ನಾನು ಸರಕಾರಿ ನೌಕರಿಯನ್ನು ಮೊದಲು ಕೈಕೊಂಡದ್ದು ಉಪಾಧ್ಯಾಯನಾಗಿ, ಕಡೆಗೆ ಕೆಳಗಿಟ್ಟದ್ದು ಉಪಾಧ್ಯಾಯನಾಗಿ; ಇವೆರಡರ ನಡುವೆ ಮಾತ್ರ ಚಿಕ್ಕದೊಂದು ಅವಧಿಯು ಕಡುಬಿನೊಳಗಣ ಹೂರಣದಂತೆ ಮಧ್ಯಸ್ಥವಾಗಿತ್ತು. ಈ ಕಾಲಾವಧಿಯ ಹದಿನಾಲ್ಕು ವರ್ಷಗಳಲ್ಲಿ ನಾನು ನಮ್ಮ ಜಿಲ್ಲೆಯ ಗ್ರಾಮಗಳನ್ನು ಸುತ್ತಾಡಿ ಹಳ್ಳಿಯ ಶಾಲೆಗಳನ್ನು ನೋಡಿದ ವೇಳೆ ನನ್ನ ಲಕ್ಷಕ್ಕೆ ಬಂದಿದ್ದ ಹಳ್ಳಿಯವರ ರೀತಿ, ಅಯ್ಗಳರ ಚರ್ಯೆ, ಮಕ್ಕಳ ಮಾತು ಇವನ್ನು ನನ್ನ ಮನಸ್ಸು ಈಗಲೂ ನೆನವರಿಸಿ, – ಮುಪಿನ ಮೇಬಳ್ಳಿಗೆ ಸಿಲುಕಿ ಬಿದ್ದಲ್ಲೇ ಬಿದ್ದುಕೊಂಡಿದ್ದರೂ, – ಆ ನೆನಹುಗಳನ್ನು ಮತ್ತು ಮತ್ತು ಈಚೆಗೆ ತಂದು ಮಲುಕಾಡುವುದಕ್ಕೆ ಬಯಸುತ್ತಿದೆ.
ನನ್ನ ಸರ್ವಿಸ್ ಜಾತಕದ ಮೇರೆಗೆ ನನಗೆ ಮಂಗಳೂರು ಗವರ್ನಮೆಂಟ್ ಕಾಲೇಜಿನಲ್ಲಿ ಹನ್ನೊಂದು ವರ್ಷಗಳ ತನಕ ಹಿಡಿದಿದ್ದ ಅಧ್ಯಾಪಕನ ಸ್ಥಿರಗತಿ ತಪ್ಪಿ, ೧೯೦೬ ರಲ್ಲಿ ಗ್ರಾಮ ಸಂಚಾರದ ಗ್ರಹಗತಿ ಪ್ರಾಪ್ತವಾಯಿತು. ಅದೇ ವರ್ಷ ಗ್ರಾಮ ಶಾಲೆಗಳ ವಿಚಾರವೇದಿಕೆಗೆ ಇದ್ದ ‘ಡೆಪ್ಯುಟಿ ಇನ್ಸ್‍ಪೆಕ್ಟರ್’ ಎಂಬ ಹಳೆಯ ಹೆಸರು ಹೋಗಿ, ‘ಸಬ್ ಎಸಿಸ್ತಾಂಟ್’ ಎಂದು ಹೊಸ ನಾಮಕರಣವಾಯಿತು. ಇದರಿಂದ ಆ ಪದವಿಯ ಮಾನಮನ್ನಣೆಗೆ ಬಹುಶಃ ಯಾವ ಕೊರತೆಯೂ ಬಂದಿರಲಿಲ್ಲ. ಮನ್ನಣೆ ಕಡಮೆ ಯಾದದ್ದು ಇದ್ದರೆ, ಅದು ಜಾಗದ ಹೆಸರಿನ ಬದಲಾವಣೆಯಿಂದಲ್ಲ; ಅದರ ಕಾರಣವೇ ಬೇರೆ. ಹಿಂದಕ್ಕೆ ಗುತ್ತಿನ ಪಟೇಲಿಕೆ, ಗ್ರಾಮದ ಶ್ಯಾನುಭೋಗಿಕೆ, ತಾಲ್ಲೂಕು ಗುಮಾಸ್ತಿಕೆ, ಪೊಲೀಸ್ ಕೈದುಗಾರಿಕೆ ಹೀಗೆ ಜುಜಿಬಿ ಸರಕಾರ ಕೆಲಸಕ್ಕೆ ಪ್ರಾಯ್ಮೆರಿ ಪರೀಕ್ಷೆಯ ಪಾಸು ಪಡಿಯಲೇಬೇಕಾಗಿತ್ತು. ೧೯೦೪ರಲ್ಲಿ ‘ಇಂದಿನಿಂದ ಈ ಪ್ರಾಯ್ಮೆರಿ ಪರೀಕ್ಷೆ ವಜಾ ಆಗಿದೆ, ಪಾಸಿನ ಪ್ರಸಾದದಿಂದ ಫಲವಿಲ್ಲ’ ಎಂದು ಸರಕಾರದ ನುಡಿಕಟ್ಟಾಯಿತು; ಇದರಿಂದ ಸರ್ಟಿಫಿಕೇಟಿನ ಪ್ರಭಾವವು ನಿಂತುಹೋಗಿ, ಶಾಲಾ ಇಲಾಖೆಯವರು ಹಳ್ಳಿಯ ಮಕ್ಕಳಿಗೆ ಹಂಚುತ್ತಲಿದ್ದ ಶ್ರೀಮುಡಿ ಗಂಧಪ್ರಸಾದ ಮೇಲೆ ಹಳ್ಳಿಯವರಿಗಿದ್ದ ಪೂರ್ವದ ಭಕ್ತಿ ವಿಶ್ವಾಸಗಳು ಕಡಮೆಯಾದುವು.
ನಾನು ‘ಸಬ್ ಎಸಿಸ್ತಾಂಟನ’ ಸ್ಥಳದಲ್ಲಿ ಕಾಲಿಟ್ಟಾಗ ಹಳ್ಳಿಯ ಉಪಾಧ್ಯಾಯರ ಹಿಂದಿನ ಹಲವು ಸಂಪ್ರದಾಯಗಳು ಉದುರಿಹೋಗಿ, ಹೂವಿನ ಎಡೆಯಲ್ಲಿ ಒಣ ಎಲೆ ಮಾತ್ರವೇ ಉಳಿದಿತ್ತು. ಮರ್ಯಾದೆಯಲ್ಲಿ ಹಿಂದಿನಷ್ಟು ವಿಜೃಂಭಣೆ ಇಲ್ಲ. ಮುಂಚೆ ಕೊಂಬು, ಕಹಳೆ ಇರುವಲ್ಲಿ ಈಗ ಕೈಮುಗಿತ, ನಜರು ಕಾಣಿಕೆ ಕೊಡುವಲ್ಲಿ ಎಳನೀರು, ‘ಸ್ವಾಮಿ! ದೇವ್ರು!’ ಎಂದು ಸಂಬೋಧಿಸುವಲ್ಲಿ ‘ಹೌದು ಸೆರ್, ಇಲ್ಲ ಸಾರ್’ – ಇಷ್ಟಕ್ಕೆ ಇಳಿದಿತ್ತು. ‘ಈಗ ಶಾಲೆಯವರಿಗೆ ಹಳ್ಳಿಯಲ್ಲಿ ಮುಂಚಿನ ಭರಮು ಇಲ್ಲ, ಸೆರ್! ಪ್ರಾಯ್ಮರಿ ಇದ್ದಾಗ ಕೈತುಂಬಾ ಗ್ರೇಂಟ್ ಹಣ ಹಂಚುತ್ತಿದ್ದರು; ಮರ್ಯಾದೆಯೂ ಬರುತ್ತಿತ್ತು. ಈಗ ಹೆಸರು ಮಾತ್ರ ದೊಡ್ದದು – ಸಬ್ ಅಶಿಶ್ಟಾಂಟ್ ಇನ್ಸ್‍ಪೇಟರ್! ಯಾರು ಮೂಸುತ್ತಾರೆ, ಶೆರ್?’ ಈ ರೀತಿಯ ಉಪಾಧ್ಯಾಯರ ಅಭಿಪ್ರಾಯವನ್ನೇ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ನನ್ನ ಮುಂದೆ ಕಾರ್ಯರೂಪವಾಗಿ ಮಾಡಿ ತೋರಿಸಿದ ಸಂಗತಿ ನನ್ನ ನೆನಪಿನಲ್ಲಿದೆ.
ನಾನು ಒಂದು ದಿನ ಮಧ್ಯಾಹ್ನ ಗುಡ್ಡದ ಪದವಿನಿಂದ ಕೆಳಗಿನ ಬಯಲಿಗೆ ಇಳಿಯುತ್ತಿದ್ದುದನ್ನು ಆ ದೊಡ್ಡ ಮನುಷ್ಯರು ಕಂಡು, ತಮ್ಮ ಕೈಯಲ್ಲಿದ್ದ ಕೊಡೆಯನ್ನು ಮುಚ್ಚಿ, ಕೆಲಸಾರಿ ಕೆರಕಳಚಿ ಕೈಮುಗಿದು, ತಾವಾಗಿ ನನ್ನ ಹಿಂದೆಯೇ ಬರುವಂಥವರಾದರು. ನಾವು ಹತ್ತುಮಾರು ಮುಂದೆ ಹೋಗುವಷ್ಟರಲ್ಲಿ ಶಾಲೆಮನೆ ಎದುರಾಗಲು, ಉಪಾಧ್ಯಾಯರು ಹೊರಬಂದು ನನಗೆ ನಮಸ್ಕಾರ ಮಾಡಿದರು. ಇದನ್ನು ಕಂಡರೊ ಇಲ್ಲವೊ ನನ್ನ ಪಕ್ಕದಲ್ಲಿ ಬಂದವರು ಬೆಬ್ಬಳಿಸಿ ಹೋಗಿ ‘ಉಳೊ ಅಪ್ಪಾ! ಓಯ್!’ ಎಂದು ಬಾಯಿಬಿಟ್ಟರು; ಮತ್ತು ಅದೇ ಬಾಯಿಂದ ಅವರು ನನ್ನನ್ನು ಕುರಿತು ಉಪಾಧ್ಯಾಯರ ಹತ್ತಿರ ‘ಒಯ್! ಉಂಟೆ ಇದು? ನಾನು ಇದು ಪೋಲೀಸ್ ಇನ್ಸ್‍ಪೇಟರ್ ಎಂದು ಗ್ರಹಿಸಿ ಸುಮ್ಮನೆ ನಡೆದುಬಂದದ್ದು! ಈಗ ನೋಡಿದರೆ ಇದು ಪೋಲೀಸ್ ಅಲ್ಲ, ಇದು ಪೋಲಿ ಇನ್ಸಪೆಕ್ಟೆ! ಪೋಲಿ ಮಕ್ಕಳನ್ನು ನೋಡಬರುವ ಇದಕ್ಕೆ ನಾನು ಕೈಯೆತ್ತುವುದುಂಟೆ? ಕಾಸಿನ ಪ್ರಯೋಜನವಿಲ್ಲದೆ ಕಾಲು ದಣಿಸಿಬಂದದ್ದು ನಾನು! ಒಯ್! ಉಂಟೆ ಇದು? ಥೂ!’ ಎಂದರು.
ನಮ್ಮ ಹಳ್ಳಿಯ ಪಟೇಲರ ಭ್ರಮಗೆ ಕಾರಣವಿತ್ತು. ಕೆಲವು ದಿನಗಳ ಹಿಂದ ಅದೇ ಹಳ್ಳಿಯಲ್ಲಿ ನಡೆದ ಒಂದು ಖೂನಿಯ ತನಖಿಗಾಗಿ ಹೊಸ ಪೊಲೀಸ್ ಇನ್ಸಪೆಕ್ಟರವರ ನೇಮಕವಾಗಿದ್ದು, ಅವರ ಬರೋಣವನ್ನು ಪಟೇಲರು ಎದುರು ನೋಡುತ್ತಿದ್ದರು. ಹೀಗೆ ಅವರ ಸವಾರಿಯ ದಾರಿ ಕಾಯುತ್ತಿದ್ದ ಪಟೇಲರ ಕಣ್ಣಿಗೂ ಶಾಲೆ ಎಲ್ಲಿ ಎಂದು ಯೋಚಿಸುತ್ತಿದ್ದ ನನ್ನ ತಲೆಗೂ ಗುಡ್ಡದ ಹೊಡೆಯ ಮೇಲೆ ಅಕಸ್ಮಾತ್ತಾಗಿ ಭೇಟಿಯಾಯಿತು. ಹಿಂದೆ ನನ್ನದೊಂದು ಸಂಪ್ರದಾಯವಿತ್ತು; ನಾನು ತಲೆಬಿಟ್ಟು ಸರಕಾರ ಕೆಲಸದ ಮೇಲೆ ಹೋಗುತಿರಲಿಲ್ಲ. ಏಕೆಂದರೆ ಒಳತಲೆ ಬತ್ತಲೆ ಇದ್ದರೂ ಭರತಿ ತಲೆ ಎಂದು ತೋರಬೇಕಾದರೆ ಅದರ ಮೇಲೊಂದು ಮುಂಡಾಸು ಏರಿಸಬೇಕಷ್ಟೆ. ನನಗೆ ಕೆಲಸ ಕಾಯಮ್ ಆಗುವ ತನಕ ನನ್ನ ತಲೆಗೊಂದು ಅಗಲ ಸರಿಗೆಯ ಕೆಂಪು ಪೇಟಾ ಇರುತ್ತಿತು. ಕೆಂಪು ಪಗಡಿಯ ಮೇಲೆ ಪಟೇಲರಿಗಿದ್ದ ಭೀತಿಯಿಂದ ಹುಟ್ಟದ ಅವರದೊಂದು ನಮಸ್ಕಾರವು ವೆಚ್ಚವಾಯಿತು. ಕೈಮುಗಿತವು ನಮ್ಮ ಮುಂದಿನ ಪ್ರಯೋಜನಕ್ಕಾಗಿ ಹೆರರಿಗೆ ಕೊಡುವ ಕೈಸಾಲ – ಹೀಗೆ ಪಟೇಲರು ಯೋಚಿಸಿರಬೇಕು.
