ಪೂರ್‍ವ ವಧುವಿನ ಮನೆಗೆ ಕೊಳ್ಳೆ ಹೊಡೆದರೂ ಸುರರು!
ಸಾಂದ್ರನಂದನವನದಿ ಕಾಳ್ಗಿಚ್ಚು ಕತ್ತಲೆಯ-
ನಣಕವಾಡುತಲಿತ್ತೊ ! ಆದಿಪ್ರಭೆ ಬತ್ತಲೆಯ
ಬೆಡಗಿನಲಿ ಕಂಡಿತ್ತೋ ! ಮದುವೆಯಲ್ಲಿ ಕಿನ್ನರರು
ಹಿಡಿದಿರುವ ಹಿರಿಹಿಲಾಲುಗಳ ಬೆಳಕಿನ ವಸರು
ನಭದಲಿಂತೆಸೆದಿತ್ತೊ ! ಸುರಹೊನ್ನಿಗಳ ತಲೆಯ
ತರಿದೊಟ್ಟಿ ಕೂಡಿಸಿದ ಹೊನ್ನ ರಸದೋಕುಳಿಯ-
ನೆರಚಿದಂತಾಗಿತ್ತೊ, – ಚಂದ್ರೋದಯದ ಒಸರು !
ಕಳ್ಳು ಕುಡಿದ ಪ್ರಮತ್ತ ಪ್ರಮದೆಯರ ಮುಖಮುದ್ರೆ-
ಯನು ತಳೆದು ಮೆಲ್ಲನುದಯಿಸಿ ಬಂದ ಚಂದ್ರಮನು!
ತನ್ನ ಬರವನೆ ಕಾಯ್ವ ಕಣ್ಣು – ಕನ್ನೈದಿಲೆಯ
ಸಾಸಿರವ ಕಂಡು ಕನಸನು ತೊರೆದು ಸುಖನಿದ್ರೆ-
ಯನು ಮರೆದು, ಓಲಗಿಸಲೆಂದು ಬಂದಿರುವರನು
ಓಲಾಡಿಸಿದ ಕಾಂತನಾಗಿ ಪಾಲಿಸುತಿಳೆಯ!
*****