‘ಶ್ರಾವಣ’ ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿರಾಡುವಾಗ ಇಳೆ ಸುಂದರವಾಗಿ ಕಾಣುತ್ತಾಳೆ.
ಶ್ರಾವಣ ಎಂದರೆ ಕೇಳುವಿಕೆಗೆ ಸಂಬಂಧಿಸಿದಂತೆ ಈ ಮಾಸದಲ್ಲಿ ಎಲ್ಲಿ ನೋಡಿದರಲ್ಲಿ ಪೂಜೆ, ಪಠಣ, ಪ್ರವಚನ, ಪುರಾಣ ವಾಚನಗಳು ನಡೆದು ವಸುಂಧರೆಯು ಪೂಜ್ಯನೀಯ ಭಾವದಲ್ಲಿ ಮಡಿವಂತಿಕೆಯಲ್ಲಿ ಕಂಗೊಳಿಸುತ್ತಾಳೆ.
ರೈತರು ಹೊಲಗಳಿಗೆ ಬೆಳೆಗಳಿಗೆ ದರ್ಶಿಸಲು ಉತ್ಸಾಹದಿಂದ ತೆರಳುವಾಗ ಪುಟ್ಟ ಪುಟ್ಟ ಮಕ್ಕಳು ಮೋಡಕ್ಕೆ ರಂದ್ರ ಬಿದ್ದ ಹಾಗೆ ಸುರಿಯುತ್ತಿರುವ ಮಳೆಯಲ್ಲಿ ತೋಯ್ದಿಕೊಂಡು ಅಲೆದಾಡುವುದು ಕಂಡರೆ ಹಬ್ಬದ ವಾತಾವರಣ ಎನಿಸುತ್ತಿದೆ.
ಮಳೆರಾಯ ಮೋಡಗಳ ಮೇಲೆ ಸವಾರಿ ಮಾಡಿ ಎಲ್ಲೆಂದರಲ್ಲಿ ಸುರಿದು ತಂಪನ್ನು ಎಸಗಿ ಗಿಡ-ಮರಗಳಿಗೆ ಜೀವಾಮೃತವಾಗುವಂತೆ ಮೆರೆಯುವನು. ಶ್ರಾವಣ ಸೋಮವಾರ, ಶುಕ್ರವಾರ, ಶನಿವಾರಗಳು ಹಿಂದು ಜನರಿಗೆ ಪವಿತ್ರ ದಿನಗಳಾಗಿ ದೇವರ ದರುಶನಕ್ಕಾಗಿ ಜನರು ಮಂದಿರಗಳಲ್ಲಿ ಸಾಲು ಸಾಲಾಗಿ ಧಾವಿಸುತ್ತಾರೆ.
ಈ ಮಾಸದಲ್ಲಿ ಬರುವ ನಾರಿಯರ ದೊಡ್ಡ ಹಬ್ಬ ನಾಗರ ಪಂಚಮಿಯಂತೂ ಮಹಿಳೆಯರಿಗೆ ಖುಷಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಹೊಸ ಸೀರೆ ಅಂಬರಗಳನ್ನು ತೊಟ್ಟು ಹೂ ಮುಡಿದುಕೊಂಡು ಗುಂಪಾಗಿ ನಾರಿಯರು ನಾಗದೇವನ ಪೂಜೆಗೆ ತೆರಳುವುದಾಗಲಿ, ಮಹಾಲಕ್ಷ್ಮಿಯ ಪೂಜೆ ಮಾಡುವುದಾಗಲಿ, ದೇವ ಮಂದಿರಗಳಲ್ಲಿ ವಿಜೃಂಭಣೆಯಿಂದ ಭಜಿಸುವುದಾಗಲಿ ಲವಲವಿಕೆಗೆ ಪಾತ್ರವಾಗುತ್ತದೆ. ಇದೇ ಮಾಸದಲ್ಲಿ ಬರುವ ರಕ್ಷಾ ಬಂಧನ ಪೂರ್ಣಿಮೆ ಅಣ್ಣ-ತಂಗಿಯರ ಪ್ರೀತಿಗೆ ಹೊಸ ಇತಿಹಾಸ ಬರೆಯುತ್ತದೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರ ಸೀರೆಯುಟ್ಟ ವಸುಂಧರೆ ಕಂಗೊಳಿಸುವಾಗ ರೈತರು, ಮಕ್ಕಳು, ಸಂತರು, ಭಕ್ತರು, ಸಾಮಾನ್ಯ ಜನರು ಶ್ರಾವಣ ಮಾಸ ಮೈ ಮನಗಳಲ್ಲಿ ತುಂಬಿಕೊಂಡು ರಮರಮಿಸುತ್ತಾರೆ. ಅಂತಲೆ ಅನೇಕ ಕವಿಗಳು ಶ್ರಾವಣದ ಧಾವಂತವನ್ನು ಎದೆ ತುಂಬಿ ಹಾಡಿದ್ದಾರೆ. ಕವಿ ರಾಮಮೂರ್ತಿಯವರು ಇಂಥ ಶ್ರಾವಣದ ನಿಸರ್ಗ ಕಂಡು
ಚನ್ನಿಗರು ಚಲುವೆಯರು ಕಿಲಕಿಲನೆ ನಗುವ ಬೀರಿ
ತಾವರೆಯ ಮೊಗವರಳಿ ಗೆಯ ಸಿರಿಕಂಪ ಬೀರಿ
ನಾ ಮುಂದು ತಾ ಮುಂದು ಎಂದೆಲ್ಲ ಹಿಗ್ಗಿ ಬರಲು
ಕಾವ್ಯಗಳ ಕಟ್ಟೊಡೆದು ಕನ್ನಡ ಸಾಹಿತ್ಯ ಬೆಳಗಲು…
ಎಂದು ಎದೆ ತುಂಬಿ ಹಾಡಿರುವುದು ನಿಜಕ್ಕೂ ಶ್ರಾವಣದ ಐಸಿರಿ ನಿಸರ್ಗದ ಅಚ್ಚರಿ.
*****