ವಾಸ್ತವಿಕವಾಗಿ ನಾವು ಹಾಗೆ ತಿಳಿಯುವುದಿಲ್ಲ. ನಮಸ್ಕಾರವೆಂಬುದು ಸಭ್ಯಜನರ ಮಾತುಕಥೆಯ ಮುನ್ನುಡಿ ಎಂದು ನಮ್ಮ ಅಭಿಪ್ರಾಯ. ಆದರೆ ಹಳ್ಳಿಯವರ ಗ್ರಹಿಕೆ ಬೇರೆ. ಕೈಮುಗಿಯುವುದು ಅಂದರೆ ಕೆಳಜಾತಿಯವರು ಮೇಲಿನವರಿಗೆ ಕೊಡಲೇಬೇಕಾದ ಮರ್ಯಾದೆ ಎಂದು ಅವರು ಭಾವಿಸುತ್ತಾರೆ; ನಮಸ್ಕಾರ ಅಂದರೆ ಅಧಿಕಾರಕ್ಕೆ ಸಲತಕ್ಕ ಪುರಸ್ಕಾರ ಎಂಬುದಾಗಿಯೂ ಅವರ ತಿಳಿವಳಿಕೆ ಇದೆ. ಆದುದರಿಂದಲೇ ಅವರು ಕೈಮುಗಿಯುವ ಈ ಬಗೆಯ ಹಸ್ತಚೇಷ್ಟೆಯಲ್ಲಿ ವೈವಿಧ್ಯ ಬಂದಿದೆ. ಹುದ್ದೆದಾರನ ಮೈಬಣ್ಣ, ಉಡುಪಿನ ತಳಕು, ಸಂಬಳದ ಮಹತ್ವ, ಇಲಾಖೆಯ ಹಿರಿಮೆ, ಜಾತಿಯ ಅಂತಸ್ತು, ಮುಖ್ಯವಾಗಿ ಅಧಿಕಾರಿಯ ಉಪದ್ರಕಾರಕ ಶಕ್ತಿಯನ್ನು ಹೊಂದಿಕೊಂಡು ನಮಸ್ಕಾರವಿಧಿಯು ಮಾರ್ಪಡುತ್ತದೆ. ಹಳ್ಳಿಯವರಿಗೆ ಸರಕಾರ ಉದ್ಯೋಗಸ್ಥರ ಮೇಲೆ ಸರ್ವಸಾಧಾರಣವಾಗಿ ಅಳುಕು ಇದೆ. ಅಂಜಿಕೆ ಇದೆ, ಅಪಾಯ ಭೀತಿ ಇದೆ; ಆದರೆ ಅಕ್ಕರೆ ಕಡಿಮೆ. ಅಕ್ಕರೆ ಇದ್ದಲ್ಲಿ ಅವರಿಗೆ ನಿಜವಾದ ಅಭಿಮಾನವಿದೆ. ಅದು ಇಲ್ಲದ್ದಲ್ಲಿ ಅವರ ಮನಸ್ಸಿನೊಳಗಣ ನಂಬುಗೆ ಹೀಗಿದೆ- ‘ಮುಕ್ಕಾಲು ಮೂರುವೀಸ ಅಧಿಕಾರಿಗಳು ಸರೀಸೃಪಗಳಂತೆ ಉದರಗಾಮಿಗಳು, ಈ ರೂಪಕವನ್ನು ನನಗೆ ಮಂದಟ್ಟಾಗುವಂತೆ ಹೇಳಿದ ಒಬ್ಬ ಉಪಾಧ್ಯಾಯರ ಮಾತುಗಳು ಇಲ್ಲಿವೆ.
“ಸರಕಾರದವರಲ್ಲಿ ಸಿವಿಲಿನವರು ಹೆಬ್ಬಾವುಗಳು, ಸಾರ್; ಪೋಲೀಸಿನವರು ನಾಗರಹಾವುಗಳು, ಅಬ್ಕಾರಿ ಜಂಗ್ಲಿಯವರು ಮಂಡಲಿಗಳು.’
‘ಟಪ್ಪಾಲಿನವರೋ?’
‘ಟಪ್ಪಾಲ್ ಇನ್ಸಪೇಟರ್ ಹಸುರುಹಾವು ಸೆರ್!’
‘ಹಾಗಾದರೆ ಕೇರೆ ಹಾವು ಯಾರು?’
‘ರವೆನ್ಯು ಇನ್ಸಪೇಟರ್, ಸಾರ್’
‘ನಾವು ಶಾಲಾ ಇಲಾಖೆಯವರು ಯಾವ ವರ್ಗದಲ್ಲಿ?’
‘ತಾವು ಸೆರ್? ತಮ್ಮ ವರ್ಗ ವೊಳ್ಳೆಯದು, ಬುದ್ಧಿ!’
ಮಾಸ್ತರರ ಕಡೆಯ ಮಾತಿನಲ್ಲಿ ನೀರ್ವೊಳ್ಳೆಯ ಅರ್ಥದ ಮರ್ಮ ನೋಡಿ!
ಹೀಗೆ ಬಾಯಿಬಿಟ್ಟು ಉಪಾಧ್ಯಾಯರು ಉದ್ಯೋಗಸ್ಥರೊಂದಿಗೆ ಮಾತಾಡುವುದಿಲ್ಲವೆಂದಿಲ್ಲ. ಸಲುಗೆ ಇದ್ದರೆ ಸರಿಯಾಗಿ ಮಾತನಾಡುತ್ತಾರೆ. ಅಧಿಕಾರಿಯು ರಾವಣೇಶ್ವರನೋ, ಬೆಂಕಿ ನವಾಬನೋ ಆಗಿದ್ದರೆ ಹಳ್ಳಿಯವರ ಬಾಯಿಂದ ಸತ್ಯಸ್ಥಿತಿಯು ಹೊರಬರುವುದಕ್ಕೆ ಸಂಕೋಚಪಡುತ್ತದೆ. ‘ಹಿರಿದೆನಿಸಿ ಅವ ಕ್ರೂರನಾದಡೆ, ನರರಳುಕಿ ಹೋಹರು, ವಸಂತದ ಖರಕಿರಣನಂತರ್ನಿವರ್ತನವಾಗಬೇಕೆಂದಾ!’ ಹೀಗಿದ್ದರೂ ತಾಬೇದಾರರನ್ನು ಆಫೀಸರರ ಹತ್ತಿರ ಬರಲೀಸದ ಒಂದು ಮಾಯಾವರಣವಿದೆ. ಇದಕ್ಕೆ ದೌಲತ್ತು ಎಂದು ಹಳ್ಳಿಯವನ ಹೆಸರು. ದೌಲತ್ತು ಕಾಲಿನ ಕಾಲಡಿಯಲ್ಲಯೇ ಇರಬೇಕೆಂದು ಮುದ್ದುಮಾಡಿದ ಮನೇ ನಾಯಿ ಮಡಿಪಾತ್ರೆ ನೆಕ್ಕುವುದೆಂಬ ಸಂಶಯದಿಂದ ನಟಿಸಿದ್ದ ತಾಟಸ್ಥ್ಯವು ದೌಲತ್ತು ಅಲ್ಲ. ಮೇಲಿನ ಅಧಿಕಾರಿಯ ಅಸತ್ಯವನ್ನೂ, ಅಸಮರ್ಥತೆಯನ್ನೂ ಪಾಪದವರ ಕಣ್ಣಿನಿಂದ ಮರೆಯಿಸುವ ಒಂದು ಅಂತರ್ಪಟವಿದೆ, ಅದೇ ದೌಲತ್ತು. ನನ್ನ ಸಮಕಾಲೀನರಾದ ಇಲಾಖಾ ಆಫಿಸರರು ಏನಿದ್ದರೂ ದೌಲತ್ತುದಾರರಾಗಿರಲಿಲ್ಲ. ಅವರಿಗೂ ಅವರ ಕೆಳಗಿನ ಉಪಾಧ್ಯಾಯರಿಗೂ ನಡುವೆ ಒಂದು ಬಗೆಯ ಅಡ್ಡಗೋಡೆ ಇರಲಿಲ್ಲ. ರಾಯರು, ಕೂಡ್ಲು ವಿಶ್ವೇಶ್ವರರಾಯರು, ನಾರಾವಿ ಕೃಷ್ಣರಾಯರು, ಉಳ್ಳಾಲ ಮಂಗೇಶರಾಯರು, ಇಂಥವರ ಹೆಸರುಗಳು ಉಪಾಧ್ಯಾಯರ ನಾಲಗೆಗಳಲ್ಲಿ ಈಗಲೂ ನಿಂತಿವೆ. ‘ಆ ರಾಯರು ನಮ್ಮನ್ನು ಕಾಯಿದೆ ಬಿಡದೆ ಕಾಯುತ್ತಿದ್ದರು, ಕಾಯಿಸುತ್ತಿರಲಿಲ್ಲ.’ ‘ಈ ರಾಯರು ಬೆನ್ನಿಗೆ ಬಡಿಯುತಿದ್ದರು, ಆದರೆ ಹೊಟ್ಟೆಗೆ ಹೊಡೆಯುತ್ತಿರಲಿಲ್ಲ.’ ‘ಅವರು ಇದ್ದ ಕಾಲಕ್ಕೆ ಬೆಲ್ಲಕೊಟ್ಟರು, ಇಲ್ಲದ ಕಾಲಕ್ಕೆ ಬೆಲ್ಲದಂಥ ಮಾತು ಕೊಟ್ಟರು.’ ‘ಇವರು ಉಪಾಧ್ಯಾಯ ಕುಟುಂಬಿ, ಸರ್! ಇವರಿಗೆ ಹೆಂಡತಿಮಕ್ಕಳ ಚಿಂತೆಗಿಂತ ಶಾಲೆಮಾಸ್ತರರ ಚಿಂತೆ ಹೆಚ್ಚು.’
ನಾನು ಹೂಸಂಗಡಿ ಶಾಲೆಯನ್ನು ಪ್ರಥಮತಃ ಸಂದರ್ಶಿಸಿದ್ದು ಆಶ್ವೀಜ ಬಹುಳ ಅಮಾವಾಸ್ಯೆ ದಿನ. ಆ ಶಾಲೆ ನೀರಮೇಲಿನಗುಳ್ಳ ಶಾಲೆ, ತೋರಿ ಅಡಗುತ್ತದೆ. ಆದ್ದರಿಂದ ಅದನ್ನು ಗುಟ್ಟಾಗಿ ಹೋಗಿ ನೋಡಬೇಕಂದು ನನಗೆ ಅಪಣ ಇತ್ತು. ಆದರೆ ನಾನು ಹಳ್ಳಿಗೆ ಬರುವ ಸಂಗತಿ ನಮ್ಮ ಉಪಾಧ್ಯಾಯರಿಗೆ ಗಾಳಿ ಸಮಾಚಾರದಿಂದ ಮೊದಲೇ ಗೊತ್ತಾಗಿತ್ತು. ಉಪಾಧ್ಯಾಯರ ಶಾಲೆಯು ವರ್ಷಾವಧಿ ಪರೀಕ್ಷೆಗೆ ಸಿದ್ಧವೇ ಇತ್ತು. ನಾನು ಉಪಾಧ್ಯಾಯರನ್ನು ಕಂಡು, ‘ನಮಸ್ಕಾರ! ಹ್ಯಾಗಿದ್ದೀರಿ, ಮಾಸ್ತರ್ರೇ?’ ಎಂದು ಕೇಳಿದೆ.
ಉತ್ತರ: ಪ್ರಾಕಿನವರು ನಡೆಸಿದ ಹಾಗೆ ಇದ್ದೇನೆ, ಸ್ನಾಮಿ?
ಪ್ರಶ್ನೆ: ಪ್ರಾಕಿನವರು ಎಂದರೆ ಯಾರು?
ಉತ್ತರ: ಪ್ರಾಕಿನವರು ಎಂದರೆ ರಾಘವೇಂದ್ರರಾಯರು. ಅವರು ನಮ್ಮ ತಂದೆ; ಈ ಶಾಲೆ ಮಂಜೂರು ಮಾಡಿ ರಿಕೊಗ್ನಿಶನ್ ಹುಕುಂ ಕೊಟ್ಟವರು ಅವರು?
ಪ್ರಶ್ನೆ: ವಿಶ್ವಶ್ವರರಾಯರು?
ಉತ್ತರ: ಅವರು ದೊಡ್ಡತಂದೆ; ಅವರು ನಮ್ಮ ಶಾಲೆಗೆ ಗ್ರೇಂಟ್ ಹಣ ಕೊಡಿಸಿದವರು.
ಪ್ರಶ್ನೆ: ನಾರಾವಿಯವರನ್ನು ಬಲ್ಲಿರೊ?
ಉತ್ತರ: ಕೃಷ್ಣರಾಯರನ್ನೊ? ಅವರು ನಮ್ಮ ತಾಯಿ, ಸ್ವಾಮಿ! ಈ ಶಾಲೆಯನ್ನು ಸಾಕಿ ಬೆಳಿಸಿದವರು ಅವರೇ ತಾನೆ!
ಮುಂದುವರಿದರೆ ನನ್ನ ಹೆಸರು ಉಪಾಧ್ಯಾಯನ ಮಗನ ಸ್ಥಾನದಲ್ಲಿ ನಿಂತೀತೆಂಬ ಅನುಮಾನದಿಂದ ಸಂಭಾಷಣೆಯನ್ನು ಇನ್ನೊಂದು ದಾರಿಗೆ ತಿರುಗಿಸಿದೆನು.
ನಾನು: ಪರೀಕ್ಷೆಯಾಗಲಿಕ್ಕೆ ಅಡ್ಡಿ ಇದಯೇ?
ಮಾಸ್ತರ್: ತಮ್ಮ ಶಾಲೆ, ತಮ್ಮ ಹುಡುಗರನ್ನು ತಾವು ಪರೀಕ್ಷೆ ಮಾಡಲಿಕ್ಕೆ ತಮಗೆ ಯಾರದು ಅಡ್ಡಿ, ಸ್ವಾಮಿ!ನಾನು: ಈ ಹೊತ್ತು ರಜೆಯಲ್ಲವೆ, ಆದ್ದರಿಂದ ಕೇಳಿದ.
ಮಾಸ್ತರ್: ತಾವು ಬರುತೀರೆಂದು ಕೇಳಿ, ರಜೆಯಾದ್ದರಿಂದಲೇ ನಾನು ಮನೆಮನೆಗೆ ಓಡಿ, ಮಕ್ಕಳನ್ನು ಜಮಾಯಿಸಿಬಿಟ್ಟಿದ್ದೇನೆ. ನಾಳೆ ಎಲ್ಲಿ ಸಿಕ್ಕುತ್ತಾರೆ ಅವರು?
