ಬದುಕು
ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ
ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ
ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ
ಶೂರನೇ ಶಿವಶರಣ ಮುದ್ದುಕಂದ
ಶರಣ
ಮೂರ್‍ಹೊತ್ತು ಮಡಿಸ್ನಾನ ಉಪವಾಸ ವನವಾಸ
ಯಾವ ಆಯಾಸಕ್ಕು ಶರಣನಿಲ್ಲ
ಉಂಡು ನಕ್ಕವ ಶರಣ ಉಟ್ಟು ನಕ್ಕವ ಶರಣ
ಜನತತ್ತ್ವ ಶರಣತ್ವ ಮುದ್ದುಕಂದ
ಸಿನಿಮಾ
ಪ್ರೇಮವೆಂಬುದು ಮಾನ ಮೌನ ಮಂದಿರ ಗಾನ
ಸಿನಿಮಾದ ಶೈಲಿಯಲಿ ಜಾರಬೇಡ
ನಿನ್ನ ಸಿನಿಮಾದೊಳಗ ನೀನೊಬ್ಬ ಡೈರೆಕ್ಟರ
ನೀನಾಗು ಯಾಕ್ಟರ ಮುದ್ದುಕಂದ.
ಙಾನ
ತೆಂಗಿನಾ ಎಳನೀರು ಮುಗಿಲ ಲೋಕದ ಖೀರು
ನೀ ಕುಡಿದು ನೋಡೊಮ್ಮೆ ಪುಟ್ಟ ಕಂದ
ತೆಂಗಿನಾಚೆಯ ತೆಂಗು ಜ್ಞಾನವೃಕ್ಷದ ಗುಂಗು
ಕುಡಿಯ ಬಲ್ಲೆಯ ಕಂದ ಮುದ್ದುಕಂದ
*****