೆ ಪಾಸಾಗುವುದರ ಬಗ್ಗೆ ನನಗೆ ಎಳ್ಳಷ್ಟು ನಂಬಿಕೆಯಿರಲಿಲ್ಲ. ಯಾಕೆಂದರೆ, ‘ನಾನು ಅವಮಾನಿಸಿ ಬಂದಿದ್ದ ಶಿಕ್ಷಕರ ಗುಂಪು ನಮ್ಮ Practical ಪರೀಕ್ಷೆಯಲ್ಲೂ ಇತ್ತು. ಖಂಡಿತವಾಗಿಯೂ ನನ್ನವರು ಪಾಸಾಗಲು ಬಿಡುವುದಿಲ್ಲವೆಂಬ ಗಾಢವಾದ ನಂಬಿಕೆಯಿತ್ತು. ಅಷ್ಟರಲ್ಲಿ ಸ್ನಾತಕೋತ್ತರ ಪದವಿಗೆ ಸೇರುವ ಮುನ್ನ ಮಹಿಳಾ ವೈದ್ಯಾಧಿಕಾರಿಗಳಿಗೆ Application ಹಾಕಿದ್ದೆನಲ್ಲ, ಆ ಸರ್ಕಾರಿ ಕೆಲಸ ನನಗೆ ಸಿಕ್ಕಿತ್ತು. ಸಿಕ್ಕ ನಂತರ ಆ ಕೆಲಸಕ್ಕೆ ಸೇರಲು ಮೂರು ವರ್ಷಗಳ ‘Study Leave ಹಾಕಿದ್ದಾಗಿತ್ತು. ಅಷ್ಟರಲ್ಲಿ ಆ ಅವಧಿಯೂ ಮುಗಿದು ಹೋಗಿದ್ದು, ನಾನು ಸರ್ಕಾರಿ ಕೆಲಸಕ್ಕೆ ಸೇರಬೇಕಿತ್ತು. ತಾಲ್ಲೂಕು ಪ್ರದೇಶಗಳಲ್ಲಿ ಮೂರು ವರ್ಷಗಳ ಸೇವೆಯನ್ನು ಮಾಡಬೇಕಿತ್ತು. ನಾನು ಹೋಗಿ ಸರ್ಕಾರಿ ಕೆಲಸಕ್ಕೆ ಅನುಮತಿ ಪಡೆದಿದ್ದೆ. ನನಗೆ ‘ಮಹಿಳಾ ವೈದ್ಯಾಧಿಕಾರಿಯಾಗಿ’ Posting ಸಹಾ ಸಿಕ್ಕಿತು. ಅದೂ ನನ್ನ ಊರಿಗೆ ಹತ್ತಿರದಲ್ಲಿ.

ಈ ಗೊಂದಲಗಳ ನಡುವೆ ನನ್ನ ಪರೀಕ್ಷಾ ಫಲಿತಾಂಶ ಬಂದಿದ್ದು, ನಾನು D.G.O ಡಿಗ್ರಿಯಲ್ಲಿ ಪಾಸಾಗಿದ್ದೆ ಅಷ್ಟೇ ಸಾಕಾಗಿತ್ತು ನನಗೆ. ಎಂದೆಂದೂ ಬಿಟ್ಟು ಬಂದಿದ್ದ ಆ ಆಸ್ಪತ್ರೆಗೆ ಕಾಲಿಡಲಿಲ್ಲ.