ನಾನು: ನಾಳೆ ನನಗೆ ಇಲ್ಲಿಂದ ವೇಣೂರಿಗೆ ಹೋಗಬೇಕು.
ಮಾಸ್ತರ್: ನನಗೆ ಈ ರಾತ್ರಿಯೇ ಇಲ್ಲಿಂದ ಎದ್ದುಹೋಗದೆ ನಿರ್ವಾಹವಿಲ್ಲ.
ನಾನು: ಅದೇನಯ್ಯಾ ಹಾಗೆ?
ಮಾಸ್ತರ್: ಅದು ಹಾಗೆಯೇ! ಊರೆಲ್ಲಾ ಸಾಲವಾದರೆ ಅಶ್ವೀಜ ಬಹುಳ ಅಮಾವಾಸ್ಯೆಯ ನಂತರ ಹಳ್ಳಿಯಲ್ಲಿ ಯಾರು ನಿಲ್ಲುತ್ತಾರೆ, ಸ್ವಾಮಿ?
ನಾನು: ಸಾಲ? ಸಾಲ ಹೇಗಾಯಿತು?
ಮಾಸ್ತರ್: ಸಾಅಅಲವೊ? ಹಿಂದಿನ ಪ್ರಾಯ್ಮರಿ ವಜಾಮಾಡಿದರು. ಗ್ರೇಂಟ್ ಹಣ ಕೊಯ್ದು ಬಿಟ್ಟರು. ವೇಣೂರಲ್ಲಿ ಬೋರ್ಡು ಶಾಲೆ ಹಾಕಿದರು. ನನ್ನ ಖಾಸಗಿ ಶಾಲೆಗೆ ನೀರಿಟ್ಟರು. ಹಿಂದೆ ವರ್ಷಾವಧಿ ನಾನ್ನೂರು ರೂಪಾಯಿ ಗ್ರೇಂಟ್ ಬರುವಲ್ಲಿ ಈಗ ನಾಲ್ವತ್ತು ರೂಪಾಯಿ ಪ್ರಾಪ್ತಿ ಇಲ್ಲದಿದ್ದರೆ, ನಾಲ್ಕು ಜನರ ಹೊಟ್ಟೆಯ ಪಾಡು ಸಾಲಮಾಡದೆ ಹ್ಯಾಗೆ ಸಾಗಬೇಕು? ಅಪ್ಪಣೆಯಾಗಲಿ!
ನಾನು: ಅಡ್ಡ ಕಸಬು ಇಲ್ಲವೇ?
ಮಾಸ್ತರ್: ಕಳೆದ ವರ್ಷ ಮಗನಿಗೆ ಒಂದು ಅಂಗಡಿ ಮಾಡಿಕೂಡಬೇಕೆಂದು ಯೋಚಿಸಿ, ಜೈನ ಪೇಟೆಯಿಂದ ಸಾಲತಂದು, ಅಂಗಡಿ ಪೂಜೆಯ ದಿನ ಮುಹೂರ್ತ ನೋಡಿ ಹುಡುಗನನ್ನು ಮಂಡದ ಮೇಲೆ ಕೂರಿಸಿದೆ. ಒಂದು ತಿಂಗಳು ಹೋಗಲಿಲ್ಲ. ಗುಮ್ಮಟ ಪಾದೆಕಲ್ಲಿನ ಹಾಗೆ ಗಟ್ಟಿಯಿದ್ದ ಹುಡುಗ ಎರಡು ದಿವಸದ ಜ್ವರದಿಂದ ನನ್ನ ಕಣ್ಣಿನ ಮುಂದೆ ದೇವರಿಗೆ ಸಂದ. ಅವನ ಹನ್ನೆರಡನೆಯ ದಿನ ಕಳೆಯಲಿಲ್ಲ. ಅಷ್ಟರಲ್ಲಿ ಅವನ ತಾಯಿ ನೀರಿಗೆ ಹೋದವಳು ಕಾಲುಜಾರಿ ಬಾವಿಗೆ ಬಿದ್ದು ಗಂಗಾಮ್ಮನ ಪಾದ ಸೇರಿ ಕೊಂಡಳು. ಇನ್ನು ಏಳು ವರ್ಷದ ಒಂದು ಕೂಸು ಇದೆ. ಅದನ್ನು ಕಟ್ಟಿಕೊಂಡು ಈ ಹಳ್ಳಿಯಲ್ಲಿ ನಾನೇನು ಮಾಡಲಿ?
ನಾನು: ಮಗುವನ್ನು ಏನು ಮಾಡುತ್ತೀರಿ? ಇಲ್ಲೇ ಇದೆಯೇ?
ಮಾಸ್ತರ್: ಇಲ್ಲೇ ಇದೆ. ಅದನ್ನು ಅಜ್ಜಿಯ ಮನೆಯಲ್ಲಿ ಸಧ್ಯಕ್ಕೆ ಬಿಡುತ್ತೇನೆ. ಯಾವುದಕ್ಕೂ ಶಾಲೆ ಪರೀಕ್ಷೆಯೊಂದು ತೀರದೆ ಇಲ್ಲಿಂದ ಏಳುವುದಕ್ಕೆ ನನಗೆ ಆಗುವುದಿಲ್ಲವಷ್ಟೇ!
ನಾನು: ಮುಂದೆ ಶಾಲೆ ನೋಡುವುದು ಯಾರು?
ಮಾಸ್ತರ್: ನೋಡುವುದೇನು? ಅದನ್ನು ನಾಳೆಯಿಂದ ಮುಚ್ಚಿಬಿಡುತ್ತೇನೆ.
ನಾನು: ತೆರೆಯುವುದು ಯಾವಾಗ?
ಮಾಸ್ತರ್: ಮಾರ್ಚಿ ತಿಂಗಳ ಗ್ರೇಂಟಿನ ಹಣದ ಬೀಲು ಬಂದರೆ ಸಿಕ್ಕಿದಷ್ಟು ಹಣದಿಂದ ಸಾಲ ಸಂದಾಯ ಮಾಡಿ, ಆಮೇಲೆ ಶಾಲೆ ತರೆಯುತ್ತೇನೆ.
ಇದು ಸಂಸಾರ ಕಷ್ಟದಿಂದ ಬೆಂದ ಉಪಾಧ್ಯಾಯನ ಮನಸ್ಸಿನ ಮೊರೆ. ಈ ಮೊರೆಯಲ್ಲಿ ಮಾತಿನ ಮೆರಗು ಇಲ್ಲ, ನಿಜ. ಆದರೆ ಸಲುಗೆಯ ಭರವಸೆಯಿಂದ ಹೊರಟ ಆ ಸೊಲ್ಲಿನಲ್ಲಿ ಸುಳ್ಳಿನ ಸುಳಿವೂ ಇಲ್ಲ. ನಾವು ಸುಳ್ಳು ಶಾಲೆಯೆಂದು ಸಂದೇಹಪಟ್ಟು ಹಳ್ಳಿಯ ಮಾಸ್ತರನ ಶಾಲೆಯ ಹಣೆಬರಹದ ಮೇಲೆ ಕೆಂಪು ಗೀಟು ಎಳೆಯುವ ಮುಂಚೆ ಆತನ ಬಡತನದ ಬಾಳಿನ ಸಾಲಸೋಲಗಳನ್ನು ವಿಚಾರಿಸಿ ಕೊಳ್ಳತಕ್ಕದ್ದೆಂಬ ಮೂಲಪಾಠವನ್ನು ನಾನು ಮೊತ್ತಮೊದಲು ಕಲಿತುಕೊಂಡದ್ದು ಈ ಹೊಸಂಗಡಿ ಉಪಾಧ್ಯಾಯರಿಂದ! ಬಡತನದಿಂದ ಆತನ ಸಾಲ ಹುಟ್ಟಿತೋ ಇಲ್ಲವೆ ಸಾಲದಿಂದ ಆತನ ಬಡತನ ಹುಟ್ಟಿತೋ, ಇದನ್ನು ನಾನು ನಿಷ್ಕರ್‍ಷಿಸಿ ಹೇಳಲಾರೆ. ಆದರೆ ಸಾಲ, ಬಡತನಗಳಿಂದ ಹಳ್ಳಿಯ ಮಾಸ್ತರನು ಹುಟ್ಟಿದನೆಂಬುದು ನನಗೆ ಗೊತ್ತು.
ಬಡ ಉಪಾಧ್ಯಾಯರಲ್ಲಿ ತಪ್ಪುಗಳು ಇವೆ. ಹುಡುಕುವವರಿಗೆ ಅವು ಸಿಕ್ಕುವುದಿಲ್ಲವೆಂದು ನಾನು ಹೇಳುವುದಿಲ್ಲ. ಆದರೆ ಅವು ತಿಳಿವಳಿಕೆ ಇಲ್ಲದ ಜುಜಿಬಿ ತಪ್ಪುಗಳು; ಹೆರವರ ಮನೆ ತೆಗೆಯುವ, ತಲೆಹೂಡೆಯುವ, ಆಸ್ತಿ ಅಪಹರಿಸುವ ಅಪರಾಧಗಳಲ್ಲ. ಶಾಲೆಯ ಏರ್ಪಾಟು, ಶಿಸ್ತು, ಶಿಕ್ಷಣ, ರಿಜಿಸ್ಟ್ರಿಗಳ ಸಂಬಂಧವಾಗಿ ಆಗಾಗ ಇಲಾಖೆಯವರು ಮಾಡುತಲಿರುವ ಹೊಸ ಹೂಸ ತಿದ್ದುಪಾಟುಗಳನ್ನು ಅನುಸರಿಸುವಾಗ ಹಳೆಯ ಪದ್ಧತಿಯ ಉಪಾಧ್ಯಾಯರು ಎಡವಿಬೀಳುತ್ತಾರೆ. ಹಳ್ಳಿಶಾಲೆ ಸುಳ್ಳು ಹಾಜರಿ ಶಾಲೆ – ಈ ಅಪವಾದವನ್ನು ನಾನೂ ಕೇಳಿದ್ದೆ. ಒಮ್ಮೆ ಕೊಂಬಾರು ಶಾಲೆಯ ಹಾಜರು ಪಟ್ಟಿಯನ್ನು ಪರಾಮರ್ಶಿಸಿ ‘ಏನಯ್ಯಾ ಇದು? ಹಾಜರಿ ಬರೆಯುವುದಕ್ಕೆ ಕಲಿಸಿದ್ದು ಯಾರಯ್ಯಾ ನಿಮಗೆ?’ ಎಂದು ನಾನು ಪಶ್ನೆಮಾಡಿದೆ.
‘ಸುಪರ್‌ವಾಯ್ಸರು, ಸಾರ್!’ ಎಂದು ಉತ್ತರ ಬಂತು.
‘ಸುಮ್ಮನೆ ಹೇಳಬೇಡಿ! ನವೆಂಬರ್ ತಿಂಗಳು ಇನ್ನೂ ಕಳೆದಿಲ್ಲ. ನೀವು ಡಿಸೆಂಬರ್ ತಿಂಗಳ ಹಾಜರಿಯನ್ನೂ ತುಂಬಿಸಿಬಿಟಿದ್ದೀರಿ!’
‘ಇಲ್ಲ ಸೆರ್, ಸುಪರ್ವಾಯ್ಸರು ಪರೀಕ್ಷೆಯ ಮೊದಲೇ ೧೯೦೯-೧೦ರ ಸಂಪೂರ್ಣ ಹಾಜರಿಯ ಲೆಕ್ಕಮಾಡಿ ಇಡಬೇಕಂದು ಅಪ್ಪಣೆಮಾಡಿ ಹೋಗಿದ್ದರು. ಈ ಇಡೀ ವರ್ಷದ ಹಾಜರಿಯನ್ನು ಹೇಳಿದ ಹೂತ್ತಿಗೆ ಭರಾಯಿಸಿ ಇಟ್ಟಿದ್ದೇನ.’ ೧೯೦೯ – ೧೦ನೆಯ ವರ್ಷವೆಂದರೆ ೧೯೧೦ನೇ ಮಾರ್ಚಿಗೆ ಅಂತ್ಯವಾಗುವ ಹನ್ನೆರಡು ತಿಂಗಳು ಬಿಟ್ಟು ೧೯೧೦ ಡಿಸೆಂಬರ್ ಕೊನೆಗೆ ಮುಗಿಯುವ ವರ್ಷವೆಂದು ಉಪಾಧ್ಯಾಯರು ತಿಳಿಯದೆ ಮಾಡಿದ್ದೇ ಸುಳ್ಳು ಹಾಜರಿಯ ನಿಜವಾದ ಕಾರಣವಾಗಿತ್ತು.
