ನಾನೆ ಗೋಪಿಕೆ ಬಾರೊ ಗೋಪನೆ
ನೋಡು ಚಂದನ ಜಾರಿವೆ
ಗುಡ್ಡ ಬೆಟ್ಟದ ಗಾನ ಹಕ್ಕಿಯ
ಕಂಠ ಕೊರಗಿ ಸೊರಗಿದೆ
ಮಳೆಯ ನೀರಿಗೆ ಹಸಿರು ಹಸಿದಿದೆ
ಹನಿಯ ರೂಪದಿ ಚುಂಬಿಸು
ಮಂದ ಗಾಳಿಯು ಸೋತು ನಿಂದಿದೆ
ಗಂಧ ರೂಪದಿ ನಂಬಿಸು
ನೋಡು ಕಡಲಿನ ಕನ್ಯೆ ಬಂದಳು
ಗೆಜ್ಜೆ ಜಾರಿ ನಿಂದಳು
ನೆಲದ ದೇವತೆ ವನ ಮಯೂರಿಕೆ
ಕೂಗಿ ಕರೆದು ನೊಂದಳು
ನನ್ನ ಸುತ್ತಮುತ್ತ ನೋಡು
ಕಾಯ ಕಾಂಚನ ಕಾಡಿದೆ
ಕಾಮ ಮೋಹದ ಮಾಯ ಗೂಳಿಯು
ದಾಳಿ ಮಾಡಿ ತುಳಿದಿದೆ
ಗೋಪಿವಲ್ಲಭ ಗೋಪಿನಾಥನೆ
ಕುಣಿದು ಬಾರೊ ಮೆಲ್ಲನೆ
ಮಳೆಯು ಹೊಳೆಯು ಬೆಳೆಯ ರೂಪದಿ
ಚಿಮ್ಮಿ ಬಾರೊ ಝಲ್ಲನೆ
*****