ಮಹಿಳಾ ವೈದ್ಯಾಧಿಕಾರಿ ಕೆಲಸಕ್ಕೆ ಸೇರಿಕೊಂಡೆ ಅವ್ವನಿಗೆ ತುಂಬಾ ಸಂತೋಷವಾಗಿತ್ತು. ಅವಳ ಕನಸು ನನಸಾಗಿತ್ತು. ನನಗೂ ಸಮಾಧಾನ, ಸಂತೋಷವಾಗಿತ್ತು. ಅವ್ವನಿಗೆ ತನ್ನ ಕೆಲಸ ಬಿಡುವಂತೆ ಹೇಳಿದ್ದೆನಲ್ಲ? ರಾಜೀನಾಮೆ ಒಪ್ಪಿಗೆಯಾಗಿ, ಅವ್ವ ಕಳೆದ ರಜೆಯ ದಿನಗಳನ್ನು ಕಳೆದು ಅಂತೂ ಆಕೆಗೆ Pension ಅಂದರೆ ನಿವೃತ್ತಿ ವೇತನ ಬರುವ ಕಾರ್ಯ ನಿಧಾನವಾಗಿಯಾದರು ಸರಿಯಾಗಿತ್ತು. ನನಗೀಗ ಯಾವ ಗುಂಗುಗಳು ಉಳಿದಿರಲಿಲ್ಲ. ಎಲ್ಲವೂ ಹಠದ ರೂಪದಲ್ಲಿ ಬದಲಾಗಿತ್ತು. ನಾನು ಒಳ್ಳೆಯ ವೈದ್ಯೆಯೆಂದು ಮೊದಲು ಸಾಬೀತುಪಡಿಸಬೇಕಿತ್ತು. ನನ್ನನ್ನು ಅವಹೇಳನ, ಅವಮಾನ ಮಾಡಿದವರಿಗೆ ದೃಢಪಡಿಸಬೇಕಿತ್ತು. ಬರೀ ವೈದ್ಯರಾಗುವುದಲ್ಲ. ಸೋಲಿನ ನೋವುಂಡವರು ವೃತ್ತಿ ಬದುಕಿನಲ್ಲಿ ‘Gold Medal’ ತೆಗೆದುಕೊಳ್ಳಬಹುದೆಂದು ನಿರೂಪಿಸಬೇಕಾಗಿತ್ತು. ಏನನ್ನು ಬೇಕಾದರೂ ಸಹಿಸಿಕೊಳ್ಳುತ್ತಿದ್ದೆ. ಆದರೆ ಅವಮಾನವನ್ನಲ್ಲ.

ನನ್ನ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಬಂದ ರೋಷ ಸಾಮಾನ್ಯವಾಗಿರಲಿಲ್ಲ ಚಿನ್ನೂ. ಅವಮಾನ, ಮೂದಲಿಕೆಯಿಂದ ತುಂಬಿತ್ತು. ಎಲ್ಲದರಲ್ಲೂ ‘ಕೀಳು’ ಎಂದು ತೋರಿಸುವ ಷಡ್ಯಂತರ ನಡೆದಿತ್ತು. ನಾನು ಅಂದು ಪ್ರಕಟಿಸಿದ ರೋಷದಿಂದ ಪೊರೆಯೊಂದನ್ನು ಬೆಳೆಸಿಕೊಳ್ಳುವಾಗ ಅದಕ್ಕೆ ಧೈರ್ಯ ಹಠ, ಛಲ, ಎಂಥಾದ್ರು ಸರಿ, ಎದುರಿಸುವ ಗಟ್ಟಿತನವನ್ನು ತುಂಬಾ ತೊಡಗಿದ್ದೆ. ಆದರೆ ಮೂಲಭೂತವಾಗಿ ಬಂದಿದ್ದ ಕರುಣೆ, ಮಾನವೀಯತೆಯನ್ನು ಮರೆತಿರಲಿಲ್ಲ.

ಪ್ರೀತಿ-ಪ್ರೇಮ ಎಲ್ಲವನ್ನು ‘Passing Cloud’ ಎನ್ನುವಂತೆ ಮರೆಯತೊಡಗಿದ್ದೆ. ಆದರೂ ಅದು ಆಗಾಗ್ಗೆ ನೆನಪಾಗಿ ಕಾಡುತ್ತಿತ್ತು. ಅದೂ ನಾನು ಒಂಟಿಯಾಗಿದ್ದ ರಾತ್ರಿಗಳಲ್ಲಿ ಮಾತ್ರ. ಸಮಯ ಸಿಕ್ಕರೆ ನಾನು ನನ್ನ ವೈದ್ಯಕೀಯ ಪುಸ್ತಕಗಳನ್ನು Reference ಗಾಗಿ ಓದುತ್ತಿದ್ದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಲಾವೃಕ್ಷ
Next post ಸಾವು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…