ಸಲುಗೆ ಇದ್ದರೆ ಉಪಾಧ್ಯಾಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಆದರೆ ಹಾಗೆ ಒಪ್ಪಿಕೊಳ್ಳುವಾಗ ಬಾಯ್ದೆರೆ ಮಾತಿನ ಬದಲು ಬರಹದ ಮಾತಿನಲ್ಲಿ ಒಪ್ಪಿಕೊಂಡರೆ, ಅದರಿಂದ ಮುಂದೆ ಒಂದಲ್ಲ ಒಂದು ಕಾಲದಲ್ಲಿ ತಮಗೆ ಅಪಾಯ ಬರಬಹುದೆಂಬ ಅವರ ಮನಸ್ಸಿನ ಸಂದೇಹವನ್ನು ಅವರ ರಿಪೋರ್ಟುಗಳ ಒಕ್ಕಣೆಯು ತೋರಿಸುತ್ತದೆ. ಒಂದು ಸರ್ತಿ ಮಾಸ್ತರರೆಲ್ಲ ತಮ್ಮ ತಮ್ಮ ಉಪಾಧ್ಯಾಯ ಸರ್ಟಿಫಿಕೇಟುಗಳನ್ನು ನನ್ನ ಆಫೀಸಿಗೆ ರವಾನಿಸಬೇಕೆಂಬ ಹುಕುಮಿಗೆ ವಿಧೇಯವಾಗಿ ಗುರುಪುರದ ಮಾಸ್ತರರೊಬ್ಬರು ವಿನಂತಿ ಮಾಡಿಕೊಂಡ ಕ್ರಮವೆಂತೆಂದರೆ –
‘ನನ್ನಲ್ಲಿ ಬೇರೆ ಯಾವುದೊಂದು ಸರ್ಟಿಫಕೇಟು ಇಲ್ಲ. ಮೆಹರ್ಬಾನ್ ಮದ್ರಾಸ್ ಗವರ್ನರ್ ಸಾಹೇಬರವರು ತಮ್ಮ ಹೆಸರು ಮೊಹರು ನಿಶಿ ೧೯೧೧ರಲ್ಲಿ ನನಗೆ ದಯಪಾಲಿಸಿರುವ ಕೆಂಪುಬರಹದ ಅರ್ಧ ಹಾಳೆಯ ದೊಡ್ಡ ಸರ್ಟಿಫಿಕೇಟು ಮಾತ್ರ ನನ್ನಲ್ಲಿದೆ. ಅದನ್ನು ತಮ್ಮ ಆಫೀಸಿಗೆ ಟಪ್ಪಾಲ ದ್ವಾರಾ ಕಳುಹಿಸುವಾಗ ನನ್ನ ದುರದೃಷ್ಟದಿಂದ ಅದು ಗೈರ್‍ವಿಲೆಯಾಗಿ ಹೋಗಬಹುದಷ್ಟೆ. ಹಾಗೆ ಹೋದ್ದಲ್ಲಿ ನನಗೆ ಹೂಸ ಗವರ್ನರ್ ಸಾಹೇಬರವರ ಹೆಸರು ಮೊಹರು ನಿಶಿ ಸರ್ಟಿಫಿಕೇಟು ಸಿಕ್ಕಲಾರದ್ದರಿಂದ, ಅಸಲನ್ನು ನಾನು ಇಟ್ಟುಕೊಂಡಿದ್ದೇನೆ. ಅದರ ತಾಜಾ ನಕಲನ್ನು ಕಳುಹಿಸಬೇಕೆಂದು ಹುಕುಂ ಆದ್ದಲ್ಲಿ ತ್ವರ್ಯದಲ್ಲಿ ಕಳುಹಿಸುತ್ತೇನೆ.’
ಇದನ್ನು ನೋಡಿದೊಡನೆ ಗವರ್ನರ್ ಸಾಹೇಬರಿಂದ ಸರ್ಟಿಫಿಕೇಟು ಪಡೆದ ಈ ದೊಡ್ಡ ವ್ಯಕ್ತಿಯನ್ನು ಸಂದರ್ಶಿಸಲು ನಾನೇ ಗುರುಪುರಕ್ಕೆ ಕೂಡಲೇ ಹೊರಟುಹೋದೆ. ಸರ್ಟಿಫಿಕೇಟು ಹೌದು; ಆದರೆ ಶಾಲೆಗೂ ಅದಕ್ಕೂ ಏನೂ ಸಂಬಂಧವಿರಲಿಲ್ಲ. ೧೯೧ಂರ ಖಾನೇಶುಮಾರಿಯಲ್ಲಿ ಎನ್ಯುಮರೇಶನ್ ಕೆಲಸ ಮಾಡಿದವರಿಗೆಲ್ಲಾ ಸಾಮಾನ್ಯವಾಗಿ ಕೊಡೋಣಾಗುವ ಸರ್ಟಿಫಿಕೇಟು!
ಉಪಾಧ್ಯಾಯ ಸರ್ಟಿಫಿಕೇಟು ತನ್ನಲ್ಲಿಲ್ಲವೆದು ಬರಹ ಮೂಲಕ ಒಪ್ಪಿಕೊಂಡರೆ ಆ ಒಪ್ಪಿಗೆ ತನ್ನ ಕೊರಳಿಗೆ ಸುತ್ತಿಕೊಂಡೀತೆಂದು ಗುರುಪುರ ಮಾಸ್ತರರು ಭೀತರಾದರಂತೆ – ಶಾಲೆಯ ಮಕ್ಕಳಿಂದ ಅಕ್ಕಿಯ ಸರಬರಾಯಿಯನ್ನು ಗುಟ್ಟಾಗಿ ಮಾಡಿಸಿಕೊಳ್ಳುತ್ತಿದ್ದ ಮತ್ತೂಬ್ಬ ಉಪಾಧ್ಯಾಯರು ತಮ್ಮ ತಪ್ಪನ್ನು ಒಪ್ಪಿಕೊಂಡ ಉದಾಹರಣಯೆ ಕ್ರಮವೂ ಓದತಕ್ಕುದಾಗಿದೆ.
‘ಶಾಲೆಯ ಮಕ್ಕಳ ಸಂಬಳದ ಹಣವನ್ನು ಹೆತ್ತವರು ಸತ್ತರೂ ಕೊಡುವುದಿಲ್ಲ. ತಿಂಗಳು ತಿಂಗಳ ಸಂಬಳವನ್ನು ಬೋರ್ಡಿನ ಲೆಕ್ಕಕ್ಕೆ ನಾನೇ ಕೈಯಿಂದ ಕಟ್ಟಿ ನನಗೆ ಸಾಕು ಸಾಕಾಗುತ್ತದೆ. ಪಾಸುಮಾಡಲು ಪರೀಕ್ಷೆಯವರು ಬರುವ ಕಾಲದಲ್ಲಿ ಸರಬರಾಯಿ ಬೇಕೆಂದು ಕೇಳಿದರೆ, ಆಗ ಮಾತ್ರ ಮಕ್ಕಳ ಮನೆಯವರು ಬತ್ತ ಬಿಚ್ಚುತ್ತಾರೆ. ಆಫೀಸರರಿಗೆ ಸರಬರಾಯಿ ಎಂದು ನಂಬಿಸಿ, ನಾನು ಅಕ್ಕಿ ತರಿಸಿಕೊಂಡದ್ದಿಲ್ಲ. ಆದರೆ ಮಕ್ಕಳು ತಾವಾಗಿ ತಂದ ಬತ್ತವನ್ನು ಅವರ ಸಂಬಳಕ್ಕಾಗಿ ವಾಡಿಕೆಯಂತೆ ನಾನು ಭರತಿ ಮಾಡಿಕೊಂಡಿದ್ದೇನೆ. ನಾನು ಬತ್ತ ತಿನ್ನುತ್ತೇನೆಂದು ಹೇಳುವುದು ನನ್ನ ಹಗೆಯವರ ಚಾಡಿ ಮಾತು.
ಹೀಗೆಯೇ ಬೆಳ್ತಂಗಡಿಯವರೊಬ್ಬರು ಬತ್ತವನ್ನಲ್ಲ, ಮಕ್ಕಳಿಂದ ಹಣ್ಣುಕಾಯಿ, ತರಕಾರಿ, ಎಲೆ, ಅಡಕೆ, ಸೆಳೆದುಕೊಳ್ಳುತ್ತಿದ್ದರೆಂದು ಪುಕಾರು ಬಂದಿತ್ತು. ಇದಕ್ಕೆ ಅವರ ಹೇಳಿಕೆ ನನ್ನ ಆಫೀಸಿನ ಹುಕುಮಿಗೆ ಒಳಪಟ್ಟೇ ಇತ್ತು, ಹೇಗೆಂದರೆ:-
‘ಚಿತ್ರಲೇಖನವನ್ನು ಕಲಿಸುವಲ್ಲಿ ಉಪಾಧ್ಯಾಯರು ಮಕ್ಕಳಿಂದಲೇ ಎಲೆ, ಹೂ ಹಣ್ಣು -ಮೊದಲಾದ್ದನ್ನು ತರಿಸಿಕೊಂಡು, ಚಿತ್ರಗಳನ್ನು ತೆಗೆಯಿಸಬೇಕೆಂದು ತಮ್ಮ ಆಫೀಸ್ ನಂಬ್ರ…ನೇ ಹುಕುಮನ್ನು ಶಿರಸಾವಹಿಸಿ, ಚಿತ್ರಲೇಖನದ ಪಾಠಕ್ಕಾಗಿ ವೀಳ್ಯದ ಎಲೆ, ಬಾಳೆ ಎಲೆ, ತೆಂಗಿನಕಾಯಿ, ಬದನೆಕಾಯಿ, ಮಾವಿನ ಹಣ್ಣು ಇಷ್ಟನ್ನು ಮಾತ್ರ ಮಕ್ಕಳಿಂದ ನಾನು ತರಿಸಿದ್ದುಂಟು. ಪಾಠ ಮುಗಿದ ನಂತರ ಈ ವಸ್ತುಗಳನ್ನು ಏನು ಮಾಡಬೇಕೆಂದು ಖಾವಂದರ ಹುಕುಮಿನಲ್ಲಿ ಹೇಳದೆ ಇದ್ದ ಪ್ರಯುಕ್ತ ಅವನ್ನು ಶಾಲೆಯ ಪಕ್ಕದ ನನ್ನ ಮನೆಯಲ್ಲಿ ಇಟ್ಟಿರುತ್ತೇನೆ. ಅವುಗಳ ದುರ್ವ್ಯಯವಾಗಲಿಲ್ಲ.’
ಇಂಥ ಹಲವು ತಪ್ಪುಗಳನ್ನು ಚಾಡಿಯ ಮಾತಿನ ಬದಲು ಮಕ್ಕಳ ಬಾಯಿಯೇ ಬಯಲಿಗೆ ತರುತ್ತಿತ್ತು. ಒಮ್ಮೆ ಬೆಡಗುಬೆಟ್ಟಿನ ಶಾಲೆಯ ಮಕ್ಕಳಿಗೆ ಓದುಗಾರಿಕೆಯಲ್ಲಿ ನಾನು ಪರೀಕ್ಷೆ ಮಾಡುವ ಸಂದರ್ಭದಲ್ಲಿ ‘ಹಳೆಯ ಮರವನ್ನು ಕಡಿದುಹಾಕಬೇಡ’ ಎಂಬ ಪಾಠವನ್ನು ಓದು ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಹುಡುಗರು ಓದದೆ, ಮಾಸ್ತರರ ಮುಖವನ್ನು ಮಿಟಮಿಟನೆ ನೋಡುತ್ತಾ ನಿಂತರು. ಓದಲಿಕ್ಕೆ ಬರುವುದಿಲ್ಲವೇ ಎಂದು ನಾನು ಒತ್ತಿ ಕೇಳಿದೆನು. ‘ಆ ಪಾಠ ಎಂದರೆ ಮಾಸ್ತರರಿಗೆ ಸಿಟ್ಟು’ ಎಂಬುದಾಗಿ ಚಿಕ್ಕ ಹುಡುಗನೊಬ್ಬನು ಉಸುರಿ ‘ಅದನ್ನು ಯಾರೂ ಓದಬಾರದೆಂದು ಹೇಳುತ್ತಾರೆ ಎಂದು ಮುಂದೆ ಬಂದು ಹೆದರದೆ ಪಾಠವನ್ನು ಓದಿ ಒಪ್ಪಿಸಿಬಿಟ್ಟನು. ಈ ಸಂಗತಿಯನ್ನು ಕುರಿತು ಮತ್ತೆ ವಿಚಾರಿಸಿದ್ದಲ್ಲಿ ಒಂದು ಹಳೆಯ ಮರ ಕಡಿದ್ದು ಹಾಕಿದ ನಂಬ್ರದಲ್ಲಿ ಉಪಾಧ್ಯಾಯರು ಜಂಗ್ಲಿಯವರಿಗೆ ೧ಂ ರೂಪಾಯಿ ಜರುಮಾನೆ ಕೊಡಬೇಕಾಯಿತೆಂಬುದು ನನಗೆ ಗೊತ್ತಾಯಿತು.
ಇದರಂತೆ ಮರ್ಕಂಜೆ ಶಾಲೆಯಲ್ಲಿ ಗುಬ್ಬಿಯ ಕಥೆ ಹೇಳು ಎಂದು ನಾನು ಕೊಟ್ಟ ಪ್ರಶ್ನೆಯನ್ನು ಕೇಳಿ ಕ್ಲಾಸಿನ ಮಕ್ಕಳು ನಗುವಿನಿಂದ ತಾರಾಮಾರೂ ಮಾಡಿದರೆಂಬುದಾಗಿಯೂ ಅಂದು ಶಾಲೆಗೆ ಬಂದಿದ್ದ ಹಳ್ಳಿಯ ಮುಖಂಡ ಮನುಷ್ಯರಿಬ್ಬರೂ ಹೂಟ್ಟೆ ತುಂಬ ನಗಲು ಹೂರಕ್ಕೆ ಹೋದರಿಂಬುದಾಗಿಯೂ ನನ್ನ ನೆನಪು. ಪ್ರಶ್ನೆಯಿಂದ ಮಾಸ್ತರರು ಮನಸಿನಲ್ಲಿ ನೊಂದಂತೆ ನಿಂತುಕೊಂಡರು. ನಾನು ಗುಬ್ಬಿಯ ಕಥೆ ಬಿಟ್ಟು ಮತ್ತೊಂದು ಕಥೆ ಕೇಳಿ ಪರೀಕ್ಷೆಯನ್ನು ಮುಂದುವರಿಸಿದೆ. ಇದರ ಆರು ತಿಂಗಳ ಹಿಂದೆ ಶಾಲೆಯ ಬಳಿಯ ಗುಬ್ಬಿ ಹೆಂಗಸಿನ ನಂಬ್ರದಲ್ಲಿ ಯಾರೋ ಯಾರೋ ಸೇರಿದ್ದರೆಂಬ ಪೂರ್ವ ಕಥೆಯೊಂದನ್ನು ಮಾಸ್ತರರು ನನ್ನ ಕಿವಿಗೆ ಮತ್ತೆ ಹಾಕಿದರು.
ಪೇಜಾವರ ದಾವಿದ ಮತ್ತು ಮಾಸ್ತರರ ಸಂಗತಿಯೊಂದು ಅಪೂರ್ವ ರೀತಿಯಿಂದ ಹೊರ ಬಿದ್ದದ್ದು ಹುಡುಗರ ಬಾಯಿಪಾಠದ ಪರೀಕ್ಷೆಯಲ್ಲ.
ಆ ಶಾಲೆಯಲ್ಲಿ ಅವರಿಬ್ದರಲ್ಲದೆ ರಾಘವನೆಂಬ ಮೂರನೆಯ ಮಾಸ್ತರರು ಇದ್ದರು. ದಾವಿದ ಮತ್ತು ಇವರ ನಡತೆಯ ವಿಷಯವಾಗಿ ಮೊದಲು ನನಗೊಂದೂ ಗೊತ್ತಿರಲಿಲ್ಲ. ಆದರೆ ರಾಘವ ಮಾತ್ರ ಇವರಿಬ್ಬರ ಮಧ್ಯಸ್ಥನಾಗಿದ್ದು ಶಾಲೆಯ ಮರ್ಯಾದೆಯನ್ನು ಕಾಪಾಡುತಿದ್ದನು. ನಾನು ಬಂದ ದಿನ ಬಾಯಿಪಾಠದಲ್ಲಿ ಪರೀಕ್ಷೆ. ಹುಡುಗರು ನಳಚರಿತ್ರೆಯ ಒಂದೊಂದೇ ಪದ್ಯವನ್ನು ಒಬ್ಬೊಬರೇ ಕ್ರಮವಾಗಿ ಹಾಡುತ್ತಾ ಬಂದರು. ಸುಮಾರು ಐದು ಪದ್ಯಗಳು ಮುಗಿಯುತಲೇ ಜನ್ನಪ್ಪ ಮಾಸ್ತರರು ‘ಮುಂದೆ ಮಕ್ಕಳಿಗೆ ಗೊತ್ತಿಲ್ಲ, ಸರ್!’ ಎಂದರು. ಆಗ ಒಬ್ಬ ಹುಡುಗನು ಮುಂದೆ ಬಂದು ‘ನನಗೆ ಗೊತ್ತಿದೆ, ನಾನು ಹೇಳುತ್ತೇನೆ ಸಾರ್’ ಎಂದು ಹೇಳಿ ಹೀಗೆ ಮುಗಿಸಿದನು.
‘ಜನಪನಾ ದಾವಿದನ ಮರು ಜೂ
‘ಜಿನಲಿ ಗೆಲ್ದನು ಧರೆಯನಾಳ್ದನು
‘ಜನಪ ಸರಿಮುಗಿಲೆನಿಸಿ ರಾಘವ ಕೇಳು ಪೂರ್ವದಲಿ||
ಶಾಲೆಯ ಮೂಡುಕಡೆ ಒಂದು ಅಂಗಡಿಯಲ್ಲಿ ಜನಪ ದಾವಿದರು ಯಾವಾಗಲೂ ಜುಗಾರಾಡುತ್ತಿದ್ದರೆಂದೂ ಇತ್ತಲಾಗೆ ಜನಪ ಮಾಸ್ತರನು ಸರಿಮುಗಿಲು ಆಡಿ ದಾವಿದನನ್ನು ಸೋಲಿಸಿದನೆಂದೂ ರಾಘವ ಮಾಸ್ತರರು ಕೇಳಿದ್ದ ಸಂಗತಿಯು ಮಕ್ಕಳು ಉರುಹಾಕಿದ್ದ ಪದ್ಯದಿಂದ ನನಗೂ ತಿಳಿದುಬಂತು.
ಹೀಗೆ ಮಕ್ಕಳು ಮಾಸ್ತರರ ಗುಟ್ಟನ್ನು ತಿಳಿಯದೆ ಬಯಲಿಗೆ ತರುವ ಹಾಗೆ ನಮ್ಮ ವಿಷಯವಾಗಿಯೂ ಹೇಳಬಾರದ ಸಂಗತಿಗಳನ್ನು ಹೊರಗೆಡವಿದ್ದು ಉಂಟು. ಸಿವಿಕ್ಸ್ ಎಂಬ ಹೊಸಪಾಠವು ಮಕ್ಕಳ ತಲೆಮೀರಿದ ವಿಷಯ; ಆದರೂ ಮಕ್ಕಳು ಆ ವಿಷಯದಲ್ಲಿ ಕೊಟ್ಟ ಉತ್ತರಗಳು ನನಗಂತೂ ಸಮರ್ಪಕವಾಗಿ ತೋರುತ್ತಿದ್ದವು.
ಬಿಳಿಯೂರ ಶಾಲೆ ಗುಡ್ದದ ಮೇಲೆ, ಅಲ್ಲ ಬಿಸಿಲಿಗೆ ಏರಿ ಹೋದರೆ ಬಾಯಾರಿ ಹೊಟ್ಟೆ ಹಸಿದು ದಣಿವಾಗುತ್ತದೆಂಬುದನ್ನು ಲಕ್ಷ್ಯದಲ್ಲಿಟ್ಟು ಕೆಳಗಿನ ಮಾತುಗಳನ್ನು ಓದಬೇಕು.
ಪ್ರಶ್ನೆ: ಸುಪರ್ವಾಯ್ಸರ ಕೆಲಸಗಳೇನು?
ಉತ್ತರ: ಮಧ್ಯಾಹ್ನ ಬಂದರೆ ನಿದ್ದೆಮಾಡುವುದು, ಬೆಳಗ್ಗೆ ಬಂದರೆ ಅಡಿಗೆ ನೋಡುವುದು.
ಪ್ರಶ್ನೆ: ಸಬ್ ಎಸಿಸ್ತಾಂಟರ ಕೆಲಸವೇನು?
ಉತ್ತರ: ಶಾಲಗೆ ಬಂದ ಕೂಡಲೇ ಎಳನೀರು ಕುಡಿಯುವುದು, ಬೋರ್ಡ್ ಉಜ್ಜುವುದು; ಸಂಜೆ ಸಿಗರೇಟ್ ಸೇದುವುದು.
ಬೋರ್ಡ್ ಎಂದ ಕೂಡಲೇ ನಮ್ಮ ಸ್ನೇಹಿತ ತಿಮ್ಮಪ್ಪ ಮಾಸ್ತರರ ಹೆಸರು ನನ್ನ ನೆನಪಿಗೆ ಬರುತ್ತದೆ. ತಿಮ್ಮಪ ಮಾಸ್ತರರ ಶಾಲೆ ಪುತ್ತೂರಲ್ಲಿ, ಮನೆ ಬಾಯಾರಲ್ಲಿ; ಹಾಜರಿ ಶಾಲೆಯಲ್ಲಿ, ಕಲಸ ಎಲ್ಲರ ಮನೆಗಳಲ್ಲಿ. ಅವರು ಶಾಲೆಯ ಕೆಲಸ ಒಂದು ಹೂರತು ಮಿಕ್ಕ ಎಲ್ಲಾ ಕೆಲಸವನ್ನೂ ಸರಿಯಾಗಿ ಚೆನ್ನಾಗಿ ಮಾಡುತ್ತಿದ್ದರು. ಚಿಪ್ಪಾರು ಅರಮನೆ ಸಂಕಯ್ಯ ಹೆಗ್ಗಡೆಗೆ ಬೆನ್ನುಪಣಿಯಾದರೆ ಹರೆಕಳ ಬೈದ್ಯರನ್ನು ಕರಕೊಂಡು ಬರಲಿಕ್ಕೆ ಓಡಬೇಕು ತಿಮ್ಮಪ್ಪ ಮಾಸ್ತರರು. ಕುಲಗುಂದ ಸಂತೆಯ ಕೋಣನ ಜೋಡಿ ಬಿದರೆ ಕಂಬಳಕ್ಕೆ ತರಬೇಕಾದರೆ ಹಲ್ಲನ್ನೆಣಿಸಿ ಪ್ರಾಯ ಪರೀಕ್ಷೆ ಮಾಡಬೇಕು – ತಿಮ್ಮಪ ಮಾಸ್ತರರು. ಮರ್ದಾಳು ಬೀಡಿನ ಅನಂತಮತಿಗೆ ಮದುವಯಾದರೆ ಬಂದವರಿಗೆ ಎಳನೀರು ಅವಲಕ್ಕಿ ಕೊಡಲಿಕ್ಕೆ ತಿಮ್ಮಪ್ಪ ಮಾಸ್ತರರು. ಕಾರಂಜೆ ಜಾತ್ರೆಯಲ್ಲಿ ಪಾದೆಕಲ್ಲಿನ ನೆತ್ತಿ ಮೇಲೆ ನಿಂತುಕೊಂಡು ‘ಓ ಕೋಟಿ ಓ ದೂಮ!’ ಎಂದು ಇರುಳೆಲ್ಲ ಕೂಗಿ ಕರೆಯಲಿಕ್ಕೆ ತಿಮ್ಮಪ್ಪ ಮಾಸ್ತರು. ಉಮ್ಮಬ್ಬ ಬ್ಯಾರಿಗೆ ಚೊಕ್ಕಾಡಿ ಭಟ್ಟರ ಅಡಿಕೆ ತೋಟವನ್ನು ದಸ್ತೇವಜು ಇಲ್ಲದೆ ವಾಯಿದೆ ಗೇಣಿಗೆ ಬಾಯ್ದೆರೆ ಮಾತಿನಿಂದ ಕೂಡಿಸಲಿಕ್ಕೆ ತಿಮ್ಮಪ್ಪ ಮಾಸ್ತರು. ಪೇರಾರು ಗುತ್ತಿನ ಯಜಮಾನರ ಮೇಲೆ ಕತ್ತಿ ಕಟ್ಟಿದ ಅಳಿಯಂದಿರನ್ನು ಬೆನ್ನು ತಟ್ಟಿ ಒಡಂಬಡಿಸಲಿಕ್ಕೆ ತಿಮ್ಮಪ್ಪ ಮಾಸ್ತರು. ದಾಸಣ್ಣ ಭಾಗವತರ ಕುಂಬಳೆ ಸೀಮೆಯ ತಾಳಮದ್ದಳೆಯ ಗದ್ದಲದಲ್ಲಿ ಆಫೀಸ್ ಜನರು ಸೈಸೈಯೆಂದು ಮೆಚ್ಚುವ ಹಾಗೆ ಗಂಡನ ಎದುರು ಕರ್ಣನ ಅರ್ಥವಿಸ್ತರಣೆಗೆ ಕೂತುಕೊಳ್ಳಬೇಕು ತಿಮ್ಮಪ್ಪ ಮಾಸ್ತರು. ಹೀಗೆ ತಿಮ್ಮಪ್ಪ ಮಾಸ್ತರನ್ನು ಮನೆಗೆ ಹುಡುಕಿಕೊಂಡು ಬರುವ ಜನರಿಂದ ಅವರಿಗೆ ಶಾಲೆಯಲ್ಲಿ ಕೂತುಕೊಳ್ಳುವುದಕ್ಕೆ ಪುರುಸತ್ತೇ ಇರಲಿಲ್ಲ. ಆದರೂ ಇವರ ಮೇಲೆ ಪುಕಾರು ಇಲ್ಲ. ಫಿರ್‍ಯಾದು ಇಲ್ಲ. ಇವರು ತರಬೇತಾಗದ ಉಪಾಧ್ಯಾಯರು, ಕಲಿಸುವುದು ಕಡಮೆ, ಕ್ರಮ ತಪ್ಪು ಎಂದು ಕಂಡಾಬಟೆ ಯಾರೂ ಹೇಳಿದ್ದಿಲ್ಲ. ಮಕ್ಕಳು ಕಲಿಯುವ ವಿಷಯಗಳು, ಎಂದರೆ ಓದುಬರೆಹ, ಲೆಕ್ಕ, ಇವಿಷ್ಟು ಅವರಿಗೆ ಚೆನ್ನಾಗಿ ಬರುತ್ತಿತ್ತು.
ಒಂದು ದಿನ ಈ ಶಾಲೆಯಲ್ಲಿ ನಾನು ಪರೀಕ್ಷೆ ಲೆಕ್ಕಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಲಿಕ್ಕೆಂದು ‘ಮಾಸ್ತರೇ! ಬೋರ್ಡು ಇದೆಯೇ’ ಎಂದು ವಿಚಾರಿಸಿದೆ.
ಮಾಸ್ತರ್: ಇದೆ ಸ್ವಾಮಿ! ತಮ್ಮ ಬೆನ್ನ ಹಿಂದೆ-
ನಾನು ಹಲಗೆಯ ಹತ್ತಿರ ನಿಂತು ಹುಡುಕುತ್ತಾ ‘ಬರೆಯಲಿಕ್ನೆ ಚಾಕು ತುಂಡು ಎಲ್ಲಿ?’ ಎಂದು ಕೇಳಿದೆ.
ಮಾಸ್ತರ್: ಚಾಕ್ ತುಂಡು ಇಡಲಿಲ್ಲ ಬುದ್ಧಿ!
ನಾನು: ಚಾಕ್ ಇಲ್ಲದೆ ಬೋರ್ಡ್ ಯಾಕಯ್ಯಾ? ನಿಮ್ಮ ಶಾಲೆ ಹ್ಯಾಗೆ ‘ರೆಕಗ್‍ನೈಸ್’ ಆಯಿತು?
ಮಾಸ್ತರ್: ‘ಶಾಲೆ ರಿಕೊಗ್‍ಶನ್ ಆಗಬೇಕಾದರೆ ಬೋರ್ಡು ಇಟ್ಟಿರಬೇಕೆಂದು ಅಪ್ಪಣೆಯಿತ್ತು. ಅಪ್ಪಣೆ ಮೇರೆಗೆ ಬೋರ್ಡು ಮಾಡಿಸಿ ಶಾಲೆ ರೆಕೊಗ್‍ಶನ್ ಆಯಿತು. ಚಾಕ್ ಇಟ್ಟಿರಬೇಕೆಂದು ಹುಕುಂ ಇರಲಿಲ್ಲ.
ಹೀಗೆ ಹೇಳಿ ಮಾಸ್ತರರು ಶಾಲೆಯಲ್ಲಿ ನಿಲ್ಲದೆ ಕೆಳಗಿನ ಮನೆಗೆ ಓಡಿಹೋಗಿ, ಒಂದು ಜೇಡಿ ಹಟ್ಟೆ ಹಿಡಿದುಕೊಂಡು ಬಂದರು. ಈ ಮರಳು ಜೇಡಿಯಿಂದ ನಾನು ಹೇಗೋ ಮಾಡಿ ನಾಲ್ಕು ಪಂಕ್ತಿ ಸವಾಲನ್ನು ಬೋರ್ಡಿನ ಮೇಲೆ ಕೆರೆದುಬಿಟ್ಟೆ. ಅದು ಅವಲ್‍ತರದ ಜೇಡಿಯೆಂದು ನನ್ನ ಊಹೆ. ಏಕೆಂದರೆ, ಮರುವರ್ಷ ನಾನು ಅದೇ ಶಾಲೆಗೆ ಹೋಗಿದ್ದಾಗ ಬೋರ್ಡಿನ ಸವಾಲು ಬೋರ್ಡಿನ ಮೇಲೆಯೇ ಉಳಿದಿತ್ತು. ಆದರೆ ಈ ಅವಧಿಯಲ್ಲಿ ಮಾಸ್ತರರ ಎಡಗಣ್ಣೊಂದು ಮಾತ್ರ ಕುರುಡಾಗಿತ್ತು. ಅದರ ಸಂಗತಿ ಅವರ ಮಾತಿನಲ್ಲಿ ಹೇಳೋಣ!
‘ಸ್ವಾಮಿ, ಒಂದು ದಿನ ಸುಪರ್ವಾಯ್ಸರು ಶಾಲೆಗೆ ಬಂದು, ಮಕ್ಕಳಿಗೆ ಒಂದು ಪಾಠ ಮಾಡಿ ಎಂದು ನನಗೆ ಅಪ್ಪಣೆ ಮಾಡಿದರು. ‘ಡೊಂಬರ ಚೆನ್ನೆಯ ಪಾಠ’ – ಅದು ತಮ್ಮ ಕವನವಂತೆ; ಆ ಪಾಠ ಕಲಿಸುವಾಗ ‘ಬೇಗ ತಿರ್ರನೆ ತಿರುಗಿ ಸರ್ರನೆ ಲಾಗ ಹಾಕಿದ ಡೊಂಬನು’ ಎಂಬ ಚರಣ ಬಂತು. ಅದರ ಅರ್ಥ ಮಕ್ಕಳಿಗೆ ಹತ್ತಲಿಲ್ಲ. ಆಗ ನಾನೇ ಡೊಂಬನಾದೆ, ಲಾಗ ಹಾಕಿ ತೋರಿಸಿದೆ. ಹೊಡೆದ ಲಾಗಕ್ಕೆ ಕೈ ತಪ್ಪಿ ನಾನು ನೆಲದ ಮೇಲಾದೆ; ನನ್ನ ಕಾಲು ತಾಗಿ, ಬೋರ್ಡು ಜಾರಿ ನನ್ನ ಮುಖಕ್ಕೆ ಬಂದು ಬಡಿಯಿತು. ಬೋರ್ಡಿನ ಅಂಚಿನ ಮೊನೆಯ ಪೆಟ್ಟು ಕಣ್ಣಿಗೇ ಬಿತ್ತು. ಮದ್ದು ಮಾಡಿದೆ, ಲೇಪ ಹಚ್ಚಿದೆ; ಏನು ಮಾಡಿದರೂ ಕಣ್ಣೊಂದು ಇಂಗಿ ಹೋಯಿತು!’
ಈ ವ್ಯಸನಕರವಾದ ಸ್ಥಿತಿ ನೋಡಿ ನನ್ನಲ್ಲಿ ಕನಿಕರವಾದರೂ ಮಾಸ್ತರರ ಮಾತುಗಳಲ್ಲಿ ಕೊರಗು ಇರಲಿಲ್ಲ. ‘ದೇವರ ದಯೆಯಿಂದ ಒಂದು ಕಣ್ಣಾದರೂ ಉಳಿಯಿತಷ್ಟೆ. ಸ್ವಾಮಿ! ಹೋದ ವರ್ಷ -ತಮ್ಮ ಕಣ್ಣು ಶಾಲೆ ಬೋರ್ಡಿನ ಮೇಲೆ ಬಿತ್ತು. ಈ ವರ್ಷ, ಶಾಲೆ ಬೋರ್ಡು ನನ್ನ ಕಣ್ಣ ಮೇಲೆ ಬಿತ್ತು’ ಎಂಬುದಾಗಿ ನಗುನುಡಿಯಿಂದ ಕಥೆ ಮುಗಿಸಿದರು. ತರಬೇತ್ ಆಗದ ಮಾಸ್ತರು ಖರೆ! ಆದರೆ ಅವರ ಹಸನ್ಮುಖ, ಮೃದು ನುಡಿ, ವಿಶಾಲ ಹೃದಯ, ಉದಾರ ಬುದ್ಧಿ, ಪರೋಪಕಾರ, ಶಾಂತ ಜೀವನ-ಇವನ್ನು ನಾನು ಮರೆಯುವ ಹಾಗಿಲ್ಲ.
ಒಂದು ವರ್ಷ ತಿಮ್ಮಪ್ಪ ಮಾಸ್ತರರ ಶಾಲೆಗೆ ಗ್ರೇಂಟ್ ಹಣವು ಹೆಚ್ಚಾಗಿ ದೊರೆಯಿತು. ಆ ಕುರಿತು ಬೇರೆ ಉಪಾಧ್ಯಾಯರು ಅನೇಕರು ಬಹು ಕಾಲದವರಿಗೆ ತಮ್ಮೊಳಗೆ ಆಡಿಕೊಳ್ಳುತ್ತಿದ್ದ ಗೇಲಿ ಮಾತುಗಳು ನನ್ನ ಜ್ಞಾಪಕದಲ್ಲಿವೆ. ಒಬ್ಬಿಬ್ಬರು ಆ ಸಂಗತಿಯನ್ನು ಪ್ರಾಸಬದ್ಧಗದ್ಯವಾಗಿ ಕಟ್ಟದ್ದು ಇಲ್ಲಿದೆ:
‘ತಿಮ್ಮನ ಶಾಲೆಯ ಸ್ತೇಟಮೆಂಟು
ಸುಳ್ಳೇ ಸುಳ್ಳೆಂದು ಕೇಳಿದ್ದುಂಟು!
ಆದರೆ ಅವನಿಗೆ ಆಫಿಸ್ ನಂಟು
ಇದ್ದುದರಿಂದ ತುಂಬಾ ಗ್ರೇಂಟು
ಸಿಕ್ಕಿದೆ-ಐನೂರಹದಿನೆಂಟು
ರೂಪಾಯಿ ಹಣದ ಒಂದೇ ಗಂಟು!’
ತಿಮ್ಮಪ್ಪ ಮಾಸ್ತರರ ಶಾಲೆಯು ನಿಜವಾಗಿಯೂ ಸಾಧಾರಣ ತರದ್ದು; ಇನ್ನೂರು ರೂಪಾಯಿ ಗ್ರೇಂಟ್ ಪಡೆಯುವಷ್ಟು ಅರ್ಹತೆಯುಳದ್ದಲ್ಲ. ಮೂವರು ಮಾಸ್ತರರು ಇದ್ದು ಐವತ್ತು ಮಂದಿ ಮಕ್ಕಳುಳ್ಳ ಈ ಬಡಶಾಲೆಗೆ ೫೧೮ ರೂಪಾಯಿ ಹಣವು ಯಾವ ನಿಬಂಧನೆ ಪ್ರಕಾರವಾದರೂ ದೊರೆಯತಕ್ಕದ್ದಲ್ಲ. ಮೂರು ಮಂದಿ ಉಪಾಧ್ಯಾಯರಿಗೆ ೩ ತಲ್ಲಾ ೩೬ ಅಂದರೆ ೧ಂ೮ ರೂಪಾಯಿ, ಮತ್ತು ೫ಂ ಮಂದಿ ಹುಡುಗರಿಗೆ ತಲಾ ಒಂದರಂತೆ ೫ಂ ರೂಪಾಯಿ, ಹೀಗೆ ಜುಮ್ಲಾ ೧೫೮ ರೂಪಾಯಿ ಎಂದು ಸರಕಾರಿ ಲೆಕ್ಕ. ಈ ೧೫೮ ಎಂಬ ಸಂಖ್ಯೆಯು ೫೧೮ ಆದ ಅಂಕಪಲ್ಲಟಕ್ಕೋ ಆಗಮಾದೇಶಗಳಿಗೋ ವಿಧಿ ಯಾವುದು? ಗಾಣದ ಎತ್ತಿನಂತೆ ಶಾಲೆಯ ಕೆಲಸದಲ್ಲೇ ಸುತ್ತುತ್ತಿರುವ ಇತರ ಹಳ್ಳಿಯ ಉಪಾಧ್ಯಾಯರಿಗೆ ಎಟುಕದ ಸಹಸ್ರಾರ್ಧ ರೂಪಾಯಿ ಹಣದ ಗಂಟು ಬಿಟ್ಟೀಬಸವಯ್ಯನಂತೆ ಬರಿಯ ಗ್ರಾಮಸೇವೆಯನ್ನೇ ಮಾಡುತ್ತಿದ್ದ ತಿಮ್ಮಪ್ಪ ಮಾಸ್ತರನ ಕೈಗೆ ಕೇಳದೆ ಬಂದು ಬೀಳುವುದಕ್ಕೆ ಕಾರಣವೇನು? ಇದು ಆಫೀಸು ಗುಮಾಸ್ತರು ತಿಳಿದು ಮಾಡಿದ ಕೈತಪ್ಪಿನ ಪ್ರಸಾದವೋ? ಸಬ್ ಎಸಿಸ್ತಾಂಟರು ತಿಮ್ಮಪ್ಪನ ಮುಖ ನೋಡಿ ಮಾಡಿದ ಸುಳ್ಳು ಶಿಫಾರಸಿನ ಪ್ರಯೋಜನವೋ? ಇಲ್ಲವೆ ಮೇಲಿನ ಆಫೀಸಿನಲ್ಲಿ ಗುಟ್ಟಾಗಿ ಮಾಡಿದ ಕೂರ್ಮಾಟದ ಫಲವೋ? ಇದು ಯಾವುದೊಂದೂ ಕಾರಣವಲ್ಲ; ಏಕೆಂದರೆ ದೊಡ್ಡ ದೊರೆಗಳೇ ಸ್ವತಃ ಶಾಲೆಯನ್ನು ಸಂದರ್ಶಿಸಿ, ೫೧೮ ರೂಪಾಯಿ ಗ್ರೇಂಟ್ ಕೊಡಲಾದೀತೆಂದು ಸ್ವಹಸ್ತಾಕ್ಷರದ ಪ್ರತ್ಯೇಕ ಹುಕುಮನ್ನು ಕೊಟ್ಟಿದ್ದರು. ಹೆಚ್ಚಿನ ಹಣವು ದೊರಕಿದ ರಹಸ್ಯವು ಇತರ ಉಪಾಧ್ಯಾಯರಂತೆ ನನಗೂ ಕೆಲವು ತಿಂಗಳುಗಳ ವರೆಗೆ ಬಗೆಹರಿಯದಾಯಿತು.
ಹೀಗಿರಲು ಒಂದು ವರ್ಷದ ತರುವಾಯ ದೂಡ್ಡ ದೊರೆಗಳು ನಮ್ಮಲ್ಲಿ ಚಿತ್ತುಸಿದಾಗ, ಹಳ್ಳಿಯ ಶಾಲೆಗಳ ಮಾತುಕಥೆಯಲ್ಲಿ ಈ ಶಾಲೆಯ ಗ್ರೇಂಟಿನ ಹಣದ ಸಂಗತಿ ಹೊರಕ್ಕೆ ಬಿತ್ತು. ದೊರೆಗಳಿಗೆ ತಿಮ್ಮಪ್ಪ ಮಾಸ್ತರರ ಮೇಲೆ ವಾತ್ಸಲ್ಯವಿತೆಂಬುದೂ ಗೊತ್ತಾತು. ಅವರು ತಿಮಪ್ಪ ಎಂದು ಹೇಳದೆ ದಿ. ಮಫ್ (ಮಫ್ ಎಂದರ ಇಂಗ್ಲೀಷಿನಲ್ಲ ದಡ್ಡ, ಹುಂಬ ಎಂದರ್ಥ) ಎಂಬ ಸಲುಗೆ ಹೆಸರನ್ನು ಇಟ್ಟಿದ್ದರು. ಅವರು ಅಂದು ಇಂಗ್ಲೀಷಿನಲ್ಲಿ ಹೇಳಿದ ನಾಲ್ಕು ವಾಕ್ಯಗಳ ಕನ್ನಡ ಅನುವಾದವು ಇಲ್ಲಿ ಕೊಟ್ಟಿದೆ:
ತಿ. ಮಫ್ ಇವರು ಕನ್ನಡ ಜಿಲ್ಲೆಯ ಹಳ್ಳಿಗೆ ಸೇರಿದ ಉಪಾಧ್ಯಾಯರು. ಇವರು ಉದಾರ ಮನಸ್ಕರು. ತಾನು ಬ್ರಾಹ್ಮಣನೆಂಬುದನ್ನು ಲಕ್ಷಿಸದೆ, ವಿದ್ಯೆಯಲ್ಲಿ ಹಿಂದುಳಿದ ತನ್ನ ಗ್ರಾಮದ ಕಪ್ಪು ಜನರನ್ನು (ಹೊಲೆಯರನ್ನು) ಮುಂದಕ್ಕೆ ತರಲು ಪ್ರಯತ್ನ ಮಾಡುವವರು. ಇವರ ಸಹಾಯಕ ಉಪಾಧ್ಯಾಯರಿಬ್ಬರೂ ಕಪ್ಪು, ಶಾಲೆಯ ಮಕ್ಕಳಲ್ಲಿ ಹಲವರು ಕಪ್ಪು. ಇದನ್ನೆಲ್ಲಾ ನಾನು ಸ್ವತಃ ಕಂಡಿರುವುದರಿಂದ ಈ ಶಾಲೆಯ ಗ್ರೇಂಟ್ ಹಣವನ್ನು ಈ ಮೂಲಕ ಹೆಚ್ಚಿಸಿರುತ್ತೇನೆ.’
ಇದನ್ನು ಕೇಳಿ ನಾನು ದೂರೆಗಳ ಹತ್ತಿರ ‘ತಾವು ಸಂದರ್ಶಿಸಿದಾಗ ಶಾಲೆಯಲ್ಲಿ ಸಹಾಯಕ ಉಪಾಧ್ಯಾಯರು ಇದ್ದರೆ?’ ಎಂದು ವಿನಯಪೂರ್ವಕವಾಗಿ ಕೇಳಿದೆ.
ದೊರೆ: ಹೌದು, ಇಬ್ಬರು ಕಪ್ಪು; ಒಬ್ಬ ಕುಕ್ಕಪ್ಪು; ಮತ್ತೊಬ್ಬ ಚಿಕ್ಕಪ್ಪು.
ನಾನು: ಪಂಚಮ ಹುಡುಗರು ಆ ಶಾಲೆಯಲ್ಲಿ ಇದ್ದರೇ?
ದೆರೆ: ಸಂಕಪ್ಪು, ಲಕ್ಕಪ್ಪು, ಎಂಕಪ್ಪು, ಲೋಕಪ್ಪು, ವಿನಾಯ್ಕಪ್ಪು, ಈ ಹುಡುಗರೆಲ್ಲ ಕಪ್ಪು. ಹೊಲೆಯರ ಕಪ್ಪು ಹುಡುಗರನ್ನು ಸೇರಿಸಿಕೊಂಡು ಮೊದಲನೇ ಶಾಲೆ ಇದು; ಆದ್ದರಿಂದ ನಾನೇ ಗ್ರೇಂಟ್ ಹಣವನ್ನು ಹೆಚ್ಚಿಸಿರುತ್ತೇನೆ.
ಈ ಮಾಸ್ತರರು ಮಾತ್ರ ಈ ಹಚ್ಚಿನ ಹಣದಿಂದ ತಮ್ಮ ಶಾಲೆಯ ಮುರುಕು ಕಟ್ಟಡವನ್ನು ದುರಸ್ತು ಮಾಡಿಸಲಿಲ್ಲ; ಬೇಕಾದ ಸಾಹಿತ್ಯ ಸಾಮಾಗ್ರಿಗಳನ್ನು ಶಾಲೆಗಾಗಿ ಒದಗಿಸಿಕೊಳ್ಳಲಿಲ್ಲ; ಹಣವನ್ನು ತನ್ನ ಸಹಾಯಕ ಉಪಾಧ್ಯಾಯರಿಗೆ ಹಂಚಿ ಕೊಡಲೂ ಇಲ್ಲ. ‘ಹತ್ತು ಜನರಿಗೆ ಬೇಕಾಗುವ ಹಳ್ಳಿಯಲ್ಲಿ ಹಾಳು ಬಿದ್ದಿರುವ ಕೆರೆಗೆ ಕಲ್ಲು ಕಟ್ಟಿಸುವುದಕ್ಕೆ ನೀವು ಏಕೆ ಹಣ ಖರ್ಚು ಮಾಡಿದಿರಿ? ಎಂದು ಉಪಾಧ್ಯಾಯರೊಬ್ಬರು ತಿಮ್ಮಪ್ಪನವರಿಗೆ ಹಾಕಿದ ಪ್ರಶ್ನೆಗೆ, ‘ಕೆರೆಯ ನೀರನು ಕೆರೆಗೆ ಚೆಲ್ಲಿರೊ’ ಎಂಬ ಪಲ್ಲವಿಯ ಹಾಡೇ ತಿಮ್ಮಪ್ಪ ಮಾಸ್ತರರ ಉತ್ತರವಾಗಿತ್ತಂತೆ.
ತಿಮ್ಮಪ್ಪ ಮಾಸ್ತರರಿಗೆ ನಮ್ಮ ದೂರಗಳು ತಿ. ಮಫ್ ಎಂದಿಟ್ಟ ಸಲುಗೆಯ ಹೆಸರು ನಮ್ಮ ಬಾಯೊಳಗೆ ಮಾತ್ರವೇ ಹೂರತು ನಮ್ಮ ಹೊರಗೆ ಪ್ರಚಾರವಾಗಲಿಲ್ಲ. ತಿಮ್ಮಪ್ಪ ಮಾಸ್ತರರ ಹಾಗೆಯೇ ಇನ್ನಿಬ್ಬರು ಉಪಾಧ್ಯಾಯರು ಇದ್ದರು; ಒಬ್ಬರು ನೆಟ್ಲ ಶಾಲೆಯಲ್ಲಿ, ಇನ್ನೊಬ್ಬರು ವಿಟ್ಲ ಶಾಲೆಯಲ್ಲಿ. ಒಬ್ಬರ ಎಡಗಣ್ಣು ಹೂಟ್ಟು, ಮತ್ತೊಬ್ಬರ ಬಲಗಣ್ಣು ಕುರುಡು. ಇವರಿಬ್ಬರನ್ನು ಅಡ್ಡ ಹಸರುಗಳಿಂದಲೇ ಕರೆಯುವುದು ಏತಕ್ಕೋ ವಾಡಿಕೆಯಾಗಿತ್ತು. ಶುಕ್ರಾಚಾರಿ ಎಂದರೆ ನೆಟ್ಲದವರಂತೆ, ಡೆಸಿಮಲ್ ಒಂದು (.೧) ಎಂದರೆ ವಿಟ್ಲದವರಂತೆ; ಆದರೆ ತಿಮ್ಮಪ್ಪ ಮಾಸ್ತರರು, ಮಾತ್ರ ಹೀಗೆ ‘ಬಿರುದಂಕಿತರಾಗಿ’ ಇರಲಲ್ಲ. ‘ಬಿರುದಂಕಿತಗಳು’ ಅಡ್ಡ ಹೆಸರುಗಳೆಂದೂ ದೊಡ್ಡ ಹೆಸರುಗಳೆಂದೂ ಎರಡು ತೆರನಾಗಿವೆ. ರಾಯ ಬಹದ್ದೂರ್ ಮೊದಲಾದುವು ದೊಡ್ಡ ಹೆಸರುಗಳು, ತಿಮೂರ್, ಲಂಗಡ ಮೊದಲಾದುವು ಅಡ್ಡ ಹೆಸರುಗಳು. ದೊಡ್ಡ ಹೆಸರುಗಳು ನಮ್ಮ ನಮ್ಮ ಲೋಕೋತ್ತರವಾದ ಕಾರ್ಯಗಳ ಇಲ್ಲವೆ ಜ್ಞಾನವಿಜ್ಞಾನ ಶೋಧಗಳ ಮಹತ್ವವನ್ನು ಸರಕಾರವು ಲಕ್ಷಿಸಿ, ನಮಗೆ ದಯಪಾಲಿಸುವ ಮೆಚ್ಚುಗೆಯ ಬಿರುದುಗಳು. ಅಡ್ಡ ಹೆಸರುಗಳು ನಮ್ಮ ನಮ್ಮ ಅಂಗವೈಕಲ್ಯವನ್ನೋ; ಕಾರ್ಯಸ್ಖಾಲಿತ್ಯವನ್ನೋ ಕಂಡು, ಸಾಮಾನ್ಯ ಜನರು ವಿನೋದಾತ್ಮಕವಾಗಿ ಅಲಂಕಾರ ರೂಪದಲ್ಲಿ ಹೇಳಿದ ಉಪಮಾನಗಳು. ದೊಡ್ಡ ಹೆಸರುಗಳು ಮಕ್ಕಳ ಬರಹ ಪುಸ್ತಕದ ಮೇಲ್ಬಂತಿಯಂತೆ ಒಂದೇ ತೆರ; ಅಡ್ಡ ಹೆಸರುಗಳು ಮಕ್ಕಳು ಕೇಳುವ ಪ್ರಶ್ನೆಗಳಂತೆ ವಿವಿಧವಾಗಿವೆ. ದಂತವಕ್ರ ಸೆಟ್ಟಿ, ಲಂಬೋದರ ರಾಯರು, ಘಂಟೆ ಹನುಮಂತಯ್ಯ ಮಾಸ್ತರರು, ಇತ್ಯಾದಿ ಅಡ್ಡ ಹೆಸರುಗಳನ್ನು ಕಲ್ಪಿಸಿದವರಲ್ಲಿ ಕಾವ್ಯದೃಷ್ಟಿ ಇದೆ. ದೊಡ್ಡ ಹೆಸರುಗಳು ಸೀಮೆ ಬಟ್ಟೆಯ ಕೆಂಬಣ್ಣದಂತೆ ಅವನ್ನು ಧರಿಸಿಕೊಂಡವರ ಜೀವಮಾನ ಪರ್ಯಂತರ ಮಾತ್ರ ಶೋಭಿಸಿದ್ದು, ಜೀರ್ಣ ವಸನಸ್ಥಿತಿಯಲ್ಲಿ ಬಿಟ್ಟು ಹೋಗುತ್ತವೆ. ಅಡ್ಡ ಹೆಸರು ಹಾಗಲ್ಲ; ಒಂದು ಸಲ ಒಬ್ಬನ ಬೆನ್ನು ಹಿಡಿಯಿತೆಂದರೆ, ಬ್ರಹ್ಮಕಪಾಲದಂತೆ ಬಿಟ್ಟು ಹೋಗುವುದು ಸ್ವಲ್ಪ ಕಷ್ಟ. ಇದಕ್ಕೆ ನಮ್ಮ ಕದನೆಬಾಯಿಯ ಹಳ್ಳಿ ಶಾಲೆಯ ಮಾಸರರೇ ಸಾಕ್ಷಿ.
ಕದನೆಬಾಯಿ ಶಾಲೆಯ ಮಾಸ್ತರರ ಹೆಸರು ಕೂಡ ತಿಮ್ಮಪ್ಪ. ಆದರೆ ಅವರನ್ನು ಆ ಹಸರಿಂದ ಕರೆಯುವುದು ತೀರ ಅಪರೂಪವಾಗಿತ್ತು. ಅವರ ವಿಷಯವಾಗಿ ಮಾತಾಡುವಾಗ ಅವರ ಅಡ್ಡ ಹೆಸರೇ ಎಲ್ಲರ ಬಾಯಿಂದ ಬರುತಿತ್ತು. ಆ ಅಡ್ಡ ಹೆಸರು ಅವರಿಗೆ ಪ್ರಾಪ್ತವಾದ ಸಂಗತಿಯು ಹೇಳತಕ್ಕದ್ದಾಗಿದೆ.
ಕದನೆಬಾಯಿ ಶಾಲೆ ಬೋರ್ಡು ಶಾಲೆ ತಿಮ್ಮಪ್ಪ ಒಬ್ಬರೇ ಅಲ್ಲಿಯ ಉಪಾಧ್ಯಾಯರು. ನಾನು ಡಿಕ್ಟೇಶನ್ ಪಾಠದಲ್ಲಿ ಪಠ್ಯಪುಸ್ತಕದೊಳಗಣ ವಾಕ್ಯಗಳನ್ನು ಮಕ್ಕಳಿಂದ ಹೇಳಿ ಬರೆಯಿಸುತ್ತಿರಲಿಲ್ಲ. ಮಕ್ಕಳು ತಮ್ಮ ಜತೆಯವರ ಹೆಸರುಗಳನ್ನಾಗಲೀ ಹಿರಿಯವರ ಹೆಸರುಗಳನ್ನಾಗಲೀ ತಪಿಲ್ಲದೆ ಅಂದವಾಗಿ ಬರದರೆ, ನನ್ನ ಡಿಕ್ಟೇಶನ್ ಪರೀಕ್ಷೆಗೆ ಸಾಕಾಗುತ್ತಿತ್ತು. ಈ ಶಾಲೆಯ ವರ್ಷಾವಧಿ ಪರೀಕ್ಷೆಯ ದಿನ ಮಕ್ಕಳಿಗೆ “ನಿಮ್ಮ ಮಾಸ್ತರರ ಹೆಸರನ್ನು ಸ್ಲೇಟಿನ ಮೇಲೆ ಬರೆಯಿರಿ” ಎಂದು ನಾನು ಹೇಳಿದೆ. ಹನ್ನೆರಡು ಮಂದಿ ಹುಡುಗರಲ್ಲಿ ಒಬ್ಬನೆ ಮಾತ್ರ ಕದನೆಬಾಯಿ ತಿಮ್ಮಪ್ಪ ಎಂದು ಸ್ಲೇಟಿನ ಮೇಲೆ ಗೀಚಿದ್ದನು. ಮಿಕ್ಕವರೆಲ್ಲ ಒಂದೇ ರೀತಿಯಾಗಿ ಹೇಳಿಕೊಟ್ಟಂತೆ ಸರಿಯಾಗಿ ಬರೆದಿದ್ದರು. ‘ಬದನೆಕಾಯಿ ತಿನ್ನಪ್ಪ’ ‘ಬದನೆಕಾಯಿ ತಿನ್ನಪ್ಪ’, ‘ಬದನೆಕಾಯಿ ತಿನ್ನಪ್ಪ’ – ಹೀಗೆ ಹನ್ನೊಂದು ಸ್ಲೇಟುಗಳಲ್ಲಿ ಒಂದೇ ಹೆಸರು ಅಂಕಿತವಾಗಿತ್ತು. ಹುಡುಗರು ಮೊದಲೇ ಕಿವಿಯಿಂದ ಕೇಳಿ ಕಲಿತದ್ದನ್ನೇ ಹೀಗೆ ಬರೆದು ಹಾಕಿದರೋ, ಇಲ್ಲವೆ ಹಠಾತ್ತಾಗಿ ಆ ದಿನ ತಾವೇ ಕಲ್ಪಿಸಿಕೊಂಡು ಬರೆದರೋ, ನನಗೆ ಗೊತ್ತಾಗಲಿಲ್ಲ. ಆ ವಿಚಾರಕ್ಕೆ ನಾನು ಹೋಗಲೂ ಇಲ್ಲ. ಆದರೆ ಅಂದಿನಿಂದ ಆ ಮಾಸ್ತರರ ಹೆಸರು ಮಾತ್ರ ಅಸ್ತವ್ಯಸ್ತವಾಗಿ ನಿಂತುಬಿಟ್ಟಿತು. ಈ ಅಡ್ಡ ಹೆಸರಿನ ದೆಸೆಯಿಂದ ಆ ಮಾಸ್ತರರಿಗೆ ಹೋದ ಹೋದಲ್ಲಿ ಬದನೆಕಾಯಿ ಮಾತು ಬಂದು ಮಕ್ಕಳ ನಗುಬಾಯನ್ನು ಮುಚ್ಚುವುದೂ ಕ್ಲಾಸ್ ನಡಿಸುವುದೂ ಬಹಳ ದುಸ್ತರವಾಯಿತು.
ಹಳ್ಳಿಯ ಮಾಸ್ತರರಿಗೆ ಅಡ್ಡ ಹೆಸರುಗಳು ಇದ್ದಂತೆಯೇ ಶಾಲಾ ಇಲಾಖಾ ಆಫೀಸರನ್ನು ಕುರಿತು ಗೂಢನಾಮಗಳು ಉಪಾಧ್ಯಾಯರ ವ್ಯವಹಾರದಲ್ಲಿ ವಾಡಿಕೆಯಾಗಿದ್ದುವು. ಉಪಾಧ್ಯಾಯರು ಜಿಲ್ಲೆಯ ಶಾಲಾ ಇಲಾಖಾ ಆಫೀಸರರನ್ನೆಲ್ಲಾ ಪಂಚಭೂತಗಳಲ್ಲಿ ಗಣಿಸಿದ್ದರು. ಈ ಭೂತಗಳಲ್ಲಿ ಗುಳಿಗ ಎಂಬುದು ಇನ್ಸ್‍ಪಕ್ಟರ್ ದೊರಗೆ ಇಟ್ಟ ಸಂಕೇತ. ಮುಂಡತ್ತಾಯ, ಕೊಡಮತ್ತಾಯ, ಮಲ್ರಾಯ, ಜಾರಂತಾಯ, ಈ ಹೆಸರುಗಳಲ್ಲಿ ಯಾವುದಾದರೂ ಸರಿಯೆ-ಎಸಿಸ್ತಾಂಟ್ ಇನ್ಸ್‍ಪೆಕ್ಟರನನ್ನು ನಿರ್ದೇಶಿಸುತ್ತಿತ್ತು. ಈ ಆಫೀಸರನು ಕ್ರೈಸ್ತನಾದರೆ, ಪೊಸಭೂತ ಎಂಬುದೇ ಅದರ ಸೂಚನೆ. ಜುಮಾದಿ, ತೋಡಕನ್ನಾಯೆ, ಕೋಟಿಚೆನ್ನಯರು, ಎಂದರೆ ಸಬ್ ಎಸಿಸ್ತಾಂಟ್ ಎಂದರ್ಥ. ಮುಸಲ್ಮಾನ ಶಾಲೆಗಳ ವಿಚಾರಕರ್ತನೇ ಆಲಿಭೂತ! ಇನ್ನೂ ಬೊಬ್ಬಿಡುವ ಅಧಿಕಾರಿಯನ್ನು ಬೊಬ್ಬರ್ಯೆ ಎಂದೂ, ಲಂಚ ತಿನ್ನುವವನನ್ನು ಕಲ್ಲುರ್ಟಿ ಎಂದೂ, ಕುಡುಕನನ್ನು ಕಲ್ಕುಡ ಎಂದೂ, ಸುಪರ್ವಾಯ್ಸರರಿಗೆ ‘ಕಿನ್ನಿಮಾನಿಗಳು’ ಎಂದೂ ಗುಟ್ಟಿನ ಹೆಸರುಗಳು. ‘ಪತ್ತೆನಾಜಿತ್‍ಮಲೆರಾಯನ ವರಾಸರಿ’ ಎಂದರೆ ೧೬ನೇ ತಾರೀಕಿಗೆ ಎಸಿಸ್ತಾಂಟ್ ಇನ್ಸ್‍ಪೆಕ್ಟರರ ಸವಾರಿ ಬರುತ್ತದೆಂದು ಅಭಿಪ್ರಾಯ.
ನನ್ನ ಕಾಲದಲ್ಲಿದ್ದ ಪ್ರತಿಯೊಬ್ಬ ಶಾಲಾ ಆಫೀಸರನನ್ನು ಸೂಚಿಸತಕ್ಕ ಒಂದೊಂದು ಭೂತದ ಹೆಸರು ಈ ನಾಮಾವಳಿಯಲ್ಲಿದೆ. ಆಫೀಸರನ ಸರ್ಕಿಟು ಒಪ್ಪೊತ್ತಾದರೆ ‘ತಂಬಿಲು,’ ಮೂರು ದಿನಗಳದ್ದಾದರೆ, ‘ನೇಮ’ – ಹೀಗೆಲ್ಲಾ ನನ್ನ ಸಮಕ್ಷದಲ್ಲಿ ನಮ್ಮ ವಿಷಯವಾಗಿ ಉಪಾಧ್ಯಾಯರು ತಮ್ಮೊಳಗೆ ಆಡಿಕೊಳುತ್ತಿದ್ದ ಮಾತುಗಳನ್ನು ನೆನೆಸುವಾಗ, ಅಂಥ ಉಪಾಧ್ಯಾಯರು ಈಗ ಇರುತ್ತಿದ್ದರೆ ಅವರೊಂದಿಗೆ ನಾನು ಅಜ್ಞಾನಪೂರ್ವಕವಾಗಿ ಮಾಡಿರಬಹುದಾದ ತಪ್ಪುಗಳಿದ್ದಲ್ಲಿ ಅವನ್ನು ಕ್ಷಮಿಸಬೇಕೆಂದು ನಾನು ಕೇಳದೆ ಬಿಡುತ್ತಿರಲಿಲ್ಲ.
ನನ್ನ ಒಡನಾಡಿಗಳಾಗಿದ್ದು ನನ್ನೊಂದಿಗೆ ಕೆಲಸ ಮಾಡಿದ ಹಳ್ಳಿಯ ಉಪಾಧ್ಯಾಯರು ಹಲವರು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿ ಹೋಗಿಬಿಟ್ಟರು! ಆದರೆ ತಮ್ಮ ಹಿಂದಿನವರಿಂದ ತಮ್ಮ ಕೈಗೆ ದೊರೆತ ಕೆಲಸಗಳನ್ನು ಕೈಲಾದ ಮಟ್ಟಿಗೆ ಮಾಡಿ ಕೃತಕೃತ್ಯರಾದರು. ಅವರು ಕಲಿತದ್ದು ಕಡಿಮೆಯಾದರೂ ಅವರ ಕಷ್ಟಗಳು ಹೆಚ್ಚು, ಅವರ ಬಾಳು ಬಡಬಾಳು. ಅವರು ಒಂದು ವಿಷಯವನ್ನು ಮಾತ್ರ ಅಂದಿನ ಮಕ್ಕಳಿಗೆ ಚೆನ್ನಾಗಿ ಕಲಿಸುತ್ತಿದ್ದರು. ಅವರು ನಿರಂತರ ತಾವು ಹಾಡುತ್ತಿದ್ದ ಮತ್ತು ಮಕ್ಕಳಿಂದ ಹಾಡಿಸುತ್ತಿದ್ದ ಆ ಪಾಠವು ಇಲ್ಲಿದೆ:
“ಏನುಕಲಿತಡದೇನು? ಯತ್ನದ
ಲೇನು ಮಾಡಿದಡೇನು? ಸರ್ವವು
ಕಾನನದ ಬೆಳದಿಂಗಳಂದದಿ ವ್ಯರ್ಥವಾಗಿಹುದು||
ತಾನು ದೇವರ ಭಯವ ಕಲಿಯದೆ,
ಮಾನವನು ಬದುಕಿದಡದೇನೈ?
ಶ್ವಾನಸೂಕರದಂತೆ ಹೊಟ್ಟೆಯ ಹೊರೆದುಕೊಂಡಿಹನು”||
ದೇವರ ಭಯವನ್ನು ಮಕ್ಕಳಿಗೆ ಬಿಡದೆ ಕಲಿಸುತ್ತಿದ್ದ ಈ ಉಪಾಧ್ಯಾಯರ ಶಾಲೆಗಳೆಲ್ಲಾ ಈಗ ಗುರುತು ಸಿಕ್ಕಲಾರದಷ್ಟು ರೂಪಾಂತರಗೊಂಡಿರಬಹುದು. ಈ ಅಧ್ಯಾಪಕರು ವಾಸವಾಗಿದ್ದ ಹುಲ್ಲು ಗುಡಿಸಲುಗಳು ಹಳ್ಳಿಯಲ್ಲಿ ಈಗ ಪಾಳುಬಿದ್ದಿರಬಹುದು. ಈ ಮೇಸ್ತರರ ಹೆಸರುಗಳನ್ನು ಕೂಡ ಹಳ್ಳಿಯವರು ಮರೆತಿರಬಹುದು. ಇವರು ಮಾಡಿದ ಸತ್ಕಾರ್ಯಗಳೆಲ್ಲ ಇವರ ಹಿಂದೆಯೇ ನಶಿಸಿ ಹೋದುವೆಂದು ಭಾವಿಸಲಾಗದು. ನಮ್ಮ ಜಿಲ್ಲೆಯ ಗುಡ್ಡಗುಡ್ಡಗಳ ಬುಡದಲ್ಲಿ ಒಂದರ ಮೇಲೆ ಒಂದಾಗಿ ಅಟ್ಟಳಿಗೆಯಂತೆ ಎಬ್ಬಿಸಿದ ಹೊಲಗದ್ದೆಗಳಲ್ಲಿ ಹಚ್ಚಗೆ ಕಂಗೊಳಿಸುತ್ತಿರುವ ಕಳಮಶ್ರೀಯನ್ನು ನಾವು ಕಂಡು ಅಲ್ಲಲ್ಲಿಯ ಗುತ್ತಿನ ಮನೆಯ ವರ್ಗದಾರರ ಕೃಷಿಕಾರ್ಯವನ್ನು ಕೊಂಡಾಡುವಾಗ, ಬಹುಕಾಲದ ಹಿಂದಿನಿಂದ ಮಳೆಯೆನ್ನದೆ ಬಿಸಿಲೆನ್ನದೆ ಪೆಟ್ಟಿನ ಮೇಲೆ ಪೆಟ್ಟು ಬಡೆದು ಬೆಟ್ಟವನ್ನು ಬಯಲನ್ನಾಗಿ ಮಾಡಿದ ಬಡ ಕೂಲಿಯವರ ಕಾಯಕಷ್ಟವು ನಮ್ಮ ಮನಸ್ಸಿಗೆ ಹೊಳೆಯುವುದಿಲ್ಲ. ನಾವು ಮಂಗಳೂರು ಸೇತುವೆಯ ಮೇಲೆ ನಿಂತುಕೊಂಡು ಸಮುದ್ರದೊಡನೆ ಸಂಗಮವಾಗುವ ನದಿಯ ದಿವ್ಯರೂಪವನ್ನು ದರ್ಶಿಸಿ ಮುಗ್ಧರಾಗಿ ಹೋಗುತ್ತೇವೆ; ಆದರೆ ಅದೇ ಕಾಲದಲ್ಲಿ ಆ ನೇತ್ರಾವತಿ ನದಿಯ ವಿಸ್ತಾರ ಪ್ರಯೋಜನ ಸೌಂದರ್ಯಾದಿಗಳನ್ನು ನಮ್ಮ ಕಣ್ಮುಂದೆ ಒದಗಿಸಿ ತಂದುಕೊಡಲು ಹಳ್ಳಿಹಳ್ಳಿಯಿಂದ ಎಷ್ಟು ಹಳ್ಳಗಳು ಹರಿದೋಡಿ ಬಂದುವು, ಎಷ್ಟು ತೋಡುಗಳು ಮಂದೋಡಲಾರದೆ ಬತ್ತಿ ಹೋದುವು, ಎಷ್ಟು ತೊರೆಗಳು ತಮ್ಮ ಜೀವನವನ್ನೇ ಮುಗಿಸಿ ಬಿಟ್ಟವು ಎಂಬುದನ್ನು ಲಕ್ಷಿಸುವುದಿಲ್ಲ. ನಮ್ಮ ಜಿಲ್ಲೆಯಿಂದ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕರ ಕೀರ್ತಿ, ಹಾಯ್ಕೋರ್ಟಿನಲ್ಲಿ ಧರ್ಮಾವತಾರರೆನ್ನಿಸಿಕೊಂಡವರ ಮಹತ್ವ, ನ್ಯಾಯ ವಿಧಾಯಕ ಸಭೆಗಳಲ್ಲಿ ಸಭಾಸದರಾದವರ ಪ್ರಶಸ್ತಿ, ಶಸ್ತಕ್ರಿಯೆಯಲ್ಲಿ ಪಾರಂಗತರಾದವರ ಹೆಸರುವಾಸಿ, ದೊಡ್ಡ ವರ್ತಕರೆನ್ನಿಸಿದವರ ಪ್ರಸಿದ್ಧಿ, ಸಮಾಜ ಸಂಸ್ಕರಣ ವಿದ್ಯಾಪ್ರಸಾರ ಹರಿಜನೋದ್ಧಾರ ಇತ್ಯಾದಿ ದೇಶಸೇವೆಯಲ್ಲ ದೀಕ್ಷಾಬದ್ಧರಾದ ರಾಷ್ಪಭಕ್ತರ ಲೋಕೋತ್ತರವಾದ ಯಶಸ್ಸು-ಇಷ್ಟೆಲ್ಲಾ ಮಹಾ ವಟವೃಕ್ಷದಂತೆ ಹಬ್ಬಿದುದನ್ನು, ಇನ್ನೂ ಹಬ್ಬುವುದನ್ನು ನೋಡುವಾಗ, ‘ಇದೆಲ್ಲಾ ಬಹುಮಟ್ಟಿಗೆ ಅರೆಯುಣ್ಣುವ ಮಕ್ಕಳೊಂದಿಗನಾದ ಹಳ್ಳಿಯ ಮಾಸ್ತರನು ಹರಡಿದ ಬೀಜದ ಫಲ’ ಎಂಬುದೊಂದು ಸೊಲ್ಲು ನನ್ನ ಅಂತರಂಗದಲ್ಲಿ ಜಿನಗುತಿದೆ. ಇನ್ನು ತಾಳಮದ್ದಳೆಯವರ ಅರ್ಥ, ಬೈಲಾಟದ ವೇಷಧಾರಿಗಳ ಮಾತು, ಕನ್ನಡ ವಿದ್ವಾನ್ ಪಂಡಿತರ ಪಾಂಡಿತ್ಯ, ವಾರ್ತಾಪತ್ರಿಕೆಗಳಲ್ಲಿಯ ಲೇಖ, ದಸರಾ ಹಬ್ಬದಲ್ಲಿಯ ಕನ್ನಡ ಸಾಹಿತ್ಯ, ಮುದ್ದಣ ಕವಿಯ ಸ್ಮಾರಕೋತ್ಸವ ಸಮಾರಂಭ – ಹೀಗೆ ಬಹುಮುಖವಾಗಿ ಇಂದು ಕನ್ನಡ ಭಾಷಾಭಿವೃದ್ಧಿಯೂ ದೇಶಸೇವಯೂ ನಮ್ಮ ಜಿಲ್ಲೆಯಲ್ಲಿ ಆಗುತ್ತಲಿದ್ದರೆ, ಅದರ ಪುಣ್ಯದಲ್ಲಿ ಒಂದು ಗುಲಗುಂಜಿ ತೂಕದಷ್ಟಾದರೂ ಪಾಲು, ಈ ಬಡ ಹಳ್ಳಿಯ ಉಪಾಧ್ಯಾಯರಿಗೆ ಸಲತಕ್ಕದ್ದೆಂಬುದನ್ನು ಮರೆಯಲಾಗದು.
*****
(ಕಂಠೀರವ ೧೯೩೫)